Site icon Vistara News

Mother’s Day : ಅಮ್ಮನ ಅಕ್ಕರೆ ತೋರುವ ಎಂಟು ಸಿನಿಮಾಗಳು

ಬೆಂಗಳೂರು : ʼಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ..? ಭೂಮಿಗೆ ಬಂದ ಮೊದಲನೆ ಕಂದನ ಅಳುವ ದನಿಯಿಂದ ʼ ಈ ಸಾಲುಗಳು ಯಾವಾಗಲೂ ನಮ್ಮನ್ನ ಬಿಡದೇ ಕಾಡುತ್ತವೆ. ʼಅಮ್ಮ ʼ ಅನ್ನೋ ಶಬ್ದಕ್ಕೆ ಅರ್ಥ ನಿಡುವುದು ಕೂಸೇ ಆದ್ರೂ ಆ ಕೂಸಿಗೆ ರೆಕ್ಕೆ ಕಟ್ಟಿ ಹಾರೋ ಹಾಗೇ ಮಾಡೋಳು ತಾಯಿ. ಮೇ 8 ವಿಶ್ವ ಅಮ್ಮಂದಿರ ದಿನ. ಇವತ್ತಿನ ದಿನ ಮಕ್ಕಳು ತಾಯಿಗೆ ಸಾಕಷ್ಟು ಉಡುಗೊರೆ, ಹಾಗೇ ಟ್ರಿಪ್‌, ಏನೇ ಪ್ಲಾನ್‌ ಮಾಡಿಕೊಂಡಿದ್ದರೂ, ಮನೆಯಲ್ಲೇ ಕೂತು ಅಮ್ಮನ ಜೊತೆ ಟೈಮ್‌ ಸ್ಪೆಂಡ್‌ ಮಾಡಬಹುದು.

ತಾಯಿಯ ತ್ಯಾಗ, ಸ್ಪೂರ್ತಿ, ಧೈರ್ಯ, ಸ್ವಾಭಿಮಾನ, ಸಹನಾ ಗುಣಗಳನ್ನು ಕೇಂದ್ರವಾಗಿಸಿಕೊಂಡು ಹಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೆ ಬಂದ ಸಿನಿಮಾಗಳಿಗೆ ಲೆಕ್ಕವಿಲ್ಲ. ತಾಯಿ ಸೆಂಟಿಮೆಂಟ್‌ ಕೇಂದ್ರಿತ ಚಿತ್ರಗಳನ್ನು ಹುಡುಕುತ್ತ ಹೋದರೆ ಕೊನೆಯೇ ಇಲ್ಲ. ಇವುಗಳಲ್ಲಿ ಕೆಲವೊಂದು ಸಿನಿಮಾಗಳು ನಮ್ಮನ್ನ ಯಾವಾಗಲೂ ಕಾಡುತ್ತಲೇ ಇರುತ್ತವೆ. ಭಾಷೆ ಯಾವುದೇ ಇದ್ರೂ ಅಮ್ಮನ ಬಗ್ಗೆ ಹೊಂದಿದ ಭಾವ ಮಾತ್ರ ಅದು ಎಲ್ಲರಿಗೂ ಒಂದೆ. ಹಾಗಾದ್ರೆ ಅಮ್ಮನ ಸಂಬಂಧಿತ ಸಿನಿಮಾ ಯಾವುದ್ಯಾವುದು? ಮೇ 8ರ ಆಚರಣೆಗೆ ಎಂಟು ಸಿನಿಮಾ ಲಿಸ್ಟ್‌ ಇಲ್ಲಿದೆ. ಒಮ್ಮೆ ನೋಡಿ, ಅಮ್ಮ ಲವ್‌ ಯು ಅಂದುಬಿಡಿ.

