ಸಂಬಂಧವೊಂದನ್ನು ಚೆನ್ನಾಗಿಡಲು ಮುತ್ತು ಕೊಡುವುದು ಎಷ್ಟು ಮುಖ್ಯ ಎಂಬುದನ್ನು ಯಾರಿಗೂ ವಿವರಿಸಿ ಹೇಳುವ ಅವಶ್ಯಕತೆ ಇಲ್ಲ. ಮುತ್ತು ಪ್ರೀತಿಯ ಭಾಷೆ. ಮುತ್ತು ಮಾನಸಿಕವಾಗಿ ನಮ್ಮನ್ನು ಖುಷಿಯಾಗಿರಿಸುವುದರಲ್ಲಿ ಯಾವ ಸಂದೇಹವೂ ಇಲ್ಲದಿದ್ದರೂ, ಈ ಮುತ್ತಿನಿಂದ ದೈಹಿಕವಾಗಿಯೂ ಸಾಕಷ್ಟು ಉಪಯೋಗಗಳಿವೆ ಎಂದರೆ ನಂಬುತ್ತೀರಾ?
ಹೌದು. ಮುತ್ತು ಕೊಡುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಇದು ಕೇವಲ ತುಟಿಗಳಿಗೆ ಒಳ್ಳೆಯ ವ್ಯಾಯಾಮ ಕೊಟ್ಟ ಪರಿಣಾಮವಾಗಿ ಒಂದಷ್ಟು ಕ್ಯಾಲರಿ ಬರ್ನ್ ಆಯಿತು ಎಂದಷ್ಟೆ ನೀವು ಅಂದುಕೊಂಡಿರಬಹುದು. ಆದರೆ, ಇಷ್ಟೇ ಅಲ್ಲ. ಮುತ್ತಿಕ್ಕುವುದರಿಂದ ಕೇವಲ ಮಜಾ ಅಷ್ಟೇ ಸಿಗುವುದಿಲ್ಲ, ಅದರ ತೀವ್ರತೆಯ ಆಧಾರದಲ್ಲಿ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ.
ಗಾಢವಾಗಿ ಮುತ್ತಿಕ್ಕುವುದರಿಂದ ಗಂಟೆಗೆ ೯೦ರಿಂದ ೧೨೦ ಕ್ಯಾಲರಿವರೆಗೆ ಬರ್ನ್ ಮಾಡಬಹುದಂತೆ. ಅಂದರೆ ನಿಮಿಷಕ್ಕೆ ಹತ್ತಿರ ಹತ್ತಿರ ಎರಡು ಕ್ಯಾಲರಿ ಬರ್ನ್ ಮಾಡಿದಂತೆ. ಹಾಗಂತ ಮುತ್ತಿಕ್ಕಿಕೊಂಡೇ ಕ್ಯಾಲರಿ ಬರ್ನ್ ನಾನು ತೆಳ್ಳಗಾಗಿ ಬಿಡುತ್ತೇನೆ ಎನ್ನಲಾಗದು. ಆದರೂ, ಥ್ರೆಡ್‌ಮಿಲ್ ಮೇಲೆ ನಡೆಯುತ್ತಾ ಬೋರಿಂಗ್ ಆಗಿ ಕ್ಯಾಲರಿ ಇಳಿಸುವುದಕ್ಕಿಂತ ಮುತ್ತಿಕ್ಕುವುದರಲ್ಲಿ ಸೊಗಸಿದೆ. ಇದನ್ನು ಹೊರತುಪಡಿಸಿದಂತೆ ಅಋಓಗ್ಯದ ವಿಚಾರದಲ್ಲಿ ಮುತ್ತಿನಿಂದ ಏನೆಲ್ಲ ಲಾಭಗಳಿವೆ ನೋಡೋಣ.
೧. ರೋಗಗಳಿಂದ ದೂರವಿರಿಸುತ್ತದೆ: ಮುತ್ತು ಕೊಡುವುದು ನಿಮ್ಮನ್ನು ರೋಗಗಳಿಂದ ದೂರವಿರಿಸುತ್ತದೆ ಎಂದರೆ ತಮಾಷೆ ಎನ್ನುತ್ತೀರಾ? ನಿಜವಾಗಿ ನೋಡಿದರೆ ಮುತ್ತಿಕ್ಕುವುದರಿಂದ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಒಬ್ಬರಿಂದ ಒಬ್ಬರಿಗೆ ಹರಡಿ ರೋಗ ಬರುವ ಸಾಧ್ಯತೆ ಇದೆ ಎನ್ನುತ್ತೀರಾ? ಇದು ನಿಜವೇ ಆದರೂ ರೋಗಗಳಿಂದ ದೂರವಿರಿಸುತ್ತದೆ ಎಂಬುದರಲ್ಲೂ ಒಂದು ಸತ್ಯವಿದೆ. ಒಂದು ಮುತ್ತೇ ಮುಂದಿನ ಪ್ರೀತಿಯ ಅಧ್ಯಾಯ ತೆರೆಯಬಲ್ಲದು. ಮುತ್ತಿನಿಂದ ಲೈಂಗಿಕ ಸಂಪರ್ಕದವರೆಗೆ ಮುಂದುವರಿಯಬಹುದು. ಮುತ್ತು ಬರಿಸುವ ಮತ್ತಿನಿಂದ ವಾರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಲೈಂಗಿಕ ಸಂಪರ್ಕ ನಡೆಸುವ ಜೋಡಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.
