ನಮ್ಮ ಮೆದುಳಿಗೆ ಸಾಣೆ (mind sharpening) ಹಿಡಿಯುವುದು, ಮೆದುಳಿನ ಸಾಧ್ಯತೆಗಳನ್ನು (Brain health) ವಿಸ್ತರಿಸಿಕೊಳ್ಳುವುದು ಮನಸ್ಸು ಮಾಡಿದರೆ ಕಠಿಣ ಕೆಲಸವೇನಲ್ಲ. ಆದರೆ, ಬಹುತೇಕರಿಗೆ ಒಂದು ನಂಬಿಕೆಯಿದೆ. ʻನನ್ನದೇನಿದ್ದರೂ, ಬಡ್ಡುತಲೆ, ಅಷ್ಟು ಸುಲಭಕ್ಕೆ ತಲೆಗೆ ಹತ್ತುವುದಿಲ್ಲʼ ಎಂಬ ಸಬೂಬು ನೀಡಿ, ಕಲಿಯುವ ಕಾಯಕದಿಂದಲೇ ಹಿಂದೆ ಸರಿಯುತ್ತಾರೆ. ಹಾಗೆ ನೋಡಿದರೆ, ಮನಸ್ಸು ಮಾಡಿದರೆ, ಕಲಿಯುವ ಛಲವಿದ್ದರೆ ಯಾರು ಬೇಕಾದರೂ ಕಷ್ಟಪಟ್ಟರೆ ಎಂಥ ವಿದ್ಯೆಯನ್ನೂ ಕಲಿಯಬಹುದು. ಪರಿಶ್ರಮ ಮುಖ್ಯ ಅಷ್ಟೇ.
ನಮ್ಮ ಮೆದುಳಿನ ಸಾಮರ್ಥ್ಯದ (brain capacity) ಅರಿವು ನಿಜವಾಗಿ ನಮಗಿಲ್ಲ. ವಯಸ್ಸಾಯಿತು, ಇನ್ನೇನು ಎಂಬಂತೆ, ಅದರ ಸಾಧ್ಯತೆಗಳನ್ನು ನಾವು ನಮ್ಮ ಕೈಯಾರೆ ಮೊಟಕುಗೊಳಿಸುತ್ತಲೇ ಇರುತ್ತೇವೆ. ಮಿದುಳಿಗೆ ಕೆಲಸ ಕೊಡುವ ಮೂಲಕವೂ ನಮ್ಮ ಮಿದುಳಿನ ಸಾಮರ್ಥ್ಯವನ್ನು ನಾವು ಹೆಚ್ಚಿಸಿಕೊಳ್ಳಬಹುದು ಎಂಬ ಸತ್ಯ ನಮಗೆ ಗೊತ್ತಿರಬೇಕು. ಆಗಾಗ, ಬಡ್ಡಾಗುವ ಕತ್ತಿಗೆ ಸಾಣೆ ಹಿಡಿದು ಹರಿತ ಮಾಡಿಕೊಳ್ಳುವಂತೆ ನಾವು ನಮ್ಮ ಮಿದುಳನ್ನೂ ಹರಿತ ಮಾಡಿಕೊಳ್ಳುತ್ತಿರಬೇಕು. ಹಾಗಾದರೆ ಈ ಹರಿತಗೊಳಿಸುವಿಕೆ ಹೇಗೆ ಎಂಬ ಕುತೂಹಲ ನಿಮಗಿರಬಹುದು. ಬನ್ನಿ, ನಿಮ್ಮ ಮಿದುಳನ್ನು ಸದಾ ಚುರುಕಾಗಿಡಲು ನೀವು ಏನೆಲ್ಲ ಮಾಡಬಹುದು (Brain health tips) ಎಂಬುದನ್ನು ತಿಳಿಯೋಣ.