ಲಾಲಿ ಹಾಡು [ಕನ್ನಡ]

ಚಾಲೆಂಜಿಗ್‌ ಸ್ಟಾರ್‌ ಅಭಿನಯದ ಲಾಲಿ ಹಾಡು ಚಿತ್ರ 2003ರಲ್ಲಿ ತೆರೆ ಕಂಡಿತು. ಇದರಲ್ಲಿ ಇಬ್ಬರು ಸಂಗೀತ ನಿರ್ದೇಶಕರಾದ ವಿ.ಮನೋಹರ್ ಮತ್ತು ರಾಜೇಶ್ ರಾಮನಾಥ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ ಅವರು ಸಂಯೋಜಿಸಿದ ಹಾಡುಗಳು ದೊಡ್ಡ ಹಿಟ್ ಆದವು. ತಾಯಿಯ ಪಾತ್ರದಲ್ಲಿ ನಟಿಸಿದವರು ಹಿರಿಯ ಕಲಾವಿದೆ ಉಮಾಶ್ರೀ. ಅಂದಮೇಲೆ ಕೇಳಬೇಕೆ? ಎಂದಿನಂತೆ ಅವರ ಸುಲಲಿತ ಶೈಲಿಯಲ್ಲಿ ತಾಯಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಹಲವಾರು ಪ್ರಸಸ್ತಿಗಳನ್ನು ತಂದುಕೊಟ್ಟರು.

ಈ ಚಿತ್ರದಲ್ಲಿ ನಾಯಕ ಹಾಡುಗಾರನಾಗಿದ್ದರೂ, ತಾಯಿ ಜೋಗುಳ ಪದ್ಯದಲ್ಲೇ ಸಂಗೀತವನ್ನು ಕಲಿತು, ತಾನು ಹುಟ್ಟಿ ಬಂದ ಹಳೆಯ ಜೀವನಕ್ಕೆ ತಾಯಿಯನ್ನು ಎಂದಿಗೂ ಹೊಸ ಬದುಕಿಗೆ ಹೋಲಿಕೆ ಮಾಡದೇ ತಾಯಿಯೇ ತನ್ನ ಸಾದನೆಗೆ ಕಾರಣ ಎಂಬ ಸಂದೇಶ ಇಲ್ಲಿ ಇದೆ. ಅಷ್ಟೇ ಅಲ್ಲದೇ, ತಾನು ಅಕ್ಷರ ಕಲಿಯದಿದ್ದರೂ, ಹೇಗೆ ತನ್ನ ಮಗನನ್ನು ಒಂದು ಹಂತಕ್ಕೆ ತಾಯಿ ತಲುಪಿಸಿದಳು ಎಂಬ ಚಿತ್ರಣವನ್ನು ಇಲ್ಲಿ ಕಾಣಬಹುದು.
2003ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇದನ್ನೂ ಓದಿ : Gallery | ಎ.ಆರ್. ರೆಹಮಾನ್ ಮಗಳ ಮದುವೆಯ ಸಂಭ್ರಮದ ಚಿತ್ರಗಳು

ವೆರಾ ಡ್ರೇಕ್ [Vera Drake] (ಇಂಗ್ಲಿಷ್‌)

2004ರಲ್ಲಿ ತೆರೆ ಕಂಡ ಇಂಗ್ಲಿಷ್‌ ಸಿನಿಮಾ. ಬ್ರಿಟಿಷ್ ಅವಧಿಯ ನಾಟಕ ಚಲನಚಿತ್ರವಾಗಿದ್ದು ಮೈಕ್ ಲೀ ಬರೆದು ನಿರ್ದೇಶಿಸಿದ್ದಾರೆ. ಇದು 1950ರಲ್ಲಿ ಲಂಡನ್‌ನಲ್ಲಿ ಕಾನೂನುಬಾಹಿರ ಗರ್ಭಪಾತವನ್ನು ಮಾಡುವ ಕಾರ್ಮಿಕ ವರ್ಗದ ಮಹಿಳೆಯ ಕಥೆಯನ್ನು ಸಾರುತ್ತದೆ. ಬಾಳ್ಯದ ಸಂಬಂಧಿತ ಸಿನಿಮಾ ಆಗಿದ್ದು, ಇದು ವೆನಿಸ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಲಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಜತೆಗೆ ಮೂರು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು, ಮೂರು BAFTAಗಳನ್ನು ಗೆದ್ದಿತು. ಈ ಸಿನಿಮಾ ಕೇವಲ ಮನರಂಜನೆ ಅಲ್ಲದೇ ಪಾತ್ರವನ್ನು ತಿಂಗಳುಗಳಕಾಲ ಅದ್ಯಯನ ಮಾಡಿ ವಿಷಯವನ್ನು ಸಂಗ್ರಹಿಸಿ ಕೌಟುಂಬಿಕ ಜೀವನವನ್ನು ಸ್ಪಷ್ಟವಾಗಿ ವಿವರಿಸಿದ ಪ್ರಯೋಗವಾಗಿತ್ತು.

