ನಿಮಗೆ ಯಾವಾಗಲೂ ಸಣ್ಣ ಸಣ್ಣ ಕಾರಣಗಳಿಗಾಗಿ ಅಥವಾ ಕಾರಣವೇ ಇಲ್ಲದೆ ಹುಷಾರು ತಪ್ಪುತ್ತದೆಯಾ? ಆಗಾಗ ಹೀಗೆ ಆರೋಗ್ಯ ಕೆಡುವುದಕ್ಕೆ ಕಾರಣ ಏನೆಂದೇ ನಿಮಗೆ ಅರ್ಥವಾಗುತ್ತಿಲ್ಲವೇ? ಸಣ್ಣಪುಟ್ಟ ಕೆಮ್ಮು, ಶೀತ, ನೆಗಡಿಯೇ ಆಗಿರಬಹುದು, ಆದರೆ, ಆರೋಗ್ಯ ಕೆಟ್ಟರೆ ಖಂಡಿತವಾಗಿಯೂ ಅದು ಸಣ್ಣ ವಿಚಾರವಲ್ಲ. ಕೆಲವೊಮ್ಮೆ, ಅತಿಯಾದ ಕೆಲಸದ ಒತ್ತಡ, ಪದೇಪದೇ ಕೆಟ್ಟಿರುವ ನಿದ್ದೆ ಇತ್ಯಾದಿಗಳೂ ಕಾರಣವಾಗಿರಬಹುದು. ಪದೇ ಪದೇ ಕೆಡುವ ನಿದ್ದೆಯಿಂದಾಗಿ ನಿಮ್ಮ ರೋಗ ನಿರೋಧಕ ಶಕ್ತಿಯೇ (Immunity) ಕುಗ್ಗಿರಬಹುದು. ದುರ್ಬಲಗೊಂಡ ರೋಗನಿರೋಧಕ ಶಕ್ತಿಯಿಂದಾಗಿ ದೇಹ ಸುಲಭವಾಗಿ ಆಗಾಗ ರೋಗಗಳಿಗೆ ತುತ್ತಾಗುತ್ತದೆ. ರೋಗಗಳ ವಿರುದ್ಧ ಹೋರಾಡುವ ಶಕ್ತಿಯೇ ದೇಹದಲ್ಲಿ ಇಲ್ಲದಿದ್ದರೆ, ಆಗಾಗ ಇಂತಹ ಸಮಸ್ಯೆ ಬರದೇ ಇದ್ದೀತೇ ಹೇಳಿ! ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯು, ಸೈಟೋಕೈನ್ಸ್ ಎಂಬ ಪ್ರೊಟೀನನ್ನು ಬಿಡುಗಡೆ ಮಾಡುತ್ತದೆ. ಈ ಪ್ರೊಟೀನು ನಮ್ಮ ದೇಹಕ್ಕೆ ರೋಗ ಬರದಂತೆ ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಿದ್ದೆ ಕಡಿಮೆ (sleep deprivation) ಆದಾಗ ಸಹಜವಾಗಿ ಈ ಪ್ರೊಟೀನಿನ ಉತ್ಪತ್ತಿ ಕಡಿಮೆಯಾಗುತ್ತದೆ. ಆಗ, ರೋಗನಿರೋಧಕ ವ್ಯವಸ್ಥೆಯೇ ಹದಗೆಡುತ್ತದೆ. ಸುಲಭವಾಗಿ ರೋಗಕ್ಕೆ ತುತ್ತಾಗುತ್ತೇವೆ. ಶೀತ, ನೆಗಡಿ, ತಲೆನೋವುಗಳು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇವೆಲ್ಲ ರೋಗ ನಿರೋಧಕತೆ ಕಡಿಮೆ ಆದಾಗಲೇ ಉಂಟಾಗುವ ಸಮಸ್ಯೆಗಳು. ಹಾಗಾದರೆ ಬನ್ನಿ, ಯಾವೆಲ್ಲ ಪೇಯಗಳನ್ನು ಸೇವಿಸುವ ಮೂಲಕ (Immunity Drinks) ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬಹುದು (health tips, health guide) ಎಂಬುದನ್ನು ನೋಡೋಣ.
೧. ಅರಿಶಿನ ಹಾಲು: ಅರಿಶಿನ ಹಾಲು ಎಂಬ ಪುರಾತನ ಪೇಯ ನಮ್ಮ ಹಿರಿಯರಿಂದ ಬಂದ ಬಳುವಳಿ. ರೋಗನಿರೋಧಕತೆಯನ್ನು ಹೆಚ್ಚು ಮಾಡಿಸಲು ಇದು ಹೇಳಿ ಮಾಡಿಸಿದ್ದು. ಈ ಗೋಲ್ಡನ್ ಡ್ರಿಂಕ್ ಕೇವಲ ಬಣ್ಣದಲ್ಲಿ ಮಾತ್ರ ಚಿನ್ನ ಅಲ್ಲ. ಅರಿಶಿನದಲ್ಲಿ ಆಂಟಿಸೆಪ್ಟಿಕ್ ಗುಣಗಳಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿಯ ಜೊತೆಗೆ ದೇಹಕ್ಕೆ ಶಕ್ತಿ ಸಾಮರ್ಥ್ಯವನ್ನೂ ನೀಡುತ್ತದೆ. ಚಳಿಗಾಲದಲ್ಲಿ ನಿತ್ಯವೂ ಇದನ್ನು ಕುಡಿಯುವುದರಿಂದ ದೇಹ ಬೆಚ್ಚಗಿರುತ್ತದೆ. ರಾತ್ರಿ ಮಲಗುವ ಮುಂಚೆ ಇದನ್ನು ಕುಡಿಯುವುದರಿಂದ ರೋಗನಿರೋಧಕತೆ ಹೆಚ್ಚುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಶೀತ, ಕಫ ಇತ್ಯಾದಿ ಸಮಸ್ಯೆಗಳಿಂದಲೂ ದೂರವಿರಬಹುದು.
