Site icon Vistara News

Boring people | ನೀವು ಬೋರಿಂಗ್‌ ವ್ಯಕ್ತಿಯಾ? ಯಾವುದಕ್ಕೂ ಪರೀಕ್ಷಿಸಿಕೊಳ್ಳಿ

boring

ನಿಮಗೆ ಗೊತ್ತಿರುವವರ ಪೈಕಿ ಅತಿ ಹೆಚ್ಚು ತಲೆಚಿಟ್ಟು ಹಿಡಿಸುವವರು ಯಾರು? ಈ ಪ್ರಶ್ನೆಗೆ ನಮ್ಮ ಕಣ್ಮುಂದೆ ನಾನಾ ರೀತಿಯ ಮುಖಗಳು ಬರಬಹುದು. ಎದುರು ಸಿಕ್ಕಿಬಿಟ್ಟರೆ ʻಹೂಂʼ ಹಾಕುವುದಕ್ಕೂ ಬಿಡದಂತೆ ಮಾತಾಡುವವರು, ಮಾತಾಡುವಾಗ ಯಾವುದಾದರೂ ಒಂದೆರಡು ಶಬ್ದಗಳನ್ನು ಪದೇಪದೆ ಹೇಳಿ ಕರಕರೆ ಮಾಡುವವರು, ನಿಮ್ಮ ನೂರು ಮಾತಿಗೆ ಒಂದು ಪ್ರತಿಕ್ರಿಯೆ ನೀಡಿ ತಲೆ ಹಾಳು ಮಾಡುವವರು, ಒಂದೇ ವಿಷಯವನ್ನು ಹತ್ತಾರು ಬಾರಿ ಕೇಳಿ ಚೊರೆ ಮಾಡುವವರು, ಮಾತಾಡುವುದಕ್ಕೆ ವಿಷಯವೇ ಇಲ್ಲದೆ ಪರದಾಡುವವರು ಹೀಗೆ ಹತ್ತು-ಹಲವು ಮಂದಿ ನಿಮ್ಮ ನೆನಪಿಗೆ ಬಂದಾರು. ಆದರೆ ಈ ಬೋರಿಂಗ್‌ ಜನರ ಪಟ್ಟಿಯಲ್ಲಿ ನೀವೂ ಇದ್ದೀರಾ?

ಅರೆ! ಇದನ್ನೆಂದೂ ಯೋಚಿಸಿರಲಿಲ್ಲ ಅಲ್ಲವೆ? ಹೆಚ್ಚಿನ ಜನ ತಂತಮ್ಮ ಬಗ್ಗೆ ಭಾವಿಸಿಕೊಂಡಿರುವುದು, ಜಗತ್ತಿನ ವಿಸ್ಮಯಕರ ವ್ಯಕ್ತಿತ್ವದಲ್ಲಿ ತನ್ನದೂ ಒಂದು ಎಂದು. ಅಲ್ಲದಿದ್ದರೆ ತೀರಾ ರೇಜಿಗೆ ಹಿಡಿಸುವ ವ್ಯಕ್ತಿ ತಾನು ಎಂದು ಯಾರಾದರೂ ತಮ್ಮ ಬಗ್ಗೆ ಭಾವಿಸಲುಂಟೆ? ಯಾವುದೋ ಒಂದು ಸುಮುಹೂರ್ತದಲ್ಲಿ ತನ್ನ ವ್ಯಕ್ತಿತ್ವವನ್ನು ಉಳಿದವರು ಹೇಗೆ ಗ್ರಹಿಸುತ್ತಿದ್ದಾರೆ ಎಂಬುದು ತಿಳಿದಾಗ, ಅದರಲ್ಲೂ ತಾನೊಂದು ʻಬೋರಿಂಗ್‌ ಭೂಪʼ ಎಂಬುದು ಅರಿವಾದಾಗ ಒಮ್ಮೆ ಆಘಾತವಾಗುವುದು ಸಹಜ. ಹಾಗಾದರೆ ಬೋರಿಂಗ್‌ ಜನಗಳೆಂದರೆ ಯಾರು? ಅವರು ಹೇಗಿರುತ್ತಾರೆ? ಎಂಬೆಲ್ಲಾ ಪ್ರಶ್ನೆಗಳ ಬಗ್ಗೆ ಎಸೆಕ್ಸ್‌ ಮತ್ತು ಲಿಮೆರಿಕ್‌ ವಿಶ್ವವಿದ್ಯಾಲಯಗಳು ಹಾಗೂ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಮನೋವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಮಾತ್ರವಲ್ಲ, ಬಿಸಿನೆಸ್‌ ಇನ್‌ಸೈಡರ್‌ ನಿಯತಕಾಲಿಕವಂತೂ ಇನ್ನೂ ಒಂದಡಿ ಮುಂದೆ ಹೋಗಿ, ಇಂಥ ಪ್ರಶ್ನೆಗಳನ್ನು ಕ್ರೌಡ್‌ ಸೋರ್ಸ್‌ ವೇದಿಕೆಗಳಲ್ಲಿ ಜನರ ಮುಂದಿರಿಸಿದೆ. ಈ ಅಧ್ಯಯನಗಳ ಆಧಾರದ ಮೇಲೆ ಒಂದಿಷ್ಟು ಅಂಶಗಳನ್ನು ʻಬೋರಿಂಗ್‌ ಭೂಪʼರು ಹೊಂದಿರುತ್ತಾರೆ ಎನ್ನಲಾಗಿದ್ದು, ಯಾವುದಕ್ಕೂ ಇರಲಿ, ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ.