ಪ್ಲೇಸಸ್‌ ಇನ್‌ ದಿ ಹಾರ್ಟ್‌ [Places in The Heart]

ಅಮೆರಿಕನ್‌ ಚಿತ್ರಕಥೆಗಾರ, ನಿರ್ದೇಶಗ ರಾಬರ್ಟ್‌ ಡಗ್ಲಸ್‌ ಬೆಂಟನ್‌ ಅವರು 1964 ರಲ್ಲಿ ಅವರೇ ಬರೆದು ನಿರ್ದೇಶಿಸಿದ ಚಿತ್ರ. ಟೆಕ್ಸಾಸ್‌ನಲ್ಲಿ ನಡೆದ ಮಹಾ ಆರ್ಥಿಕ ಕುಸಿತದ ಸಮಯದಲ್ಲಿ ಯುವತಿ ಎಡ್ನಾ ಸ್ಪಾಲ್ಡಿಂಗ್ ಹೋರಾಡಿದ ಕಥೇಯನ್ನಾಧರಿಸಿ ಮಾಡಿದ ಸಿನಿಮಾ. ಆಕೆ ತನ್ನ ಗಂಡನ ಮರಣದ ನಂತರ ತನ್ನ ಜಮೀನಿನ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾಳೆ. ಒಬ್ಬಳೆ ಅದನ್ನು ಹೇಗೆ ನಿರ್ವಹಿಸಿ ಗೆಲ್ಲುತ್ತಾಳೆ ಎಂಬುದೇ ಇದರಲ್ಲಿರುವ ಸ್ವಾರಸ್ಯ,
35ನೇ ಬರ್ಲಿನ್ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ಲೇಸಸ್ ಇನ್ ದಿ ಹಾರ್ಟ್ ಪ್ರಥಮ ಪ್ರದರ್ಶನಗೊಂಡಿತು. ಅಲ್ಲಿ ಅದು ಗೋಲ್ಡನ್ ಬೇರ್‌ಗಾಗಿ ಸ್ಪರ್ಧಿಸಿತು. ಬೆಂಟನ್ ಅತ್ಯುತ್ತಮ ನಿರ್ದೇಶಕರಾಗಿ ಸಿಲ್ವರ್ ಬೇರ್ ಪ್ರಶಸ್ತಿ ಗೆದ್ದರು.

ಮಾತೃ ದೇವೋ ಭವ [ತೆಲುಗು]

