ಒಬ್ಬರೇ ಅಥವಾ ಗೆಳೆಯರೊಂದಿಗೋ ರೂಮಿನಲ್ಲಿದ್ದುಕೊಂಡು ಅಡುಗೆ ಎಂಬ ಮಂತ್ರದಂಡದಿಂದ ಏನೆಲ್ಲ ಛೂಮಂತ್ರಗಳನ್ನು ಮಾಡಿ ಹೊಟ್ಟೆ ತುಂಬಿಸಿಕೊಳ್ಳೋ ವಿದ್ಯೆ ಗೊತ್ತಿದ್ದರೆ ಬದುಕು ಸುಲಭ. ದಿನವೂ ರೆಸ್ಟೋರೆಂಟಿಗೆ ಎಡತಾಕುತ್ತಾ ಬೇರೆ ಬೇರೆ ಹೆಸರುಗಳಲ್ಲಿ ಕೊಡುವ ಹೆಚ್ಚು ಕಡಿಮೆ ಅವವೇ ರೆಸಿಪಿಗಳು ಬ್ರಹ್ಮಚಾರಿ/ಣಿಯ ಹೊಟ್ಟೆಯನ್ನು ಸಂತೃಪ್ತವಾಗಿ ಹೇಗೆ ಇಟ್ಟೀತು! ಅದಕ್ಕೇ ಈ ʻಬ್ಯಾಚುಲರ್ ನಳಪಾಕʼ ಅಡುಗೆಯೇನೂ ಬ್ರಹ್ಮವಿದ್ಯೆಯಲ್ಲ ಎಂದು ಯಾವ ಬ್ರಹ್ಮಚಾರಿ/ಣಿಯೂ ಸಾಬೀತುಪಡಿಸುವ ಕಾರ್ನರ್ ಇದು.
ಇನ್ನರ್ಧ ಗಂಟೆಯಷ್ಟೇ ಇದೆ, ಆಫೀಸಿಗೆ ಹೊರಡಬೇಕು, ಎದ್ದದ್ದೇ ಲೇಟು, ಅದೇ ಬ್ರೆಡ್ ಆಮ್ಲೆಟ್ಟು, ತಪ್ಪಿದರೆ ಮ್ಯಾಗಿ. ಎಷ್ಟು ಅಂತ ಅವನ್ನೇ ತಿನ್ನೋದು? ಆಫೀಸು ಕ್ಯಾಂಟೀನಿನ ದಿನದ ಮೆನುವೇ ಗತಿ ಎಂದು ಗಡಿಬಿಡಿಯಲ್ಲಿ ಸ್ನಾನ ಮುಗಿಸಿ ಬೈಕು /ಸ್ಕೂಟಿ ಹತ್ತಿದರೆ ಮತ್ತೆ ರೂಮು ನೆನಪಾಗುವುದು ಕೆಲಸ ಮುಗಿದಾಗಲೇ. ರಾತ್ರಿ ಏನು ತಿನ್ನೋದು ಅಂತ ನೆನಪಾಗೋದು ಖಂಡಿತ ಆಮೇಲೆಯೇ. ಪ್ರತಿ ಬ್ಯಾಚುಲರ್ ಲೈಫಿನಲ್ಲಿ ಬಂದುಹೋಗುವ ಅಬ್ಬೇಪಾರಿ ದಿನಗಳಿವು. ಅದಕ್ಕಾಗಿ ಒಂದಿಷ್ಟು ಸುಲಭೋಪಾಯದ ಅಡುಗೆಗಳು ಗೊತ್ತಿದ್ದರೆ, ಫಟಾಫಟ್ ಸವಿರುಚಿಗಳು ಹೆಚ್ಚು ಶ್ರಮವಿಲ್ಲದೆ ದಿಢೀರ್ ಪ್ರತ್ಯಕ್ಷವಾಗುವಂತಿದ್ದರೆ, ನಮ್ಮ ಆರೋಗ್ಯ ನಮ್ಮ ಕೈಲಿಟ್ಟುಕೊಂಡೇ ಬ್ಯಾಚುಲರ್‌ಗಳು ಬ್ರಹ್ಮಾನಂದ ಹೊಂದಬಹುದು. ಗಂಟೆಗಟ್ಟಲೆ ತಲೆಹರಟೆ ಕೆಲಸವಿದು ಎಂಬ ಯೋಚನೆಯನ್ನು ತಲೆಯಿಂದ ಕಿತ್ತೆಸೆದು, ಅಡುಗೆ ಎಂಬೊಂದು ಜೀವನಕೌಶಲ್ಯವನ್ನು ಸಣ್ಣ ವಯಸ್ಸಿನಲ್ಲೇ ಮೈಗೂಡಿಸಿಕೊಳ್ಳಬಹುದು!
