ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೈ ಬೆರಳಿನ ಒಂದೊಂದು ಉಗುರುಗಳ ಅಂದವನ್ನು ಹೆಚ್ಚಿಸುವ ನಾನಾ ಬಗೆಯ ಆರ್ಟಿಫಿಶಿಯಲ್ ನೇಲ್ ಕಿಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಊಹೆಗೂ ಮೀರಿದ ಚಿತ್ರ-ವಿಚಿತ್ರ ಡಿಸೈನ್‌ನಲ್ಲಿ ಇವು ಲಭ್ಯವಿದ್ದು, ಹೆಣ್ಣುಮಕ್ಕಳನ್ನು ಆಕರ್ಷಿಸಿವೆ.
ನಿಮ್ಮ ಉಗುರುಗಳು ಸುಂದರವಾಗಿಲ್ಲವೇ! ಆಗಾಗ ಮುರಿದು ಹೋಗುತ್ತದೆಯೇ? ಕಾರ್ಯಕ್ರಮಗಳಿಗೆ ಹೋಗುವಾಗ ಇವನ್ನು ಸುಂದರವಾಗಿ ಬಿಂಬಿಸಬೇಕು ಎಂದನಿಸುತ್ತದೆಯೇ? ಹಾಗಾದಲ್ಲಿ ಯೋಚನೆ ಬಿಡಿ. ನಾನಾ ವಿನ್ಯಾಸದಲ್ಲಿ ಲಭ್ಯವಿರುವ ಆರ್ಟಿಫಿಷಿಯಲ್ ನೇಲ್ಸ್ ಕಿಟ್ ಕೊಳ್ಳಿ. ಒಂದೊಂದಾಗಿ ಉಗುರುಗಳಿಗೆ ಅಂಟಿಸಿ. ನಂತರ ನೀವೇ ನಂಬಲಾರದಷ್ಟು ಸುಂದರ ತಾತ್ಕಾಲಿಕ ಉಗುರುಗಳು ನಿಮ್ಮದಾಗುತ್ತವೆ ಎನ್ನುತ್ತಾರೆ ನೇಲ್ ಕಿಟ್ ಮಾರಾಟಗಾರರು.
ಏನಿದು ಆರ್ಟಿಫಿಷಿಯಲ್ ನೇಲ್ಸ್?
ನಮ್ಮ ನೈಜ ಉಗುರಿನ ಮೇಲೆ ತಾತ್ಕಾಲಿಕವಾಗಿ ಅಂಟಿಸಬಹುದಾದ ಕೃತಕ ಉಗುರುಗಳಿವು. ನೇಲ್ ಕಿಟ್‌ನಲ್ಲಿ ದೊರೆಯುವ ಇವನ್ನು ಗಮ್ ಬಳಸಿ, ಉಗುರಿನ ಮೇಲೆ ಅಂಟಿಸಬೇಕಾಗುತ್ತದೆ. ಹಾಗಾಗಿ ಇವನ್ನು ಪ್ರೆಸ್ ಆನ್ ನೇಲ್ಸ್ ಎಂದು ಕೂಡ ಹೇಳಲಾಗುತ್ತದೆ. ಉಗುರುಗಳಿಗೆ ಡಿಸೈನ್ ಮಾಡಿಸಲು ನಮಗೆ ಸಾಧ್ಯವಾಗದಿದ್ದಾಗ ಅಥವಾ ನೇಲ್ ಬಾರ್‌ಗೆ ಹೆಚ್ಚು ಹಣ ಸುರಿಯಲು ಸಾಧ್ಯವಿಲ್ಲದಿದ್ದಾಗ ಈ ಪ್ರೆಸ್ ಆನ್ ನೇಲ್ಸ್ ಖರೀದಿಸಿ ಅಂಟಿಸಿಕೊಂಡು ಸಂತಸ ಪಡಬಹುದು. ಇವು ಕೂಡ ನೋಡಲು ಆಕರ್ಷಕವಾಗಿ ಕಾಣುತ್ತವೆ. ದುಬಾರಿಯೂ ಅಲ್ಲ ಎನ್ನುತ್ತಾರೆ ನೇಲ್ ಡಿಸೈನರ್ಸ್.
