Site icon Vistara News

Wayanad Tragedy: ಈ ಮುದ್ದು ವಿದ್ಯಾರ್ಥಿನಿಯರ ನಗು, ಸೈಕಲ್‌ ಸವಾರಿ ಇನ್ನೆಲ್ಲಿ? ಮಣ್ಣಿನಡಿ ಸಮಾಧಿ; ಕಣ್ಣಂಚಲಿ ನೀರು ತರಿಸುವ ವಿಡಿಯೊ

Wayanad Tragedy


ಒಂದು ವರ್ಷದ ಹಿಂದೆ ಕೇರಳದ ವಯನಾಡ್‌ನ (Wayanad Tragedy) ಮುಂಡಕ್ಕೈನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರು ಶಾಲಾ ಆಟದ ಮೈದಾನದಲ್ಲಿ ತಮ್ಮ ವಿದ್ಯಾರ್ಥಿಗಳು ಸಣ್ಣ ಸೈಕಲೊಂದನ್ನು ಓಡಿಸುತ್ತಿರುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅಂದು ಆ ವಿಡಿಯೊ ಎಲ್ಲರ ಗಮನ ಸೆಳೆದಿತ್ತು. ಆದರೆ ಇಂದು, ಗುಡ್ಡ ಕುಸಿತದ ದೊಡ್ಡ ದುರಂತದ ಕಾರಣಕ್ಕಾಗಿ ಮಕ್ಕಳು ಸೈಕಲ್ ಆಡುತ್ತಿದ್ದ ಸ್ಥಳವು ಎಲ್ಲಾ ಮಾಧ್ಯಮಗಳ ಗಮನವನ್ನು ಸೆಳೆದಿದೆ.

ಯಾಕೆಂದರೆ ಅಂದು ನಗು ಮತ್ತು ಸಂತೋಷದಿಂದ ಪ್ರತಿಧ್ವನಿಸುತ್ತಿದ್ದ ಆ ಆಟದ ಮೈದಾನ ಇಂದು ಅತಿಯಾದ ಮಳೆಯಿಂದಾಗಿ ಭೂಕುಸಿತಕ್ಕೊಳಗಾಗಿ ಅತಿಯಾದ ಪ್ರಮಾಣದ ಮಣ್ಣು ಮತ್ತು ಕೆಸರಿನಿಂದ ತುಂಬಿಕೊಂಡಿದೆ. ಅಲ್ಲದೇ ವಿಡಿಯೊದಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ವಿದ್ಯಾರ್ಥಿಗಳು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ವಿಡಿಯೊ ಪೋಸ್ಟ್ ಮಾಡಿದ ಶಿಕ್ಷಕಿ ಮಾಧ್ಯಮದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಮ್ಮ ವಿದ್ಯಾರ್ಥಿಗಳಿಗೆ ಸೈಕಲ್ ಓಡಿಸಲು ಅವಕಾಶ ನೀಡಿದ ಶಿಕ್ಷಕಿ ಶಾಲಿನಿ ಈಗ ವಯನಾಡಿನ ಮೀನಂಗಡಿಯ ಸರ್ಕಾರಿ ಎಲ್ಪಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಲ್ಕನೇ ತರಗತಿಯ ಶಿಕ್ಷಕಿಯಾಗಿದ್ದ ಶಾಲಿನಿ ಅಂದು ಪಿಟಿ ಪಿರಿಯಡ್‌ನಲ್ಲಿ ಆಟದ ಮೈದಾನದಲ್ಲಿದ್ದ ಸೈಕಲ್ ನೋಡಿ ಓಡಿಸಲು ಬಯಸಿದ್ದ ತಮ್ಮ ಪ್ರೀತಿಯ ವಿದ್ಯಾರ್ಥಿಗಳಿಗೆ ಸೈಕಲ್ ಓಡಿಸಲು ಅವಕಾಶ ಮಾಡಿಕೊಟ್ಟಿದ್ದರು. ಅದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಅಂದು ಪೋಸ್ಟ್ ಮಾಡಿದ್ದರು. ಆದರೆ ಇಂದು ಚೂರಲ್ಮಾಲಾ ಶಾಲೆಯಲ್ಲಿ ಪದವಿ ಪಡೆದು ಐದನೇ ತರಗತಿಗೆ ಸೇರಿದ ಸೈಕಲ್ ಸವಾರಿ ಮಾಡಿದ ಆ ಮೂವರು ಸೇರಿದಂತೆ ಒಂಬತ್ತು ವಿದ್ಯಾರ್ಥಿಗಳು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