ಅರ್ಧ ಗಂಟೆಯಾದರೂ ಹೊರಡೋ ಮುಂಚೆ ಇದೆ ಅಂದಿಟ್ಟುಕೊಳ್ಳಿ. ತಯಾರಿ ಏನೇನೂ ಮಾಡಿಟ್ಟುಕೊಂಡಿಲ್ಲ. ಸ್ನಾನ ಮುಗಿಸಿ ರೆಡಿಯಾಗಿ ಹೊರಬರುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತದೆ ಎಂಬ ಪರಮ ಸತ್ಯ ಗೊತ್ತಿರುವಾಗ, ಸ್ನಾನಕ್ಕೆ ಹೊರಡೋ ಮೊದಲೇ ಒಂದರ್ಧ ಗಂಟೆ ಸಮಯ ಮಾಡಿಕೊಂಡು, ಬಾಣಲೆಯಲ್ಲಿ ಎಣ್ಣೆ ತೆಗೆದುಕೊಳ್ಳಿ. ಸಾಸಿವೆ, ಜೀರಿಗೆ ಸಿಡಿಸಿ. ಕರಿಬೇವು, ಹಸಿಮೆಣಸೂ ಸಿಗಿದು ಹಾಕಿ. ಇಷ್ಟು ಮಾಡ್ತಾ ಇರೋವಾಗ ಬದಿಯಲ್ಲಿ ನಿಮ್ಮ ಅಥವಾ ನಿಮ್ಮ ಜೊತೆಗಿರುವವರ ಹೊಟ್ಟೆ ತುಂಬುವಷ್ಟು ದಪ್ಪವಲಕ್ಕಿಗೆ ನೀರು ಚಿಮುಕಿಸಿ ನೆನೆಸಿಡಿ. ಬಾಣಲೆಗೆ ಒಂದೆರಡು ಈರುಳ್ಳಿ ಹೆಚ್ಚಿ ಹಾಕಿ. ನೆಲಗಡಲೆಯನ್ನೂ ಹಾಕಿ ಹುರಿಯಿರಿ. ಮೊದಲೇ ಪ್ಲಾನ್ ಮಾಡಿದ್ರೆ ಎದ್ದ ಕೂಡಲೇ ಆಲೂಗಡ್ಡೆಯನ್ನು ಬೇಯಿಸಿ ಇಟ್ಕೋಬಹುದಾಗಿತ್ತಲ್ಲ ಅಂತ ಈಗ ನಿಮಗನಿಸಬಹುದು. ಅದನ್ನೂ ಹಾಕಿದ್ರೆ ಇನ್ನೂ ರುಚಿಯಾಗಿ ಮಾಡಬಹುದಿತ್ತಲ್ಲ ಅಂತ ಅನಿಸಿದಾಗ ನೀವೇ ನೀವಾಗಿ, ಮುಂದಿನ ಸಲ ಮೊದಲೇ ಜಾಗೃತರಾಗಿ, ಆಲೂಗಡ್ಡೆ ಖಂಡಿತವಾಗಿಯೂ ಬೇಯಿಸಿ ಇಟ್ಟುಕೊಂಡಿರುತ್ತೀರಿ.
ಇದನ್ನೂ ಓದಿ: ಪ್ರಾಚೀನ ಭಾರತದ ಈ 5 ಆಹಾರಗಳನ್ನು ಜನರು ಈಗಲೂ ಸೇವಿಸುತ್ತಾರೆ
ಹೋಗಲಿ ಬಿಡಿ, ಆಪತ್ಬಾಂಧವನಂತೆ ಈರಳ್ಳಿ, ನೆಲಗಡಲೆ ಇದೆಯಲ್ಲ, ಹೆಚ್ಚಿ ಹಾಕಿ ಪೋಹಾ ಮಾಡಿ ಹೊಟ್ಟೆಗಿಳಿಸಿದ್ರೆ ಮುಗೀತು ಅಂತ ಗೊಣಗುತ್ತಾ ಈಗ ನೀವು ಸ್ವಲ್ಪ ಅರಿಶಿನ ಪುಡಿ ಉದುರಿಸಿ. ಇಂಗು ಇದ್ದರೆ ಸ್ವಲ್ಪ ಹಾಕಬಹುದು. ಒಂದು ನಿಂಬೆಹಣ್ಣಿನ ರಸ ಹಿಂಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಕ್ಕರೆಯನ್ನೂ ಸೇರಿಸಿ, ಈಗ ನೆನೆಸಿದ ದಪ್ಪವಲಕ್ಕಿ ಸೇರಿಸಿ ಹದವಾಗಿ ಬೆರೆಸಿ. ಈಗ ನಿಮ್ಮ ಅರ್ಜೆಂಟ್ ಪೋಹಾ ರೆಡಿ.
ಅರ್ಧ ಗಂಟೇಲಿ ಇದನ್ನು ಮಾಡಬಹುದು ಅಂತ ಕಿಚನ್‌ಗೆ ಮೊದಲ ಬಾರಿಗೆ ಪಾದಾರ್ಪಣೆ ಮಾಡ್ತಾ ಇದ್ದರೆ, ಅದು ಸುಳ್ಳಾಗಬಹುದು. ಸರಿಯಾದ ರುಚಿಬರಲು ಎಷ್ಟು ಉಪ್ಪು ಹಾಕಬೇಕು ಎಂದೆಲ್ಲ ಬುಡದಿಂದ ಪ್ರಶ್ನೆ ಕೇಳಲು ಹೊರಟರೆ, ನೀವಿನ್ನೂ ಒಂದೆರಡು ಸಾರಿ ಸರ್ಕಸ್ ಮಾಡಿ, ಒಮ್ಮೆ ಉಪ್ಪು ಹೆಚ್ಚುಕಡಿಮೆಯಾಗಿ ಅವಾಂತರ ಮಾಡಿಕೊಂಡರಷ್ಟೆ ಕಲಿಯುವ ಹಂತದಲ್ಲಿದ್ದೀರಿ ಎಂದೇ ಅರ್ಥ. ಅರ್ಧ ಗಂಟೆ ಟೈಮರ್ ಇಟ್ಟು ಯಾವ ಸಾಮಾನೂ ಸರಿಯಾಗಿರದ ಅಡುಗೆ ಮನೆಗೆ ದಿಡೀರ್ ಎಂಟ್ರಿ ಕೊಟ್ಟು ಪೋಹಾ ಮಾಡಲು ಹೊರಟು ತಲೆಬಿಸಿ ಮಾಡುವ ಮೊದಲು ಅಂಗಡಿಗೆ ಹೋಗಿ, ಒಂದು ಸಾದಾ ಸಾಮಾನ್ಯ ಅಡುಗೆ ಮನೆಯಲ್ಲಿರಬಹುದಾದ ಸಾಮಾನ್ಯ ವಸ್ತುಗಳು ಯಾವುವು ಎಂದು ಒಂದೆರಡು ದಿನ ತಲೆಕೆಡಿಸಿಕೊಂಡು, ಅಮ್ಮನಲ್ಲೋ, ಹಿತೈಷಿಗಳಲ್ಲೋ ಕೇಳಿ ತಯಾರು ಮಾಡೋದು ಒಳ್ಳೇದು. ಇಲ್ಲದಿದ್ದಲ್ಲಿ, ಈ ಅಡುಗೆ ಒಂದು ಗಂಟೆ ಸಮಯ ತೆಗೆದುಕೊಂಡು ತಡವಾಯಿತು ಅಂತ ಬೊಬ್ಬಿರಿದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಹುಷಾರು!
ಇದನ್ನೂ ಓದಿ: World Food Safety Day: ನಿಮ್ಮ ಆಹಾರ ಆರೋಗ್ಯಕರ ಎನಿಸಬೇಕಾದರೆ…