Site icon Vistara News

Viral Video: ಸ್ಟ್ರೆಚರ್‌ ಇಲ್ಲದ ಸರ್ಕಾರಿ ಆಸ್ಪತ್ರೆ; ಪತಿಯನ್ನು ಬೆನ್ನ ಮೇಲೆ ಹೊತ್ತು ನಡೆದ ಪತ್ನಿ! ಮನಮಿಡಿಯುವ ವಿಡಿಯೊ

Viral Video


ಸರ್ಕಾರಿ ಆಸ್ಪತ್ರೆಗಳು ಬಡವರಿಗಾಗಿ ಇದ್ದರೂ ಅವು ಬಡವರಿಗೆ ಸರಿಯಾಗಿ ಸೇವೆಗಳನ್ನು ಒದಗಿಸುತ್ತಿಲ್ಲ. ಬದಲಾಗಿ ಬಡವರ ಜೊತೆ ಅಲ್ಲಿನ ಸಿಬ್ಬಂದಿಗಳು ತುಂಬಾ ಕ್ರೂರವಾಗಿ ವರ್ತಿಸುತ್ತಾರೆ. ಅಂತಹದೊಂದು ಘಟನೆ ಇದೀಗ ಮಧ್ಯಪ್ರದೇಶದಲ್ಲಿ ಜಿಲ್ಲಾ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಮಹಿಳೆಯೊಬ್ಬರು ಗಾಯಗೊಂಡ ಪತಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದರು. ಆದರೆ ಅಲ್ಲಿ ಅವರಿಗಾದ ಗತಿ ನೋಡಿದರೆ ಸರ್ಕಾರಿ ಆಸ್ಪತ್ರೆಗಳ ಬೇಜವಾಬ್ದಾರಿತನ ಬಯಲಿಗೆ ಬರುತ್ತದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಟೀಕೆಗೆ ಕಾರಣವಾಗಿದೆ.

ಪತಿ ಕಾಲಿನ ಮೂಳೆ ಮುರಿತಕ್ಕೊಳಗಾದ ಹಿನ್ನೆಲೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲು ಪತ್ನಿ ಭಿಂಡ್ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾಳೆ. ಆದರೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಸಾಗಿಸಲು ಸ್ಟ್ರೆಚರ್ ಲಭ್ಯವಿರಲಿಲ್ಲ. ತನ್ನ ಗಂಡನನ್ನು ಶಸ್ತ್ರಚಿಕಿತ್ಸಾ ವಾರ್ಡ್‌ಗೆ ಕರೆದುಕೊಂಡು ಹೋಗುವುದು ಅನಿವಾರ್ಯವಾದ ಕಾರಣ ಅವಳು ಅವನನ್ನು ಆಸ್ಪತ್ರೆಯ ಮೂಲಕ ಸುಮಾರು 50 ಮೀಟರ್ ದೂರ ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ನಡೆದಿದ್ದಾಳೆ. ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. ಇದು ಸಾರ್ವಜನಿಕರ ಆಕ್ರೋಶ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳಿಗೆ ಕಾರಣವಾಗಿದೆ. ಹಾಗಾಗಿ ಆಸ್ಪತ್ರೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎನ್ನಲಾಗಿದೆ.

ಈ ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಟೀಕೆ ಮತ್ತು ಟ್ರೋಲ್‌ಗಳನ್ನು ಹುಟ್ಟುಹಾಕಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಜೀವ್ ಶ್ರೀವಾಸ್ತವ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಸಿವಿಲ್ ಸರ್ಜನ್ ಉಸ್ತುವಾರಿ ಡಾ.ಜೆ.ಎಸ್.ಯಾದವ್ ನಿರಾಕರಿಸಿದ್ದಾರೆ. ಸ್ಟ್ರೆಚರ್ ಅಲಭ್ಯತೆಯ ಹಿಂದಿನ ಕಾರಣಗಳನ್ನು ವಿವರಿಸಲು ಸಹಾಯಕ ವ್ಯವಸ್ಥಾಪಕ ಸಾಕೇತ್ ಚೌರಾಸಿಯಾ ಅವರಿಗೆ ನೋಟಿಸ್ ನೀಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ರೈಲ್ವೆ ಸೇತುವೆ ಮೇಲೆ ಫೋಟೊಶೂಟ್‌; ರೈಲು ಬಂದಾಗ 90 ಅಡಿ ಆಳಕ್ಕೆ ಜಿಗಿದ ದಂಪತಿ!

ಈ ಘಟನೆಯು ಭಿಂಡ್ ಜಿಲ್ಲಾ ಆಸ್ಪತ್ರೆಯ ಸೌಲಭ್ಯಗಳು ಮತ್ತು ಸೇವೆಗಳ ಸ್ಥಿತಿಯ ಬಗ್ಗೆ ಜನರಲ್ಲಿ ಕಳವಳವನ್ನು ಹೆಚ್ಚಿಸಿದೆ, ಸ್ಥಳೀಯರು ರೋಗಿಗಳ ಆರೈಕೆ ಮತ್ತು ಮೂಲಸೌಕರ್ಯಗಳಲ್ಲಿ ಸುಧಾರಣೆಗಳನ್ನು ತರುವಂತೆ ಒತ್ತಾಯಿಸಲಾಗಿದೆ. ಈ ಮಹಿಳೆಯಯನ್ನು ನೋಡಿದರೆ ಪುರಾಣದ ಸತಿ ಸಾವಿತ್ರಿ ನೆನಪಾಗುತ್ತಿದ್ದಾಳೆ.

Exit mobile version