Site icon Vistara News

Viral Video: ಒಂದು ದಿನದ ಮಟ್ಟಿಗೆ ಈ ಬಾಲಕ ಐಪಿಎಸ್‌ ಅಧಿಕಾರಿ; ಇವನ ಕಥೆ ಕಣ್ಣೀರು ತರಿಸುವಂಥದ್ದು

Viral Video

ವಾರಣಾಸಿ : ಐಪಿಎಸ್, ಐಎಎಸ್ ಹುದ್ದೆ ಎನ್ನುವುದು ಬಹಳ ದೊಡ್ಡ ಹುದ್ದೆಗಳು. ಹಾಗಾಗಿ ಕೆಲವರು ಐಪಿಎಸ್, ಐಎಎಸ್ ಅಧಿಕಾರಿಯಾಗಬೇಕೆಂದು ಬಯಸುತ್ತಾರೆ. ಆದರೆ ಒಬ್ಬ ಐಪಿಎಸ್, ಐಎಎಸ್ ಆಗಬೇಕೆಂದರೆ ಅವರು ಕಠಿಣ ಶ್ರಮವನ್ನು ಹಾಕಬೇಕಾಗುತ್ತದೆ. ಈ ವೇಳೆ ಅನೇಕ ಸವಾಲುಗಳು ಎದುರಾಗುತ್ತದೆ. ಇವುಗಳನ್ನು ಎದುರಿಸಿ ಐಪಿಎಸ್, ಐಎಎಸ್ ಅಧಿಕಾರಿ ಆಗುವುದು ಸಾಮಾನ್ಯವಾದ ಕೆಲಸವಲ್ಲ. ಆದರೆ 9 ವರ್ಷದ ಬಾಲಕನೊಬ್ಬ ಐಪಿಎಸ್ ಅಧಿಕಾರಿ ಆಗಿದ್ದಾನಂತೆ. ಆತನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಉತ್ತರಪ್ರದೇಶದ ವಾರಾಣಾಸಿಯ 9 ವರ್ಷದ ಬಾಲಕ ರಣವೀರ್ ಭಾರತಿಗೆ ದೊಡ್ಡವನಾದ ಮೇಲೆ ಓದಿ ಐಪಿಎಸ್ ಅಧಿಕಾರಿಯಾಗಬೇಕೆಂಬ ಕನಸಿತ್ತು. ಆದರೆ ಆತ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿರುವುದು ಇತ್ತೀಚೆಗೆ ತಿಳಿದಿದೆ. ಅದಕ್ಕಾಗಿ ಆತ ವಾರಣಾಸಿಯ ಮಹಾಮಾನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಾಗಾಗಿ ಆತ ಎಷ್ಟೇ ಪ್ರಯತ್ನಿಸಿದರೂ ಆತನಿಗೆ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಿಲ್ಲ ಎಂದು ಅರಿತು ಬೇಸರಗೊಂಡಿದ್ದಾನೆ.

Viral Video

ಆದರೆ ವಾರಣಾಸಿ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿಯೂಷ್ ಮೊರ್ಡಿಯಾ ಈ ವಿಚಾರ ತಿಳಿದು ಆತನ ಕನಸನ್ನು ನನಸು ಮಾಡಲು ಒಂದು ದಿನದ ಮಟ್ಟಿಗೆ ಐಪಿಎಸ್ ಅಧಿಕಾರಿಯಾಗಲು ಅನುಮತಿ ನೀಡಿದ್ದಾರೆ. ಹಾಗಾಗಿ ಬಾಲಕ ಖಾಕಿ ಸಮವಸ್ತ್ರ ಧರಿಸಿ ಐಪಿಎಸ್ ಅಧಿಕಾರಿಯ ಸೀಟಿನಲ್ಲಿ ಕುಳಿತುಕೊಂಡು ಅಧಿಕಾರಿಗಳಿಗೆ ಹಸ್ತಲಾಘವ ಮಾಡಿದ್ದಾನೆ.

ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಎಡಿಜಿ ವಲಯ ವಾರಣಾಸಿಯ ಅಧಿಕೃತ ಟ್ವೀಟರ್ ಖಾತೆಯಲ್ಲಿ ಜೂನ್ 26ರಂದು ಪೋಸ್ಟ್ ಮಾಡಲಾಗಿದೆ. ಈ ವಿಡಿಯೊ ವೈರಲ್ ಆಗಿದ್ದು, ಬಾಲಕನ ಆಸೆಯನ್ನು ಪೂರ್ತಿ ಮಾಡಿದ ಪೊಲೀಸರ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ಇದು ಉತ್ತಮ ಆಲೋಚನೆ ಎಂದು ಹಲವರು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನೊಬ್ಬರು ಇದರಿಂದ ಮಗು ಬಹಳ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

Viral Video

ಇದನ್ನೂ ಓದಿ:  ಒಂಟಿ ಯುವತಿಯ ಮೇಲೆ ದುಷ್ಕರ್ಮಿಯ ದಾಳಿ; ಆಕೆ ಪಾರಾಗಿದ್ದು ಹೇಗೆ?

ಪೊಲೀಸರೆಂದರೆ ಕರುಣೆ, ಕನಿಕರ ಇಲ್ಲದವರು, ಎಲ್ಲರ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ಹಲವರು ಹೇಳುತ್ತಿರುತ್ತಾರೆ. ಆದರೆ ಈ ಘಟನೆಯನ್ನು ನೋಡಿದರೆ ಪೊಲೀಸರಿಗೂ ಒಂದು ಒಳ್ಳೆ ಮನಸ್ಸಿದೆ ಎಂಬುದು ತಿಳಿಯುತ್ತದೆ.

Exit mobile version