ವೃತ್ತಿ ಬದುಕು ಎಂಬುದು ಎಲ್ಲರ ಬದುಕಿನ ಪ್ರಮುಖವಾದ ಅಧ್ಯಾಯ. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂಬ ದಾಸವಾಣಿಯಿದ್ದರೂ, ಹೊಟ್ಟೆಯ ಹಿಟ್ಟಿಗಾಗಿಯೇ ಕೆಲಸ ಮಾಡುತ್ತಿರುವುದು ಅಸಲಿ ಸತ್ಯವಾದರೂ, ಮಾಡುವ ಕೆಲಸದಲ್ಲಿ ಯಾವಾಗಲೂ ಪ್ರೀತಿಯಿರಬೇಕು, ಅದು ಮನಸ್ಸಿಗೆ ಸಂತೋಷ ನೀಡುವಂತಿರಬೇಕು. ಅಪ್ಪಿತಪ್ಪಿ ವೃತ್ತಿ ಬದುಕು ಸಂತಸವನ್ನು ಕಸಿದುಕೊಂಡರೆ, ಖಂಡಿತ ಅದು ಖಾಸಗಿ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಬದುಕಿಗೆ ಅತ್ಯಮೂಲ್ಯವಾಗಿ ಬೇಕಾಗಿರುವ ಶಾಂತಿ, ನೆಮ್ಮದಿ, ಸಂತೋಷವನ್ನು ಕಸಿಯುತ್ತದೆ. ಆ ಮೂಲಕ ಅದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಹಾಗಾದರೆ, ಇಂತಹ ಸಮಸ್ಯೆ ನಮ್ಮ ಬದುಕಿನಲ್ಲಿ ಎದುರಾಗದಿರಲು ಏನು ಮಾಡಬೇಕು? ವೃತ್ತಿ ಬದುಕು ಚೆನ್ನಾಗಿರಲು ಹೇಗಿದ್ದರೆ ಚೆನ್ನ, ಅಥವಾ ಅಪ್ಪಟ ಪ್ರೊಫೆಶನಲ್‌ನಂತೆ ಬದುಕುವುದು ಹೇಗೆ? ಎಂಬ ಇತ್ಯಾದಿ ಗೊಂದಲಗಳಿದ್ದರೆ ಇದನ್ನು ಓದಿ.
೧. ನೀವು ಮಾಡುತ್ತಿರುವ ಕೆಲಸ, ಆಫೀಸ್ ಇಷ್ಟವಾಗುತ್ತಿಲ್ಲವೇ, ಮಾಡುತ್ತಿರುವ ಕೆಲಸದಲ್ಲಿ ಕೊಂಚವೂ ಸಂತೋಷ ಸಿಗುತ್ತಿಲ್ಲವೇ, ಅಥವಾ ಆಫೀಸ್ ಪರಿಸರವೇ ಮನಸ್ಸಿಗೆ ಹಿಂಸೆಯಾಗುತ್ತಿದೆಯೇ, ಹಾಗಾದರೆ ಕೆಲಸ ಬಿಡಿ. ಅಯ್ಯೋ ಹೀಗೆ ಹೇಳುವುದು ಸುಲಭ, ಆದರೆ, ಕೆಲಸ ಬಿಟ್ಟರೆ ಮುಂದೇನು ಎಂಬ ಗೊಂದಲವೇ? ಹಾಗಿದ್ದರೆ, ಖಂಡಿತ ನಿಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಿ ಅದಕ್ಕೆ ಪೂರಕವಾದ ಇತರ ಆಯ್ಕೆಯನ್ನು ಮಾಡಿಯೇ ಕೆಲಸ ಬಿಡಿ. ಯಾಕೆಂದರೆ, ಮನಸ್ಸಿಗೆ ಇಷ್ಟವಾಗದೆ, ಕಷ್ಟಪಡುತ್ತಾ ಕೆಲಸ ಮಾಡುವುದು ಯಾರಿಗೇ ಆದರೂ ಒಗ್ಗದು. ಅಂತಿಮವಾಗಿ ಸಂಬಳವಷ್ಟೇ ಮುಖ್ಯವಾದರೂ, ಕೆಲಸದ ತೃಪ್ತಿ, ಮನಸ್ಸಿನ ಸಂತೋಷ ಎಲ್ಲಕ್ಕಿಂತ ಮುಖ್ಯ. ಕೆಲಸ ಬಿಟ್ಟು ಮುಂದೆ ಸಾಗುವುದು ಬಹಳ ಸಾರಿ ನಿಮ್ಮ ಬದುಕಿನಲ್ಲಿ ಮಹತ್ತರ ತಿರುವನ್ನೇ ತರಬಹುದು.
