Site icon Vistara News

Yoga Day 2023 : ಯೋಗ ಕಲಿಸುವುದು ಈಗ ಲಾಭದಾಯಕ ವೃತ್ತಿ! ಏನೇನು ಲಾಭವಿದೆ ನೋಡಿ

Choosing Yoga as a Career

#image_title

ಬೆಂಗಳೂರು: ಶಿಕ್ಷಣ ಮುಗಿದ ಮೇಲೆ ಕೆಲಸ ಹುಡುಕುವುದು ದೊಡ್ಡದೊಂದು ತಲೆ ನೋವು. ಓದಿದ ಶಿಕ್ಷಣಕ್ಕೆ ಅನುಸಾರವಾಗಿಯೇ ವೃತ್ತಿ ಮಾಡಬೇಕೇ ಅಥವಾ ಮನಸ್ಸಲ್ಲಿ ಆಸಕ್ತಿ ಇರುವ ಬೇರೊಂದು ಕೆಲಸವನ್ನು ಮಾಡಬೇಕೇ ಎನ್ನುವ ಗೊಂದಲಕ್ಕೆ ಒಳಗಾಗಿಬಿಡುತ್ತೇವೆ. ಎಷ್ಟೋ ಮಂದಿ ಯೋಗವನ್ನು (Yoga Day 2023) ಇಷ್ಟಪಟ್ಟು ಅದನ್ನೇ ವೃತ್ತಿಯಾಗಿ ತೆಗೆದುಕೊಳ್ಳೋಣ ಎನ್ನುವ ಚಿಂತನೆಯಲ್ಲಿರುತ್ತಾರೆ. ಆದರೆ ಈ ಯೋಗವನ್ನು ವೃತ್ತಿಯಾಗಿಸಿಕೊಂಡರೆ ವ್ಯಾವಹಾರಿಕವಾಗಿ ಏನು ಲಾಭ ಎನ್ನುವ ಪ್ರಶ್ನೆ ಕಾಡುತ್ತಿರುತ್ತದೆ. ಅಂಥವರಿಗಾಗಿ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Yoga Day 2023 : ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕೆ? ನಿತ್ಯ ಈ ಐದು ಆಸನಗಳನ್ನು ಮಾಡಿ

ವಿಭಿನ್ನ ವೃತ್ತಿ

ಎಂಜಿನಿಯರ್‌, ಡಾಕ್ಟರ್‌ ಇದು ಈಗಿನ ಅತಿ ಸಾಮಾನ್ಯ ವೃತ್ತಿಯ ಆಯ್ಕೆಯಾಗಿಬಿಟ್ಟಿದೆ. ಆದರೆ ಎಷ್ಟೋ ಮಂದಿ ಮನಸ್ಸಿಲ್ಲದ ಮನಸ್ಸಿನಿಂದ ಆ ಕೆಲಸ ಮಾಡುತ್ತಿದ್ದಾರೆ! ಅದರ ಬದಲು ನಿಮ್ಮ ಇಷ್ಟದಂತೆ ವೃತ್ತಿ ಆಯ್ಕೆಮಾಡಿಕೊಳ್ಳಿ. ಯೋಗ ಶಿಕ್ಷಕರಾಗಬೇಕೆನ್ನುವ ಆಸೆಯಿದ್ದರೆ ಅದೇ ಆಗಿ. ಅದು ಸಾಮಾನ್ಯವಾದ ವೃತ್ತಿಯಲ್ಲ. ಸಮಾಜದಲ್ಲಿ ನೀವು ಅಸಾಮಾನ್ಯವಾದ ಮತ್ತು ವಿಭಿನ್ನವಾದ ಪ್ರಯತ್ನ ಮಾಡುತ್ತಿದ್ದೀರಿ ಎಂದರ್ಥ. ಅದು ಪ್ರಶಂಸನೀಯ ಕೂಡ. ಮುಖ್ಯವಾಗಿ ಆ ವೃತ್ತಿಯಲ್ಲಿ ನಿಮಗೆ ತೃಪ್ತಿ ಇರುತ್ತದೆ ಎನ್ನುವುದನ್ನು ಮರೆಯಬೇಡಿ. ಯೋಗ ಶಿಕ್ಷಕರಾಗುವುದರಿಂದ ನೀವು ಬೇರಾರದ್ದೋ ಅಡಿಯಲ್ಲಿ ಕೆಲಸ ಮಾಡದೆ ನೀವೇ ಸ್ವಯಂ ನಿಯಮಗಳು ಮತ್ತು ನೀತಿಗಳನ್ನು ರೂಪಿಸಿಕೊಂಡು ತರಗತಿಗಳನ್ನು ನಡೆಸಬಹುದು.

