Site icon Vistara News

Viral Video: ರೀಲ್ಸ್ ಅವಾಂತರ; 6ನೇ ಮಹಡಿಯಿಂದ ಬಿದ್ದ ಬಾಲಕಿ; ಅಪ್ಪನನ್ನು ಕರೆ ಎಂದು ಅಮ್ಮನ ಬಳಿ ಅಂಗಲಾಚಿದ್ದು ಯಾಕೆ?

Viral Video


ಲಖನೌ: ರೀಲ್‍ಗಳನ್ನು ಮಾಡುವ ಕ್ರೇಜ್ ಅನೇಕ ಯುವ ಜನರನ್ನು ಆವರಿಸಿದೆ. ಇವರು ಲೈಕ್‍ಗಳನ್ನು ಪಡೆಯಲು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಿದ್ದಾರೆ. ಅದಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಡುತ್ತಿದ್ದಾರೆ. ಇದೀಗ ಈ ರೀಲ್ಸ್ ಅವಾಂತರಕ್ಕೆ ಸಂಬಂಧಿಸಿದಂತಹ ಮತ್ತೊಂದು ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್ ಮಾಡುವಾಗ ಬಾಲಕಿಯೊಬ್ಬಳು ಕಟ್ಟಡದ ಆರನೇ ಮಹಡಿಯಿಂದ ಬಿದ್ದಿದ್ದಾಳೆ. ಅವಳು ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ರೀಲ್ಸ್ ಮಾಡುವಾಗ ಮೊಬೈಲ್ ಕೈಯಿಂದ ಜಾರಿದೆ. ಫೋನ್ ಹಿಡಿಯಲು ಪ್ರಯತ್ನಿಸುವಾಗ ಅವಳು ಬಾಲ್ಕನಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಬಾಲಕಿ ನೋವಿನಿಂದ ಅಳುತ್ತಿರುವ ಮತ್ತು ಅವಳ ತಾಯಿ ಅವಳನ್ನು ಬೈಯುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಆಘಾತಕ್ಕೊಳಗಾದ ಬಾಲಕಿಯನ್ನು ಗಾಜಿಯಾಬಾದ್‍ನ ಇಂದಿರಾಪುರಂ ಪ್ರದೇಶದಲ್ಲಿರುವ ಕ್ಲೌಡ್ -9 ಸೊಸೈಟಿಯಲ್ಲಿ ವಾಸಿಸುತ್ತಿದ್ದ ಮೋನಿಷಾ (16) ಎಂದು ಗುರುತಿಸಲಾಗಿದೆ. ಆರನೇ ಮಹಡಿಯಿಂದ ಬಿದ್ದ ನಂತರ ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಬಾಲಕಿ ನೆಲದ ಮೇಲೆ ಬಿದ್ದಿದ್ದಾಳೆ. ಜನರು ಅವಳ ಸುತ್ತ ಸುತ್ತುವರಿದು, ಅವಳನ್ನು ಆಸ್ಪತ್ರೆಗೆ ಕರೆದೊಯ್ಯುಲು ಗಾಬರಿಯಿಂದ ಓಡಾಡುತ್ತಿದ್ದಾರೆ. ಆ ವೇಳೆ ಅವರು ಅವಳನ್ನು ಎತ್ತುತ್ತಿದ್ದಂತೆ, ಅವಳು ನೋವಿನಿಂದ ಕೂಗಿದಳು, “ಅಮ್ಮಾ, ಪಾಪಾ ಕೋ ಬುಲಾ ದೋ”(ಅಮ್ಮಾ, ದಯವಿಟ್ಟು ಅಪ್ಪನನ್ನು ಕರೆಯಿರಿ) ಎಂದು ತನ್ನ ತಂದೆಯನ್ನು ಕರೆಯುವಂತೆ ತನ್ನ ತಾಯಿಯನ್ನು ಪದೇ ಪದೆ ಕೇಳಿಕೊಳ್ಳುತ್ತಿದ್ದಾಳೆ.

ವಿಡಿಯೊದಲ್ಲಿ, ಹುಡುಗಿಯ ತಾಯಿ ಮಗಳ ರೀಲ್ಸ್ ಮಾಡುವ ಹುಚ್ಚಿಗೆ ಹಿಗ್ಗಾಮುಗ್ಗಾ ಬೈದಿದ್ದಾಳೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಈಗ ಆಕೆ ಅಪಾಯದಿಂದ ಪಾರಾಗಿದ್ದಾಳೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಒಂದು ಹಾವು, ಮೂರು ಮುಂಗುಸಿ; ಏರ್‌ಪೋರ್ಟ್‌ ರನ್‌ವೇಯಲ್ಲೇ ಫೈಟ್‌! ಸೋತಿದ್ಯಾರು? ವಿಡಿಯೊ ನೋಡಿ

ಬಾಲಕಿಯ ಸ್ಥಿತಿಯನ್ನು ನೋಡಿ ಅಲ್ಲಿದ್ದವರು ಆಘಾತಕ್ಕೊಳಗಾಗಿದ್ದಾರೆ. ಕೆಲವರು ಅವಳ ಗಂಭೀರ ಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿ, ಮೇಲಿಂದ ಬಿದ್ದಿದ್ದರಿಂದ ಅವಳ ಕಾಲು ಮುರಿದಂತೆ ಕಾಣುತ್ತದೆ ಎಂದಿದ್ದಾರೆ. ಈ ರೀತಿಯ ರೀಲ್ಸ್ ಅವಾಂತರದ ಹಲವಾರು ಘಟನೆಗಳು ಸಂಭವಿಸಿವೆ. ಜನರು ರೀಲ್ಸ್ ಮಾಡುವ ವೇಳೆ ಹಲವು ಬಾರಿ ಅಪಾಯಕ್ಕೆ ಸಿಲುಕಿದ್ದಾರೆ ಮತ್ತು ಕೆಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾಗಳಿಗಾಗಿ ರೀಲ್ಸ್ ವಿಡಿಯೊಗಳನ್ನು ಮಾಡುವಾಗ ಯುವಕರು ಜಾಗರೂಕರಾಗಿರಬೇಕು ಮತ್ತು ಕೇವಲ ಲೈಕ್‍ಗಳು ಮತ್ತು ಫಾಲೋವರ್ಸ್‍ಗಳಿಗಾಗಿ ತಮ್ಮ ಜೀವವನ್ನು ಅಪಾಯಕ್ಕೆ ತಳ್ಳಬಾರದು ಎಂದು ಅಧಿಕಾರಿಗಳು ಎಚ್ಚರಿಸಲುತ್ತಲೇ ಇದ್ದರೂ ಇಂತಹ ಪ್ರವೃತ್ತಿ ನಿಂತಿಲ್ಲ.

Exit mobile version