Site icon Vistara News

ಕನ್ನಡದ ಹುಡುಗರಿಗೆ ಬೇಕು ಕನ್ನಡದ ಡೇಟಿಂಗ್‌ ಆ್ಯಪ್‌!

ಇಂಗ್ಲಿಷ್‌ ಚೆನ್ನಾಗಿ ಬಲ್ಲ ಈ ತಲೆಮಾರಿನ ಹದಿ ಹರೆಯದವರು ಡೇಟಿಂಗ್‌ ಆ್ಯಪ್‌ಗಳ ಮೂಲಕ ತಮ್ಮ ಸಂಗಾತಿಗಳನ್ನು ಕಂಡುಕೊಳ್ಳುತ್ತಾರೆ. ಸದ್ಯ tinder ಎಂಬ ಡೇಟಿಂಗ್‌ ಆ್ಯಪ್‌ ತುಂಬಾ ಪ್ರಚಲಿತದಲ್ಲಿದೆ. ಇದನ್ನು ಬಳಸುವವರ ಸಂಖ್ಯೆ ಎಷ್ಟೆಂದು ಊಹಿಸುವುದೂ ಕಷ್ಟ. ಆದರೆ ಈ ರೀತಿಯ ಆ್ಯಪ್‌ಗಳು ಬಹುತೇಕ ವಿದೇಶ ಮೂಲದ್ದು. ಈ ಮಾದರಿಯ ಆ್ಯಪ್‌ ಒಂದು ನಮ್ಮ ನಾಡಿನದ್ದೇ ಆಗಿದ್ದರೆ ಹೇಗಿರುತ್ತದೆ? ಕನ್ನಡದಲ್ಲಿ, ಕನ್ನಡಿಗರಿಗಾಗಿ ಹೀಗೊಂದು ಡೇಟಿಂಗ್‌ ಆ್ಯಪ್‌ ಇದ್ದರೆ ಹೇಗೆ ಅಲ್ವಾ?

ಈವರೆಗೆ ಅತಿ ಹೆಚ್ಚು ಬಳಕೆಯಾಗಿರುವ ಟಿಂಡರ್‌ ಕೂಡ ಹಲವರಿಗೆ ಬೋರ್‌ ಎನ್ನಿಸಿದ್ದು ನಿಜ. ಆದ್ದರಿಂದ, ಮತ್ತೊಂದಿಷ್ಟು ಹೊಸ ಆ್ಯಪ್‌ಗಳನ್ನು ಈ ಜನರೇಷನ್ ಶೋಧಿಸಿತು. ಆಗ ಬಂಬಲ್‌, ಹ್ಯಾಪ್ನ್‌, ಓಕೆ ಕ್ಯೂಪಿಡ್‌ನಂಥ ಹೊಸ ಆಪ್‌ಗಳು ಹುಟ್ಟಿವೆ. ಎಲ್ಲವೂ ವಿದೇಶದ ಆ್ಯಪ್‌ಗಳು. ಇವೆಲ್ಲದರ ನಡುವೆ ಭಾರತದಲ್ಲೂ ಟ್ರೂಲಿಮ್ಯಾಡ್ಲಿ ಎಂಬ ಡೇಟಿಂಗ್‌ ಆ್ಯಪ್‌ ಆವಿಷ್ಕರಿಸಲಾಯಿತು. ಆದರೆ ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಕಂಡುಬಂದಿಲ್ಲ. ಟಿಂಡರ್‌, ಬಂಬಲ್‌ನಂತಹ ಆ್ಯಪ್‌ಗಳ ಬಳಕೆ ಸಾಮಾನ್ಯ ಕನ್ನಡಿಗರಿಗೆ ಕಷ್ಟ. ಹಾಗಾಗಿ ಕನ್ನಡದಲ್ಲೊಂದು ಡೇಟಿಂಗ್‌ ಆ್ಯಪ್‌ ಇದ್ದರೆ ಅನುಕೂಲವಾಗಬಹುದು.

