ಯಾರೇ ಒಬ್ಬರನ್ನು ಇಷ್ಟವಾಗಲು/ಆಗದಿರಲು ಮೊದಲ ಭೇಟಿ ಸಾಕು ಎಂಬೊಂದು ಹಳೆಯ ಮಾತಿದೆ. ಬಹಳಷ್ಟು ಸಾರಿ ನಮ್ಮ ಬಗ್ಗೆ ಬೇರೆಯವರು ಏನು ತಿಳಿದುಕೊಳ್ಳುತ್ತಾರೆ ಎಂದು ಯೋಚಿಸುವುದರಲ್ಲೇ ನಮ್ಮ ಬಹಳಷ್ಟು ಸಮಯ ಪೋಲಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹಲವು ಅಭ್ಯಾಸಗಳು ಕೂಡಾ ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಆದರೆ, ಇಂತಹ ಸಣ್ಣ ಸಣ್ಣ ಸೂಕ್ಷ್ಮಗಳನ್ನು ಗಮನಿಸದೆ, ಮತ್ತೊಬ್ಬರ ಮೇಲೆ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಅನವಶ್ಯಕ ತಲೆಬಿಸಿ ಮಾಡಿಕೊಳ್ಳುತ್ತೇವೆ. ಹಾಗಾಗಿ ನಮ್ಮ ವ್ಯಕ್ತಿತ್ವದ ಸುಳಿವನ್ನು ಬಿಚ್ಚಿಡುವ ಸಣ್ಣ ಸಣ್ಣ ಅಭ್ಯಾಸಗಳು ಯಾವುವು ಎಂದು ನೋಡೋಣ.
೧. ಎಲ್ಲರ ಜೊತೆಗೆ ಕೂತು ಉಣ್ಣುವಾಗ ನಾವು ಹೇಗೆ ಉಣ್ಣುತ್ತೇವೆ ಎಂಬ ಬಗ್ಗೆ ಎಂದಾದರೂ ತಲೆ ಕೆಡಿಸಿಕೊಂಡಿದ್ದೀರಾ? ಇದರಲ್ಲೂ ನಿಮ್ಮ ವ್ಯಕ್ತಿತ್ವದ ಸಣ್ಣ ಸುಳಿವು ಇತರರಿಗೆ ಸಿಗುತ್ತದೆ. ನಿಧಾನವಾಗಿ ತಾಳ್ಮೆಯಿಂದ ಊಟ ಮಾಡುವ ಮಂದಿ ಪ್ರತಿಯೊಂದರಲ್ಲೂ ತುಂಬ ನಿಯಂತ್ರಣ ಹೊಂದಿದವರಾಗಿಯೂ, ಬೇಗ ಬೇಗನೆ ಗಬಗಬ ಉಂಡು ಮುಗಿಸುವ ಮಂದಿ ಮಹತ್ವಾಕಾಂಕ್ಷಿಗಳೂ, ಗುರಿಯ ಬಗ್ಗೆ ಹೆಚ್ಚು ಪೋಕಸ್ಡ್ ಆಗಿರುವವರಾಗಿಯೂ ಇರುತ್ತಾರೆ. ಸಿಕ್ಕಸಿಕ್ಕಲ್ಲಿ ಹೊಸತನ್ನು ಟ್ರೈ ಮಾಡುವ ಆಹಾರದ ವಿಷಯದಲ್ಲಿ ಸಾಹಸೀ ಪ್ರವೃತ್ತಿಯ ಮಂದಿ ಜೀವನದಲ್ಲಿ ತಮ್ಮ ಕಂಫರ್ಟ್ ಝೋನ್‌ನಿಂದ ಹೊರಗೆ ಬಂದು ಪ್ರತಿಯೊಂದನ್ನೂ ಸೊಗಸಾಗಿ ಅನುಭವಿಸುವವರು ಹಾಗೂ, ಏನು ಉಂಡರೂ ಅದರಲ್ಲಿ ಬೇಡಗಳ ದೊಡ್ಡ ಪಟ್ಟಿಯೇ ಇರುವ ತುಂಬ ಚ್ಯೂಸಿ ಮಂದಿ ಸದಾ ಚಿಂತೆಯಲ್ಲಿ ಮುಳುಗಿರುವವರು ಎಂದು ಅರ್ಥವಂತೆ.