ವೇತನವೇನೂ ಕಡಿಮೆ ಇಲ್ಲ

ನಮ್ಮಲ್ಲಿ ಒಂದು ಕಲ್ಪನೆಯಿದೆ. ಎಂಜಿನಿಯರ್‌, ಡಾಕ್ಟರ್‌ಗೆ ಮಾತ್ರ ಕೈ ತುಂಬ ಸಂಬಳ ಸಿಗುತ್ತದೆ ಎನ್ನುವುದು. ಆದರೆ ಅದು ಶುದ್ಧ ಸುಳ್ಳು. ಯೋಗ ಶಿಕ್ಷಕರಾಗಿ ಕೆಲಸ ಮಾಡುವವರಿಗೆ ಕೂಡ ಡಾಕ್ಟರ್‌, ಎಂಜಿನಿಯರ್‌ಗೆ ಇರುವಷ್ಟೇ ಅತ್ಯುತ್ತಮ ಸಂಬಳ ಸಿಗುತ್ತದೆ. ಅದರಲ್ಲೂ ವಿದೇಶಗಳಲ್ಲಿ ಯೋಗ ಶಿಕ್ಷಕರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದಾಗಿ ನಿಮಗೆ ಅಲ್ಲಿ ಡಾಲರ್‌, ಯೂರೋ ಲೆಕ್ಕದಲ್ಲಿಯೇ ಸಂಬಳ ಸಿಕ್ಕು, ಉತ್ತಮ ಜೀವನ ನಡೆಸಬಹುದು. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಅಮೆರಿಕದಲ್ಲಿ ಯೋಗ ಶಿಕ್ಷಕರಿಗೆ ಗಂಟೆಗೆ 1,576 ರೂ.ನಷ್ಟು ವೇತನವಿದೆ! ಹಾಗೆಯೇ ವರ್ಷಕ್ಕೆ 32-33 ಲಕ್ಷದಷ್ಟು ವರಮಾನವಿದೆ. ನಿಮ್ಮ ಕೌಶಲ ಮತ್ತು ಅನುಭವದ ಆಧಾರದಲ್ಲಿ ಸಂಬಳ ನಿಂತಿರುತ್ತದೆ ಎನ್ನುವುದನ್ನು ಮರೆಯಬೇಡಿ.