1993ರ ತೆಲಗು ನಾಟಕದ ಆಧರಿತ ಚಲನಚಿತ್ರವಾಗಿದ್ದು, ಕೆ. ಅಜಯ್ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಚಾಲಕ ಮತ್ತು ಸಂಗೀತ ಶಿಕ್ಷಕಿ ಗಂಡ ಹೆಂಡತಿಯ ಕೇಂದ್ರಿತ ಕಥೆ. ಇಬ್ಬರೂ ಸೇವಾ ಆಶ್ರಮದಲ್ಲಿ ಅನಾಥರಾಗಿದ್ದು, ನಂತರದಲ್ಲಿ ಪ್ರೀತಿ ಬೆಳೆದು ಒಂದಾಗುತ್ತಾರೆ. ನಾಲ್ಕು ಮಕ್ಕಳಿಗೆ ಪಾಲಕರಾಗುತ್ತಾರೆ. ಮದ್ಯವ್ಯಸನಿ ತಂದೆ, ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಯಿ, ಈ ಮಕ್ಕಳನ್ನು, ಇಂತಹ ವಾತಾವರಣದಲ್ಲಿ ಹೇಗೆ ಬೆಳೆಸುತ್ತಾಳೆ ಎಂಬುದೇ ಮುಖ್ಯ ತಿರುಳು. ಚಲನಚಿತ್ರವು “ರಾಳಿಪೋಯೆ ಪುವ್ವ” ಹಾಡಿಗಾಗಿ ವೆಟೂರಿಯವರ ಅತ್ಯುತ್ತಮ ಸಾಹಿತ್ಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು (ತೆಲುಗು) ಕೂಡ ಗೆದ್ದುಗೊಂಡಿತು.

ಮನಸ್ಸಿನಕ್ಕರೆ [ಮಲೆಯಾಳಂ]

2003 ರಲ್ಲಿ ತೆರೆಕಂಡ ತಾಯಿ ಆಧಾರಿತ ಮಲೆಯಾಳಂ ಚಿತ್ರ ಮನಸ್ಸಿನಕ್ಕರೆ. ಶ್ರೀಮಂತ ವಿಧವೆ ತಾಯಿ ಕೊಚು ಥ್ರೇಸಿಯಾ. ತಾನು ವಾಸಿಸುವ ಸುಂದರ ಹಳ್ಳಿಯ ಎಲ್ಲ ಒಳ್ಳೆಯತನವನ್ನೂ ಸವಿಯಬೇಕು, ಸ್ವಚ್ಛಂದದ ಜೀವನ ನಡೆಸಬೇಕೆನ್ನುವಾಕೆ. ತನ್ನ ಮೊದಲ ಮನೆಯಲ್ಲಿರುವ ಥ್ರೇಸಿಯಾ ಜೀವನವನ್ನು ಆನಂದಿಸುವುದೇ ವಿಶೇಷ, ವಿಚಿತ್ರ. ಆದರೆ ಈಕೆಯ ವಯಸ್ಸಿಗೆ ನಡೆದುಕೊಳ್ಳುವ ರೀತಿ ಇದಲ್ಲ ಎನ್ನುವುದು ಮಗ, ಕುಟುಂಬದ ಅಭಿಪ್ರಾಯ.
ದೇಹಕ್ಕೆ ವಯಸ್ಸಾಗಿದ್ದರೂ ಆಕೆಯ ಮನಸ್ಸು ಮಾತ್ರ ಯುವ. ಈ ಸಮಯದಲ್ಲಿ ಎದುರಾಗುವ ಒಬ್ಬ ಯುವ ಸ್ನೇಹಿತ ರೇಜಿ. ಇಬ್ಬರ ನಡುವೆ ತಾಯಿ ಮಗನ ವಾತ್ಸಲ್ಯ ಬೆಳೆಯುತ್ತದೆ. ಬಾಯೂರಿಸುವ ಬೀಫ್‌ ತಂದುಕೊಡುವುದರಿಂದ ಆನೆ ಸವಾರಿವರೆಗೆ ಥ್ರೇಸಿಯಾ ಬಯಸುವ ಎಲ್ಲವನ್ನೂ ರೇಜಿ ಈಡೇರಿಸುತ್ತಾನೆ. ಇದೆಲ್ಲವನ್ನೂ ನೋಡುವ ಥ್ರೇಸಿಯಾ ಮಕ್ಕಳಿಗೆ ಮುಜುಗರ ಹೆಚ್ಚಾಗುತ್ತದೆ. ಇದೆಲ್ಲಕ್ಕೂ ಕೊನೆ ಹಾಡಬೇಕು ಎಂದು ಒಂದು ದಿನ ಥ್ರೇಸಿಯಾ ನಿರ್ಧರಿಸುತ್ತಾಳೆ.
ಸತ್ಯನ್ ಅಂತಿಕ್ಕಾಡ್ ನಿರ್ದೇಶಿಸಿದ್ದಾರೆ ಮತ್ತು ರಂಜನ್ ಪ್ರಮೋದ್ ಬರೆದಿದ್ದಾರೆ. ಚಿತ್ರದ ಸಂಗೀತ ವನ್ನ ಇಳಯರಾಜ ಸಂಯೋಜಿಸಿರುವುದು ವಿಶೇಷ