ಈ ಆ್ಯಪ್‌ಗಳ ಬಳಕೆ ಹೇಗೆ?
ಒಂದೊಂದು ಆ್ಯಪ್‌ನಲ್ಲಿ ಒಂದೊಂದು ವಿಶೇಷ ಫೀಚರ್‌ಗಳನ್ನು ನೀಡಲಾಗಿದೆ. ಕೆಲವು ಆ್ಯಪ್‌ಗಳಲ್ಲಿ ಕೇವಲ ಡೇಟಿಂಗ್‌ಗೆ ಸೀಮಿತಗೊಳಿಸಿಲ್ಲ. ಡೇಟಿಂಗ್‌ ಜೊತೆ ವೃತ್ತಿಗೆ ಸಂಬಂಧಿಸಿದ ಕಾರ್ಯಗಳಿಗೂ ವ್ಯಾಪಿಸಿದೆ. ಟಿಂಡರ್‌ ಆ್ಯಪ್‌ ಅತಿ ಹೆಚ್ಚು ಜನಪ್ರೀಯತೆ ಪಡೆದುಕೊಂಡಿದೆ. ಇದು ಸಂಪೂರ್ಣ ಡೇಟಿಂಗ್‌ ಆ್ಯಪ್‌. ಇದರಲ್ಲಿ ಇಷ್ಟಪಟ್ಟವರನ್ನು ಬಲಕ್ಕೆ ಸ್ವೈಪ್‌ ಮಾಡಬಹುದು ಅಥವಾ ಇಷ್ಟವಿಲ್ಲದವರನ್ನು ಮುಕ್ತವಾಗಿ ಎಡಕ್ಕೆ ಸ್ವೈಪ್‌ ಮಾಡಬಹುದು. ಟಿಂಡರ್‌ಗೆ ನಿಮ್ಮ ಫೇಸ್ಬುಕ್‌ ಅಥವಾ ಜಿಮೇಲ್‌ ಐಡಿ ಮೂಲಕ ಪ್ರವೇಶಿಸಬಹುದು. ನಿಮ್ಮ ಇಷ್ಟಗಳು, ಹವ್ಯಾಸಗಳು, ವೃತ್ತಿಯ ಬಗ್ಗೆ ಮಾಹಿತಿಯನ್ನೂ ನೀಡಬೇಕು. ಆದರೆ, ಎಲ್ಲದಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಬಗ್ಗೆ ಕೆಲವೇ ಪದಗಳಲ್ಲಿ ಹೆಳಬೇಕು. ಅದನ್ನು ಎಷ್ಟು ಸುಂದರವಾಗಿ ವಿವರಿಸುತ್ತೀರಿ ಎನ್ನುವುದು ತುಂಬಾ ಮುಖ್ಯ. ಆ ಆಧಾರದ ಮೇಲೆ ಜನ ನಿಮ್ಮನ್ನು ʼಇಂಟರೆಸ್ಟಿಂಗ್‌ ಪರ್ಸ್ನಾಲಿಟಿʼ ಎಂದು ಇಷ್ಟಪಡುತ್ತಾರೆ. ಇಲ್ಲದಿದ್ದರೆ ನೀವು ತುಂಬಾ ಬೋರಿಂಗ್‌ ಎಂದು ಟ್ಯಾಗ್‌ ಮಾಡುತ್ತಾರೆ. ನಂತರ ರಿಜೆಕ್ಟ್‌ ಮಾಡುತ್ತಾರೆ. ಆ್ಯಪ್‌ ಖರೀದಿ ಮಾಡಿದರೆ, ಅನೇಕ ಫೀಚರ್‌ಗಳು ಲಭ್ಯವಾಗುತ್ತದೆ. ಎಷ್ಟು ಜನ ನಿಮ್ಮ ಪ್ರೊಫೈಲ್‌ನ್ನು ನೋಡಿದರು, ಯಾರಿಗೆ ನೀವು ಇಷ್ಟವಾಗಿದ್ದೀರಿ ಎಂದು ತಿಳಿಯಬಹುದು.


ನಿಮ್ಮ ಸುತ್ತಮುತ್ತಲಿನ ಜಾಗದಲ್ಲಿ ಯಾರಾದರೂ ನಿಮಗೆ ಮ್ಯಾಚ್‌ ಆಗುವಂಥವರು ಇದ್ದಾರ? ಎಂದು ಕೂಡ ತಿಳಿಯಬಹುದು. ಹಾಗೆ ಯಾರಾದರೂ ನಿಮ್ಮನ್ನು ಇಷ್ಟಪಟ್ಟರೆ ನೀವು ಅವರೊಂದಿಗೆ ವೈಯ್ಯಕ್ತಿಕ ಮೆಸೇಜ್‌ ಮಾಡನಹುದು. ಚಾಟ್‌ ಮಾಡಿ ಮಾತನಾಡಬಹುದು. ಇಬ್ಬರೂ ಪರಸ್ಪರ ಭೇಟಿಯಾಗಬಹುದು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬಹುದು. ಆಸಕ್ತಿ ಇದ್ದರೆ, ಹೊಂದಾಣಿಕೆಯಾದರೆ ರಿಲೇಷನ್‌ಶಿಪ್‌ ಮುಂದುವರೆಸಬಹುದು. ಇಲ್ಲದಿದ್ದರೆ ಜೀವನದಲ್ಲಿ ಎಡಕ್ಕೆ ಸ್ವೈಪ್‌ ಮಾಡಿ ತಿರಸ್ಕರಿಸಬಹುದು. ಇದೊಂದು ಮಾಯಾಲೋಕ. ಇಷ್ಟೊಂದು ಸ್ವಾತಂತ್ರ್ಯ ಇರುವ ಕಾರಣದಿಂದಲೇ ಡೇಟಿಂಗ್‌ ಆ್ಯಪ್‌ಗಳು ಹೆಚ್ಚು ಪ್ರಚಲಿತದಲ್ಲಿವೆ.