ಇದನ್ನೂ ಓದಿ | Cancer cure | ಕ್ಯಾನ್ಸರ್‌ಗೆ ತುತ್ತಾಗಲು ಮೂರೇ ಮೂರು ಕಾರಣಗಳು

ಸಿಕ್ಕಾಪಟ್ಟೆ ಟಿವಿ ನೋಡುತ್ತೀರಾ?: ಅತ್ಯಂತ ಕರಕರೆ ಹಿಡಿಸುವ ಹವ್ಯಾಸಗಳು ಯಾವುವು ಎಂಬ ಪ್ರಶ್ನೆಗೆ ಹೆಚ್ಚಿನ ಜನ ಉತ್ತರಿಸಿದ್ದು- ನಿದ್ದೆ ಮಾಡೋದು, ಟಿವಿ ನೋಡೋದು, ಪ್ರಾಣಿ ವೀಕ್ಷಣೆ, ಗಣಿತ ಮಾಡೋದು, ಧರ್ಮದ ಬಗ್ಗೆ ಚರ್ಚಿಸೋದು ಇತ್ಯಾದಿ. ಇವುಗಳಲ್ಲಿ ಯಾವುದಾದರಲ್ಲೂ ನೀವು ನಿಸ್ಸೀಮರೇ? ಸ್ವಲ್ಪ ಜಾಗ್ರತೆ ಮಾಡಿ.

ಕೋಲೆ ಬಸವನೆ?: ಯಾರೊಂದಿಗಾದರೂ ಚರ್ಚೆಯಲ್ಲಿ ಪಾಲ್ಗೊಂಡಾಗ ಸ್ವಂತ ಅಭಿಪ್ರಾಯ ವ್ಯಕ್ತಪಡಿಸದೆ, ಕೋಲೆ ಬಸವನಂತೆ ಎಲ್ಲದಕ್ಕೂ ತಲೆ ಹಾಕುವವರು ಈ ಪಟ್ಟಿನಲ್ಲಿ ಅಗ್ರಗಣ್ಯರೇ ಆಗಿದ್ದಾರೆ. ಮಾತ್ರವಲ್ಲ, ಚರ್ಚೆಯಲ್ಲಿ ಯಾರು ಎತ್ತ ಎಳೆದರೂ ಅತ್ತ ವಾಲುವವರು ಅಥವಾ ʻಗುಂಪಲ್ಲಿ ಗೋವಿಂದʼ ಎನ್ನುವವರೂ ಆಸಕ್ತಿಕರ ವ್ಯಕ್ತಿತ್ವದಡಿ ಬರುವುದಿಲ್ಲವಂತೆ.

