Site icon Vistara News

Viral Video: ಮಕ್ಕಳನ್ನು ಬೆಲ್ಟ್‌ನಿಂದ ಕ್ರೂರವಾಗಿ ಥಳಿಸಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

Viral Video

ಮುಂಬೈ: ಪೋಷಕರಿಗೆ ತಮ್ಮ ಮಕ್ಕಳನ್ನು ಸರಿದಾರಿಗೆ ನಡೆಸುವ ಜವಾಬ್ದಾರಿ ಇರುತ್ತದೆ. ಯಾಕೆಂದರೆ ಮಕ್ಕಳು ಮುಂದೆ ಏನೇ ತಪ್ಪು ಮಾಡಿದರೂ ಅದಕ್ಕೆ ತಂದೆ ತಾಯಿಯೇ ಹೊಣೆಗಾರರಾಗುತ್ತಾರೆ. ಹಾಗಾಗಿ ಅವರು ಮಕ್ಕಳನ್ನು ಪ್ರೀತಿಸುವ ಜೊತೆಗೆ ಅವರಿಗೆ ಶಿಕ್ಷೆ ನೀಡುವ ಹಕ್ಕನ್ನು ಹೊಂದಿರುತ್ತಾರೆ. ಅಂದ ಮಾತ್ರಕ್ಕೆ ಪೋಷಕರು ಮಕ್ಕಳಿಗೆ ಸಾಯುವ ರೀತಿ ಶಿಕ್ಷೆ ವಿಧಿಸಬಾರದು. ಇದನ್ನು ಕಾನೂನಿನಲ್ಲಿ ಸರಿ ಎಂದು ಹೇಳುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಮಕ್ಕಳಿಗೆ ಬೆಲ್ಟ್‌ನಿಂದ ಕ್ರೂರವಾಗಿ ಹೊಡೆದು ಶಿಕ್ಷಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಗೋರೆಗಾಂವ್ (ಪೂರ್ವ) ನ ನಿರ್ಲಾನ್ ಪಾರ್ಸಿ ಪಂಚಾಯತ್ ಕಾಂಪ್ಲೆಕ್ಸ್‌ನ ಕಾಲೋನಿಯಲ್ಲಿ ಮಹಿಳೆಯೊಬ್ಬಳು ಮಕ್ಕಳನ್ನು ಬೆಲ್ಟ್‌ನಿಂದ ಹೊಡೆಯುತ್ತಿರುವ  ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಬಾಂಬೆ ಹೈಕೋರ್ಟ್‌ ಮಾಜಿ ನ್ಯಾಯಾಧೀಶ ಶಾರುಖ್ ಕಥಾವಾಲಾ ತಾಯಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಂಬೈ ಪೊಲೀಸರು, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗವನ್ನು ಒತ್ತಾಯಿಸಿದ್ದಾರೆ.

ವಿಡಿಯೊದಲ್ಲಿ ಮಹಿಳೆ ಮಕ್ಕಳನ್ನು ಬೆಲ್ಟ್‌ನಿಂದ ಹೊಡೆಯುವುದು ಮತ್ತು ಹೆದರಿಸುವುದು ಕಂಡುಬರುತ್ತದೆ. ಮಕ್ಕಳು ಭಯಭೀತರಾಗಿದ್ದು, ತಮ್ಮನ್ನು ಬಿಡುವಂತೆ ಬೇಡಿಕೊಳ್ಳುವುದನ್ನು ಕಾಣಬಹುದು. ಆದರೂ, ತಾಯಿ ಅಸಹಾಯಕ ಮಕ್ಕಳನ್ನು ಬೆಲ್ಟ್‌ನಿಂದ ಹೊಡೆಯುತ್ತಿರುವುದು ಕಾಣಿಸುತ್ತದೆ. ಆದರೆ ಈ ವಿಡಿಯೊ ಆಕೆಯ ಪತಿ ಮಾಡಿರುವುದಾಗಿ ತಿಳಿದುಬಂದಿದೆ. ಆದರೆ ಪತಿ ತನ್ನ ಮಕ್ಕಳನ್ನು ರಕ್ಷಿಸಲು ಯಾಕೆ ಮುಂದೆ ಬಂದಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

ಇದನ್ನೂ ಓದಿ:  ಬಸ್‌ ಬ್ರೇಕ್ ಫೇಲ್; ಜೀವ ಉಳಿಸಿಕೊಳ್ಳಲು ಬಸ್‌ನಿಂದ ಜಿಗಿದ ಅಮರನಾಥ ಯಾತ್ರಿಕರು! ವಿಡಿಯೊ ಇದೆ

ಈ ವೀಡಿಯೊ ವೈರಲ್ ಆದ ನಂತರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳನ್ನು ಬೆಲ್ಟ್‌ನಿಂದ ಹೊಡೆಯುತ್ತಿರುವ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಅಲ್ಲದೇ ಮಾಜಿ ನ್ಯಾಯಾಧೀಶರು ವಿಡಿಯೊಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ ಹಾಗಾಗಿ ಪೊಲೀಸರು ಮತ್ತು ಮಕ್ಕಳ ಹಕ್ಕು ಆಯೋಗ ಮಧ್ಯಪ್ರವೇಶ ಮಾಡುವಂತೆ ಕೋರಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರು ಸಂಬಂಧಪಟ್ಟ ಡಿಸಿಪಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪೊಲೀಸರು ಕುಟುಂಬಕ್ಕೂ ಭೇಟಿ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Exit mobile version