ಹೈ ವೋಲ್ಟೇಜ್ ವಿದ್ಯುತ್ ತಂತಿ ಹಾದುಹೋಗಿರುವ ಕೆಲವೊಂದು ಸ್ಥಳಗಳಲ್ಲಿ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಆ ಸ್ಥಳದಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಬರದಂತೆ ನೋಡಿಕೊಂಡು ಕೆಲಸ ಮಾಡಬೇಕು. ಇಲ್ಲವಾದರೆ ಇದರಿಂದ ಜೀವಕ್ಕೇ ಅಪಾಯವಾಗಬಹುದು. ಇದೀಗ ಅಂಹತದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಬಂಧಿಕರ ಮನೆಯಲ್ಲಿ ಧಾರ್ಮಿಕ ಸಮಾರಂಭ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸಮಾರಂಭಕ್ಕೆ ಬೇಕಾದ ತಯಾರಿ ಮಾಡಲು ಬಿದಿರಿನ ಕೋಲನ್ನು ಸಾಗಿಸುತ್ತಿದ್ದ ವ್ಯಕ್ತಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿದ್ದು, ಈ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ.
महोबा में 22 सेकेंड में युवक की मौत, बिजली के तार में डंडा टच होते ही मौके पर मरा युवक pic.twitter.com/J5znLS5HXx
— shalu agrawal (@shaluagrawal3) July 3, 2024
ಮೃತ ವ್ಯಕ್ತಿ ಚಂದೋನ್ ಗ್ರಾಮದ ನಿವಾಸಿ 35 ವರ್ಷದ ದೇವೇಂದ್ರ ಎಂದು ಗುರುತಿಸಲಾಗಿದ್ದು, ವರದಿ ಪ್ರಕಾರ ದೇವೇಂದ್ರ ತನ್ನ ಸೋದರ ಸಂಬಂಧಿ ಸುವೇಂದ್ರ ಸಿಂಗ್ ಅವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಸೋಡಾ ನಗರಕ್ಕೆ ಬಂದಿದ್ದರು. ಘಟನೆಯ ಸಮಯದಲ್ಲಿ, ಅವರ ಕುಟುಂಬ ಸದಸ್ಯರು ದೇವಾಲಯಕ್ಕೆ ಹೋಗಲು ತಯಾರಿ ನಡೆಸುತ್ತಿದ್ದರು. ಕೆಲವರು ಪ್ರಸಾದ ತಯಾರಿಸುತ್ತಿದ್ದರೆ, ಇತರರು ದೇವಾಲಯದಲ್ಲಿ ಆಚರಣೆಗಳಿಗೆ ಬೇಕಾದ ತಯಾರಿ ನಡೆಸುತ್ತಿದ್ದರು. ಈ ನಡುವೆ, ದೇವೇಂದ್ರ ಆಚರಣೆಯ ಅಂಗವಾಗಿ ಧ್ವಜವನ್ನು ಕಟ್ಟಲು ಬಿದಿರಿನ ಕೋಲನ್ನು ತೆಗೆದುಕೊಂಡು ಬಂದಿದ್ದಾರೆ. ಆಗ ಮನೆಯ ಮೇಲಿದ್ದ ವಿದ್ಯುತ್ ತಂತಿಗೆ ಕೋಲು ತಗುಲಿ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ವಿಡಿಯೊದಲ್ಲಿ ದೇವೆಂದ್ರ ಅವರು ತಮ್ಮ ಸಂಬಂಧಿಕರ ಸಮ್ಮುಖದಲ್ಲಿ ಬಿದಿರಿನ ಕೋಲನ್ನು ಹಿಡಿದುಕೊಂಡು ಮನೆಯೊಳಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ನಂತರ ದೇವೇಂದ್ರ ಬಲವಾದ ಆಘಾತದಿಂದ ಬಿದ್ದಾಗ ಅವರ ತಲೆ ಕಬ್ಬಿಣದ ಗೇಟ್‍ಗೆ ತಗುಲಿದೆ.. ಆಗ ಅವರ ಕುಟುಂಬ ಸದಸ್ಯರು ದೇವೇಂದ್ರ ಅವರ ಕೈ ಮತ್ತು ಕಾಲುಗಳನ್ನು ಮಸಾಜ್ ಮಾಡುವ ಮೂಲಕ ಸಹಾಯ ಮಾಡಿದರು. ಆದರೆ ಕೆಲವೇ ಸೆಕೆಂಡುಗಳಲ್ಲಿ ಅವರು ಸಾವನ್ನಪ್ಪಿದ್ದಾರೆ. ಅವರ ಕುಟುಂಬ ಸದಸ್ಯರು ತಿಳಿಸಿದ ಪ್ರಕಾರ, ಈ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ, ಬಿದಿರಿನ ಕೋಲು ಒದ್ದೆಯಾಗಿತ್ತು. ಹಾಗಾಗಿ ದೇವೆಂದ್ರ ಅವರಿಗೆ ಕರೆಂಟ್ ಶಾಕ್ ತಗುಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ತಲೆ ಬೋಳಿಸಿಕೊಂಡು ರಾಮನಿಗೆ ಪೇಟ ಅರ್ಪಿಸಿದ ಬಿಹಾರ ಡಿಸಿಎಂ! ಇದಕ್ಕಿದೆ ವಿಶೇಷ ಕಾರಣ!
ದೇವೇಂದ್ರ ಅವರ ಸಂಬಂಧಿಕರು ತಮ್ಮ ಮನೆಯ ಮೇಲೆ ಹೈ ವೋಲ್ಟೇಜ್ ವಿದ್ಯುತ್ ತಂತಿ ಹಾದುಹೋಗಿರುವ ಬಗ್ಗೆ ದೂರು ನೀಡಿದ್ದರೂ ಪ್ರಾಧಿಕಾರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಇಲಾಖೆ ಕ್ರಮ ಕೈಗೊಂಡಿದ್ದರೆ, ತಮ್ಮ ಪ್ರೀತಿಯ ದೇವೇಂದ್ರ ಜೀವಂತವಾಗಿರುತ್ತಿದ್ದರು ಎಂದು ಕುಟುಂಬ ಸದಸ್ಯರು ದುಃಖಿಸಿದ್ದಾರೆ.