ಪಾ[Paa] (ಹಿಂದಿ):

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ತನ್ನ ಮಗುವಿನ ಬಗ್ಗೆ ತಾಯಿಯ ಹೋರಾಟದ ಬಗ್ಗೆ ಇದೆ ಪಾ (2009) ಚಿತ್ರ. ಆರ್‌. ಬಾಲ್ಕಿ ನಿರ್ದೇಶಿಸಿದ ಚಿತ್ರವಾಗಿದ್ದು, ಚಿತ್ರದ ನಾಯಕ ಅಮಿತಾಭ್ ಬಚ್ಚನ್. ಪಾತ್ರದ ಹೆಸರು ಆರೋ(Auro). ಪ್ರೊಜೆರಿಯಾ, ಅಪರೂಪದ ಆನುವಂಶಿಕ ಕಾಯಿಲೆ. 12 ವರ್ಷದ ಮತ್ತು ಸಾಕಷ್ಟು ಬುದ್ಧಿವಂತ ಮತ್ತು ಚೇಷ್ಟೆಯ ಮಗು. ಮಾನಸಿಕವಾಗಿ ಈ ವಯಸ್ಸಿನ ಇತರೆ ಮಕ್ಕಳಂತೆಯೇ ಸಾಮಾನ್ಯ. ಆದರೆ ದೈಹಿಕವಾಗಿ ಅವನು ತನ್ನ ವಯಸ್ಸಿಗಿಂತ ಐದು ಪಟ್ಟು ಹೆಚ್ಚು ಎಂದು ತೋರುತ್ತಾನೆ. ಸ್ತ್ರೀರೋಗತಜ್ಞರಾಗಿರುವ ತಾಯಿ ವಿದ್ಯಾ ಅವರೊಂದಿಗೆ ವಾಸಿಸುತ್ತಾನೆ. ಮಹತ್ವಾಕಾಂಕ್ಷಿ ರಾಜಕಾರಣಿ ಅಮೋಲ್‌ ಆರ್ತೆಯೇ ಆರೋನ ತಂದೆ ಎನ್ನುವುದನ್ನು ತಾಯಿ ವಿದ್ಯಾ ಮುಚ್ಚಿಟ್ಟಿರುತ್ತಾಳೆ. ಇಂತಹ ಸ್ಥಿತಿಯಲ್ಲಿರುವ ಮಗನನನ್ನು ತಾಯಿ ನೋಡಿಕೊಳ್ಳುವುದು, ಪುರುಷರ ದಬ್ಬಾಳಿಕೆ, ತಾಯಿಯ ಗಟ್ಟಿತನ ಇದರಲ್ಲಿ ವ್ಯಕ್ತವಾಗಿದೆ.

ಇದನ್ನೂ ಓದಿ : ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!

