ಪರ್ಫೆಕ್ಷನ್! ಎಲ್ಲವೂ ಪರ್ಫೆಕ್ಟ್ ಆಗಿರಬೇಕು, ಲೈಫೂ ಕೂಡಾ, ಸಂಬಂಧಗಳೂ ಕೂಡಾ ಎಂದು ಎಲ್ಲರೂ ಬಯಸುವುದು ಸಹಜವೇ. ಆದರೆ, ಎಲ್ಲದರಲ್ಲೂ ಪರ್ಫೆಕ್ಷನ್ ಸಾಧ್ಯವೇ ಹೇಳಿ. ಪ್ರತಿಯೊಂದು ಸಂಬಂಧಕ್ಕೂ ಇದು ಅನ್ವಯಿಸುವ ಮಾತು. ಪರ್ಫೆಕ್ಟ್ ಅಮ್ಮ, ಪರ್ಫೆಕ್ಟ್ ಅಪ್ಪ, ಪರ್ಫೆಕ್ಟ್ ಗಂಡ, ಪರ್ಫೆಕ್ಟ್ ಹೆಂಡತಿ ಹೀಗೆಲ್ಲ ಅಂದುಕೊಂಡರೂ ಯಾವ ಕುಂದುಕೊರತೆಯೂ ಇಲ್ಲದಂತೆ ಪರ್ಫೆಕ್ಟ್ ಆಗಿರುವುದು ಸಾಧ್ಯವೇ ಇಲ್ಲ. ಎಷ್ಟೇ ಪ್ರೀತಿಸಿ ಮದುವೆಯಾಗಿರಲಿ, ʻಒಂದೇ ಉಸಿರಂತೆ ಇಂದು ನಾನೂ ನೀನುʼ ಎಂದು ಹಾಡಲಿ, ಯಾವ ಸಂಬಂಧವೂ ಪರ್ಫೆಕ್ಟ್ ಆಗಿರುವುದಿಲ್ಲ. ಜೊತೆಗೆ ಒಬ್ಬರಿಗೆ ಪರ್ಫೆಕ್ಟ್ ಆಗಿ ಕಂಡಿದ್ದು ಮತ್ತೊಬ್ಬರಿಗೆ ಹಾಗೆ ಕಾಣಬೇಕಿಲ್ಲ. ಯಾಕೆಂದರೆ ಪರ್ಫೆಕ್ಷನ್ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ!
ಎಷ್ಟೇ ಒಳ್ಳೆಯವರಾದರೂ ಪ್ರತಿಯೊಬ್ಬರಲ್ಲೂ ನ್ಯೂನತೆಗಳಿದ್ದೇ ಇರುತ್ತವೆ. ಪ್ರೀತಿಸುವ ಜೋಡಿಗಳ ಸಂಬಂಧ ಚೆನ್ನಾಗಿರಬೇಕೆಂದರೆ, ಇಬ್ಬರಲ್ಲೂ ಒಬ್ಬರಿಗೊಬ್ಬರು ಕೊಡುಕೊಳ್ಳುವ ಗುಣವಿರಬೇಕು.
೧. ಅಲ್ಲಿ ಜಡ್ಜ್‌ಮೆಂಟ್ ಇರಬಾರದು. ಸಂಬಂಧಗಳಲ್ಲಿ ಖುಷಿ ಇರುವುದು ಇಬ್ಬರೂ ಒಬ್ಬರಿಗೊಬ್ಬರು ತಮ್ಮೆಲ್ಲ ಒಳಹೊರಗನ್ನು ಯಾವ ಮುಜುಗರವೂ ಇಲ್ಲದೆ ಪರಸ್ಪರ ವ್ಯಕ್ತಪಡಿಸಲು ಸಾಧ್ಯವಾದಾಗ. ಜೊತೆಗೆ, ಹಾಗೆ ವ್ಯಕ್ತಪಡಿಸಿದಾಗ ಮತ್ತೊಬ್ಬರು ಈ ಬಗ್ಗೆ ತಪ್ಪು ತಿಳಿಯದಿದ್ದಾಗ, ಬೇಕಾದಾಗ ಹೆಗಲು ಕೊಟ್ಟು ನಿಂತಾಗ, ಜಡ್ಜ್‌ಮೆಂಟಲ್ ಆಗದೆ ಇದ್ದಾಗ. ಇಂಥದ್ದೊಂದು ಭಾವ, ಒಬ್ಬರಿಗೊಬ್ಬರು ನೀಡಬೇಕಾದ ಸಪೋರ್ಟ್ ಇದ್ದರೆ ಮಾತ್ರ ಅಲ್ಲಿ ಜೀವಂತಿಕೆ, ಖುಷಿ, ಎಲ್ಲವೂ ಇರುತ್ತದೆ.