ಯೋಗದ ಸಾಂದರ್ಭಿಕ ಚಿತ್ರ

ಸ್ವಯಂ ಅರಿವು

ಯೋಗ ಎಲ್ಲ ಕೆಲಸಗಳಂತಲ್ಲ. ಇದು ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅರಿವು ಮೂಡಿಸುವಂತಹ ಕೆಲಸ. ಸಾಮಾನ್ಯವಾಗಿ ಮನುಷ್ಯನಲ್ಲಿ ಅಹಂ, ದುರಾಸೆ, ಕೋಪ ಮತ್ತು ದ್ವೇಷ ಇದ್ದೇ ಇರುತ್ತದೆ. ಯೋಗವು ಈ ಎಲ್ಲ ಕೆಟ್ಟ ಅಭ್ಯಾಸಗಳನ್ನು ನಿಯಂತ್ರಣ ಮಾಡುವುದಕ್ಕೆ ಸಹಾಯ ಮಾಡುವಂಥದ್ದು. ನೀವೇ ಯೋಗ ಗುರುಗಳಾದರೆ ಹೆಚ್ಚಿನ ಯೋಗಾಭ್ಯಾಸದಿಂದಾಗಿ ನಿಮ್ಮಲ್ಲಿ ಈ ಎಲ್ಲ ಕೆಟ್ಟ ಗುಣಗಳು ತಾನಾಗಿಯೇ ಕಡಿಮೆಯಾಗಿ ಕೊನೆಗೆ ದೂರವಾಗುತ್ತವೆ. ನಿಮ್ಮಲ್ಲಿ ಧನಾತ್ಮಕತೆ ತುಂಬಿಕೊಳ್ಳುತ್ತದೆ. ಹಾಗಾಗಿ ವೈಯಕ್ತಿಕವಾಗಿಯೂ ಯೋಗ ವೃತ್ತಿಯಿಂದ ಅಪಾರ ಲಾಭವಿದೆ.

ದೈಹಿಕ ಸವಾಲು

ಯೋಗದ ಶಿಕ್ಷಕರಿಗೆ ದೈಹಿಕ ಸವಾಲು ಇದ್ದೇ ಇರುತ್ತದೆ. ಬೇರೆಯವರಿಗೆ ಯೋಗ ಹೇಳಿಕೊಡುವ ಗುರುವಾದರೂ ನೀವು ಕಲಿಯುವುದು ಇನ್ನಷ್ಟು ಇರುತ್ತದೆ. ಹಾಗೆಯೇ ಪ್ರತಿ ವಿದ್ಯಾರ್ಥಿ ಬೇರೆ ಬೇರೆ ಮನೋಧರ್ಮದಿಂದ ಬಂದವರಾಗಿರುತ್ತಾರೆ. ಅವರಿಗೆ ಯೋಗ ಹೇಳಿಕೊಡುವಾಗ ನೀವೂ ಕೂಡ ಸಾಕಷ್ಟು ರೀತಿಯಲ್ಲಿ ದೈಹಿಕ ಸವಾಲಿಗೆ ಒಡ್ಡಿಕೊಳ್ಳುತ್ತೀರಿ. ಇದರಿಂದ ನಿಮ್ಮ ದೇಹ ಇನ್ನಷ್ಟು ಸದೃಢವಾಗುತ್ತಾ ಹೋಗುತ್ತದೆ.

ಯೋಗದ ಸಾಂದರ್ಭಿಕ ಚಿತ್ರ

ವಿದೇಶಗಳನ್ನು ನೋಡುವ ಯೋಗ

ದೇಶ ಸುತ್ತು ಕೋಶ ಓದು ಎನ್ನುವ ಗಾದೆಯಿದೆ. ದೇಶ ಸುತ್ತುವುದಕ್ಕೆ ಯೋಗ ವೃತ್ತಿಗಿಂತ ಮತ್ತೊಂದಿಲ್ಲ. ವಿದೇಶಗಳಲ್ಲಿ ಯೋಗ ಶಿಕ್ಷಕರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ನೀವು ವೃತ್ತಿ ನಿಮಿತ್ತವೇ ವಿದೇಶಕ್ಕೆ ಹಾರಬಹುದು. ಅಷ್ಟೇ ಅಲ್ಲದೆ ವಿದೇಶಗಳಲ್ಲಿನ ಯೋಗ ಶಿಕ್ಷಕರ ತರಬೇತಿ ಕಾರ್ಯಕ್ರಮ, ಅಧ್ಯಯನ ಕೇಂದ್ರ, ಯೋಗ ಸ್ಟುಡಿಯೋಗಳಲ್ಲಿ ಬೋಧನೆ ಮಾಡುವುದಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದು. ಅಂದರೆ ಯೋಗ ವೃತ್ತಿಯಿಂದ ವಿದೇಶಗಳನ್ನು ನೋಡುವ ಯೋಗ!