ಹೀಗೆ ಅಪರಿಚತರೊಂದಿಗೆ ಸಂಬಂಧ ಬೆಸೆಯುವ ಕೆಲಸ ಈ ಮಾದರಿಯ ಆ್ಯಪ್‌ಗಳು ಮಾಡುತ್ತಿವೆ. ಎಷ್ಟೋ ಸಂಬಂಧಗಳು ಡೇಟಿಂಗ್‌ ಆ್ಯಪ್‌ ಮೂಲಕ ಶುರುವಾಗಿವೆ. ಈ ಸಂಬಂಧಗಳು ಒಟ್ಟಿಗೆ ಜೀವನ ಮಾಡುತ್ತಿರುವ, ಗಟ್ಟಿಯಾಗಿ ಉಳಿದಿರುವ ಎಷ್ಟೋ ಉದಾಹರಣೆಗಳಿವೆ.

ಕನ್ನಡದ್ದೇ ಬೇಕೆನ್ನಲು ಕಾರಣಗಳು:

  1. ವಿದೇಶಿಗರು ಪ್ರೀತಿಸುವ ರೀತಿ ಬೇರೆ. ಭಾರತೀಯರು ಪ್ರೀತಿಯನ್ನು ನೋಡುವ ದೃಷ್ಟಿ ವಿಭಿನ್ನವಾಗಿದೆ. ಅಮೆರಿಕ ಹಾಗೂ ಯುರೋಪ್‌ನ ಪ್ರೀತಿಯ ಅಭಿವ್ಯಕ್ತಿ ನಮ್ಮದಲ್ಲ. ಕನ್ನಡದ ಜಾಯಮಾನ ಬೇರೆ.
  2. ಕನ್ನಡಿಗರು ಕನ್ನಡದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸಬಹುದು. ಅದಕ್ಕೆ ಕನ್ನಡದ್ದೇ ಫೀಚರ್‌ಗಳನ್ನು ಬಳಸಲು ಇಷ್ಟಪಡಬಹುದು.
  3. ಗ್ರಾಮೀಣ ಪ್ರದೇಶದವರು ಇಂಗ್ಲಿಷ್‌ ಎಂದರೆ ಮಾರು ದೂರ ಹಾರುತ್ತಾರೆ. ಇಂಥವರಿಗೆ ಕನ್ನಡ ನೆರವಾಗುತ್ತದೆ.
  4. ಕನ್ನಡದ ಸಿನಿಮಾ, ತಿಂಡಿಗಳು ಸೇರಿದಂತೆ ಸ್ವಂತ ಭಾಷೆಯ ಇಮೇಜ್‌ಗಳು ಸೃಷ್ಟಿಸುವ ಮಧುರ ಭಾವವೇ ಬೇರೆ.
  5. ಈಗಾಗಲೇ ಫೇಸ್ಬುಕ್‌ನಂತಹ ಆಪ್‌ಗಳು ಕನ್ನಡ ಭಾಷೆಯಲ್ಲಿ ಕೂಡ ಬಳಸುವ ಸೌಲಭ್ಯ ನೀಡಿದೆ. ಹಲವು ಶಾಪಿಂಗ್‌ ಆಪ್‌ಗಳು ಕೂಡ ಕನ್ನಡದಲ್ಲಿ ಬಳಸುವ ಅವಕಾಶ ಕಲ್ಪಿಸಿದೆ. ಆದರೆ ಕನ್ನಡದಲ್ಲಿ ಸುಲಭವಾಗಿ ಬಳುಸುವಂಥ ಡೇಟಿಂಗ್‌ ಆಪ್‌ ಇನ್ನೂ ಮೂಡಿಬಂದಿಲ್ಲ.

ಕನ್ನಡದಲ್ಲಿ ಹೀಗೊಂದು ಆ್ಯಪ್‌ ಬಂದರೆ ಹೇಗಿರಬಹುದು?