೨. ಕಷ್ಟ ಪಟ್ಟು ಕೆಲಸ ಮಾಡುವುದೊಂದೇ ಯಶಸ್ಸಿನ ಕೀಲಿಕೈ. ಮುಂದಿನ ದಾರಿ ಸುಲಭವಾಗಲೆಂದು ಕೆಲವರ ಹಿಂದೆ ಮುಂದೆ ಸುಳಿಯುತ್ತಿದ್ದು ಬಕೆಟ್ ಹಿಡಿಯುವ ಕೆಲಸ ಮಾಡಬೇಡಿ. ಇಂಥದ್ದು ಬೇಗ ನಿಮ್ಮನ್ನು ಬೇರೆಯೇ ಥರದಲ್ಲಿ ಗುರುತಿಸುವಂತೆ ಮಾಡುತ್ತದೆ. ನಿಮ್ಮ ಶ್ರಮದಿಂದ ಮಾಡಿದ ಕೆಲಸಕ್ಕೂ ಹಣೆಪಟ್ಟಿ ಸಿಗುತ್ತದೆ. ಹಾಗಾಗಿ, ನಿಮಗೆ ಸಿಗುವ ಜವಾಬ್ದಾರಿಗಳನ್ನು ಸ್ವೀಕರಿಸಿ ಅವುಗಳತ್ತ ಗಮನ ಹರಿಸಿ. ನಿಮ್ಮನ್ನು ನೀವು ಗೌರವದಿಂದ ಕಂಡರೆ, ಕೆಲಸದ ಮೇಲೆ ಶ್ರದ್ಧೆ ಇದ್ದರೆ, ಖಂಡಿತ ಸಂಸ್ಥೆಯ ಕಣ್ಣಿಗೆ ಅದು ಕಂಡೇ ಕಾಣುತ್ತದೆ. ವೃಥಾ ಚಿಂತೆ ಬೇಡ.
೩. ಆಫೀಸ್ ಗಾಸಿಪ್‌ಗಳಿಗೆ ತಲೆ ಹಾಕಬೇಡಿ. ಯಾರಾದರೂ ನಿಮ್ಮ ಬಳಿ ಬಂದು ಗಾಸಿಪ್ ಸುದ್ದಿಗಳನ್ನು ಆಗಾಗ ಬಿತ್ತರಿಸುತ್ತಿದ್ದರೆ, ಹೂಂಗುಟ್ಟಿ. ಆದರೆ, ಸಂಭಾಷಣೆಯನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯಬೇಡಿ. ಅಥವಾ ನೀವೇ ಗಾಸಿಪ್‌ಗಳಿಂದ ದೂರವಿರಿ.
೪. ಸುಮ್ಮನೆ ಮೂಲೆಯಲ್ಲಿ ತಲೆ ಬಗ್ಗಿಸಿ ಕೆಲಸ ಮಾಡುತ್ತಾ ದಿನ ಕಳೆಯಬೇಡಿ. ಎಲ್ಲರ ಜೊತೆ ಮಾತಾಡಿ. ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯವೂ ಅಗತ್ಯವೇ. ಊಟದ ಸಮಯದಲ್ಲಿ, ಚಹಾ ಸಮಯ ಹೀಗೆ ಕೆಲಸದ ನಡುವೆ ಕೊಂಚ ಬ್ರೇಕ್ ತೆಗೆದುಕೊಂಡಾಗ ಮಾತಾಡಿ. ಯಾರಿಗ್ಗೊತ್ತು, ಕೆಲವೊಮ್ಮೆ ಸಹೋದ್ಯೋಗಿಯೇ ನಿಮ್ಮ ಆಪ್ತಮಿತ್ರನೂ ಆಗಬಹುದು.
೫. ಸಿಕ್ಕಾಪಟ್ಟೆ ಕೆಲಸದಲ್ಲಿ ಬ್ಯುಸಿಯಾಗುವುದೂ ಒಳ್ಳೆಯದಲ್ಲ. ಒಂದಿಷ್ಟು ಸಮಯ ನಿಮಗಾಗಿ ಅಂತ ಎತ್ತಿಡಿ. ನಿಮ್ಮ ಕುಟುಂಬಕ್ಕೆ, ನಿಮ್ಮ ಇಷ್ಟದ ಕೆಲಸಕ್ಕೆ, ದಿನಚರಿಗೆ ಅಂತೆಲ್ಲ ಸಮಯ ಹೊಂದಿಸಿಕೊಳ್ಳುವುದನ್ನು ರೂಢಿಸಿಕೊಳ್ಳಿ.
೬. ತಪ್ಪು ಮಾಡುವುದು ಓಕೆ. ಎಲ್ಲರಿಂದಲೂ ತಪ್ಪುಗಳಾಗುತ್ತದೆ. ಕೆಲಸದ ಸಮಯದಲ್ಲೂ ಹೀಗೆ ತಪ್ಪು ನಡೆಯುವ ಸಂಭವವಿದೆ. ಆದರೆ, ತಪ್ದಾಗ ಅದನ್ನು ಒಪ್ಪಿಕೊಂಡು, ಪಾಸಿಟಿವ್ ಆಗಿ ಮುನ್ನಡೆಯುವುದನ್ನು ಕಲಿಯಿರಿ. ಅಪಮಾನವೆಂದು ತೆಗೆದುಕೊಳ್ಳದೆ, ಮುಂದೆ ಇನ್ನಷ್ಟು ಜಾಗರೂಕತೆಯಿಂದ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಿರಿ.
೭. ಯಶಸ್ಸು ದಿನ ಬೆಳಗಾಗುವುದರೊಳಗೆ ಸಿಗುವುದಿಲ್ಲ. ಯಶಸ್ಸಿನ ಹಾದಿಯಲ್ಲಿ ಮೆಟ್ಟಿಲುಗಳಿರುತ್ತದೆ, ಕಲ್ಲುಮುಳ್ಳುಗಳ ಹಾದಿಯಿರುತ್ತದೆ. ಕಷ್ಟಪಟ್ಟರೆ ಮಾತ್ರ ಬೇಕಾದಲ್ಲಿ ತಲುಪಬಹುದು ಎಂಬುದು ನೆನಪಿಡಿ. ಇದಕ್ಕೆ ಶಾರ್ಟ್‌ಕಟ್‌ಗಳಿರುವುದಿಲ್ಲ. ಗುರಿಯಲ್ಲಿ ಫೋಕಸ್ ಇದ್ದರೆ ಸಾಕು.