೨. ನಿಮ್ಮ ಹ್ಯಾಂಡ್‌ಶೇಕ್ ಕೂಡಾ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಮೊದಲ ಭೇಟಿಯಲ್ಲಿ ಮುಖ್ಯವಾಗುವುದು ಇವೇ ಸಣ್ಣಪುಟ್ಟ ಸಂಗತಿಗಳು. ನೀವು ಎದುರಿಗಿನ ವ್ಯಕ್ತಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಹ್ಯಾಂಡ್‌ಶೇಕ್ ಮಾಡುತ್ತೀರಿ ಎಂದಾದಲ್ಲಿ ನಿಮಗೆ ಓಪನ್ ಮೈಂಡೆಡ್ ಹಾಗೂ ಆತ್ಮವಿಶ್ವಾಸಿ ಎಂಬರ್ಥ ಬರುತ್ತದೆ. ಬೇಕೋ, ಬೇಡವೋ ಎಂದು ಸಡಿಲಾಗಿ ಹಿಡಿದು ಹ್ಯಾಂಡ್‌ಶೇಕ್ ಮಾಡಿದಲ್ಲಿ ನೀವೊಬ್ಬ ನಾಚಿಕೆ ಸ್ವಭಾವದ, ಅಂತರ್ಮುಖಿ ಹಾಗೂ ಬಹಳ ಚಿಂತೆ ಮಾಡುತ್ತಿರುವ ಗುಣವುಳ್ಳದವರು ಎಂದರ್ಥ. ನೀವು ಮತ್ತೊಬ್ಬರ ಕೈಯನ್ನು ಹಿಡಿದು ಶೇಕ್ ಮಾಡುವ ಹಿಡಿತ, ಬಿಗಿತ, ಕೈಯ ಉಷ್ಣತೆ, ಶುಷ್ಕತೆ, ಅವಧಿ, ಸ್ಪರ್ಷದ ನವಿರುತನ ಎಲ್ಲವೂ ಇಲ್ಲಿ ಮುಖ್ಯವಾಗುತ್ತದೆ.
೩. ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯೇ? ಹಾಗಾದರೆ ಇಲ್ಲಿ ಕೇಳಿ. ಉಗುರು ಕಚ್ಚುವ, ಚರ್ಮ ಕೀಳುವ ಹಾಗೂ ಕೂದಲು ಕೀಳುವ ಅಭ್ಯಾಸವಿರುವ ಮಂದಿ ಬಹಳ ಪರ್ಫೆಕ್ಷನಿಸ್ಟ್‌ಗಳಂತೆ!
೪. ಹೇಳಿದ ಸಮಯಕ್ಕಿಂತ ತಡ ಮಾಡುವ, ತಡವಾಗಿ ತಲುಪುವ, ಕೆಲಸ ಮುಗಿಸುವ ಮಂದಿಯೂ ಪರ್ಫೆಕ್ಷನಿಸ್ಟ್‌ಗಳಂತೆ. ಅವರು ಪರ್ಫೆಕ್ಟ್ ಆಗಿ ಕೆಲಸ ಮಾಡುವ ಭರದಲ್ಲಿ ತಡವಾಗುವ ಸಂಭವ ಹೆಚ್ಚಂತೆ.
೫. ನಿಮ್ಮ ಫೋನ್ ಎಷ್ಟು ಬಾರಿ ಚೆಕ್ ಮಾಡುತ್ತಿರುತ್ತೀರಿ ಎಂಬುದೂ ಕೂಡಾ ನಿಮ್ಮ ಅಳತೆಗೋಲಂತೆ. ಆಗಾಗ ಫೋನ್ ಚೆಕ್ ಮಾಡುವವರು ಮಾನಸಿಕವಾಗಿ ಸ್ವಲ್ಪ ವೀಕ್ ಹಾಗೂ ಅವರು ತಮ್ಮ ಮೂಡ್ ಸುಧಾರಿಸಿಕೊಳ್ಳಲು ಆಸಕ್ತಿಕರವೇನಾದರೂ ಸಿಗುತ್ತದೋ ಎಂದು ಆಗಾಗ ನೋಡುತ್ತಿರುತ್ತಾರಂತೆ.
ಇದನ್ನೂ ಓದಿ | International fashion day | ಭಾರತೀಯ ಟಾಪ್ ಫ್ಯಾಷನ್ ವಿನ್ಯಾಸಕರು
೬. ಐ ಕಾಂಟಾಕ್ಟ್ ಕೂಡಾ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ. ನೀವು ಧೈರ್ಯವಾಗಿ ನಿಮ್ಮ ಎದುರಿಗಿರುವ ವ್ಯಕ್ತಿಯೊಂದಿಗೆ ಐ ಕಾಂಟಾಕ್ಟ್ ಮಾಡಬಲ್ಲಿರೆಂದರೆ ನೀವು ಆತ್ಮವಿಶ್ವಾಸಿಗಳು. ಅಂತರ್ಮುಖಿಗಳು, ನಾಚಿಕೆಯ ಸ್ವಭಾವದ ಮಂದಿ, ಹಿಂಜರಿಕೆಯ ಗುಣದ ಮಂದಿ ಎದುರಿಗಿರುವ ವ್ಯಕ್ತಿಯ ಕಣ್ಣನ್ನು ನೋಡಿ ಮಾತನಾಡುವುದಿಲ್ಲ. ಆಗಾಗ ದೃಷ್ಟಿ ಬದಲಾಯಿಸುತ್ತಿರುತ್ತಾರೆ.