ಮಾಮ್ [MOM] (ಹಿಂದಿ)

ರವಿ ಉದಯವಾರ್‌ ನಿರ್ದೇಶಿಸಿದ ಮಾಮ್‌(2017) ಈ ಚಿತ್ರದಲ್ಲಿ ಶ್ರೀದೇವಿ ಅಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಲ ಮಗಳು ಆರ್ಯಾ. ಚಿತ್ರದಲ್ಲಿ ಅತ್ಯಾಚಾರಕ್ಕೆ ಒಳಗಾದ ಮಗಳಿಗೆ ಸಿಂಹಣಿಯಂತೆ ಸೇಡು ತೀರಿಸಿಕೊಳ್ಳೋ ಮದರ್‌ ಸೆಂಟಿಮೆಂಟ್‌ ಈ ಸಿನಿಮಾದಲ್ಲಿದೆ. ಮೊದ ಮೊದಲು ಮಗಳು ತಾಯಿಯನ್ನು ಹೇಟ್‌ ಮಾಡ್ತಾ ಇರುತ್ತಾಳೆ. ನಂತರದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲು ಆದಾಗ, ಶ್ರೀದೇವಿ ತನ್ನ ಮಗಳಿಗೋಸ್ಕರ ಆರೋಪಿಗಳನ್ನು ಕಂಡು ಹಿಡಿದು ಎಲ್ಲರನ್ನೂ ಕೊನೆಯಲ್ಲಿ ಸಾಯಿಸುತ್ತಾಳೆ. ಅಮ್ಮನ ಧೈರ್ಯಕ್ಕೆ ಮೆಚ್ಚಿ ಮಗಳು ಒಂದಾಗುವ ಬಗೆ ಹಾಗೂ ತಾಯಿ ಒಬ್ಬಳು ಇದ್ದರೆ ಏನು ಬೇಕಾದರೂ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದೆ ಈ ಚಿತ್ರ.

ಅಮ್ಮಚ್ಚಿಯೆಂಬ ನೆನಪು

2008 ರಲ್ಲಿ ಬಂದ ಕನ್ನಡ ಚಲನಚಿತ್ರ. ಚಂಪಾ ಪಿ. ಶೆಟ್ಟಿ ನಿರ್ದೇಶಿಸಿದ ಈ ಚಿತ್ರವು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬರಹಗಾರ್ತಿ ವೈದೇಹಿಯವರ ಮೂರು ಸಣ್ಣಕಥೆಗಳ ಮೇಲೆ ಆಧಾರಿತವಾಗಿದೆ. ಇದರಲ್ಲಿ ಅಮ್ಮಚ್ಚಿಗೆ ತಾಯಿ ಇಲ್ಲದೇ ತಾಯಿಯ ಸ್ಥಾನವನ್ನು ಅಜ್ಜಿ ತುಂಬಿರುತ್ತಾಳೆ. ಮತ್ತು ತನಗೆ ಬಂದಿರುವ ಸಮಸ್ಯೆಗಳು, ಮದುವೆ, ಮತ್ತು ಸ್ವಾತಂತ್ರ್ಯಕ್ಕೂ ಕೈ ಚಾಚಿ ನಿಲ್ಲುವಂತಹ ನಿರ್ಮಾಣ. ಹಾಗೂ ವಿದ್ಯಾಭ್ಯಾಸಕ್ಕೂ ಅಮ್ಮಚ್ಚಿ ಅಜ್ಜಿಯೊಂದಿಗೆ ಸೆಣಸಾಟ ಮಾಡುವ ಪರಿ. ತಾಯಿ ಒಬ್ಬಳು ಇಲ್ಲದಿದ್ದರೆ ಹೆಣ್ಣು ಹೇಗೆ ದುರ್ಬಲಳು ಎಂಬುದು ಈ ಚಲನಚಿತ್ರದಲ್ಲಿ ಮಾರ್ಮಿಕವಾಗಿ ಚಿತ್ರಿತವಾಗಿದೆ.

ಇದನ್ನೂ ಓದಿ : ದೀಪಿಕಾ Cannes ಚಿತ್ರೋತ್ಸವ ತೀರ್ಪುಗಾರ್ತಿ: 9 ವರ್ಷದ ನಂತರ ದೊರೆತ ಅವಕಾಶ

Exit mobile version