ಜನ ಸಂಪರ್ಕ

ಈ ಯೋಗದಿಂದಾಗಿ ನಿಮ್ಮ ಸಂಪರ್ಕ ಬಹುಬೇಗ ಸಮಾಜದೊಂದಿಗೆ ಬೆಳೆದುಕೊಳ್ಳುತ್ತದೆ. ಆಗ ನೀವು ಇತರರಿಂದ ಹಲವಾರು ವಿಚಾರಗಳನ್ನು ಕಲಿತುಕೊಳ್ಳಬಹುದು. ಹಾಗೆಯೇ ಜಗತ್ತಿನ ಸಂತೋಷ ಮತ್ತು ದುಃಖಗಳೆರಡರ ಬಗ್ಗೆಯೂ ಪರಿಚಯವಾಗುತ್ತದೆ. ವಿಭಿನ್ನ ಮನಸ್ಥಿತಿ ವಿದ್ಯಾರ್ಥಿಗಳನ್ನು ನೀವು ಕಾಣುತ್ತೀರಿ. ಅವರನ್ನು ಆಧ್ಯಾತ್ಮಿಕವಾಗಿ ಮತ್ತು ಮಾನಸಿಕವಾಗಿ ಕೇಂದ್ರೀಕರಿಸುವ ಕೆಲಸವನ್ನು ನೀವು ಮಾಡುತ್ತೀರಿ. ಪ್ರಪಂಚದ ಒಳ್ಳೆಯದು ಮತ್ತು ಕೆಟ್ಟದ್ದನ್ನು ಬೇಗನೆ ಪ್ರತ್ಯೇಕಿಸಲು ನಿಮ್ಮಿಂದ ಸಾಧ್ಯವಾಗುತ್ತದೆ.

ಸಾಂದರ್ಭಿಕ ಚಿತ್ರ

ಮಾನಸಿಕ ಶಾಂತಿ

ಏನೇ ಮಾಡಿದರೂ ಮನಸ್ಸಿಗೆ ಶಾಂತಿ ಇರಬೇಕಾದದ್ದು ಬಹುಮುಖ್ಯ. ಲಕ್ಷ ಸಂಬಳ ಬರುವ ಕೆಲಸ ಮಾಡಿ ನೆಮ್ಮದಿ, ಶಾಂತಿ ಇಲ್ಲದೆ ಬದುಕುವುದಕ್ಕಿಂತ ನಿಮ್ಮ ಇಚ್ಛೆಯ ಯೋಗ ಶಿಕ್ಷಕರಾಗಿ ನೆಮ್ಮದಿಯಿಂದ ಬದುಕಬಹುದು. ಪ್ರತಿ ಧ್ಯಾನ ತರಗತಿಯೊಂದಿಗೆ, ನೀವು ಸಹ ದೈವತ್ವದಲ್ಲಿ ಮುಳುಗುತ್ತೀರಿ, ನಿಮ್ಮ ಹೃದಯದಲ್ಲಿ ಪ್ರಾರ್ಥನೆಗಳನ್ನು ಪಠಿಸುತ್ತೀರಿ. ಆಗ ನಿಮ್ಮ ಆತ್ಮವು ಶಾಂತಿಯಲ್ಲಿರುತ್ತದೆ. ಒತ್ತಡವು ಹೃದಯ ಮತ್ತು ಮನಸ್ಸನ್ನು ಆಯಾಸಗೊಳಿಸುತ್ತದೆ. ಯೋಗ ಶಿಕ್ಷಕರಾದವರಿಗೆ ಆಯಾಸ ಕಡಿಮೆ ಇರುವುದಷ್ಟೇ ಅಲ್ಲದೆ ಸಂತೋಷದ ಜೀವನಶೈಲಿ ಇರುತ್ತದೆ.