ಪ್ರೆಸ್ ಆನ್ ನೇಲ್ಸ್ ಎಲ್ಲೆಡೆ ಲಭ್ಯ
ಸಾಮಾನ್ಯ ಫ್ಯಾನ್ಸಿ ಶಾಫ್‌ಗಳಲ್ಲೂ ಇವು ಇದೀಗ ಲಭ್ಯ. ಆರ್ಟಿಫಿಶಿಯಲ್ ನೇಲ್ಸ್ ಎಂದು ಕೇಳಿ ಪಡೆದರಾಯಿತು. ಇದರೊಂದಿಗೆ ಅಂಟಿಸಲು ಗಮ್ ಕೂಡ ದೊರೆಯುತ್ತದೆ. ನೀವು ಧರಿಸುವ ಡಿಸೈನರ್‌ವೇರ್‌ಗೆ ಮ್ಯಾಚ್ ಆಗುವ ನೇಲ್ ಕಲರ್ ಹಾಗೂ ಡಿಸೈನ್‌ಗಳಲ್ಲೂ ಇವು ದೊರೆಯುತ್ತವೆ. ಹುಡುಕಬೇಕಷ್ಟೇ!
ಟ್ರೆಂಡಿಯಾಗಿರುವ ನೇಲ್ ಡಿಸೈನ್‌ಗಳು
ಮನೆಯಲ್ಲಿ ಉಗುರಿಗೆ ಮಾಡಲಾಗದ ಡಿಸೈನ್‌ಗಳು ಈ ಪ್ರೆಸ್ ಆನ್ ನೇಲ್ ಕಿಟ್‌ನಲ್ಲಿ ದೊರೆಯುತ್ತವೆ. ನೇಲ್ ಡಿಸೈನಿಂಗ್ ಕೂಡ ಒಂದು ಕಲೆ. ಊಹೆಗೂ ಮೀರಿದ ನಾನಾ ಡಿಸೈನ್‌ಗಳನ್ನು ಸೂಕ್ಮವಾಗಿ ಈ ಕೃತಕ ನೇಲ್‌ಗಳ ಮೇಲೆ ಚಿತ್ರಿಸಲಾಗಿರುತ್ತದೆ. ಇಂತಹ ಡಿಸೈನ್ ಇರುವ ಕೃತಕ ನೇಲ್‌ಗಳು ಇಂದು ಟ್ರೆಂಡಿಯಾಗಿವೆ.
ಪ್ರೆಸ್ ಆನ್ ನೇಲ್ಸ್ ಪ್ರಿಯರ ಗಮನಕ್ಕಿರಲಿ
ಉಗುರಿಗೆ ಅಂಟಿಸಿದ ನಂತರ ನೀರು ಹೆಚ್ಚು ಸೋಕಿಸಬಾರದು.
ಕೃತಕ ನೇಲ್ ಅಂಟಿಸಿದ ಬೆರಳುಗಳಿಂದ ಕೆಲಸ ಮಾಡಿದಲ್ಲಿ ಮುರಿದು ಹೋಗಬಹುದು.
ಒಂದು ಬಾರಿ ಹಚ್ಚಿದಲ್ಲಿ ಸುಮಾರು ೪-೫ ದಿನ ಬಾಳಿಕೆ ಬರುವುದು.
ನಿರ್ವಹಣೆ ಕೊಂಚ ಕಷ್ಟ ಎಂಬುದು ಮೊದಲೇ ತಿಳಿದಿರಲಿ.
ನಿಮ್ಮ ಉಗುರಿನ ಆಕಾರಕ್ಕೆ ತಕ್ಕಂತ ಶೇಪ್ ಇರುವುದನ್ನು ಆಯ್ಕೆ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ| Gown Fashion | ಪ್ರಿ ವೆಡ್ಡಿಂಗ್ ಫೋಟೋಶೂಟ್ ಫ್ಯಾಷನ್‌ನಲ್ಲಿ ಕಲರ್‌ಫುಲ್ ಗೌನ್‌ಗಳದ್ದೇ ಹವಾ