ಬೇಸಗೆ ಬರುತ್ತಿದ್ದರೆ ಸಾಕು, ಎಲ್ಲೇ ಹೋಗಲಿ, ಮಾನಿನಿಯರ ಮುಖದರ್ಶನ ಕಷ್ಟ. ಸೂರ್ಯ ಪ್ರಕಾಶಮಾನವಾಗಿ ಉರಿಯಲು ಶುರು ಮಾಡಿದ ತಕ್ಷಣ ಹುಡುಗಿಯರು ಸೂರ್ಯನ ಝಳಕ್ಕೆ ತಮ್ಮ ಮುಖದ ಚರ್ಮವೆಲ್ಲಿ ಬಾಡಿಹೋದೀತು ಎಂದು ಗಲಿಬಿಲಿಗೊಳಗಾಗಿ ಕಣ್ಣು ಮಾತ್ರ ಕಾಣುವಂತೆ ಮುಖಕ್ಕೆ ಸ್ಕಾರ್ಫ್ ಬಿಗಿದುಕೊಂಡು ತಮ್ಮ ಸ್ಕೂಟಿ ಏರುತ್ತಾರೆ. ಆದರೂ ಸನ್‌ಬರ್ನ್, ಮೊಡವೆ, ಕಜ್ಜಿ, ಬೆವರುಸಾಲೆ, ಕಪ್ಪುಕಲೆಯಂತಹ ಸಮಸ್ಯೆಗಳು ಕಾಡದೆ ಬಿಡುವುದಿಲ್ಲ. ಹಾಗಾದರೆ ಈಗ ಬರುತ್ತಿರುವ ಬೇಸಿಗೆಯಲ್ಲಿ ಬಿಡದೆ ಕಾಡುವ ಉಷ್ಣದ ಅಲೆಯಿಂದ ಪಾರಾಗುವುದು ಹೇಗೆ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆ (beauty tips) ಎಂಬ ವಿವರಗಳು ಇಲ್ಲಿವೆ.
ಎಲ್ಲ ಹೆಂಗಳೆಯರೂ ಮೊದಲು ಮುಖ ಮುಚ್ಚಿಕೊಳ್ಳುವಲ್ಲಿ ಮಾತ್ರ ಗಮನ ಕೊಟ್ಟರೆ ಹೇಗೆ ಹೇಳಿ? ಬೇಸಗೆಯಲ್ಲಿ ಚರ್ಮ ಕಾಂತಿಯುಕ್ತವಾಗಿರಬೇಕಾದರೆ, ಕೇವಲ ಮುಖದ ಲೇಪನ, ಸೂರ್ಯನ ಬಿಸಿಲಿನಿಂದ ರಕ್ಷಿಸಿಕೊಂಡರಷ್ಟೇ ಸಾಲದು. ಬ್ಯೂಟಿಪಾರ್ಲರಿಗೆ ಎಷ್ಟು ಬಾರಿ ಎಡತಾಕಿದರೂ ನಮ್ಮ ಆಹಾರ ಕ್ರಮ, ಜೀವನಕ್ರಮದಲ್ಲಿ ಕೊಂಚ ಮಾರ್ಪಾಡು ಮಾಡಿಕೊಳ್ಳುವುದರಿಂದ ಆರೋಗ್ಯಕರ ಸೌಂದರ್ಯ ಒಳಗಿನಿಂದ ಚಿಮ್ಮುತ್ತದೆ ಎಂಬ ಸಾಮಾನ್ಯ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಸಿಂಪಲ್ ಆಹಾರದತ್ತ ಹೊರಳುವುದು ಉತ್ತಮ. ರಸಂ, ತೊವ್ವೆ, ತಂಬುಳಿ, ಮಜ್ಜಿಗೆ, ಪಲ್ಯದಂತಹ ಸರಳ ಅಡುಗೆಗಳು ಬೇಸಿಗೆಯಲ್ಲಿ ಸೂಕ್ತ.
