Site icon Vistara News

Wayanad Tragedy: ಇಡೀ ಊರು ಭೂಕುಸಿತದಿಂದ ನಾಶ; ಮೂರು ದಿನ ಬಳಿಕ ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆ!

Wayanad Tragedy


ಕೇರಳದ ವಯನಾಡ್(Wayanad Tragedy) ಜಿಲ್ಲೆಯ ಮೂರು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಮೂರು ದಿನ ಕಳೆದಿದೆ. ಈ ನಡುವೆ ಪವಾಡ ಎಂಬಂತೆ, ಮುಂಡಕ್ಕೈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕಾರ್ಯಕರ್ತರು ಶುಕ್ರವಾರ ಪಡವೆಟ್ಟಿ ಕುನ್ನು ಬಳಿಯ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ಕು ಜನರನ್ನು ಜೀವಂತವಾಗಿ ಪತ್ತೆ ಮಾಡಿದ್ದಾರೆ!

ಮಂಗಳವಾರ ಭಾರಿ ಭೂಕುಸಿತಕ್ಕೆ ಒಳಗಾದ ವಯನಾಡಿನ ಮುಂಡಕ್ಕೈ ಪ್ರದೇಶದಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆ ವೇಳೆ ಒಂದೇ ಮನೆಯಲ್ಲಿ ವಾಸವಾಗಿದ್ದ ಕುಟುಂಬದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರನ್ನು ಕಂಜಿರಕಥೋಟೆ ಕುಟುಂಬದ ಜಾನಿ, ಜೋಮೋಲ್, ಅಬ್ರಹಾಂ ಮತ್ತು ಕ್ರಿಸ್ಟಿ ಎಂದು ಗುರುತಿಸಲಾಗಿದೆ.

ರಕ್ಷಣಾ ಕಾರ್ಯಕರ್ತರು ಅವರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ. ಇದರಲ್ಲಿ ಒಬ್ಬ ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ, ಭೂಕುಸಿತದಿಂದ ಅವರ ಮನೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಾಗಾಗಿ ಅವರು ಜೀವಂತವಾಗಿ ಉಳಿದಿದ್ದಾರೆ ಎನ್ನಲಾಗಿದೆ.

ಕೇರಳದಲ್ಲಿ ಜುಲೈ 30ರಂದು ಮುಂಜಾನೆ ಭಾರಿ ಮಳೆಯಿಂದಾಗಿ ವಯನಾಡ್ ಜಿಲ್ಲೆಯ ವೈತಿರಿ ತಾಲ್ಲೂಕಿನ ಸುಮಾರು ಮೂರು ಹಳ್ಳಿಗಳಾದ ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲಾ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಮುಂಜಾನೆ 2 ಮತ್ತು 4.10ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈ ಸಮಯದಲ್ಲಿ ಜನರು ಮಲಗಿದ್ದರಿಂದ ಇದು ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಮಂಗಳೂರು-ಬೆಂಗಳೂರು ರೈಲು ವೇಳಾಪಟ್ಟಿ ಬದಲು; ಪ್ರಯಾಣಿಕರಿಗೆ ಏನು ಲಾಭ?

ಈಗಾಗಲೇ ಈ ಭೂಕುಸಿತದಲ್ಲಿ 201 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಕಾಣೆಯಾದ ಸುಮಾರು 300 ಜನರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹಾಗೇ ಅನೇಕ ದೇಹದ ಭಾಗಗಳನ್ನು ಸಂಗ್ರಹಿಸಲಾಗಿದೆ ಮತ್ತು ಅವಶೇಷಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version