ಮಾತು ಓತಪ್ರೋತವೇ?: ಹೀಗೆ ಪುಟಗಟ್ಟಲೆ ಸ್ವಗತ ಮಾತಾಡುವವರನ್ನು, ದುಡ್ಡು ಕೊಟ್ಟು ನಾಟಕದ ಟಿಕೆಟ್‌ ಖರೀದಿಸಿದವರು ಮಾತ್ರವೇ ಆನಂದಿಸಬಲ್ಲರೇನೋ! ಎದುರಿನವರಿಗೆ ʻಹೂಂʼ ಹಾಕಲೂ ಬಿಡದಂತೆ ಮಾತಾಡುವವರು ನೀವಾಗಿದ್ದರೆ, ಮುಂದಿನ ಬಾರಿ ನಿಮ್ಮನ್ನು ಕಾಣುತ್ತಿದ್ದಂತೆಯೇ ಅವರು ದಾರಿ ಬದಲಿಸಿಯಾರು, ಜೋಕೆ!

ಮೌನ ಬಂಗಾರವೇ?: ಅದೂ ಸ್ವಲ್ಪ ಕಷ್ಟ. ಮುಂದಿದ್ದವರ ಮಾತಿಗೆ ಕಿವಿಕೊಡುವ ಭರದಲ್ಲಿ ನೀವು ಜೀವಂತ ಇರುವ ಕುರುಹನ್ನೇ ತೋರಿಸದಿದ್ದರೆ…ಅವರ ಪಾಡೇನಾಗಬೇಕು? ಅವರ ಮಾತು ಒಪ್ಪಿಗೆ ಆಗದಿದ್ದರೆ ಅದನ್ನಾದರೂ ಹೇಳಿ, ಅಂತೂ ಬಾಯಿಬಿಡಿ.‌

ಇದನ್ನೂ ಓದಿ | ಸಂಸಾರ ಸರಿಗಮದಲ್ಲಿ ಬರುವ ಅಪಸ್ವರ ನಿವಾರಿಸಲು ಎಂಟು ಸೂತ್ರ

ಕಂಪ್ಲೇಂಟ್‌ ಬಾಕ್ಸ್!:‌ ಒಂದಿಲ್ಲೊಂದು ವಿಷಯದ ಬಗ್ಗೆ ಸದಾ ದೂರುತ್ತೀರಾ? ಹಾಗಿದ್ದರೆ ನಿಮ್ಮ ಬೆನ್ನಿಗೆ ಇಂಥದೇ ಹೆಸರಿಟ್ಟಿರುತ್ತಾರೆ. ʻಛೇ! ನನಗಂತೂ ಅದೃಷ್ಟವೇ ಇಲ್ಲʼ, ʻನನಗೆ ಸಿಗಬೇಕಾಗಿತ್ತು, ಅವರೆಲ್ಲಾ ಕಿತ್ಕೊಂಡ್ರುʼ, ʻನಾ ಸರಿಯಾಗೇ ಇದ್ದೆ, ಈ ಹಾಳು ಸರಕಾರದಿಂದ ಇದೆಲ್ಲಾ ಆಗಿದ್ದುʼ ಎನ್ನುವಂಥ ಮಾತುಗಳನ್ನು ಬಹಳಷ್ಟು ಕೇಳಿಯೇ ಇರುತ್ತೇವೆ. ಉಳಿದವರ ಹೆಗಲು ಇರುವುದೇ ನಮ್ಮ ಕಣ್ಣೀರಿಗಾಗಿ ಎಂಬ ಭಾವ ತೋರಿಸಿದರೆ ಹೇಗೆ?