ಇದರ ಜೊತೆಗೆ ಸ್ನ್ಯಾಕ್ ಟೈಂನಲ್ಲಿ ನೀರು ಮಜ್ಜಿಗೆ, ಲಸ್ಸಿ, ಎಳನೀರು, ನಿಂಬೆ ಜ್ಯೂಸ್, ತಾಳೆಹಣ್ಣು, ಕೋಕಂ ಜ್ಯೂಸ್, ಖರ್ಬೂಜ ಹಾಗೂ ಕಲ್ಲಂಗಡಿ ಜ್ಯೂಸ್ ಮತ್ತಿತರ ಪಾನೀಯಗಳನ್ನು ತೆಗೆದುಕೊಳ್ಳಬಹುದು. ಸೌತೆಕಾಯಿ, ಮೊಳಕೆಕಾಳುಗಳೂ ಕೂಡಾ ಒಳ್ಳೆಯದು. ಕುರುಕಲು, ತುಂಬ ಸ್ಟಾರ್ಚ್ ಇರುವಂತಹ ಆಹಾರಗಳು, ಕಾರ್ಬೋನೇಟೆಡ್ ಡ್ರಿಂಕ್‌ಗಳು, ಮಾರುಕಟ್ಟೆಯಲ್ಲಿ ಸಿಗುವ ಟೆಟ್ರಾಪ್ಯಾಕ್ ಜ್ಯೂಸ್‌ಗಳು, ಆಲ್ಕೋಹಾಲ್ ಇತ್ಯಾದಿಗಳನ್ನು ಸೇವಿಸದಿರುವುದು ಉತ್ತಮ. ಆಗಾಗ ನೀರು ಸೇವಿಸುತ್ತಿರುವುದು ಅತ್ಯಂತ ಸುಲಭ ಹಾಗೂ ಸರಳ ಉಪಾಯವಷ್ಟೇ ಅಲ್ಲ, ಸೌಂದರ್ಯದ ಗುಟ್ಟೂ ಕೂಡಾ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
೧. ಬಿಸಿಲಿನ ಝಳಕ್ಕೆ ಕೈಕಾಲುಗಳು ಉರಿದಂತೆ ಅನಿಸುವುದುಂಟು. ಹೀಗಾದಲ್ಲಿ, ಹಾಗಲಕಾಯಿಯನ್ನು ಉರುಟಾಗಿ ಕತ್ತರಿಸಿ ಅದರಿಂದ ಕೈಕಾಲಿನ ಚರ್ಮಕ್ಕೆ ಉಜ್ಜಿಕೊಳ್ಳಬಹುದು. ಉರಿ ಶಮನವಾಗುತ್ತದೆ.
೨. ಇನ್ನೂ ಕೆಲವರಿಗೆ ಅತೀವ ಬಿಸಿಲಿನಿಂದ ಕಣ್ಣೂ ಉರಿದಂತಾಗಬಹುದು. ಅಂಥವರು ಯಾವಾಗಲೂ ಮನೆಯಲ್ಲಿ ಟೀಬ್ಯಾಗ್‌ಗಳನ್ನು ಫ್ರಿಡ್ಜ್‌ನಲ್ಲಿಟ್ಟಿರುವುದು ಒಳ್ಳೆಯದು. ಬಳಸಿದ ಟೀ ಬ್ಯಾಗ್‌ಗಳನ್ನು ಶೇಖರಿಸಿಟ್ಟರೂ ಓಕೆ. ಹೀಗೆ ತಂಪಾದ ಟೀ ಬ್ಯಾಗನ್ನು ಮನೆಗೆ ಬಂದ ಮೇಲೆ ಫ್ರಿಡ್ಜ್‌ನಿಂದ ತೆಗೆದು ಕಣ್ಣ ಮೇಲಿಟ್ಟುಕೊಂಡು ಸ್ವಲ್ಪ ಹೊತ್ತು ರಿಲ್ಯಾಕ್ಸ್ ಮಾಡಿ. ಸೌತೆಕಾಯಿಯ ಉರುಟಾದ ಹೋಳನ್ನೂ ಹೀಗೆ ಕಣ್ಣಿನ ಮೇಲಿಟ್ಟುಕೊಳ್ಳಬಹುದು.
೩. ಬಾಡಿಹೋದ ಮುಖಕ್ಕೆ ತಾಜಾ ಅನುಭೂತಿ ನೀಡಲು, ರೋಸ್‌ವಾಟರ್ ಫ್ರಿಡ್ಜ್‌ನಲ್ಲಿಟ್ಟು ಅದನ್ನು ಚಿಮುಕಿಸಿಕೊಳ್ಳುತ್ತಿರಬಹುದು. ಅಮ್ಮಂದಿರು ಬಿಸಿಲಲ್ಲಿ ಆಟವಾಡಿ ಬಂದ ತಮ್ಮ ಮಕ್ಕಳಿಗೂ ಇದನ್ನು ಮಾಡಬಹುದು.
