Site icon Vistara News

Viral Video: ಪ್ರೇಮಿಯೊಂದಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳೆ; ಗ್ರಾಮಸ್ಥರು ನೀಡಿದರು ಅಮಾನುಷ ಶಿಕ್ಷೆ

Viral Video


ವಿವಾಹೇತರ ಸಂಬಂಧಗಳ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಆದರೆ ಕೆಲವೊಂದು ಗ್ರಾಮಗಳಲ್ಲಿ ವಿವಾಹೇತರ ಸಂಬಂಧ ಹೊಂದಿದ್ದವರಿಗೆ ಚಿತ್ರಹಿಂಸೆ ನೀಡುತ್ತಾರೆ. ಅಂತಹದೊಂದು ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಪ್ರತಾಪ್‍ಗಢದ ಗ್ರಾಮವೊಂದರಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಗೆ ಘೋರವಾದ ಶಿಕ್ಷೆ ವಿಧಿಸಿದ ಅಮಾನವೀಯ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮಹಿಳೆಗೆ ಗ್ರಾಮದ ಯುವಕನೊಂದಿಗೆ ವಿವಾಹೇತರ ಸಂಬಂಧವಿದ್ದ ಹಿನ್ನೆಲೆಯಲ್ಲಿ ಆಕೆ ತನ್ನ ಪ್ರೇಮಿಯೊಂದಿಗೆ ಮಾತನಾಡುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಿಂದ ಗ್ರಾಮಸ್ಥರು ಶಿಕ್ಷೆ ವಿಧಿಸಿದ್ದಾರೆ. ಆಕೆಗೆ ನೀಡಿದ ಶಿಕ್ಷೆಗೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ, ಕೂದಲನ್ನು ಕತ್ತರಿಸಿ ಮುಖಕ್ಕೆ ಕಪ್ಪು ಬಣ್ಣ ಹಚ್ಚಲಾಗಿದೆ. ಮಹಿಳೆಯನ್ನು ಆಕೆಯ ಮಗ ಮತ್ತು ಪುತ್ರಿಯರ ಮುಂದೆಯೇ ಥಳಿಸಲಾಗಿದೆ. ಪ್ರತಾಪ್‍ಗಢದ ಹಥಿಗವಾ ಗ್ರಾಮದ ವ್ಯಾಪ್ತಿಗೆ ಬರುವ ಛೋಟ್ಕಿ ಇಬ್ರಾಹಿಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಹಿಳೆ ಈ ಗ್ರಾಮದ ಹುಡುಗನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯತ್‍ಗೆ ದೂರು ನೀಡಿದ್ದರು. ಪಂಚಾಯತ್ ಇಬ್ಬರಿಗೂ ಶಿಕ್ಷೆ ವಿಧಿಸಲು ಆದೇಶಿಸಿದೆ. ಆದರೆ ಆಕೆಯ ಪ್ರೇಮಿ ತಪ್ಪಿಸಿಕೊಂಡಿದ್ದಾನೆ. ಹಾಗಾಗಿ ಗ್ರಾಮಸ್ಥರು ಮಹಿಳೆಯನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಶಿಕ್ಷೆ ವಿಧಿಸಿದ್ದಾರೆ. ಈ ಮಹಿಳೆಗೆ ಮೂವರು ಮಕ್ಕಳಿದ್ದು, ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು. ಅವಳ ಹಿರಿಯ ಮಗನಿಗೆ 12 ವರ್ಷವಾಗಿದೆ ಎಂಬುದಾಗಿ ತಿಳಿದುಬಂದಿದೆ. ಅಕ್ರಮ ಸಂಬಂಧದ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ ನಂತರವೂ ಪ್ರೇಮ ಸಂಬಂಧವನ್ನು ಮುಂದುವರಿಸಿದ್ದಕ್ಕಾಗಿ ಮಹಿಳೆಯನ್ನು ಗ್ರಾಮಸ್ಥರು ಈ ರೀತಿ ಥಳಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

ಆಕೆಯ ಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಪತಿಯ ಅನುಪಸ್ಥಿತಿಯಲ್ಲಿ ಮಹಿಳೆ ಅದೇ ಗ್ರಾಮದ ಯುವಕನೊಂದಿಗೆ ಪ್ರೇಮ ಸಂಬಂಧವನ್ನು ಪ್ರಾರಂಭಿಸಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಹಿಳೆಯ ಪ್ರೇಮ ಸಂಬಂಧದಿಂದ ಗ್ರಾಮದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಗ್ರಾಮಸ್ಥರು ಇಂತಹ ಅನಾಗರಿಕ ಶಿಕ್ಷೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಇತ್ತ ಆಕೆಯ ಪ್ರೇಮಿ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ. ಹಾಗಾಗಿ ನಂತರ ಪೊಲೀಸರು ಸ್ಥಳಕ್ಕೆ ತಲುಪಿ ಮಹಿಳೆಯನ್ನು ರಕ್ಷಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಭದ್ರತಾ ಕಾರಣಗಳಿಗಾಗಿ ಪೊಲೀಸ್ ಸಿಬ್ಬಂದಿಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ.

Exit mobile version