  1. ಕನ್ನಡದ ಡೇಟಿಂಗ್‌ ಆಪ್ ಕನ್ನಡಿಗರೇ ತುಂಬಿರುವ ಮನೆಯ ಹಾಗಿರಬಹುದು. ಅಲ್ಲಿ ಪರಸ್ಪರ ಸಂವಹನ ಮಾಡುವ ಭಾಷೆ ಕನ್ನಡವಾಗಿರುತ್ತದೆ. ನೀವು ಮೆಸೇಜ್‌ ಮಾಡುವವರು ಇಂಗ್ಲಿಂಷ್‌ನಲ್ಲಿ ಉತ್ತರ ನೀಡಿದರೆ ಅದಕ್ಕೆ ಪ್ರತಿಕ್ರಿಯೆ ಹೇಗೆ ನೀಡಬೇಕೆಂಬ ಭಯವಿರುವುದಿಲ್ಲ. ಯಾವುದೇ ಮಾತುಕತೆಯ ಆರಂಭಕ್ಕೆ ಭಾಷೆ ತುಂಬಾ ಮುಖ್ಯವಾಗುತ್ತದೆ. ಹಾಗಾಗಿ, ಪರಿಚಿತ ಭಾಷೆಯನ್ನು ಇಂತಹ ಆ್ಯಪ್‌ಗಳಲ್ಲಿ ಬಳಸಿದಾಗ ಮೆಸೇಜ್‌ಗಳ ಆಪ್ತತೆ ಹೆಚ್ಚುತ್ತದೆ.
  2. ನೀವು ಉಳಿದ ಡೇಟಿಂಗ್‌ ಆ್ಯಪ್‌ ಬಳಸುವಾಗ ಏನಾದರೂ ತೊಡಕು ಉಂಟಾಗಬಹುದು. ಆಗೆಲ್ಲ ಯಾರನ್ನಾದರೂ ಸಹಾಯ ಕೇಳಿಕೊಂಡು ಹೋಗಬೇಕಾಗುತ್ತದೆ. ಆಗ, ಅವರು ನಿಮ್ಮ ಮೆಸೇಜ್‌ಗಳನ್ನು ಓದಿದರೆ ಎಂಬ ಚಿಂತೆ ಮೂಡುತ್ತದೆ. ಅಥವಾ ಯಾರಾದರೂ ನಿಮ್ಮನ್ನು ರಿಜೆಕ್ಟ್‌ ಮಾಡಿದ್ದು ನೋಡಿದರೆ ಅವಮಾನವಾಗುವ ಭಯವಿರುತ್ತದೆ. ಆದರೆ, ನಿಮ್ಮದೇ ಭಾಷೆಯವರಿರುವ ಆ್ಯಪ್‌ ಇದ್ದಾಗ ಆ ಸಮಸ್ಯೆ ದೂರವಾಗುತ್ತದೆ. ನೀವು ಯಾರನ್ನೂ ಸಹಾಯ ಕೇಳಿಕೊಂಡು ಹೋಗಬೇಕಾಗಿಲ್ಲ.
  3. ಎದುರಿರುವವರು ಯಾರೋ, ಏನೋ? ಎಂಬ ಭಯ ಕಡಿಮೆಯಾಗುತ್ತದೆ. ಕೊನೇಪಕ್ಷ ಕನ್ನಡದವರು ಎಂಬ ಧೈರ್ಯದ ಭಾವನೆ ಇರುತ್ತದೆ. ಇದನ್ನು ಬಳಸುವುದು ಸುಲಭ. ಹಾಗಾಗಿ ಸಾಂಗತ್ಯದ ಹಂಬಲದಲ್ಲಿರುವ ಹಿರಿಯರು ಕೂಡ ಯಾವುದೇ ತೊಡಕುಗಳಿಲ್ಲದೇ ಬಳಸಬಹುದು.
  4. ಇದರ ವ್ಯಾಪ್ತಿ ಕನ್ನಡಿಗರಿಗೆ ಸೀಮಿತಗೊಳ್ಳುವುದರಿಂದ ಹೆಚ್ಚಿನ ಆಪ್ಷನ್‌ಗಳು ಇಲ್ಲದಿರಬಹುದು. ಹಾಗಾಗಿ ಗೆಳೆಯ-ಗೆಳತಿಯರನ್ನು ಹುಡುಕುತ್ತಾ ಅಣ್ಣ-ಅಕ್ಕಂದಿರು ಸಿಕ್ಕಬಹುದು! ಈ ಬಗ್ಗೆ ಸ್ವಲ್ಪ ಎಚ್ಚರ ವಹಿಸಬೇಕಾಗಬಹುದು.

ಹೆಚ್ಚಿನ ಓದಿಗಾಗಿ: ಇದು ಮನುಷ್ಯರನ್ನು ಓದೋ ‌ಹ್ಯೂಮನ್‌ ಲೈಬ್ರರಿ!

Exit mobile version