ಇದನ್ನೂ ಓದಿ: Twinkle Khanna: ಸುಕ್ಕಿನ ನಿರಿಗೆಗಳು ಪಾರಿತೋಷಕಗಳಂತೆ: ಟ್ವಿಂಕಲ್ ಖನ್ನಾ ಸೌಂದರ್ಯ ಮೀಮಾಂಸೆ
೪. ಯಾವತ್ತಿಗೂ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಬಿಸಾಡಬೇಡಿ. ಹೊರಗೆ ಹೋಗುವ ಮೊದಲು ಕಲ್ಲಂಗಡಿ ಸಿಪ್ಪೆಯಿಂದ ಕೈಕಾಲಿನ ಚರ್ಮಕ್ಕೆ ಉಜ್ಜಿಕೊಂಡು ಹೊರಗೆ ಹೋಗಿ. ಇದರಿಂದ ಚರ್ಮಕ್ಕೆ ಬೇಕಾದ ತೇವಾಂಶ ಸಿಗುವುದಲ್ಲದೆ, ಚರ್ಮ ಉರಿದಂತಾಗುವುದು ಕಡಿಮೆಯಾಗುತ್ತದೆ. ಅಲ್ಲದೆ ಬೆವರುಸಾಲೆ, ಕಜ್ಜಿಯೂ ಉಂಟಾಗುವುದಿಲ್ಲ.
೫. ಚರ್ಮದ ಮೇಲಿರುವ ಮೊಡವೆಗಳ ಕುಳಿಗಳು, ಕಪ್ಪುಕಲೆಗಳು ಬಿಸಿಲಿನ ಝಳದಲ್ಲಿ ಇನ್ನಷ್ಟು ಕಪ್ಪಗಾಗಿ ಕೆಟ್ಟದಾಗಿ ಕಾಣುತ್ತಿದ್ದರೆ, ಟೊಮೇಟೋ ರಸವನ್ನು ಮುಖಕ್ಕೆ ಹಚ್ಚಿ.
೬. ತಲೆಯ ಮೇಲೆ ಕೂದಲ ಬುಡದಲ್ಲಿ ಕಜ್ಜಿ, ತುರಿಕೆಗಳಾಗುತ್ತಿದ್ದರೆ ಕಹಿಬೇವಿನ ಸೊಪ್ಪನ್ನು ನೀರಿನಲ್ಲಿ ಕುದಿಸಿ ತಣಿಸಿ ಶಾಂಪೂ ಹಾಕಿ ಸ್ನಾನ ಮಾಡಿದ ಮೇಲೆ ಈ ಕಹಿಬೇವಿನ ನೀರಿನಿಂದ ತೊಳೆಯಿರಿ.ಮುಲ್ತಾನಿ ಮಿಟ್ಟಿಯನ್ನು ಮೊಸರಿನಲ್ಲಿ ಕಲಸಿ ತಲೆಯಲ್ಲಾದ ಕಜ್ಜಿಗಳಿಗೆ ಹಚ್ಚಿದರೂ ಪರಿಹಾರ ಸಿಗುತ್ತದೆ.
೭. ಬಿಸಿಲಿನಿಂದಾಗಿ ಬೆವರು ಅತೀವ ವಾಸನೆ ಬರುತ್ತಿದ್ದರೆ, ಸಿಂಥೆಟಿಕ್ ಬಟ್ಟೆಗಳನ್ನು ಧರಿಸದೆ ಹತ್ತಿ ಅಥವಾ ಟಸ್ಸಾರ್ ಬಟ್ಟೆಗಳನ್ನು ಧರಿಸಿ. ಲಿನಿನ್ ಕೂಡಾ ಬೇಸಿಗೆಗೆ ಒಳ್ಳೆಯ ಆಯ್ಕೆ. ಸ್ನಾನದ ನೀರಿಗೆ ಲ್ಯಾವೆಂಡರ್, ನಿಂಬೆ, ಜೆರಾನಿಯಂ ಮತ್ತಿತರ ಎಸೆನ್ಶಿಯಲ್ ಎಣ್ಣೆಯನ್ನು ಕೂಡಾ ಸೇರಿಸಿ ಸ್ನಾನ ಮಾಡಬಹುದು. ಸೀ ಸಾಲ್ಟ್, ನಿಂಬೆ ಹೋಳು, ಮಲ್ಲಿಗೆ ಹೂಗಳ್ನು ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡಬಹುದು.
ಇದನ್ನೂ ಓದಿ: Prerane | ಮನಸ್ಸಿನ ಸ್ಥಿಮಿತದಲ್ಲಿದೆ ಬದುಕಿನ ಸೌಂದರ್ಯ