1. ಜೀವಿತಾವಧಿಯ ಕಲಿಕೆ ಮುಖ್ಯ: ವಯಸ್ಸಾಯಿತು ಇನ್ನೇನು ಕಲಿಕೆ ಎಂಬ ಮನೋಭಾವ ಬಿಟ್ಟುಬಿಡಿ. ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ನಿಮ್ಮ ಜೀವನದಲ್ಲೂ ನಿಜವಾಗಿಸಲು ಪ್ರಯತ್ನಿಸಿ. ನಿತ್ಯವೂ ಏನಾದರೊಂದು ಕಲಿಯುತ್ತಿರಬೇಕು ಹಾಗೂ ಮನುಷ್ಯನ ಈ ಕಲಿಕೆ ಎಂಬುದು ಬದುಕಿನ ಅಂಗ ಎಂಬುದನ್ನು ಅಳವಡಿಸಿಕೊಳ್ಳಿ. ಹೊಸ ವಿಷಯ, ಹೊಸ ಹವ್ಯಾಸ, ಹೊಸ ಕೌಶಲ್ಯಗಳನ್ನು ಕಲಿಯಲು ಪ್ರಯತ್ನಿಸಿ. ಈ ಕಲಿಕೆಗೆ ಎಂದಿಗೂ ಕೊನೆ ಇರದಿರಲಿ. ವೃತ್ತಿಯ ನಡುವೆ ಇವಕ್ಕೂ ಜಾಗವಿರಲಿ.
2. ಸೊಂಪಾದ ನಿದ್ದೆಗೆ ಜಾಗವಿಡಿ: ಎಷ್ಟೇ ಬ್ಯುಸಿ ಇದ್ದರೂ, ಎಷ್ಟೇ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರೂ, ನಿತ್ಯವೂ ಸೊಂಪಾದ ನಿದ್ದೆಗೆ ಜಾಗವಿಡಿ. ನಿದ್ದೆಯನ್ನು ಅವಗಣನೆ ಮಾಡಬೇಡಿ. ಸ್ಮರಣ ಶಕ್ತಿ ಸೇರಿದಂತೆ ಮಿದುಳು ಸಮರ್ಪಕವಾಗಿ ಕೆಲಸ ಮಾಡಲು ಹಾಗೂ ಅದರ ಸರ್ವತೋಮುಖ ಬೆಳವಣಿಗೆಗೆ ನಿದ್ದೆ ಅತ್ಯಂತ ಅವಶ್ಯಕ.
3. ವ್ಯಾಯಾಮ ಮಾಡಿ: ಮಿದುಳಿನ ಆರೋಗ್ಯಕ್ಕೂ ವ್ಯಾಯಾಮಕ್ಕೂ ಏನು ಸಂಬಂಧ ಎಂದು ನೀವು ಪ್ರಶ್ನೆ ಹಾಕಬಹುದು. ಆದರೆ ಖಂಡಿತ ಸಂಬಂಧವಿದೆ. ದೈಹಿಕ ವ್ಯಾಯಾಮ ಮಿದುಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಪೂರಣ ಮಾಡುತ್ತದೆ. ಇದರಿಂದ ಹೊಸ ನ್ಯೂರಾನ್‌ಗಳ ಬೆಳವಣಿಗೆ ಸರಿಯಾಗಿ ಅರಿವಿನ ಸಾಮರ್ಥ್ಯ ಹೆಚ್ಚುತ್ತದೆ.
4. ಸಮತೋಲಿತ ಆಹಾರ: ಮಿದುಳು ಸರಿಯಾಗಿ ಕಾರ್ಯ ನಿರ್ವಹಿಸಲು, ಮಿದುಳಿನ ಬೆಳವಣಿಗೆಗೂ ಪೂರಕವಾದ ಸಮತೋಲಿತ ಆಹಾರ ಸೇವನೆ ಅತ್ಯವಶ್ಯಕ. ಆಂಟಿ ಆಕ್ಸಿಡೆಂಟ್‌ಗಳು, ಒಮೆಗಾ ೩ ಫ್ಯಾಟಿ ಆಸಿಡ್‌ಗಳು ಹಾಗೂ ವಿಟಮಿನ್‌ಗಳು ಸಮೃದ್ಧವಾಗಿರುವ ಆಹಾರದ ಸೇವನೆ ಒಳ್ಳೆಯದು. ಈ ಪೋಷಕಾಂಶಗಳು ಮಿದುಳಿನ ಬೆಳವಣಿಗೆಗೆ ಪೂರಕವಾಗಿದೆ.