೨. ಒಬ್ಬರ ಜೊತೆಗೇ ಜೀವನ ನಡೆಸುವಾಗ ಚರ್ಚೆ, ವಾಗ್ವಾದ ಸಾಮಾನ್ಯ. ಆದರೆ ಆರೋಗ್ಯಕರ ಸಂಬಂಧದಲ್ಲಿ ಜಗಳಕ್ಕಿಂತಲೂ ಚರ್ಚೆಯಾದರೆ ಚೆನ್ನ. ನಾವು ಕೇವಲ ಚರ್ಚೆ ಮಾಡುತ್ತಿದ್ದೇವೆ, ಇದು ಜಗಳ ಅಲ್ಲ ಎಂಬುದು ಇಬ್ಬರಿಗೂ ಗೊತ್ತಿರಬೇಕು ಹಾಗೂ ಚರ್ಚೆಯ ನಂತರ ಮೊದಲಿನ ಸಂಬಂಧ ಸಾಧ್ಯವಾಗಬೇಕು.
೩. ಒಬ್ಬರಿಗೊಬ್ಬರು ಬೆಂಗಾವಲಾಗಬೇಕು. ಇಬ್ಬರ ನಡುವಿನ ಆಸಕ್ತಿ ಜೀವನದ ಗುರಿಗಳಲ್ಲಿ ವ್ಯತ್ಯಾಸ ಇದ್ದರೂ ಇಬ್ಬರೂ ಒಬ್ಬರಿಗೊಬ್ಬರು ಸಹಕಾರ, ಕಾಳಜಿ ಮಾಡುವುದನ್ನು ಮರೆಯಬಾರದು. ಒಂದು ಪ್ರಾಮಾಣಿಕ, ಕಾಳಜಿ, ಪ್ರೀತಿ ಗೌರವಗಳು ಇದ್ದಲ್ಲಿ ಆರೋಗ್ಯಕರ ಸಂಬಂಧ ನೆಲೆಸಿರುತ್ತದೆ. ಗುರಿ ಸುಲಭವಾಗುತ್ತದೆ.
೪. ಕೇವಲ ಮಾನಸಿಕ ಸಾಂಗತ್ಯವಷ್ಟೇ ಅಲ್ಲ, ದೈಹಿಕ ಸಾಂಗತ್ಯವೆಂಬುದು ಗಂಡಹೆಂಡಿರ ಸಂಬಂಧದ ಬಹುಮುಖ್ಯ ಘಟ್ಟ. ಇಬ್ಬರೂ ಒಬ್ಬರನ್ನೊಬ್ಬರು ಅರಿತು ಖುಷಿ ಪಡುವುದು ಹಾಗೂ ಪಡಿಸುವುದು ಬಹಳ ಮುಖ್ಯ.
ಇದನ್ನೂ ಓದಿ | Soulmate | ದಾಂಪತ್ಯದಲ್ಲಿ ಪವರ್ ಜೋಡಿಯಾಗಿ ಬದಲಾಗಲು ಐದು ಸೂತ್ರಗಳು!
೫. ನಂಬಿಕೆಯೆಂಬುದು ಪ್ರೀತಿಯಲ್ಲಿ, ದಾಂಪತ್ಯದಲ್ಲಿ ಬಹುಮುಖ್ಯ. ಸಂಗಾತಿಯ ನಂಬಿಕೆಯನ್ನು ಒಮ್ಮೆ ಮುರಿದರೆ, ಮತ್ತೆ ಸಂಬಂಧ ಮೊದಲಿನಂತಾಗುದು ಬಹಳ ಕಷ್ಟ. ಅದಕ್ಕಾಗಿ ಸಾಕಷ್ಟು ಶ್ರದ್ಧೆ, ಪ್ರೀತಿ ಕಾಳಜಿಗಳು ಅತ್ಯಗತ್ಯ. ತನ್ನ ಸಂಗಾತಿ ತನ್ನ ಮೇಲೆ ಸಂಶಯ ಪಡುತ್ತಿದ್ದಾನೆ/ಳೆ ಎಂಬುದು ಯಾರಿಗೇ ಆದರೂ ಅರಗಿಸಿಕೊಳ್ಳಲಾಗದ ಸತ್ಯ.
೬. ಒಬ್ಬರ ಮೇಲೆ ಮತ್ತೊಬ್ಬರಿಗೆ ಪ್ರೀತಿಯಷ್ಟೇ ಗೌರವವೂ ಇರಬೇಕಾದುದು ಬಹಳ ಮುಖ್ಯ. ಪ್ರಾಮಾಣಿಕತೆ, ನಂಬಿಕೆ, ಗೆಳೆತನ ಹಾಗೂ ಸಾಂಗತ್ಯ ಎಲ್ಲವೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಗೌರವವನ್ನೂ ಹೆಚ್ಚಿಸುತ್ತದೆ.
