Site icon Vistara News

777 ಚಾರ್ಲಿ ಎಫೆಕ್ಟ್:‌ ನಾಯಿ ಸಾಕೋದು ಅಷ್ಟೊಂದು ಸುಲಭವಾ?

dog care

777 ಚಾರ್ಲಿ ಚಿತ್ರ ಬಿಡುಗಡೆಯಾಗಿದ್ದೇ ಎಲ್ಲೆಲ್ಲೂ ನಾಯಿಗಳದ್ದೇ ಕಾರುಬಾರು. ನಗರದೆಲ್ಲೆಡೆ, ಚಿತ್ರಮಂದಿರಗಳಲ್ಲಿ ನಾಯಿ ಎದೆಯುಬ್ಬಿಸಿ ಕುಳಿತದ್ದು ನೋಡುತ್ತಾ ನಾಯಿಪ್ರೇಮಿಗಳು ಭಾವುಕರಾಗಿದ್ದಾರೆ. ನಾಯಿ ಕಂಡು ಮೂಗು ಮುರಿಯುತ್ತಿದ್ದವರೂ ನಾಯಿಯೆಡೆ ಅಂತಃಕರಣ ನೋಟ ಬೀರುವಷ್ಟು ಕರಗಿದ್ದಾರೆ. ಇನ್ನೂ ಕೆಲವರು ನಾಯಿ ಸಾಕಬೇಕು ಎಂದು ಮನಸ್ಸು ಬದಲಾಯಿಸಿಕೊಂಡು ಆ ದಿಕ್ಕಿನತ್ತ ಹೊರಟಿದ್ದಾರೆ. ಹಾಗಾದರೆ, ಹಳ್ಳಿಗಳ ಮಾತು ಒತ್ತಟ್ಟಿಗಿರಲಿ, ಬೆಂಗಳೂರಿನಂಥ ಅಪಾರ್ಟುಮೆಂಟು ದುನಿಯಾದಲ್ಲಿ ನಾಯಿ ಸಾಕೋದು ಸುಲಭವೇ?

ನಾಯಿಯೂ ಕೂಡಾ ನಾಗರಿಕ ಸಮಾಜದಲ್ಲಿ ಸುಸಂಸ್ಕೃತವಾಗಿ ಗೌರವಯುತವಾಗಿ ಬಾಳ್ವೆ ನಡೆಸುತ್ತದೆ ಅನ್ನುವ ಮಾತನ್ನು ಖಂಡಿತ ತಳ್ಳಿಹಾಕಲಾಗದು. ಕಲಿಸಿದ ಸಾಮಾಜಿಕ ನಡವಳಿಕೆಗಳನ್ನು ನಾಯಿ ಚೆನ್ನಾಗಿ ಕಲಿತುಕೊಂಡರೆ, ಅದ್ಭುತವೆನ್ನುವಂತೆ ಬದುಕಿ ತೋರಿಸುತ್ತದೆ. ಮನುಷ್ಯನಂತೆ ತನಗೆ ಬೇಕಾದಾಗ ರಂಗೋಲಿ ಕೆಳಗೆ ನುಸುಳಿ ಅಶಿಸ್ತು ಪ್ರದರ್ಶಿಸಲಾರದು. ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಸಭ್ಯವಾಗಿ ಬದುಕುವ ಎಲ್ಲ ಲಕ್ಷಣಗಳನ್ನೂ ನಾಯಿ ತೋರಿಸುತ್ತದೆ. ಹಾಗೆ ಮಾಡಬೇಕೆಂದರೆ, ಖಂಡಿತ ನಾಯಿಗೊಂದಿಷ್ಟು ತರಬೇತಿ ಅಗತ್ಯ. ಚಿಕ್ಕಂದಿನಲ್ಲೇ ನಾಯಿಯನ್ನು ಚೆನ್ನಾಗಿ ಪಳಗಿಸುವುದೂ ಮುಖ್ಯ. ಇಲ್ಲವಾದಲ್ಲಿ, ಚಾರ್ಲಿ ನೋಡಿ, ನಮ್ಮ ನಾಯಿ ಹಾಗೇಕಿಲ್ಲ, ಹಾಗೇಕಾಗುವುದಿಲ್ಲ ಎಂದು ಅರಿಯದೆ, ಈ ನಗರದಲ್ಲಿ ನಿಮ್ಮ ಜೀವನದ ಜೊತೆಗೆ ನಾಯಿ ಜೀವನವನ್ನೂ ಹೈರಾಣು ಮಾಡಿಕೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ.