ವೈಯಕ್ತಿಕ ಅಭ್ಯಾಸ

ಯಾವುದೇ ಆದರೂ ಅಷ್ಟೇ. ಕಲಿತದ್ದನ್ನು ಹೇಳಿಕೊಡುವ ಸಮಯದಲ್ಲೇ ನಾವು ಅದರ ಬಗ್ಗೆ ಇನ್ನಷ್ಟು ಆಳವಾಗಿ ಕಲಿತುಕೊಂಡುಬಿಡುತ್ತೇವೆ. ಅದೇ ರೀತಿಯಲ್ಲಿ ಈ ಯೋಗ ಕೂಡ. ತರಗತಿಗಳನ್ನು ನಡೆಸುವುದು, ಭಂಗಿಯನ್ನು ಕಲಿಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದರಿಂದ ನಿಮ್ಮ ಜ್ಞಾನವನ್ನು ಇನ್ನಷ್ಟು ಆಳವಾಗಿಸಲು ನಿಮಗೆ ಅವಕಾಶ ಸಿಗುತ್ತದೆ. ನೀವು ತರಗತಿಗಳೊಂದಿಗೆ ಮುಂದುವರಿಯುತ್ತಿರುವಾಗ, ನೀವು ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಶಕ್ತಿಯನ್ನು ಪಡೆದುಕೊಳ್ಳುತ್ತೀರಿ ಮತ್ತು ನಿಮ್ಮ ಮನಸ್ಸು ಅಭ್ಯಾಸದಲ್ಲಿ ಆಳವಾಗಿ ಮುಳುಗಿಹೋಗುತ್ತದೆ. ನಿಮ್ಮ ಪ್ರತಿಯೊಂದು ಕೆಲಸವನ್ನು ಪರಿಪೂರ್ಣ ಮಾಡುವತ್ತ ಕೆಲಸ ಮಾಡಲಾರಂಭಿಸುತ್ತೀರಿ. ಇದು ನಿಮ್ಮ ವೈಯಕ್ತಕ ಬೆಳವಣಿಗೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ವ್ಯಕ್ತಿತ್ವ ರೂಪಿಸುತ್ತದೆ

ಯೋಗ ಶಿಕ್ಷಕರಾಗುವುದಕ್ಕೆ ನೀವು ಅದಕ್ಕೆ ತಕ್ಕ ಕೋರ್ಸ್‌ ಅನ್ನು ಪೂರ್ಣಗೊಳಿಸಬೇಕಾಗುತ್ತದೆ. ಒಮ್ಮೆ ಕೋರ್ಸ್‌ ಪೂರ್ಣಗೊಂಡರೆ ನಿಮ್ಮ ವೃತ್ತಿ ಜೀವನದ ಗುರಿಗಳು ಮತ್ತೊಂದು ಎತ್ತರಕ್ಕೆ ತಲುಪುತ್ತವೆ. ಎಲ್ಲರಿಗಿಂತ ವಿಭಿನ್ನ ಪ್ರಯತ್ನ ಮಾಡುವ ನಿಮಗೆ ಸಮಾಜದಲ್ಲಿ ಉತ್ತಮವಾದ ಸ್ಥಾನಮಾನವೂ ಸಿಗುತ್ತದೆ. ಯೋಗದಿಂದಾಗಿ ನೀವು ನಿಮ್ಮ ಮಾನಸಿಕ ಹಿಡಿತ, ದೈಹಿಕ ಹಿಡಿತ ಎರಡನ್ನೂ ಸಾಧಿಸಿಕೊಳ್ಳುವುದರಿಂದ ಸಮಾಜ ನಿಮ್ಮನ್ನು ಗೌರವದಿಂದ ಕಾಣಲಾರಂಭಿಸುತ್ತದೆ. ನಿಮ್ಮ ಪ್ರತಿ ಮಾತಿಗೂ ಬೆಲೆಯಿರುತ್ತದೆ.

Exit mobile version