Site icon Vistara News

Viral Video: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಪ್ರಾಂಶುಪಾಲರನ್ನು ಕುರ್ಚಿ ಸಹಿತ ಹೊರಗೆಳೆದ ಸಿಬ್ಬಂದಿ

Viral Video

ಉತ್ತರ ಪ್ರದೇಶ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುತ್ತದೆ. ಹಣದಾಸೆಗೆ ಕೆಲವು ಕಾಲೇಜಿನ ಸಿಬ್ಬಂದಿಗಳು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡುವುದನ್ನು ನಾವು ಕೇಳಿರುತ್ತೇವೆ. ಅದೇ ರೀತಿಯ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ (Uttar Pradesh) ಪ್ರಯಾಗ್‍ರಾಜ್‌ನ (Prayagraj) ಶಾಲೆಯೊಂದರಲ್ಲಿ ಪ್ರಾಂಶುಪಾಲರು (Principal) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ಬಲವಂತವಾಗಿ ತೆಗೆದುಹಾಕಲಾಗಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.

ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನ ಬಿಷಪ್ ಜಾನ್ಸನ್ ಬಾಲಕಿಯರ ಶಾಲೆ ಮತ್ತು ಕಾಲೇಜಿನಲ್ಲಿ ಈ ವರ್ಷದ ಫೆಬ್ರವರಿ 11 ರಂದು ಶಾಲಾ ಆವರಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದಾಗಿ ತಿಳಿದುಬಂದಿತ್ತು. ‘ಪೇಪರ್ ಲೀಕ್’ ಗ್ಯಾಂಗ್‍ನ ಸದಸ್ಯ ಕಮಲೇಶ್ ಕುಮಾರ್ ಪಾಲ್ ಅಲಿಯಾಸ್ ಕೆಕೆ ಎಂಬಾತ ಪ್ರಶ್ನೆ ಪತ್ರಿಕೆ ಫೋಟೊ ತೆಗೆದು ಸೋರಿಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 10 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ತನಿಖೆ ಮುಂದುವರಿದಿದ್ದು, ಇದೀಗ ಈ ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲರಾದ ಪಾರುಲ್ ಸೊಲೊಮನ್ ಭಾಗಿಯಾಗಿರುವುದು ಬಹಿರಂಗವಾಗಿದೆ. ಹಾಗಾಗಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆದರೆ ಈ ಸ್ಥಾನಕ್ಕೆ ಶೆರ್ಲಿ ಮಾಸ್ಸಿ ಎಂಬ ಹೊಸ ಪ್ರಾಂಶುಪಾಲರನ್ನು ನೇಮಿಸಿದ ನಂತರವೂ ಸೊಲೊಮನ್ ತನ್ನ ಸ್ಥಾನವನ್ನು ಖಾಲಿ ಮಾಡಲು ನಿರಾಕರಿಸಿದ ಕಾರಣ ಪ್ರಾಂಶುಪಾಲರ ಕಚೇರಿಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಸೊಲೊಮನ್‌ ಅವರು ಪ್ರಾಂಶುಪಾಲರ ಕೋಣೆಯನ್ನು ಒಳಗಿನಿಂದ ಲಾಕ್ ಮಾಡಿದರು ಮತ್ತು ಖಾಲಿ ಮಾಡಲು ನಿರಾಕರಿಸಿದರು ಎನ್ನಲಾಗಿದೆ.

ವೈರಲ್ ವಿಡಿಯೊದಲ್ಲಿ ಕೆಲವು ಶಿಕ್ಷಕರು ಮತ್ತು ಸಿಬ್ಬಂದಿಗಳು ಸೇರಿ ಬಾಗಿಲು ಮುರಿದು ಕಚೇರಿಗೆ ಪ್ರವೇಶಿಸಿದ ನಂತರ ಅವರನ್ನು ಕುರ್ಚಿಯಿಂದ ಮೇಲೆಳಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಕುರ್ಚಿ ಬಿಟ್ಟು ಎದ್ದೇಳಲು ನಿರಾಕರಿಸಿದ ಕಾರಣ ಕುರ್ಚಿ ಸಹಿತವಾಗಿ ಕಚೇರಿಯಿಂದ ಹೊರಗೆ ಎಳೆದೊಯ್ದಿದ್ದಾರೆ.

ಇದನ್ನೂ ಓದಿ: ಐಷಾರಾಮಿ ಹೋಟೆಲ್‌ನಲ್ಲಿ ವಾಸ, ಫ್ಲೈಟ್‌ನಲ್ಲಿ ಓಡಾಟ; ಶ್ರೀಮಂತ ಕಳ್ಳನೀಗ ಪೊಲೀಸರ ಬಲೆಗೆ!

ಈ ಘಟನೆಯ ನಂತರ, ಸೊಲೊಮನ್ ಅವರು ಸಿಬ್ಬಂದಿಯ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದನು, ಅವರು ತನಗೆ ಕಿರುಕುಳ ನೀಡಿದ್ದಾರೆಂದು ದೂರು ನೀಡಿದ್ದಾರೆ. ಸೊಲೊಮನ್‍ ಅವರ ದೂರಿನ ಆಧಾರದ ಮೇಲೆ, ಕೆಲವು ಸಿಬ್ಬಂದಿ ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಸೊಲೊಮನ್ ಅವರು ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಶಾಲೆಯಿಂದ 2.4 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಈ ಪ್ರಕರಣ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

Exit mobile version