Site icon Vistara News

Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

Viral Video


ನವದೆಹಲಿ: ಜಗತ್ತಿನೆಲ್ಲೆಡೆ ಆಗಸ್ಟ್ 4ರಂದು ಸ್ನೇಹಿತರ ದಿನವನ್ನು ಆಚರಿಸಲಾಗಿದೆ. ನಮ್ಮ ರಕ್ತ ಸಂಬಂಧಿಕರ ಜೊತೆ ನಮ್ಮ ಸಂಬಂಧ ಬೆಸೆದುಕೊಳ್ಳುವುದು ಸಹಜ. ಆದರೆ ನಮ್ಮ ಜೊತೆ ಯಾವುದೇ ಸಂಬಂಧವಿಲ್ಲದೇ ಬೆಸೆದುಕೊಳ್ಳುವುದೇ ಸ್ನೇಹ. ಜಗತ್ತಿನಲ್ಲಿ ಹೆಚ್ಚಿನ ಜನರಿಗೆ ಸಂಬಂಧಿಕರಿಗಿಂತ ಹೆಚ್ಚು ನೆರವಾಗುವವರು ಸ್ನೇಹಿತರು. ತಮ್ಮ ಸುಖ, ದುಃಖಗಳನ್ನು ಹಂಚಿಕೊಳ್ಳುವ ಮನಸ್ಸೆಂದರೆ ಅದು ಸ್ನೇಹ. ಎಷ್ಟೋ ಜನರು ತಮ್ಮ ಕಷ್ಟಗಳನ್ನು ಸಂಬಂಧಿಕರಿಗಿಂತ ಹೆಚ್ಚು ಸ್ನೇಹಿತರ ಬಳಿಯೇ ಹಂಚಿಕೊಳ್ಳುತ್ತಾರೆ. ಯಾಕೆಂದರೆ ಸ್ನೇಹ ಸಂಬಂಧ ಅಷ್ಟೋಂದು ಬಲವಾಗಿರುತ್ತದೆ. ನಾವು ಸ್ನೇಹವನ್ನು ಮನುಷ್ಯರ ಜೊತೆಯೇ ಮಾಡಬೇಕೆಂದಿಲ್ಲ. ಕೆಲವರು ತಮ್ಮ ಸಾಕು ಪ್ರಾಣಿಗಳ ಜೊತೆಯೂ ಸ್ನೇಹ ಬೆಳೆಸುತ್ತಾರೆ. ಇಂತಹ ಸ್ನೇಹವನ್ನು ವ್ಯಕ್ತಪಡಿಸುವ ಸ್ನೇಹಿತರ ದಿನದಂದು ಉದ್ಯಮಿಯೊಬ್ಬರು ಉತ್ತಮ ಸ್ನೇಹಕ್ಕೆ ನಿರ್ದಶನವೆಂಬಂತೆ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದು ಅದು ಸಖತ್ ವೈರಲ್ (Viral Video) ಆಗಿದೆ.

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಇತ್ತೀಚೆಗೆ ಅಂತರರಾಷ್ಟ್ರೀಯ ಸ್ನೇಹಿತರ ದಿನದಂದು ನಾಯಿಮರಿ ಮತ್ತು ಮಗುವಿನ ಸ್ನೇಹದ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅಳುತ್ತಿರುವ ಹುಡುಗನನ್ನು ಆತನ ಸ್ನೇಹಿತನಂತೆ ಇದ್ದ ಸಾಕುಪ್ರಾಣಿ ನಾಯಿಮರಿ ಸಂತೈಸುತ್ತಿದೆ. 39 ಸೆಕೆಂಡುಗಳ ಈ ವಿಡಿಯೊದಲ್ಲಿ ಪುಟ್ಟ ಹುಡುಗನೊಬ್ಬ ನೆಲದ ಮೇಲೆ ಕುಳಿತು ತನ್ನ ಬೆನ್ನನ್ನು ಮಂಚದ ಮೇಲೆ ಇಟ್ಟುಕೊಂಡು ಬೇಸರದಿಂದ ಅಳುತ್ತಿದ್ದಾನೆ. ಆಗ ಅವನ ಪಕ್ಕ ಇದ್ದ ನಾಯಿಮರಿ ಅವನನ್ನು ಸಮಾಧಾನಪಡಿಸುತ್ತಿದೆ. ಹಾಗೇ ಅವನ ಕಣ್ಣೀರನ್ನು ಒರೆಸಿಕೊಳ್ಳಲು ಅದು ಟಿಶ್ಯೂವನ್ನು ಅವನಿಗೆ ತಂದು ನೀಡಿದೆ. ಮತ್ತು ಅಳುತ್ತಿರುವ ಅವನ ಮುಖವನ್ನೇ ಬೇಸರದಿಂದ ನೋಡುತ್ತಿದೆ. ಆ ಹುಡುಗ ಕೂಡ ನಾಯಿಮರಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಈ ದೃಶ್ಯವನ್ನು ನೋಡಿದ ಎಂತವರಿಗೂ ಹೃದಯ ಭಾರವೆನಿಸುತ್ತದೆ. ಮೂಕ ಪ್ರಾಣಿಗಳಲ್ಲಿರುವ ಸ್ನೇಹದ ಮನೋಭಾವನೆಯನ್ನು ಈ ವಿಡಿಯೊ ಎತ್ತಿ ತೋರಿಸಿದೆ.

Viral Video

ಇದನ್ನೂ ಓದಿ: ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!

“ನಿಜವಾದ ಸ್ನೇಹಿತರು ನಮ್ಮ ಪ್ರತಿ ಕಣ್ಣೀರನ್ನು ಹಂಚಿಕೊಳ್ಳುತ್ತಾರೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ಈ ದೃಶ್ಯ ನಿಜವಾಗಿಯೂ ಸುಂದರವಾಗಿದೆ,” ಎಂದು ಇನ್ನೊಬ್ಬರು ಹೇಳಿದರು. “ಇದು ಮುದ್ದಾದ ಸಂಬಂಧ,” ಎಂದು ಮೂರನೆಯವರು ತಿಳಿಸಿದ್ದಾರೆ. “ಸ್ನೇಹವು ಎಂದಿಗೂ ವಿಶೇಷ ಜನರೊಂದಿಗೆ ಇರುವುದಿಲ್ಲ … ನಾವು ಸ್ನೇಹಿತರಾಗಿರುವ ಜನರು ವಿಶೇಷವಾಗುತ್ತಾರೆ” ಎಂದು ಬಳಕೆದಾರ ಸುಲೇಮಾನ್ ಖಾನ್ ಎಂಬುವವರು ಹಂಚಿಕೊಂಡಿದ್ದಾರೆ.

Exit mobile version