ನಾಯಿ ಎಂದರೆ ಮನೆಯ ಕಾವಲುಗಾರ ಎಂಬ ಮನಸ್ಥಿತಿಯಲ್ಲೇ ನಾವು ಬೆಳೆದವರು. ನಿಜ. ಆದರೆ, ನಾಯಿಯಿದೆ ಎಚ್ಚರಿಕೆ ಎಂಬ ಬೋರ್ಡು ಹಾಕಿ, ನಿತ್ಯ ಮನೆಗೆ ಬರುವ ಮಂದಿಯೂ ಸೇರಿದಂತೆ ನಿಮ್ಮ ಮನೆ ಕಂಡರೇ ನಾಯಿಮನೆ ಎಂಬ ಭಯ ಆವರಿಸುವಂತೆ ಪರಿಸ್ಥಿತಿ ನಿರ್ಮಾಣವಾದರೆ, ಅದು ನಿಮಗೂ ನಿಮ್ಮ ಸುತ್ತಮುತ್ತಲಿನವರಿಗೂ ಕಷ್ಟ. ಯಾವ ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು, ಬೇರೆ ನಾಯಿ, ಪ್ರಾಣಿ ಅಥವಾ ಮನುಷ್ಯರನ್ನು ಕಂಡಾಗ ಹೇಗಿರಬೇಕು ಎಂಬುದು ನಾಯಿಗೆ ಅರ್ಥವಾಗುವಂತಿರಬೇಕು. ಹಾಗೂ ಮನೆಯೊಡೆಯ ಹೇಳಿದ ಮಾತನ್ನು ಅರ್ಥ ಮಾಡಿಕೊಂಡು ಪಾಲಿಸುವ ಗುಣ ನಾಯಿಗೆ ಬರದಿದ್ದರೆ ಬದುಕಿನ ಗುಣಮಟ್ಟ ಕುಸಿಯುತ್ತದೆ.

ನಾಯಿ ಈ ಬುದ್ಧಿ ಕಲಿಯಲು ಹಾಗೂ ಕಲಿಸಲು ತಾಳ್ಮೆ ಅವಶ್ಯಕ. ಮನೆಯವರು ಆಡುವ ಮಾತನ್ನು ಪಾಲಿಸಲು, ಕೆಟ್ಟ ನಡವಳಿಕೆ ತೋರಿದಾಗ ಗದರಿ, ಒಳ್ಳೆಯ ನಡವಳಿಕೆ ತೋರಿದಾಗ ಹೊಗಳುವ ಮೂಲಕ, ನಡವಳಿಕೆಗಳ ವ್ಯತ್ಯಾಸ ಕಂಡುಕೊಳ್ಳುವುದು ಅವುಗಳಿಗೆ ಸಾಧ್ಯವಾಗಬೇಕು. ಇದಕ್ಕೆ, ನಾಯಿ ಮರಿಯಾಗಿದ್ದಾಗಲೇ, ಪದೇ ಪದೆ ಹೇಳಿ ಮಾಡಿಸುವುದರಿಂದ ಅರ್ಥ ಮಾಡಿಕೊಳ್ಳುತ್ತದೆ. ಮನೆಯವರು ಮಾತನಾಡುತ್ತಾ ಕಾಫಿ ಕುಡಿಯುತ್ತಿದ್ದರೆ, ತಾನು ಅವರ ಬಳಿಯಲ್ಲಿ ಯಾವುದೇ ಗಲಾಟೆ ಮಾಡದೆ ಕೂತಿರಬೇಕು, ಮನೆಯವರು ಇಲ್ಲದಾಗ, ಒಬ್ಬನೇ ಇರುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಹಾಗೂ ಆ ಸಂದರ್ಭದ ಕೋಪಕ್ಕೆ ಮನೆಯ ವಸ್ತುಗಳು ಬಲಿಯಾಗದೆ ಇರುವುದು ಬಹಳ ಮುಖ್ಯ. ಇವೆಲ್ಲ ನಾಯಿ ಕಲಿತುಕೊಳ್ಳಬೇಕಾದಲ್ಲಿ ಅದಕ್ಕೆ ಎಳವೆಯಲ್ಲೇ ತರಬೇತಿ ಮುಖ್ಯ.

