ಬೆಂಗಳೂರು: ಹೃದಯ ಸ್ತಂಭನ (Cardiac Arrest) ಈ ಹೆಸರು ಕೇಳುತ್ತಲೇ ಹೃದಯವೇ ಬಾಯಿಗೆ ಬಂದ ಹಾಗೇ ಆಗುತ್ತದೆ. ಅಷ್ಟೊಂದು ನಡುಕ ಹುಟ್ಟಿಸುತ್ತದೆ. ಕುಳಿತಲ್ಲಿಯೇ ಹೃದಯ ಸ್ತಂಭನದಿಂದ ಕುಸಿದು ಬಿದ್ದರು, ರಾತ್ರಿ ಮಲಗಿದವರು ಏಳಲೇ ಇಲ್ಲ ಇಂತಹ ಸುದ್ದಿಗಳನ್ನು ದಿನಂಪ್ರತಿ ಕೇಳುತ್ತೇವೆ. ಸಣ್ಣಮಕ್ಕಳು ಕೂಡ ಈಗ ಈ ಕಾಯಿಲೆಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸಾಕಷ್ಟು ಮಹಿಳೆಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರಂತೆ. ಇನ್ನು ಒತ್ತಡದ ಜೀವನ ಶೈಲಿ ಹಾಗೂ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದು ಈ ಹೃದಯಾಸ್ತಂಭನಕ್ಕೆ ಕಾರಣ ಎನ್ನುತ್ತದೆ ಹೊಸ ಸಂಶೋಧನೆ. ಪ್ರಮುಖವಾಗಿ ಮಹಿಳೆಯರ ಜೀವಕ್ಕೆ ಕುತ್ತನ್ನುಂಟು ಮಾಡುವ ಈ ಹೃದಯದ ಕಾಯಿಲೆಗೇ ಮುಖ್ಯ ಕಾರಣಗಳೇನು ಹಾಗೂ ಅದನ್ನು ಹೇಗೆ ತಡೆಗಟ್ಟಬಹುದು ಎಂಬ ವಿವರ ಇಲ್ಲಿದೆ.
- ಹೃದಯದ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿ ಪ್ಲೇಕ್ ರಚನೆಯಾದಾಗ ರಕ್ತನಾಳಗಳಲ್ಲಿ ತಡೆ ಉಂಟಾಗುತ್ತದೆ. ಇದರಿಂದ ಹೃದಯದ ಸ್ನಾಯುಗಳಿಗೆ ರಕ್ತದ ಹರಿಯುವಿಕೆ ಕಡಿಮೆಯಾಗುತ್ತದೆ. ಇದರಿಂದ ಹೃದಯ ಸ್ತಂಭನ ಸಂಭವಿಸುತ್ತದೆ.
- ಅಧಿಕ ರಕ್ತದೊತ್ತಡದಿಂದ ಈ ಸಮಸ್ಯೆ ಕಾಡುತ್ತದೆ. ಅಧಿಕ ರಕ್ತದೊತ್ತಡವು ಹೃದಯ ಮತ್ತು ರಕ್ತನಾಳಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ಹೃದಯ ಸ್ತಂಭನ ಸಮಸ್ಯೆ ಕಾಡುತ್ತದೆ.
- ಮಧುಮೇಹದಿಂದ ಹೃದಯದ ರಕ್ತನಾಳಗಳು ಹಾನಿಗೊಳಗಾಗುತ್ತದೆ. ಇದರಿಂದ ಹೃದಯ ಸ್ತಂಭನದ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹವನ್ನು ನಿಯಂತ್ರಿಬೇಕು
- ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ. ಹಾಗಾಗಿ ತರಕಾರಿ, ಹಣ್ಣುಗಳು, ತರಕಾರಿ ಮತ್ತು ಧಾನ್ಯಗಳನ್ನು ಹಾಗೂ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಮತ್ತು ಆರೋಗ್ಯಕರವಾದ ತೂಕವನ್ನು ಹೊಂದಿರಬೇಕು.
- ಧೂಮಪಾನವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಸ್ತಂಭನ ಉಂಟಾಗುತ್ತದೆ. ಹಾಗಾಗಿ ಧೂಮಪಾನವನ್ನು ತ್ಯಜಿಸಿದಷ್ಟು ಒಳ್ಳೆಯದು.
- ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಹೃದಯ ಅಪಧಮನಿಗಳಲ್ಲಿ ಫ್ಲೇಕ್ ಸಂಗ್ರಹವಾಗಲು ಕಾರಣವಾಗುತ್ತದೆ. ಇದು ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಆಗಾಗ ಕೊಲೆಸ್ಟ್ರಾಲ್ ಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸಬೇಕು.
- ದೈಹಿಕ ಚಟುವಟಿಕೆಯ ಕೊರತೆಯು ಹೃದಯ ಸ್ನಾಯುವನ್ನು ದುರ್ಬಲಗೊಳಿಸುತ್ತದೆ. ನೀವು ನಿಯಮಿತವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗದಿದ್ದರೆ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಪ್ರತಿದಿನ ವ್ಯಾಯಾಮಗಳನ್ನು ಅಭ್ಯಾಸ ಮಾಡಬೇಕು. ಏರೋಬಿಕ್ ವ್ಯಾಯಾಮ ಅತ್ಯುತ್ತಮ.
- ದೀರ್ಘಕಾಲದವರೆಗೆ ಒತ್ತಡ, ಖಿನ್ನತೆ ಮತ್ತು ಆತಂಕವನ್ನು ಎದುರಿಸುತ್ತಿದ್ದರೆ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರಿಂದ ಹೃದಯ ಸ್ತಂಭನ ಸಂಭವಿಸುತ್ತದೆ. ಆಗಾಗಿ ಒತ್ತಡವನ್ನು ನಿವಾರಿಸುವಂತಹ ತಂತ್ರಗಳನ್ನು ಅಳವಡಿಸಿಕೊಳ್ಳಿ. ಅಗತ್ಯವಿದ್ದರೆ ಮಾನೋವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.
ಇದನ್ನೂ ಓದಿ: Pesticide: ಎವರೆಸ್ಟ್ ಫಿಶ್ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್ ಮಾಡಿದ ಸಿಂಗಾಪುರ
- ಋತುಬಂಧ, ಗರ್ಭಾಧಾರಣೆ, ಮತ್ತು ಹಾರ್ಮೋನ್ ಚಿಕಿತ್ಸೆಗಳಿಗೆ ಸಂಬಂಧಿಸಿದ ಹಾರ್ಮೋನ್ ಬದಲಾವಣೆಗಳು ರಕ್ತನಾಳದ ಕಾರ್ಯ ಮತ್ತು ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೃದಯ ಸ್ತಂಭನ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಹಾರ್ಮೋನ್ ಚಿಕಿತ್ಸೆ ನೀಡುವ ಮುನ್ನ ಆರೋಗ್ಯ ತಜ್ಞರ ಸಲಹೆ ಪಡೆಯಿರಿ.