Site icon Vistara News

Viral Video: ರೀಲ್ಸ್ ಮಾಡಲು ಹೋದ ಹುಡುಗರು; ರೈಲಿನ ಪ್ರಯಾಣಿಕರು ಏನು ಮಾಡಿದರು ನೋಡಿ!

Viral Video

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂದು ಎಲ್ಲರೂ ಬಯಸುವುದು ಸಹಜ. ಅದಕ್ಕಾಗಿ ರೀಲ್ಸ್‌ಗಳನ್ನು ಮಾಡುತ್ತಾರೆ. ಆದರೆ ನೀವು ಮಾಡುವಂತಹ ರೀಲ್ಸ್ ನಿಮಗೂ ಹಾಗೂ ಬೇರೆಯರಿಗೆ ಹಾನಿ ಮಾಡುವಂತದಾಗಿರಬಾರದು. ಯಾಕೆಂದರೆ ಆಮೇಲೆ ಅದರ ಫಲವನ್ನು ನೀವೇ ಅನುಭವಿಸಬೇಕಾಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಪಾಕಿಸ್ತಾನದಲ್ಲಿ ಇಂತಹದೊಂದು ಘಟನೆ ನಡೆದಿದೆ, ರೀಲ್ ಮಾಡಲು ಹೋಗಿ ಯುವಕರ ಗುಂಪೊಂದು ರಿಯಲ್ ಆಗಿ ಸಾರ್ವಜನಿಕರಿಂದ ಒದೆ ತಿಂದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.

ಪಾಕಿಸ್ತಾನದಲ್ಲಿ ಯುವಕರು ಗುಂಪೊಂದು ತಮಾಷೆ ರೀಲ್ ಮಾಡಲು ಕಠಿಣ ಮಾರ್ಗವನ್ನು ಅನುಸರಿಸಿದ್ದಾರೆ. ಚಲಿಸುವ ರೈಲು ಮಧ್ಯದಲ್ಲಿ ಎಲ್ಲೂ ನಿಲ್ಲುವುದಿಲ್ಲ ಎಂದು ಭಾವಿಸಿದ ಯುವಕರು ವೇಗವಾಗಿ ಬರುವ ರೈಲಿಗೆ ನೀರು ಚುಮ್ಮುವಂತೆ ರೈಲು ಹಳಿ ಹಾದು ಹೋಗುವ ತೊರೆಗೆ ತಮ್ಮ ಬೈಕ್ ಅನ್ನು ಅಡ್ಡಲಾಗಿ ನಿಲ್ಲಿಸಿದ್ದಾರೆ. ಆಗ ಬಂದ ರೈಲಿಗೆ ಆ ನೀರು ಹಾರಿದೆ. ಅವರ ತಮಾಷೆ ಅವರಿಗೆ ದುಬಾರಿಯಾಗಿದೆ. ಯಾಕೆಂದರೆ ರೈಲು ಮಧ್ಯದಲ್ಲಿ ನಿಲ್ಲಿಸಿ ಅದರಲ್ಲಿದ್ದ ಪ್ರಯಾಣಿಕರು ಕೋಪಗೊಂಡು ಯುವಕರ ಮೇಲೆ ದಾಳಿ ಮಾಡಿದ್ದಾರೆ.

ವಿಡಿಯೊದಲ್ಲಿ ವೇಗವಾಗಿ ಬರುತ್ತಿರುವ ರೈಲಿಗೆ ಇವರು ತೊರೆಗೆ ಅಡ್ಡಲಾಗಿ ಇಟ್ಟ ಬೈಕಿಂದ ನೀರು ಚಿಮ್ಮುತ್ತಿದೆ. ಆ ವೇಳೆ ರೈಲು ಮಧ್ಯದಲ್ಲೆ ನಿಂತು ಪ್ರಯಾಣಿಕರು ಕೋಪಗೊಂಡು ಯುವಕರನ್ನು ಅಡ್ಡಾಡಿಸಿಕೊಂಡು ಹೊಡೆಯುತ್ತಿರುವುದು ಕಾಣಿಸುತ್ತಿದೆ. ಆಗ ಪರಿಸ್ಥಿತಿ ವಿಕೋಪಕ್ಕೆ ಹೋದ ಕಾರಣ ಪೊಲೀಸರು ಮಧ್ಯ ಪ್ರವೇಶಿಸಿ ಅವರ ಬೈಕ್‌ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈವರೆಗೆ ಇದಕ್ಕೆ 2.5 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ. ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ. ನೆಟ್ಟಿಗರು ಯುವಕರು ರೈಲನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಈ ಘಟನೆ ಗಂಭೀರವಾಗಿದೆಯಾದರೂ ಇಲ್ಲಿಯವೆರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಹಾಗಾಗಿ ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಕೂಡ ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ ಹಾಗೂ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ಒಂಟಿ ಯುವತಿಯ ಮೇಲೆ ದುಷ್ಕರ್ಮಿಯ ದಾಳಿ; ಆಕೆ ಪಾರಾಗಿದ್ದು ಹೇಗೆ?

ಇನ್ನೊಬ್ಬರಿಗೆ ತಮಾಷೆ ಮಾಡುವುದು ಕೆಲವೊಮ್ಮೆ ನಮಗೆ ದುಬಾರಿಯಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪ್ರಯಾಣಿಕರನ್ನು ತಮಾಷೆ ಮಾಡಲು ಹೋದ ಯುವಕರಿಗೆ ಈ ಘಟನೆ ತಕ್ಕ ಪಾಠ ಕಲಿಸಿದೆ. ದುರುದ್ದೇಶವುಳ್ಳ ತಮಾಷೆ ಅನಗತ್ಯ ಸಮಸ್ಯೆಯನ್ನು, ಅಪಾಯವನ್ನು ತಂದೊಡ್ಡುತ್ತದೆ ಎಂಬುದು ಈ ಘಟನೆಯಿಂದ ಎಲ್ಲರಿಗೂ ತಿಳಿದಂತಾಗಿದೆ.

Exit mobile version