ಗುರುಗ್ರಾಮ: ಸಾಮಾನ್ಯವಾಗಿ ಯುವತಿಯರು ಯುವಕನನ್ನು ಮದುವೆಯಾಗುವುದು ಕೇಳಿದ್ದೀರಿ. ಆದರೆ ಇಲ್ಲೊಬ್ಬ ಯುವತಿ ಯುವತಿಯನ್ನೇ ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಿದ್ದಾಳಂತೆ. ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ತಿಳಿದರೂ ಕೂಡ ಇವರು ಮದುವೆಯಾಗಿದ್ದು, ಈ ಸುದ್ದಿ ವೈರಲ್ (Viral Video )ಆಗಿದೆ.
ಗುರುಗ್ರಾಮದ ಅಂಜುಶರ್ಮಾ ಅವರು ವರನ ರೂಪದಲ್ಲಿ ಫತೇಹಾಬಾದ್ ನ ಕವಿತಾ ಟಿಪ್ಪು ಅವರನ್ನು ವಧುವಿನ ರೂಪದಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಮದುವೆಗೆ ಇಬ್ಬರ ಕುಟುಂಬಸ್ಥರು ಮೊದಲು ವಿರೋಧ ವ್ಯಕ್ತಪಡಿಸಿದ್ದರು ಆದರೆ ಈಗ ಇಬ್ಬರ ಕುಟುಂಬದವರು ಸಮ್ಮತಿ ನೀಡಿದ ಕಾರಣ ಬಂಧು ಬಳಗದವರ ಸಮ್ಮುಖದಲ್ಲಿ ಗುರುಗ್ರಾಮದ ಮದನಪುರಿ ಪ್ರದೇಶದ ಪಂಚಾಯತ್ ಧರ್ಮಸಾಲೆಯಲ್ಲಿ ಹಸೆಮಣೆ ಏರಿದ್ದಾರೆ ಎನ್ನಲಾಗಿದೆ. ಇವರಲ್ಲಿ ಅಂಜುಶರ್ಮಾ ಪತಿಯಾಗಿ ಕವಿತಾ ಟಿಪ್ಪು ಪತ್ನಿಯಾಗಿ ದಾಂಪತ್ಯ ಜೀವನ ನಡೆಸಲಿದ್ದಾರೆ ಎನ್ನಲಾಗಿದೆ.
ಕವಿತಾ ಅವರಿಗೆ ಪೋಷಕರು ಇರದ ಕಾರಣ ಸೋದರ ಮಾವನ ಆಶ್ರಯದಲ್ಲಿದ್ದರು. ಇವರ ತಂಗಿಗೆ ಮದುವೆಯಾಗಿದೆ. ಅಂಜು ಶರ್ಮಾ ಅವರು ಟಿವಿ ಧಾರಾವಾಹಿ ನಟಿಯಾಗಿದ್ದರು. ಕೋವಿಡ್ ಸಮಯದಲ್ಲಿ ಕಾರ್ಯಕ್ರಮವೊಂದರ ಸಲುವಾಗಿ ಅಂಜು ಶರ್ಮಾ ಅವರಿಗೆ ಮೇಕಪ್ ಮಾಡಲು ಕವಿತಾ ಅವರು ಬಂದಿದ್ದಾರೆ.
ಆ ವೇಳೆ ಇಬ್ಬರೂ ಭೇಟಿಯಾಗಿದ್ದರು. ಮತ್ತು ಅವರಿಬ್ಬರು 22 ದಿನಗಳ ಕಾಲ ಜೊತೆಯಲ್ಲಿ ಇದ್ದರು. ಆ ವೇಳೆ ಅವರಿಬ್ಬರು ಪ್ರೀತಿಸಲು ಶುರುಮಾಡಿದ್ದರು. ಹಾಗಾಗಿ ಮುಂದೆ ಮದುವೆಯಾಗಲು ನಿರ್ಧರಿಸಿ ಇದೀಗ ನಾಲ್ಕು ವರ್ಷಗಳ ಬಳಿಕ ಮದುವೆಯಾಗಿದ್ದಾರೆ. ಈ ಮದುವೆಗೆ ಕವಿತಾ ಸೋದರ ಮಾವ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಇಬ್ಬರು ದಂಪತಿ ಸಂದರ್ಶನವೊಂದರಲ್ಲಿ ತಮ್ಮ ಪ್ರೇಮಕಥೆಯ ಬಗ್ಗೆ ಹಂಚಿಕೊಂಡಿದ್ದಾರೆ. ಮತ್ತು ತಾವಿಬ್ಬರು ಬಹಳ ಸಂತೋಷವಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ ಅವರು ಮಗುವನ್ನು ದತ್ತು ತೆಗೆದುಕೊಳ್ಳಲು ಯೋಜಿಸುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ನೋಡುಗರ ಕಣ್ಮನ ಸೆಳೆಯುತ್ತಿದೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ
ಅಕ್ಟೋಬರ್ 2023ರಲ್ಲಿ ಭಾತರದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಸಲಿಂಗ ವಿವಾಹಗಳನ್ನು ಕಾನೂನು ಬದ್ಧಗೊಳಿಸಲು ಸಾಧ್ಯವಿಲ್ಲ ಮತ್ತು ವಿಶೇಷ ವಿವಾಹ ಕಾಯ್ದೆಯನ್ನು ಬದಲಾಯಿಸಲು ಬಯಸುತ್ತದೆಯೇ ಅಥವಾ ಇಲ್ಲವೇ ಎಂಬ ಜವಾಬ್ದಾರಿಯನ್ನು ಸಂಸತ್ತಿನ ಮೇಲೆ ಹಾಕುತ್ತೇವೆ ಎಂದು ತಿಳಿಸಿದ್ದರು. ಹಾಗಾಗಿ ಈ ವಿಶೇಷ ಮದುವೆಗೂ ಇನ್ನೂ ಕಾನೂನಿನಲ್ಲಿ ಮಾನ್ಯತೆ ಸಿಕ್ಕಿಲ್ಲ. ಈ ನಡುವೆ ಇವರಿಬ್ಬರು ಸಲಿಂಗ ವಿವಾಹವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಚರ್ಚೆಗೆ ಕಾರಣವಾಗಿದೆ.