ಕಥೆ ಕಟ್ಟಲಾರಿರಾ?: ವಿಷಯ ಯಾವುದೇ ಇರಲಿ, ಅದನ್ನು ಸ್ವಲ್ಪ ಮಣಿಮಣಿಯಾಗಿ ಪೋಣಿಸಿದರೆ ಜನರ ಮನ ಗೆಲ್ಲುತ್ತದೆ. ನಿಮ್ಮ ಖರ್ಚಿಗೆ ತಕ್ಕಷ್ಟು ಕಥೆ ಕಟ್ಟಲು ಬಂದರೆ ಜನರನ್ನು ಹಿಡಿದಿಡುವುದು ಕಷ್ಟವಲ್ಲ. ಹಾಗಂತ ತೀರಾ ಮಹಾಭಾರತ ಶುರು ಮಾಡಿದರೆ, ಜೋಗುಳ ಹಾಡಿದಂತಾದೀತು. ಉಪ್ಪು ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಇದೂ ಹಾಗೆಯೇ. ಒಳ್ಳೆ ಹದ ಇರಲಿ.

ಚ್ಯೂಯಿಂಗ್‌ ಗಮ್!:‌ ಜಿಗುಟು ವ್ಯಕ್ತಿಗಳಿಗೆ ಇಂಥ ಉಪಾಧಿಗಳು ಇರುವಂಥದ್ದೇ. ಅಂದರೆ, ಯಾವುದನ್ನೂ ಯಾರಿಗಾಗಿಯೂ ಬಿಟ್ಟುಕೊಡುವವರಲ್ಲ ಅವರು. ಹೀಗೆ, ʻನಾ ಕಂಡ ಮೊಲಕ್ಕೆ ಮೂರೇ ಕಾಲುʼ ಎಂದು ವಾದಿಸುವವರಿಗೆ ಸ್ನೇಹಿತರು ಸ್ವಲ್ಪ ಕಡಿಮೆಯೇ. ನಿಮಗೆ ಸ್ನೇಹಿತರು ಸಾಕಷ್ಟು ಇದ್ದಾರಲ್ಲವೇ?

ಜನ ಚೇಂಜ್‌ ಕೇಳ್ತಾರೆ: ಅನಾದಿ ಕಾಲದಿಂದಲೂ ಒಂದೇ ಬ್ರಾಂಡ್‌ ವಸ್ತ್ರಗಳು, ಒಂದೇ ರೀತಿಯ ಸಂಗೀತ ಕೇಳುವುದು, ಅದದೇ ಜಾಗಕ್ಕೆ ಪ್ರವಾಸ ಹೋಗುವುದು, ಅದೇ ರೆಸ್ಟೋರೆಂಟ್. ಅಲ್ಲಿಯೂ ಅದೇ ಆರ್ಡರ್‌, ಇಂಥದ್ದರಿಂದ ಕಷ್ಟ ನಿಮಗಲ್ಲ, ನಿಮ್ಮ ಜೊತೆಯವರಿಗೆ. ಜನ ಚೇಂಜ್‌ ಕೇಳ್ತಾರೆ ಕಣ್ರೀ, ಸ್ವಲ್ಪ ಬದಲಾಗಿ.

ಅಂತೂ ಹೇಗಿದ್ರೂ ಕಷ್ಟ ಅನ್ನುವ ತೀರ್ಮಾನಕ್ಕೆ ಈಗಾಗಲೇ ಕೆಲವರಾದರೂ ಬಂದಿರಬಹುದು. ಸುಮ್ನೆ ಅಲ್ಲ ನಮ್ಮ ನೆಚ್ಚಿನ ಕವಿ ಕೆ.ಎಸ್‌. ನರಸಿಂಹಸ್ವಾಮಿಯವರು ಬರೆದಿದ್ದು, ʻ…ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!ʼ ಎಂದು. ಆದರೂ, ಬದಲಾವಣೆ ಜಗದ ನಿಯಮವಲ್ಲವೇ?

Exit mobile version