“ನಾನು ಇನ್ನು ಮುಂದೆ ವಿಡಿಯೊವನ್ನು ನೋಡಲು ಸಾಧ್ಯವಿಲ್ಲ. ವಿಡಿಯೊದಲ್ಲಿ ಕಾಣಿಸಿಕೊಂಡ ಮೂವರು ವಿದ್ಯಾರ್ಥಿಗಳು ಇನ್ನಿಲ್ಲ. ಅವರ ಇಡೀ ಕುಟುಂಬ ಸತ್ತುಹೋಗಿದೆ. ಅವರಲ್ಲದೆ, ಈ ವರ್ಷ ನಾಲ್ಕನೇ ತರಗತಿಗೆ ಪದವಿ ಪಡೆದ ಆರು ವಿದ್ಯಾರ್ಥಿಗಳು ಸಹ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ” ಎಂದು ಶಾಲಿನಿ ದುಃಖದಲ್ಲಿ ಹೇಳಿದ್ದಾರೆ. ಅಲ್ಲದೇ ಶಾಲೆಯು 72 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯಿತು. ಆದರೆ, ಪುತ್ತುಮಾಲಾ ಭೂಕುಸಿತದ ನಂತರ, ಸುಮಾರು 52 ಕುಟುಂಬಗಳು ಇತರ ಪ್ರದೇಶಗಳಿಗೆ ಸ್ಥಳಾಂತರಗೊಂಡಿವೆ. ಇದು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಯಿತು ಎಂದು ಅವರು ತಿಳಿಸಿದ್ದಾರೆ.

ಶಿಕ್ಷಕಿ ಶಾಲಿನಿಯವರು ಕೊಟ್ಟಾಯಂ ಮೂಲದವರಾಗಿದ್ದು, ಸ್ಥಳ ಮತ್ತು ಜನರ ಬಗ್ಗೆ ತಿಳಿದ ನಂತರ ಅವರು ವಯನಾಡ್‌ನಲ್ಲಿ ಪೋಸ್ಟಿಂಗ್ ಮಾಡಿಕೊಂಡರು. ಅವರು ಎರಡು ವರ್ಷಗಳ ಕಾಲ ಮುಂಡಕ್ಕೈ ಎಲ್ ಪಿ ಶಾಲೆಯಲ್ಲಿ ಕೆಲಸ ಮಾಡಿದ್ದಾರೆ. ಮತ್ತು ಆ ಎರಡು ವರ್ಷಗಳು ಅವರು ಅಲ್ಲಿನ ಮಕ್ಕಳು ಹಾಗೂ ಜನರೊಂದಿಗೆ ತುಂಬಾ ಬೆರೆತಿದ್ದರು. ಇಲ್ಲಿನ ಜನರು ತುಂಬಾ ಸರಳರು ಮತ್ತು ವಿದ್ಯಾರ್ಥಿಗಳು ತುಂಬಾ ಪ್ರತಿಭಾವಂತರು. ಆದರೆ ಈಗ ಅವರೆಲ್ಲರೂ ತನಗೆ ಕೇವಲ ನೆನಪು ಮಾತ್ರ ಎಂದು ತನ್ನ ಒಂಬತ್ತು ವಿದ್ಯಾರ್ಥಿಗಳನ್ನು ಕಳೆದುಕೊಂಡ ಶಿಕ್ಷಕಿ ದುಃಖಿಸಿದ್ದಾರೆ.

ಇದನ್ನೂ ಓದಿ: ಟೋಸ್ಟ್‌ ನೀಡುವುದಾಗಿ ಕರೆದು ಬಾಲಕಿ ಮೇಲೆ ಅತ್ಯಾಚಾರ; ಮೋಯಿದ್‌ ಖಾನ್‌, ರಾಜ ಖಾನ್‌ ಬಂಧನ

ಜುಲೈ 30ರಂದು ಕೇರಳದ ಗುಡ್ಡಗಾಡು ವಯನಾಡ್ ಜಿಲ್ಲೆಯ ವೈತಿರಿ ತಾಲ್ಲೂಕಿನ ಸುಮಾರು ಮೂರು ಹಳ್ಳಿಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 122 ಜನರು ಸಾವನ್ನಪ್ಪಿದ್ದಾರೆ ಮತ್ತು 197 ಜನರು ಗಾಯಗೊಂಡಿದ್ದಾರೆ. ಕೇರಳ ಸರ್ಕಾರ ಜುಲೈ 30 ಮತ್ತು 31 ರಂದು ಶೋಕಾಚರಣೆ ಘೋಷಿಸಿದೆ. ಮುಂಡಕ್ಕೈ, ಚೂರಲ್ಮಾಲಾ ಮತ್ತು ಅತ್ತಮಾಲಾ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಪಡೆಗಳನ್ನು ಒಳಗೊಂಡ ತೀವ್ರ ರಕ್ಷಣಾ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Exit mobile version