೪. ಶುಂಠಿ ಚಹಾ: ನೆಗಡಿ, ಗಂಟಲುನೋವು, ಶೀತ, ವಿಪರೀತ ಸೀನು, ಅಲರ್ಜಿ ಇವೆಲ್ಲವುಗಳಿಗೆ ರಾಮಬಾಣವಾಗಿರುವ ಶುಂಠಿಯ ಚಹಾ ಚಳಿಗಾಲಕ್ಕೆ ದೇಹವನ್ನು ಬೆಚ್ಚಗಿರಿಸುವ ಪೇಯ. ಇದು ಸರ್ವಗುಣ ಸಂಪನ್ನವಾದುದು. ಶುಂಠಿಯನ್ನು ಒಂದು ಚಮಚವಾಗುವಷ್ಟು ತುರಿದು ಕುದಿಯುವ ನೀರಿಗೆ ಹಾಕಿ. ಕುದಿದ ನಂತರ ಸೋಸಿಕೊಂಡು ಅದಕ್ಕೆ ಬೇಕಿದ್ದರೆ ನಿಂಬೆಹಣ್ಣನ್ನು ಹಿಂಡಬಹುದು, ಜೇನುತುಪ್ಪ ಸೇರಿಸಿಕೊಳ್ಳಬಹುದು. ಅಥವಾ ಹಾಗೆಯೇ ಕುಡಿಯಲೂಬಹುದು. ಬಹಳ ಪರಿಣಾಮಕಾರಿ ಪೇಯವಿದು.
೩. ಪುದಿನ ಚಹಾ: ರಾತ್ರಿ ಮಲಗುವ ಮುನ್ನ ಪುದಿನ ಚಹಾ (mint tea) ಹೊಟ್ಟೆಗಿಳಿಸಿದರೆ, ರೋಗನಿರೋಧಕತೆ ಹೆಚ್ಚುತ್ತದೆ ಎನನುತ್ತವೆ ಸಂಶೋಧನೆಗಳು. ಹೌದು. ಯಾಕೆಂದರೆ ಪುದಿನಲ್ಲಿ ಆಂಟಿ ವೈರಲ್ ಹಾಗೂ ಆಂಟಿ ಮೈಕ್ರೋಬಿಯಲ್ ಗುಣಗಳಿದ್ದು ಇವು ನಮ್ಮನ್ನು ಚಳಿ ಹಾಗೂ ಮಳೆಗಳಲ್ಲಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಒಳ್ಳೆಯ ನಿದ್ದೆಯನ್ನೂ ಮಾಡಿಸುವ ಗುಣ ಇದರಲ್ಲಿದೆ.
೪. ಗ್ರೀನ್ ಟೀ: ಗ್ರೀನ್ ಟೀ (green tea) ಎಲ್ಲ ಕಾಲಕ್ಕೂ ಸಲ್ಲುವ ಪೇಯವಾದರೂ ಚಳಿಗಾಲಕ್ಕೆ ಬಹಳ ಒಳ್ಳೆಯದು. ಇದು ತೂಕ ಇಳಿಸುವ ಡ್ರಿಂಕ್ ಆಗಿ ಬಳಸಲ್ಪಟ್ಟರೂ, ಇದರಲ್ಲಿ ರೋಗಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್‌ಗಳಿವೆ. ಆದರೆ, ಇದನ್ನು ಅತಿಯಾಗಿ ಕುಡಿಯುವುದೂ ಕೂಡಾ ಒಳ್ಳೆಯದಲ್ಲ. ಏಕೆಂದರೆ, ಇದು ನಿಮ್ಮ ನಿದ್ದೆಯನ್ನು ಹಾಳು ಮಾಡಬಹುದು, ಎಚ್ಚರ.
೫. ಕ್ಯಾಮೊಮೈಲ್ ಚಹಾ: ಕ್ಯಾಮೋಮೈಲ್ ಚಹಾಕ್ಕೆ ನಿದ್ದೆ ಬರಿಸುವ ಗುಣವಿದೆ. ಹಾಗಾಗಿ ಇದು ನಿದ್ರಾಹೀನತೆಯ ಸಮಸ್ಯೆ ಇರುವ ಮಂದಿಗೆ ಒಳ್ಳೆಯದು. ಅಷ್ಟೇ ಅಲ್ಲ, ಇದರಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿದ್ದು, ಇವು ಇನ್‌ಫೆಕ್ಷನ್ ಆಗದಂತೆ ರಕ್ಷಿಸುತ್ತದೆ. ಹಾಗಾಗಿ ಚಳಿಗಾಲಕ್ಕೆ ಇದು ಒಳ್ಳೆಯದು. ಜೊತೆಗೆ ಇದರಲ್ಲಿ ಕೆಫೀನ್ ಇಲ್ಲವಾದ್ದರಿಂದ ಯಾವುದೇ ಭಯವಿಲ್ಲದೆ ಕುಡಿಯಬಹುದು.
ಇದನ್ನೂ ಓದಿ: Health Tips: ತಡರಾತ್ರಿಯವರೆಗಿನ ಅಧ್ಯಯನ ಮಿದುಳಿನ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ?