Site icon Vistara News

Ragi Face Pack: ಹೊಟ್ಟೆಗೆ ರಾಗಿ ಮುದ್ದೆ! ಬ್ಯೂಟಿಗೆ ರಾಗಿ ಫೇಸ್‌ ಪ್ಯಾಕ್‌!

Ragi Face Pack

ಶೀಲಾ ಸಿ. ಶೆಟ್ಟಿ, ಬೆಂಗಳೂರು
ತಿನ್ನೋಕೆ ರಾಗಿ ಮುದ್ದೆ, ಬ್ಯೂಟಿಗೆ ರಾಗಿ ಫೇಸ್‌ ಪ್ಯಾಕ್‌ (Ragi Face Pack)! ಇದೀಗ ಬ್ಯೂಟಿ ಲೋಕದವರು ಕಂಡುಕೊಂಡ ಹೊಸ ಫೇಸ್‌ ಪ್ಯಾಕ್‌ ಮಂತ್ರವಿದು. ಅರೆ, ಇದೇನಿದು! ಹೊಟ್ಟೆಗೆ ತಿನ್ನುವ ನಮ್ಮ ಕರ್ನಾಟಕದ ಟ್ರೆಡಿಷನಲ್‌ ಫುಡ್‌ ಕಂಟೆಂಟ್‌ ಇದೀಗ ಫೇಸ್‌ ಪ್ಯಾಕ್‌ ಆಗಿ ಪರಿವರ್ತನೆಯಾಗಿದೆಯಾ ಎಂದುಕೊಳ್ಳುತ್ತಿದ್ದೀರಾ! ಹೌದು, ಬ್ಯೂಟಿ ಎಕ್ಸ್‌ಪರ್ಟ್‌ಗಳ ಪ್ರಕಾರ, ರಾಗಿ ಮುದ್ದೆಗೆ ಬಳಸುವ ಹಿಟ್ಟಿನಲ್ಲಿ ಫೇಸ್‌ ಪ್ಯಾಕ್‌ (Ragi Face Pack) ಸಿದ್ಧಪಡಿಸಿ ಯಶಸ್ವಿಯಾಗಿದ್ದಾರೆ. ನಿಧಾನಗತಿಯಲ್ಲಿ ಮಾನಿನಿಯರೂ ಕೂಡ ಪ್ರಯೋಗ ಮಾಡಲಾರಂಭಿಸಿದ್ದಾರಂತೆ. ಹಾಗೆನ್ನುತ್ತಾರೆ ಸೌಂದರ್ಯ ತಜ್ಞರು.

ಹೋಮ್‌ ಮೇಡ್‌ ಫೇಸ್‌ ಪ್ಯಾಕ್‌

ದೇಹಕ್ಕೆ ಪೌಷ್ಟಿಕಾಂಶ ನೀಡುವ ರಾಗಿ ಮುದ್ದೆ ಕನ್ನಡಿಗರ ಟ್ರೆಡಿಷನಲ್‌ ಮನೆಯೂಟದಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಊಟದ ಭಾಗವಾಗಿ ಸೇವಿಸುವುದು ಎಲ್ಲರಿಗೂ ಗೊತ್ತು! ಆದರೆ, ಇದುವರೆಗೂ ರಾಗಿಯನ್ನು ಮುಖದ ಸೌಂದರ್ಯಕ್ಕೆ ಬಳಸುವ ಬಗ್ಗೆ ಯಾರೂ ಯೋಚಿಸಿರಲಿಲ್ಲ! ಇದೀಗ ಹರ್ಬಲ್‌ ಹಾಗೂ ಹೋಮ್‌ಮೇಡ್‌ ಬ್ಯೂಟಿ ಫೇಸ್‌ ಪ್ಯಾಕ್‌ಗಳು ಪಾಪುಲರ್ ಆಗುತ್ತಿರುವ ಹಿನ್ನೆಲೆಯಲ್ಲಿ ಬ್ಯೂಟಿ ಎಕ್ಸ್‌ಪರ್ಟ್‌ಗಳು ಹಾಗೂ ಬ್ಲಾಗ್‌ಗಳು ಈ ರೀತಿಯ ಆಂಟಿ ಆಕ್ಸಿಡೆಂಟ್ಸ್, ವಿಟಮಿನ್ಸ್ ಹೊಂದಿರುವ ಕಾಳುಗಳ ಹಾಗೂ ನಿತ್ಯ ಸೇವನೆಗೆ ಬಳಸುವ ಹಿಟ್ಟುಗಳನ್ನು ಬಳಸಿ ಫೇಸ್‌ ಪ್ಯಾಕ್‌ ಪ್ರಯೋಗ ಮಾಡತೊಡಗಿದ್ದಾರೆ. ಅಚ್ಚರಿ ಎಂಬಂತೆ ಇವು ವರ್ಕೌಟ್‌ ಕೂಡ ಆಗಿವೆ ಎನ್ನುತ್ತಾರೆ ಸೌಂದರ್ಯ ತಜ್ಞರು. ಮೊದಮೊದಲಿಗೆ ನಾರ್ತ್ ಇಂಡಿಯಾದ ಬ್ಯೂಟಿ ತಜ್ಞರು ಇವನ್ನು ತಾವು ಹೊಸದಾಗಿ ಕಂಡು ಹಿಡಿದಂತೆ ಮಾನಿನಿಯರ ಮೇಲೆ ಪ್ರಯೋಗ ಮಾಡತೊಡಗಿದರು. ದಕ್ಷಿಣ ಭಾರತದವರಿಗೆ ಮೊದಲೇ ಈ ರಾಗಿ ಮುದ್ದೆ ಬಗ್ಗೆ ಗೊತ್ತಿದ್ದರಿಂದ ಯಾರಿಗೂ ಹೊಸತೇನು ಅನಿಸಲಿಲ್ಲ! ಬದಲಿಗೆ, ಆರಂಭದಲ್ಲಿ ಬಹಳಷ್ಟು ಮಂದಿ ನಕ್ಕರು ಕೂಡ. ಪ್ರಯೋಗಿಸದ ನಂತರ ರಿಸಲ್ಟ್‌ ಕೂಡ ಚೆನ್ನಾಗಿದ್ದರಿಂದ ಬಳಸಲಾರಂಭಿಸಿದರು.

ಯಶಸ್ವಿಯಾದ ಪ್ರಯೋಗ

ಇದಕ್ಕೆ ಪೂರಕ ಎಂಬಂತೆ, ಕೆಲವು ಲೋಕಲ್‌ ಬ್ಯೂಟಿ ಸಲೂನ್‌ಗಳು ಹಾಗೂ ಕಂಪನಿಗಳು ಹಣ್ಣು-ತರಕಾರಿ ಹಾಗೂ ಮಿಲ್ಲೆಟ್ಸ್‌ ಫೇಸ್‌ ಪ್ಯಾಕ್‌ ಜೊತೆ ಹೊಸದಾಗಿ ರಾಗಿ ಫೇಸ್‌ ಪ್ಯಾಕ್‌ ಸ್ಯಾಶೆಗಳನ್ನು ಬಿಡುಗಡೆ ಮಾಡಿದರು. ರಾಗಿ ಮುದ್ದೆ ಬಳಸದವರು, ಫೇಸ್‌ ಪ್ಯಾಕ್‌ ಸ್ಯಾಚೆಗಳನ್ನು ಪ್ರಯೋಗಿಸಿದರು. ಇನ್ನು ಕೆಲವು ಸ್ಥಳಿಯ ಮಹಿಳೆಯರು, ಮನೆಯ ಕಿಚನ್‌ನಲ್ಲೆ ದೊರಕುವ ರಾಗಿ ಹಿಟ್ಟನ್ನು ಬಳಸಿ, ತಾವೇ ಖುದ್ದು ಫೇಸ್‌ ಪ್ಯಾಕ್‌ ಸಿದ್ಧಪಡಿಸಿ, ಪ್ರಯೋಗಿಸಲಾರಂಭಿಸಿದರು ಎಂದು ವಿವರಿಸುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.

ಮನೆಯಲ್ಲೆ ಸಿದ್ಧ ಮಾಡಬಹುದಾದ ರಾಗಿ ಫೇಸ್‌ ಪ್ಯಾಕ್‌

2 ಟೇಬಲ್‌ ಸ್ಪೂನ್ ರಾಗಿ ಹಿಟ್ಟಿಗೆ 1 ಟೇಬಲ್‌ ಸ್ಪೂನ್‌ ಯೋಗರ್ಟ್, 1 ಟೀ ಸ್ಪೂನ್‌ ಜೇನು ತುಪ್ಪ, ಒಂದೆರೆಡು ಹನಿ ನಿಂಬೆ ರಸವನ್ನು ಮಿಶ್ರ ಮಾಡಿ. ಮುಖಕ್ಕೆ ಫೇಸ್‌ ಪ್ಯಾಕ್‌ ಮಾಡಿ. ಒಂದತ್ತು ನಿಮಿಷದ ನಂತರ ಮುಖ ತೊಳೆಯಬೇಕು. ಇದು ಮುಖದ ಕಾಂತಿ ಹೆಚ್ಚಿಸುತ್ತದೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇನ್ನೂ ಓದಿ: Fashion News: ರ‍್ಯಾಂಪ್‌ ಕಳೆ ಹೆಚ್ಚಿಸಿದ ವಜ್ರಾಭರಣಗಳ ಫ್ಯಾಷನ್ ಶೋ!

Exit mobile version