ಇದನ್ನೂ ಓದಿ: Movie Review | 777 ಚಾರ್ಲಿ ಪ್ರೀತಿಯ ಜರ್ನಿಯಲ್ಲಿ ನಗುವಿದೆ, ಕಣ್ಣೀರಿದೆ, ಮೌನವೂ ಇದೆ!

ಒಳ್ಳೆಯ ಕೆಲಸಗಳಿಗೆ, ನಡವಳಿಕೆಗೆ ರಿವಾರ್ಡ್‌ ನೀಡುವ ಮೂಲಕ ನಾಯಿಯನ್ನು ದೊಡ್ಡದಾದ ಮೇಲೂ ಪಳಗಿಸಬಹುದು. ಮನೆಯೊಡೆಯನ ಬದಲಾವಣೆ, ಸ್ಥಳ ಬದಲಾವಣೆ, ಮತ್ತಿತರ ಸಂದರ್ಭಗಳಲ್ಲೂ ನಾಯಿ ಹೊಸ ನಡವಳಿಕೆಗಳನ್ನು ಕಲಿತುಕೊಳ್ಳಲು ಶಕ್ತವೇ ಆಗಿರುತ್ತದೆ. ತಳಿಗಳ ಆಧಾರದಲ್ಲೂ ಕೂಡಾ ನಾಯಿಗಳ ನಡವಳಿಕೆಗಳಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ.

ನಗರ ಜೀವನದಲ್ಲಿ ನಾಯಿಗಳನ್ನು ನಾಗರಿಕರನ್ನಾಗಿ ತಯಾರು ಮಾಡಲು ಕೂಡಾ ತರಬೇತುದಾರರು ಲಭ್ಯವಿರುತ್ತಾರೆ. ಇವರು ನಾಯಿ ತರಬೇತಿಯಲ್ಲಿ ಪರಿಣತಿ ಪಡೆದಿರುವುದರಿಂದ ನಾಯಿಗಳಿಗೊಂದು ನಿಗದಿತ ಸಮಯದಲ್ಲಿ ತರಬೇತಿಗೆಂದು ಇವರ ಕೈಗೊಪ್ಪಿಸಿ ಮನೆಯೊಡೆಯ ನಿಶ್ಚಿಂತರಾಗಿರಬಹುದು.

ನಾಯಿ ಎಂಬ ಜೀವಿ, ಅನಾದಿಕಾಲದಿಂದಲೂ ಮನುಷ್ಯನೊಡನೆ ಹೃದಯ ಹಂಚಿಕೊಂಡು ಬದುಕುತ್ತಾ ಬಂದಿರುವುದೊಂದು ಸಣ್ಣ ಸಂಗತಿಯೇನಲ್ಲ. ಇವುಗಳ ಮನಸ್ಸರಿತು ಮನುಷ್ಯ ಪ್ರೀತಿ ತೋರಿದರೆ, ಬೆಟ್ಟದಷ್ಟು ಪ್ರೀತಿ ಮೊಗೆಮೊಗೆದು ಕೊಡುವ, ಎಂಥ ಸಂದರ್ಭ ಬಂದರೂ ತನ್ನೊಡೆಯನ ಜೊತೆ ನಿಲ್ಲುವ, ಪ್ರಾಣವೂ ಕೊಡಲು ಸಿದ್ಧವಿರುವ ನಾಯಿಯಂತ ಆತ್ಮಸಖ ಮನುಷ್ಯನಿಗೆ ಬೇರೊಬ್ಬ ಸಿಗಲಾರ ಎಂಬುದೂ ಸತ್ಯವೇ.

ಇದನ್ನೂ ಓದಿ: 777 ಚಾರ್ಲಿ- ಧರ್ಮ ಥರಾ ನೀವು ಜತೆಯಾಗಿ ಪ್ರವಾಸ ಹೋಗ್ತೀರಾ?

Exit mobile version