೨. ನೋವನ್ನು ಕಡಿಮೆ ಮಾಡುತ್ತದೆ: ಮುತ್ತು ಕೊಡುವುದರಿಂದ ಪ್ರೀತಿಯ ಭಾವನೆ ಉದ್ದೀಪನಗೊಳ್ಳುತ್ತದೆ. ಇದರಿಂದ ದೇಹದಲ್ಲಿ ಅಡ್ರನಾಲಿನ್ ಹಾಗೂ ಎಂಡೋರ್ಫಿನ್ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಈ ಹಾರ್ಮೋನುಗಳು ನೋವನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತವೆ. ಇದಲ್ಲದೆ, ಹಿಸ್ಟಾಮೈನ್ ಎಂಬ ರಾಸಾಯನಿಕ ಬಿಡುಗಡೆಯಾಗುವುದರಿಂದ ಅದು ಗಾಯ, ಅಲರ್ಜಿ, ಹಾಗೂ ಯಾವುದೇ ಬಗೆಯ ನೋವಿನ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರ ನೀಡುತ್ತದೆ.
ಇದನ್ನೂ ಓದಿ | Viral News | ವಧುವಿಗೆ ಕಿಸ್ ಮಾಡಿ ಕೇಸಿನಲ್ಲಿ ತಗ್ಲಾಕೊಂಡ ವರ, ಮದುವೆಯೇ ರದ್ದು!
೩. ಒತ್ತಡ ಕಡಿಮೆ ಮಾಡುತ್ತದೆ: ಮುತ್ತು ಕೊಡುವುದು ಹೃದಯಕ್ಕೆ ಮಾತ್ರವಲ್ಲ, ಅದು ನಿಮ್ಮನ್ನು ಮಾನಸಿಕವಾಗಿಯೂ ಹಿಗ್ಗಿಸುತ್ತದೆ. ಮುತ್ತು ಕೊಡುವುದರಿಂದ ಒತ್ತಡದ ಹಾರ್ಮೋನು ಕರ್ಟಿಸೋಲ್‌ನ ಮಟ್ಟ ತಗ್ಗುತ್ತದೆ. ಈ ಹಾರ್ಮೋನು ಯಾವಾಗಲೂ ರೋಗನಿರೋಧಕ ಶಕ್ತಿಯ ವಿರುದ್ಧ ಕೆಲಸ ಮಾಡುತ್ತದೆ.
೪. ಅಧಿಕ ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ: ಮುತ್ತು ಕೊಡುವುದರಿಂದ ಕ್ಯಾಲರಿ ಬರ್ನ್ ಆಗುತ್ತದೆ ನಿಜ. ಇಷ್ಟೇ ಅಲ್ಲ, ಮುತ್ತಿನಿಂದ ಮತ್ತು ಹೆಚ್ಚಾಗಿ ಹೃದಯದ ಬಡಿತ ಜೋರಾಗಿ ಇದರಿಂದ ರಕ್ತದೊತ್ತಡ ಸಹಜವಾಗುತ್ತದೆ. ಕೊಲೆಸ್ಟೆರಾಲ್ ಕೂಡಾ ಕರಗುವಲ್ಲಿ ಸಹಾಯ ಮಾಡುತ್ತದೆ. ರಕ್ತಪರಿಚಲನೆ ಚುರುಕಾಗುತ್ತದೆ.
೫. ನಿಮ್ಮನ್ನು ಖುಷಿಯಾಗಿಟ್ಟು ತಾಜಾತನವನ್ನು ನೀಡುತ್ತದೆ: ಮಾನಸಿಕವಾಗಿ ಅತ್ಯಂತ ಖುಷಿ ನೀಡುವ ಮುತ್ತು ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುವ ಸಹಜ ವಿಧಾನ. ಹೀಗಾಗಿ, ಈ ಸಂದರ್ಭ ನಮ್ಮ ಖುಷಿಯ ಹಾರ್ಮೋನುಗಳಾದ ಆಕ್ಸಿಟೋಸಿನ್, ಎಂಡೋರ್ಫಿನ್ ಹಾಗೂ ಡೋಪಮೈನ್‌ಗಳು ಬಿಡುಗಡೆಯಾಗಿ ಖುಷಿಯ ಅನುಭೂತಿ ಸಿಗುತ್ತದೆ.
ಇದನ್ನೂ ಓದಿ | Sanitary pads | ಸ್ಯಾನಿಟರಿ ಪ್ಯಾಡ್‌ನಿಂದ ಆರೋಗ್ಯ ಸಮಸ್ಯೆ: ಏನು, ಎಷ್ಟು?
೬. ಸೌಂದರ್ಯ ವೃದ್ಧಿಸುತ್ತದೆ: ಹೆಚ್ಚು ಸೌಂದರ್ಯ ನಳನಳಿಸಲು ಸುಲಭ ಉಪಾಯ ಎಂದರೆ ಮುತ್ತು ಕೊಡುವುದು. ಹೌದು. ಮುತ್ತು ಕೊಡುವುದರಿಂದ ಮುಖದ ಮಾಂಸಖಂಡಗಳಿಗೆ ಸರಿಯಾದ ವ್ಯಾಯಾಮ ದೊರೆತು ಮುಖಕ್ಕೊಂದು ಚಂದದ ಆಕಾರ ಸಿಗುತ್ತದೆ. ಹೆಚ್ಚುವರಿ ಕೊಬ್ಬು ಕರಗಿ ಮುಖ ಟೋನ್ ಆಗುತ್ತದೆ. ಖುಷಿಯಿಂದಾಗಿ ಸಹಜವಾಗಿಯೇ ಮುಖವು ತಾಜಾತನದಿಂದ ಕಂಗೊಳಿಸಿ ಸೌಂದರ್ಯ ಇಮ್ಮಡಿಯಾಗುತ್ತದೆ.