ಪ್ರಾಣಿಗಳಿಗೆ ಮನುಷ್ಯರಂತೆ ಯೋಚಿಸುವ ಬುದ್ಧಿ ಇಲ್ಲದೇ ಇರಬಹುದು. ಆದರೆ ಅವುಗಳ ಮನಸ್ಸಿನಲ್ಲಿ ಮನುಷ್ಯರಿಗಿಂತ ಅಗಾಧವಾದ ಪ್ರೀತಿ, ಕರುಣೆ, ಸಹಾಯ ಮಾಡುವಂತಹ ಗುಣವಿದೆ. ಅವುಗಳಿಗೆ ಪ್ರೀತಿ ತೋರಿಸಿದವರಿಗೆ ಪ್ರತಿಯಾಗಿ ಅವುಗಳು ಪ್ರೀತಿಯನ್ನು ನೀಡುತ್ತವೆ. ಅದಕ್ಕೆ ಉದಾಹರಣೆಯಂತೆ ಎಷ್ಟೋ ಘಟನೆಗಳು ನಡೆದಿವೆ. ಅದೇ ರೀತಿಯ ಘಟನೆ ಇದೀಗ ಚೀನಾದಲ್ಲಿ ನಡೆದಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.
ಚೀನಾದ ಶಾಂಡೊಂಗ್ ಪ್ರಾಂತ್ಯದ ವೀಹೈ ಮೃಗಾಲಯದಲ್ಲಿ 25 ವರ್ಷದ ಆನೆಯೊಂದು ಚಿಕ್ಕ ಹುಡುಗ ಎಸೆದ ಶೂ ಅನ್ನು ಪುನಃ ಆತನಿಗೆ ಹಿಂತಿರುಗಿಸುವ ಮೂಲಕ ಜನರ ಮನಗೆದ್ದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಜನರು ಆನೆಯ ಕೆಲಸ ಕಂಡು ಅಚ್ಚರಿಗೊಂಡಿದ್ದಾರೆ ಮತ್ತು ಅದರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೊದಲ್ಲಿ ಆನೆ ಚಿಕ್ಕ ಬಾಲಕ ಎಸೆದ ಶೂ ಅನ್ನು ಆನೆ ತನ್ನ ಸೊಂಡಿನಿಂದ ಎತ್ತಿಕೊಂಡು ವಾಪಾಸ್ ಬಾಲಕನ ಕೈಗೆ ನೀಡುತ್ತಿರುವುದು ಕಂಡುಬಂದಿದೆ.
He is confined. But not his spirits & compassion 😊😊
— Susanta Nanda (@susantananda3) September 28, 2023
Returns the shoe of a child which accidentally fell in its enclosure.
(Free wild from cages) pic.twitter.com/odJyfIjM9Y
ವರದಿ ಪ್ರಕಾರ ಚೀನಾದ ಶಾಂಡೊಂಗ್ ಪ್ರಾಂತ್ಯದ ವೀಹೈ ಮೃಗಾಲಯಕ್ಕೆ ಪೋಷಕರ ಜೊತೆ ಬಂದ ಚಿಕ್ಕ ಬಾಲಕ ತನ್ನ ಕಾಲಲ್ಲಿದ್ದ ಶೂವೊಂದನ್ನು ಆನೆಯ ಬಳಿ ಎಸೆದಿದ್ದಾನೆ. ಆದರೆ ಆನೆ ಕೋಪಗೊಳ್ಳದೆ ಅದನ್ನು ಎತ್ತಿ ಬಾಲಕನ ಕೈಗೆ ನೀಡಿದೆ. ಇದನ್ನು ಅಲ್ಲಿಗೆ ಭೇಟಿ ನೀಡಿದ ವೀಕ್ಷಕರೊಬ್ಬರು ವಿಡಿಯೊ ಮಾಡಿ @readersdigest ಇನ್ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ.
ಈ ವಿಡಿಯೋಗೆ 52,142 ಲೈಕ್ಸ್ ಬಂದಿದೆ. ಇದಕ್ಕೆ ಪ್ರತಿಯಾಗಿ, ಹುಡುಗ ಒಂದು ಹಿಡಿ ಹುಲ್ಲನ್ನು ಎತ್ತಿಕೊಂಡು ಆನೆಗೆ ಆಹಾರವನ್ನು ನೀಡಿದ್ದಾನೆ ಎಂಬುದಾಗಿ ವರದಿಯಾಗಿದೆ. ಈ ವೀಡಿಯೊ ಆನ್‌ಲೈನ್ ನಲ್ಲಿ ಗಮನ ಸೆಳೆಯುತ್ತಿದ್ದಂತೆ, ಸೋಶಿಯಲ್ ಮೀಡಿಯಾದ ಬಳಕೆದಾರರು ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನೆಗಳು ಭೂಮಿನ ಮೇಲಿನ ಅಮೂಲ್ಯವಾದ ಪ್ರಾಣಿ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಆನೆ ಮನುಷ್ಯರಿಗಿಂತ ಕರುಣಾಮಯಿ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಕಾಡು ಪ್ರಾಣಿಗಳನ್ನು ರಕ್ಷಿಸುವಂತೆ ಒಬ್ಬರು ಕರೆ ನೀಡಿದರೆ, ಮತ್ತೊಬ್ಬರು ಪ್ರಾಣಿಗಳಿಂದಲೂ ನಾವು ಕಲಿಯುವುದು ತುಂಬಾ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರೋಗಿಗಳನ್ನು ನೋಡಿಕೊಳ್ಳುವ ಬದಲು ಕೋತಿಮರಿ ಜೊತೆ ಆಟವಾಡಿದ ನರ್ಸ್‌ಗಳು! ಕೊನೆಗೆ ಆಗಿದ್ದೇನು?
ಈ 25 ವರ್ಷದ ಗಂಡು ಆನೆಗೆ ‘ಮೌಂಟೇನ್ ರೇಂಜ್’ ಎಂದು ಹೆಸರಿಡಲಾಗಿದ್ದು, ಇದು ಮೃಗಾಲಯ ಸಂದರ್ಶಕರಿಗೆ ಅಚ್ಚುಮೆಚ್ಚಿನ ಆನೆಯಾಗಿದೆ ಎನ್ನಲಾಗಿದೆ. ಬಾಲಕನಿಗೆ ಸಹಾಯ ಮಾಡಿದ್ದಕ್ಕಾಗಿ ಮೃಗಾಲಯದ ಆಡಳಿತವು ಮೌಂಟೇನ್ ರೇಂಜ್‍ಗೆ ಹೆಚ್ಚುವರಿ ಊಟವನ್ನು ಬಹುಮಾನವಾಗಿ ನೀಡಿತು ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.