Site icon Vistara News

Viral Video: ಮಕ್ಕಳನ್ನು ಖಾಸಗಿ ವಾಹನದಲ್ಲಿ ಶಾಲೆಗೆ ಕಳುಹಿಸುವ ಪೋಷಕರಲ್ಲಿ ಆತಂಕ ಮೂಡಿಸುವ ವಿಡಿಯೊ ಇದು!

Viral Video

ಆಗಿನ ಕಾಲದಲ್ಲಿ ಮಕ್ಕಳು ನಡೆದುಕೊಂಡೇ ಶಾಲೆಗೆ ತೆರಳುತ್ತಿದ್ದರು. ಆದರೆ ಇಂದಿನ ಆಧುನಿಕ ಕಾಲದಲ್ಲಿ ಪೋಷಕರು ಮಕ್ಕಳನ್ನು ವಾಹನಗಳ ಮೂಲಕ ಶಾಲೆಗೆ ಕಳುಹಿಸುವುದು ಸಹಜ. ಕೆಲವರು ಶಾಲೆಯ ಅಧಿಕೃತ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸಿದರೆ, ಕೆಲವು ಪೋಷಕರು ಕಡಿಮೆ ಹಣ ನೀಡುವ ಉದ್ದೇಶದಿಂದ ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಕೆಲವು ವಾಹನ ಚಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅನೇಕ ಮಕ್ಕಳು ಅಪಾಯಕ್ಕೊಳಗಾಗಿದ್ದಾರೆ. ಮಕ್ಕಳು ಪ್ರಾಣ ಕಳೆದುಕೊಂಡ ಇಂತಹ ಘಟನೆಗಳು ಹಲವಾರು ನಡೆದಿವೆ. ಇದೀಗ ಗುಜರಾತ್‌ನಲ್ಲಿಯೂ ಕೂಡ ಇಂತಹದೊಂದು ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್(Viral Video) ಪೋಷಕರಲ್ಲಿ ಆತಂಕ ಹುಟ್ಟಿಸಿದೆ.

ವಾಹನ ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ವಾಹನದ ಬಾಗಿಲು ತೆರೆದುಕೊಂಡು ಇಬ್ಬರು ವಿದ್ಯಾರ್ಥಿನಿಯರು ವಾಹನದಿಂದ ಹೊರಬಿದ್ದು ಗಾಯಗೊಂಡ ಘಟನೆ ಗುಜರಾತ್‌ನ ವಡೋದರದಲ್ಲಿ ನಡೆದಿದೆ. ಮಾರುತಿ ಇಕೋ ವಾಹನದಲ್ಲಿ ಮಕ್ಕಳನ್ನು ತುಂಬಿಸಿಕೊಂಡು ಚಾಲಕ ಶಾಲೆಯತ್ತ ವೇಗವಾಗಿ ವಾಹನವನ್ನು ಚಲಾಯಿಸಿದ್ದಾನೆ. ಆ ವೇಳೆ ಕಾರಿನ ಹಿಂಬದಿಯ ಬಾಗಿಲು ಸರಿಯಾಗಿ ಹಾಕದ ಕಾರಣ ಅದು ತೆರೆದುಕೊಂಡು ಹಿಂದೆ ಕುಳಿತಿದ್ದ ಇಬ್ಬರು ವಿದ್ಯಾರ್ಥಿನಿಯರು ರಸ್ತೆಯ ಮೇಲೆ ಬಿದ್ದಿದ್ದಾರೆ. ಈ ಘಟನೆಯಿಂದ ಆ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯವಾಗಿದೆ.

ಹಿಂಬದಿಯಿಂದ ಯಾವುದೇ ವಾಹನ ಬಾರದ ಕಾರಣ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರನ್ನು ಸ್ಥಳೀಯರು ಮೇಲಕ್ಕೆತ್ತಿ ಚಿಕಿತ್ಸೆ ಮಾಡಿದ್ದಾರೆ. ಆದರೆ ಚಾಲಕ ಮಾತ್ರ ಮಕ್ಕಳು ಬಿದ್ದಿರುವುದು ತಿಳಿದರೂ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಸ್ಥಳೀಯರು ವಿದ್ಯಾರ್ಥಿನಿಯ ಮನೆಯವರಿಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: Viral video: ವಧುವಿಗೆ ಸಿಹಿ ತಿನ್ನಿಸಲು ಹೋಗಿ ಕಪಾಳಮೋಕ್ಷ ಮಾಡಿಸಿಕೊಂಡ ವರ! ಅಯ್ಯೋ ಪಾಪ!!

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಚಾಲಕನನ್ನು ಬಂಧಿಸಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆ ಅನೇಕ ಪೋಷಕರ ಆತಂಕಕ್ಕೆ ಕಾರಣವಾಗಿರುವುದಂತು ನಿಜ. ಹಾಗಾಗಿ ತಮ್ಮ ಮಕ್ಕಳನ್ನು ಶಾಲೆಯ ಅಧಿಕೃತ ಹಾಗೂ ನೊಂದಾಯಿತ ವಾಹನಗಳಲ್ಲೇ ಶಾಲೆಗೆ ಕಳುಹಿಸಿ. ಕಡಿಮೆ ಹಣದ ಆಸೆಗೆ ಇಂತಹ ವಾಹನದಲ್ಲಿ ಮಕ್ಕಳನ್ನು ಕಳುಹಿಸಿ ಅವರ ಜೀವಕ್ಕೆ ಕುತ್ತು ತರಬೇಡಿ. ಯಾಕೆಂದರೆ ಇಂತಹ ವಾಹನ ಚಾಲಕರಿಗೆ ಮಕ್ಕಳ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ.

Exit mobile version