Site icon Vistara News

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Viral Video

ಇತ್ತೀಚಿನ ದಿನಗಳಲ್ಲಿ ತಮ್ಮ ದೇಹದ ಫಿಟ್ ನೆಸ್ ಕಾಪಾಡಿಕೊಳ್ಳಲು ಜನರು ಜಿಮ್‌ಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಸ್ವಲ್ಪ ಹೊತ್ತು ವರ್ಕೌಟ್ ಮಾಡುತ್ತಾರೆ. ಆದರೆ ಈ ವೇಳೆ ನೀವು ನಿಮ್ಮ ಬಗ್ಗೆ ಎಚ್ಚರಿಕೆ ವಹಿಸುವುದು ಅವಶ್ಯಕ. ಯಾಕೆಂದರೆ ವರ್ಕೌಟ್ ವೇಳೆ ಹಲವು ಅವಗಢಗಳು ಸಂಭವಿಸುತ್ತಿರುವುದು ನಾವು ಕೇಳಿದ್ದೇವೆ. ಅಂತಹದೊಂದು ದುರ್ಘಟನೆ ಇದೀಗ ಇಂಡೋನೇಷಿಯಾದ ಜಿಮ್‌ವೊಂದರಲ್ಲಿ ನಡೆದಿದ್ದು, ಇದು ವೈರಲ್ (Viral Video) ಆಗಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ಮಹಿಳೆಯೊಬ್ಬರು ಆಯ ತಪ್ಪಿ ಮೂರನೇ ಮಹಡಿಯಿಂದ ಬಿದ್ದು ಸಾವನಪ್ಪಿದ ಘಟನೆ ಇಂಡೋನೇಷಿಯಾ ಪಾಂಟಿಯಾನಕ್‌ನಲ್ಲಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ 22 ವರ್ಷದ ಮಹಿಳೆಯೊಬ್ಬರು ಮೂರನೇ ಮಹಡಿಯಲ್ಲಿದ್ದ ಜಿಮ್ ನ ಕಿಟಕಿಯ ಬಳಿ ಇರಿಸಲಾದ ಟ್ರೆಡ್ ಮಿಲ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಅಲ್ಲಿ ಕಿಟಿಕಿಯ ಬಾಗಿಲು ತೆರೆದಿತ್ತು. ಹಾಗಾಗಿ ಆಕೆ 30 ನಿಮಿಷ ವರ್ಕೌಟ್ ಮಾಡಿ ಟ್ರೆಡ್ ಮಿಲ್ ನಿಂದ ಕೆಳಗೆ ಇಳಿಯುವಾಗ ಹಿಂದೆ ಹೆಜ್ಜೆ ಹಾಕಿ ಎಡವಿ ಕಿಟಿಕಿಯಿಂದ ಹೊರಗೆ ಬಿದ್ದಿದ್ದಾರೆ. ಇದರಿಂದ ಅವರು ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಕಾಲಿನ್ ರಗ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ 8.1 ಮಿಲಿಯನ್ ವೀವ್ಸ್ ಬಂದಿದ್ದು, ಈ ವಿಡಿಯೊ ವೈರಲ್ ಆಗಿದೆ. ಪೊಲೀಸರ ಮಾಹಿತಿ ಪ್ರಕಾರ ಜಿಮ್ ನಲ್ಲಿ ಟ್ರೆಡ್ ಮಿಲ್ ಯಂತ್ರವನ್ನು ಕಿಟಿಕಿಯಿಂದ ಕೇವಲ 2 ಅಡಿ ದೂರದಲ್ಲಿ ಇಡಲಾಗಿದೆ. ಹಾಗೇ ಕಿಟಿಕಿಯ ಎತ್ತರ ಕೇವಲ ಒಂದು ಅಡಿಯಷ್ಟು ಇದ್ದ ಕಾರಣ ಈ ಅವಘಡ ಸಂಭವಿಸಿದೆ. ಅಲ್ಲದೇ ಮಹಿಳೆ ಬೀಳುವಾಗ ಕಿಟಕಿಯ ಅಂಚನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಫಲವಾಗದೆ ಆಕೆ ಕೆಳಗೆ ಬಿದ್ದಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಕೆ ಆಗಲೇ ಸಾವನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಈ ವಿಡಿಯೊ ನೋಡಿದ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಮತ್ತು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಟ್ರೆಡ್ ಮಿಲ್ ಅನ್ನು ತೆರೆದ ಕಿಟಿಕಿಯ ಬಳಿ ಇಡಬಾರದಿತ್ತು. ಅದಕ್ಕೆ ವಿರುದ್ಧವಾಗಿ ಇಟ್ಟಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಕೆಲವರು ಬೇಸರಗೊಂಡಿದ್ದಾರೆ. ಕೆಲವರು ಜಿಮ್ ಮಾಲೀಕನ ನಿರ್ಲಕ್ಷ್ಯದ ಬಗ್ಗೆ ಕಿಡಿಕಾರಿದ್ದಾರೆ. ಹಾಗೇ ಮತ್ತೆ ಈ ಘಟನೆ ಸಂಭವಿಸದಂತೆ ಎಚ್ಚರವಹಿಸುವುದು ಅಗತ್ಯವೆಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಸಿಮೆಂಟ್, ಕಲ್ಲಿನಿಂದ ವಾಷಿಂಗ್ ಮೆಷಿನ್ ತಯಾರಿಸಿದ ಮಹಿಳೆ; ಹೇಗೆ ಕೆಲಸ ಮಾಡುತ್ತೆ ನೋಡಿ!

ಹಾಗಾಗಿ ಪ್ರತಿದಿನ ಜಿಮ್‌ಗೆ ಹೋಗಿ ವರ್ಕೌಟ್ ಮಾಡುವುದು ತಪ್ಪಲ್ಲ. ಆದರೆ ಈ ವೇಳೆ ನಿಮ್ಮ ಬಗ್ಗೆ ಎಚ್ಚರಿಕೆವಹಿಸಿ. ದೇಹದ ಬಗ್ಗೆ ಕಾಳಜಿಯ ಜೊತೆಗೆ ಜೀವದ ಬಗ್ಗೆಯೂ ಕಾಳಜಿ ಇರಲಿ. ಇದರಿಂದ ಇಂತಹ ದುರ್ಘಟನೆ ನಡೆಯುವುದನ್ನು ತಪ್ಪಿಸಬಹುದು.

Exit mobile version