5. ಮಾನಸಿಕವಾಗಿ ಕ್ರಿಯಾಶೀಲರಾಗಿರಿ: ಮಿದುಳಿನ ಕ್ರಿಯಾಶೀಲತೆ ಹೆಚ್ಚಿಸುವ, ಮಿದುಳು ಉಪಯೋಗಿಸಿ ಮಾಡುವ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸದಾ ಭಾಗಿಯಾಗಿರಿ. ನಿಮ್ಮ ವೃತ್ತಿಯಲ್ಲದೆ, ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಮಕ್ಕಳ ಜೊತೆ ಪಝಲ್ ಬಿಡಿಸುವುದು, ಕ್ರಾಸ್‌ವರ್ಡ್, ಚೆಸ್ ಆಡುವುದು ಇತ್ಯಾದಿಗಳಿಗೂ ಸಮಯ ಕೊಡಿ. ಮಿದುಳನ್ನು ಚುರುಕಾಗಿಸುವ ಆಪ್‌ಗಳನ್ನೂ ಬಳಸಬಹುದು. ಇವೆಲ್ಲವೂ ಮಿದುಳಿನ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತವೆ.
6. ಸಾಮಾಜಿಕ ಸಂಬಂಧಗಳು: ಸಾಮಾಜಿಕವಾಗಿ ಚುರುಕಾಗಿರಿ. ಸ್ನೇಹಿತರು, ಬಂಧುಬಳಗ, ನೆರೆಹೊರೆಯವರು, ಸಮಾನ ಮನಸ್ಕರು ಇವರೆಲ್ಲವೂ ನಿಮ್ಮ ಮಿದುಳಿನ ಆರೋಗ್ಯಕ್ಕೆ ಕಾಣಿಕೆ ಸಲ್ಲಿಸಬಹುದು. ಸಾಮಾಜಿಕ ವಲಯದಲ್ಲಿ ಚುರುಕಾಗಿರುವುದೂ ಕೂಡಾ ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು.
7. ಒತ್ತಡ ನಿರ್ವಹಣೆ ಮಾಡಿ: ಧ್ಯಾನ, ಪ್ರಾಣಾಯಾಮ ಹಾಗೂ ಉಸಿರಾಟದ ವ್ಯಾಯಾಮಗಳೂ ಸೇರಿದಂತೆ ನಿಮ್ಮ ಒತ್ತಡವನ್ನು ಕಡಿಮೆಗೊಳೆಸುವ ಚಟುವಟಿಕೆಗಳಿಗೆ ನಿಮ್ಮ ನಿತ್ಯಜೀವನದಲ್ಲಿ ಜಾಗವಿರಲಿ.
ನೆನಪಿಡಿ. ಇಂತಹ ಚಟುವಟಿಕೆಗಳಿಂದ ಮಿದುಳಿಗೇನು ಲಾಭ ಎಂದು ಅಂದುಕೊಳ್ಳಬೇಡಿ. ದೇಹದ ಒಟ್ಟು ಆರೋಗ್ಯವೂ ಮನಸ್ಸಿನ, ಮಿದುಳಿನ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಮಾನಸಿಕವಾಗಿ ಆರೋಗ್ಯವಾಗಿರುವ ಜೊತೆಗೆ ಚುರುಕಾಗಿರುವುದರಿಂದ ಮಿದುಳನ್ನು ಸದಾ ಹರಿತವಾಗಿಟ್ಟುಕೊಳ್ಳಬಹುದು.
ಇದನ್ನೂ ಓದಿ: Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!