೭. ಸಂಗೀತದ ಆಸಕ್ತಿಯ ಮೇಲೂ ವ್ಯಕ್ತಿತ್ವ ನಿರ್ಧರಿಸಬಹುದು. ಮಧುರವಾದ ಸಂಗೀತ ಕೇಳಬಯಸುವವರು ಭಾವನಾತ್ಮಕ ವ್ಯಕ್ತಿಗಳೆಂದು, ಕೊಂಚ ಆಳವಾದ ಹಾಗೂ ಸಂಕೀರ್ಣವಾದ ಹಾಡುಗಳನ್ನು ಕೇಳಬಯಸುವ ಮಂದಿ ವಿವೇಕಶಾಲಿಗಳೆಂದೂ ಅರ್ಥವಂತೆ.
೮. ನಾಯಿ ಹಾಗೂ ಬೆಕ್ಕುಗಳನ್ನು ಇಷ್ಟಪಡುವ ಆಧಾರದಲ್ಲೂ ವ್ಯಕ್ತಿತ್ವ ನಿರ್ಧರಿಸಲಾಗುತ್ತದಂತೆ. ನಾಯಿಯನ್ನು ಇಷ್ಟಪಡುವ ಮಂದಿ ಹೆಚ್ಚು ಸದಾ ಚುರುಕಾಗಿರುವ ಹಾಗೂ ತಿರುಗಾಡ ಬಯಸುವವರೆಂದೂ, ಬೆಕ್ಕನ್ನು ಇಷ್ಟಪಡುವ ಮಂದಿ ಸ್ವಲ್ಪ ಸೆನ್ಸಿಟಿವ್ ಹಾಗೂ ಅಂತರ್ಮುಖಿಗಳು ಆದರೆ ಬುದ್ಧಿವಂತರು ಎಂದು ಅಂದಾಜಿಸಲಾಗುತ್ತದೆಯಂತೆ.
ಇದನ್ನೂ ಓದಿ | Motivational story | ಗುಜರಿಯಲ್ಲಿ ಬಿದ್ದ ಕಬ್ಬಿಣ ತುಂಡಿನ ಬೆಲೆಯೇ ಬೇರೆ, ಅದನ್ನೇ ಬಳಸಿ ಮಾಡಿದ ಮೂರ್ತಿ ಬೆಲೆಯೇ ಬೇರೆ!
೯. ಹಸ್ತಾಕ್ಷರದ ಮೇಲೂ ವ್ಯಕ್ತಿತ್ವ ನಿರ್ಧಾರ ಮಾಡಬಹುದು. ಚಿಕ್ಕ ಚಿಕ್ಕ ಅಕ್ಷರ ಹೊಂದಿರುವ ಮಂದಿ ಸ್ವಲ್ಪ ಅಂತರ್ಮುಖಿಗಳೆಂದೂ ದೊಡ್ಡ ಅಕ್ಷರದ ಮಂದಿ ಹೆಚ್ಚು ಜನರ ಜೊತೆ ಬೆರೆಯಲು ಇಷ್ಟಪಡುವ ಮಂದಿ ಎಂದು ಅಳೆಯಲಾಗುತ್ತದೆ. ವಾಲಿದಂತೆ ಬರೆವ ಮಂದಿ ಫ್ರೆಂಡ್ಲೀ ಹಾಗೂ ಸೆಂಟಿಮೆಂಟ್‌ಗಳು, ನೇರವಾಗಿ ಬರೆವ ಮಂದಿ ವ್ಯವಹಾರ ಚತುರರು ಹಾಗೂ ಎಡಕ್ಕೆ ವಾಲಿದಂತೆ ಬರೆವ ಮಂದಿ ಎಚ್ಚು ಆತ್ಮಾವಲೋಕನ ಮಾಡುವ ಮಂದಿ ಎನ್ನಲಾಗುತ್ತದೆ.
೧೦. ಹೊಟೇಲಿನಲ್ಲಿ ಸರ್ವರ್ ಜೊತೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೂ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದಂತೆ. ಸಾಮಾನ್ಯವಾಗಿ ಸರ್ವರ್ ಜೊತೆಗೆ ಕೆಟ್ಟದಾಗಿ ವರ್ತಿಸುವ, ಬೈಯುವ ಮಂದಿ ನಿಜ ಜೀವನದಲ್ಲೂ ಬಹಳ ಒರಟರು ಎಂದು ಹೇಳಲಾಗುತ್ತದೆ.