Site icon Vistara News

Viral Video: ಹಳೆಯ ವಿದ್ಯಾರ್ಥಿಗಳನ್ನು ಸಾಲಾಗಿ ಕರೆಸಿ ಬೆತ್ತದಿಂದ ಹೊಡೆದ ಪ್ರಾಂಶುಪಾಲರು! ಅಪರೂಪದ ವಿಡಿಯೊ

Viral Video


ನಮ್ಮ ಬಾಲ್ಯದ ಜೀವನ ಬಹಳ ಸುಂದರ. ನಾವು ಶಾಲೆಯ ಹೋಗುವಾಗ ಕಳೆದ ದಿನಗಳ ನೆನಪುಗಳು ಮರುಕಳಿಸಿದರೆ ಎಲ್ಲರ ಮುಖದಲ್ಲಿ ನಗುವು ಮೂಡುತ್ತದೆ. ಅದು ಮರೆಯಲಾಗದಂತಹ ಸವಿಸವಿ ನೆನಪು. ಆ ಜೀವನಕ್ಕೆ ಮತ್ತೆ ಹೋಗಲು ಸಾಧ್ಯವಾಗದಿದ್ದರೂ ಅಂದಿನ ದಿನಗಳ ಬಗ್ಗೆ ಇಂದು ಅನುಕರಣೆ ಮಾಡಬಹುದು. ಅದರಿಂದಲೂ ಕೆಲವರಿಗೆ ಖುಷಿ ಸಿಗುತ್ತದೆ. ಹಾಗಾಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಲು, ಶಾಲೆಯ ಮಾಜಿ ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲರಿಂದ ಹೊಡೆಸಿಕೊಳ್ಳುವ ಮೂಲಕ ತಮ್ಮ ಪುನರ್ಮಿಲನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದರು. ಹಾಗಾಗಿ ಎಕ್ಸ್ ಬಳಕೆದಾರರಾದ ಕೃಷ್ಣ ಎಂಬುವವರು ಶಾಲೆಯ ಪುನರ್ಮಿಲನವನ್ನು ತೋರಿಸುವ ಸಣ್ಣ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಪ್ರಾಂಶುಪಾಲರೆಂದು ಹೇಳಲಾದ ವ್ಯಕ್ತಿಯೊಬ್ಬರು ತಮ್ಮ ಮಾಜಿ ವಿದ್ಯಾರ್ಥಿಗಳನ್ನು “ಬೆತ್ತದಿಂದ ಹೊಡೆಯುತ್ತಿದ್ದಾರೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಈ ವಿಡಿಯೊದಲ್ಲಿ ಇದ್ದವರು ಮಧ್ಯವಯಸ್ಸಿಗೆ ಬಂದಿರುವ ಆಗಿನ ವಿದ್ಯಾರ್ಥಿಗಳು. ಅವರಲ್ಲಿ ಕೆಲವರು ಪೊಲೀಸ್ ಅಧಿಕಾರಿಗಳು, ವೈದ್ಯರು, ವಕೀಲರು, ಶಿಕ್ಷಕರು ಮತ್ತು ಬ್ಯುಸಿನೆಸ್‍ಮ್ಯಾನ್ ಆಗಿದ್ದಾರೆ. ಆದರೆ ಈಗ ತಮ್ಮ ಪುನರ್ಮಿಲನದ ಸಮಯದಲ್ಲಿ, ಅವರೆಲ್ಲರೂ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ತಮ್ಮ ಶಾಲಾ ಪ್ರಾಂಶುಪಾಲರ ಜೊತೆ ಕಳೆದ ಆ ವಿಶೇಷ ಕ್ಷಣವನ್ನು ಆನಂದಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರವನ್ನು ನೆನಪಿಸುವಂತಹ ಬಿಳಿ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು ಮತ್ತು ಒಬ್ಬೊಬ್ಬರಾಗಿ ಪ್ರಾಂಶುಪಾಲರ ಮುಂದೆ ಬಂದು ಪ್ರಾಂಶುಪಾಲರಿಂದ ಬೆತ್ತದಲ್ಲಿ ಹೊಡೆಸಿಕೊಳ್ಳುತ್ತಿದ್ದಾರೆ, ಆ ಮೂಲಕ ಅವರ ಶಾಲೆಯ ಹಳೆಯ ನೆನಪುಗಳನ್ನು ಮೆಲುಕುಹಾಕಿದ್ದಾರೆ. ಹಾಗೇ ಈ ರೀತಿ ಹೊಡೆಯುವುದು ಆ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ವಿಶೇಷ ಬಯಕೆಯಾಗಿದ್ದು, ತಮ್ಮ ಯಶಸ್ಸಿಗೆ ತಮ್ಮ ಪ್ರಾಂಶುಪಾಲರ ಬೆತ್ತದ ಆಶೀರ್ವಾದವೇ ಕಾರಣ ಎಂದು ಆ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಶಿಕ್ಷಕಿ, ಸಹಪಾಠಿಗಳ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಬಾಲಕ

“ಶಾಲೆಯ ಹಳೆಯ ವಿದ್ಯಾರ್ಥಿಗಳ ವಿಚಿತ್ರ ಪುನರ್ಮಿಲನ ಇಲ್ಲಿದೆ! ಇದರಲ್ಲಿ ಪೊಲೀಸ್ ಅಧಿಕಾರಿಗಳು, ವೈದ್ಯರು, ವಕೀಲರು, ಪ್ರಾಂಶುಪಾಲರು, ಶಿಕ್ಷಕರು, ಉದ್ಯಮಿಗಳು ಮತ್ತು ಶಾಲೆಗಳ ಮಾಲೀಕರು ಇದ್ದಾರೆ. ಅವರೆಲ್ಲರಿಗೂ ಒಂದು ಆಸೆ ಇತ್ತು. ಅವರ ವಿಶೇಷವಾದ ಶಾಲಾ ಜೀವನವನ್ನು ನೆನಪಿಸಿಕೊಳ್ಳಲು ಅವರ ಪ್ರಾಂಶುಪಾಲರು ತಮ್ಮ ಬೆತ್ತದಿಂದ ಅವರನ್ನು ಹೊಡೆಯಬೇಕು. ಏಕೆಂದರೆ ಪ್ರಾಂಶುಪಾಲರ ಕೈಯಲ್ಲಿ ತಿಂದ ಆ ‘ಬೆತ್ತದ ಆಶೀರ್ವಾದ’ದ ಪರಿಣಾಮವಾಗಿ ಅವರು ತಮ್ಮ ಜೀವನದಲ್ಲಿ ಹೆಚ್ಚಿನ ಎತ್ತರವನ್ನು ತಲುಪಿದ್ದಾರೆ ಎಂದು ಅವರು ನಂಬುತ್ತಾರೆ” ಎಂದು ಈ ಪೋಸ್ಟ್ ಗೆ ಶೀರ್ಷಿಕೆ ಬರೆಯಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದ ನಂತರ ಹಲವಾರು ಸೋಶಿಯಲ್ ಮೀಡಿಯಾದ ಬಳಕೆದಾರರು ತಮ್ಮ ಗತಕಾಲವನ್ನು ನೆನೆದು ಭಾವುಕರಾಗಿದ್ದಾರೆ ಎನ್ನಲಾಗಿದೆ.

Exit mobile version