೭. ಇಬ್ಬರಿಗೂ ತಮ್ಮ ಬದುಕಿನ ಬಗೆಗೆ ಒಂದೇ ಮಾದರಿಯ ಗುರಿಯಿರಬೇಕು. ಇಬ್ಬರ ಗುರಿಗಳೂ, ಬದುಕಿನ ಬಗೆಗಿನ ಒಳನೋಟ, ರುಚಿಗಳೂ ಒಂದಕ್ಕೊಂದು ಹೊಂದಿಕೆಯಾಗುವಂತಿರಬೇಕು. ಹಾಗಿದ್ದಲ್ಲಿ, ಜೊತೆಯಾಗಿ ಮುನ್ನಡೆಯಲು ಯಾವ ಅಡೆತಡೆಯೂ ಬರುವುದಿಲ್ಲ.
೮. ಪರಸ್ಪರ ರಾಜಿ ಮಾಡಿಕೊಳ್ಳುವುದು ಬಹಳ ಮುಖ್ಯ. ಒಬ್ಬರ ಸುಖಕ್ಕೆ ಮತ್ತೊಬ್ಬರು ಕೆಲವೊಂದು ವಿಚಾರಗಳಿಗೆ ಸಂಸಾರದಲ್ಲಿ ರಾಜಿಯಾಗಲೇ ಬೇಕಾಗುತ್ತದೆ. ಪ್ರೀತಿ ಇದ್ದಲ್ಲಿ ಇದು ಕಷ್ಟವಿಲ್ಲ. ಆದರೆ, ಪರಿಸ್ಥಿತಿಯ ಬಗ್ಗೆ ರಾಜಿಯಾಗುವುದು ಇಬ್ಬರಿಗೂ ಸಾಧ್ಯವಾಗದೆ ಇದ್ದಲ್ಲಿ ನಡುವೆ ಅಹಂ ಎಂಬ ಕಂದಕ ಬೃಹದಾಕಾರ ತಾಳಿ ಸಂಬಂಧ ಹದಗೆಡುತ್ತದೆ.
ಇದನ್ನೂ ಓದಿ | Viral news | ತಿಂಗಳಿಗೊಂದು ಫ್ರೀ ಪಿಜ್ಜಾ: ಮದುವೆಯ ವಿಚಿತ್ರ ಒಪ್ಪಂದಕ್ಕೆ ಸಿಕ್ಕ ಉಡುಗೊರೆ!
೯. ಇಬ್ಬರಿಗೂ ತಮ್ಮ ಸಂಗಾತಿಗೂ ಒಂದು ಭೂತಕಾಲವಿತ್ತು ಎಂಬುದರ ಬಗ್ಗೆ ಗೌರವವಿರಬೇಕು. ಹಳೆಯ ಪ್ರೀತಿ, ಭಗ್ನಪ್ರೇಮಗಳು ಈ ಸಂಬಂಧವನ್ನು ಹಾಳುಗೆಡವದಂತೆ ನೋಡಿಕೊಳ್ಳಬೇಕು. ಇಬ್ಬರ ಹಳೆಯ ಕಥೆಗಳ ಬಗ್ಗೆ ವಿಪರೀತ ಕೆದಕುವುದು ಅಗತ್ಯವಿಲ್ಲ.
೧೦. ಚಿಕ್ಕಚಿಕ್ಕ ಖುಷಿಗಳು, ಸಂತಸಗಳು ಬದುಕನ್ನು ಕಾಪಿಡುತ್ತವೆ. ಮುನ್ನಡೆಸುತ್ತವೆ. ಪರಸ್ಪರ ಒಬ್ಬರಿಗೊಬ್ಬರು ಕೊಟ್ಟುಕೊಳ್ಳುವ ಸಮಯ, ಜೊತೆಯಾಗಿ ಅನುಭವಿಸಬಲ್ಲ ನಿಜದ ಖುಷಿಗಳಷ್ಟೇ ಬಾಳುತ್ತವೆ. ಸಂಗಾತಿಯ ಹೊಗಳಿಕೆ, ಕಾಳಜಿ, ಕೆಲಸಕ್ಕೆ ನೀಡುವ ಸಹಕಾರ ಇತ್ಯಾದಿ ಇತ್ಯಾದಿಗಳು ಸಣ್ಣದೆನಿಸಿದರೂ ಇವುಗಳ ಪಾತ್ರ ಬಹಳ ದೊಡ್ಡದು ಎಂಬ ಸತ್ಯ ಅರಿವಾದವನು/ಳು ನಿಜದ ಸುಖಿ.