Site icon Vistara News

Celebrity Designer Interview: ನಿರ್ಮಲಾ ಸೀತಾರಾಮನ್ ಬಜೆಟ್ ಸೀರೆ ಈಗ ಮನೆಮಾತು! ಇದರ ಡಿಸೈನರ್ ಆರತಿ ಹೀರೆಮಠ್ ಹೇಳೋದೇನು?

Celebrity Designer Interview

Celebrity Designer Interview

ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman Saree) ಉಟ್ಟ ಸೀರೆ ಇದೀಗ ಮನೆಮನೆಯಲ್ಲೂ ಸುದ್ದಿ! ಈ ಸೀರೆಯನ್ನು ಕಲಾತ್ಮಕವಾಗಿ ಕಸೂತಿ ವಿನ್ಯಾಸದಲ್ಲಿ ಡಿಸೈನ್ ಮಾಡಿದವರು ಆರತಿ ಕ್ರಾಫ್ಟ್‌ನ ರೂವಾರಿ ಆರತಿ ಹೀರೆಮಠ್. ಹಲವು ವರ್ಷಗಳಿಂದ ಈ ಕಲೆಯನ್ನು ಪ್ರೋತ್ಸಾಹಿಸುವುದರೊಂದಿಗೆ ಮಹಿಳೆಯರಿಗೆ ಕಾರ್ಯಾಗಾರಗಳನ್ನು ನಡೆಸಿ, ಯಶಸ್ವಿಯಾಗಿದ್ದಾರೆ. ವಿಸ್ತಾರದ ಸಂದರ್ಶನದಲ್ಲಿ ಅವರು ಈ ಕುರಿತಂತೆ ನಾನಾ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಿರ್ಮಲಾ ಸೀತಾರಾಮನ್

ವಿಸ್ತಾರ: ಬಜೆಟ್ ಮಂಡನೆ ಸಮಯದಲ್ಲಿ ಎಲ್ಲಿ ನೋಡಿದರೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman Saree) ಅವರು ಉಟ್ಟ ಕಸೂತಿ ವಿನ್ಯಾಸದ ಸೀರೆಯದ್ದೇ ಪ್ರಶಂಸೆ. ಈ ಸಂದರ್ಭದಲ್ಲಿ ನಿಮಗನಿಸಿದ್ದೇನು?

ಆರತಿ ಹೀರೆಮಠ್: ಹೌದು. ನಿಜಕ್ಕೂ ಖುಷಿಯಾಯಿತು. ನಮ್ಮಲ್ಲಿ ಕಲಾತ್ಮಕ ಕಸೂತಿ ವಿನ್ಯಾಸಗೊಂಡ ಸೀರೆ ಆ ಮಟ್ಟಿಗೆ ಸುದ್ದಿಯಾದದ್ದು, ನಮ್ಮ ಆರತಿ ಕ್ರಾಫ್ಟ್ ನ (kasuti pride of karnataka) ಸೀರೆಗಳ ಟ್ರೆಡಿಷಬನಲ್ ವಿನ್ಯಾಸಗಳಿಗೆ ಮತ್ತಷ್ಟು ಮನ್ನಣೆ ದೊರೆದಂತಾಯಿತು.

ಆರತಿ ಹೀರೆಮಠ್, ಆರತಿ ಕಾಫ್ಟ್ಸ್ ಸಂಸ್ಥಾಪಕಿ, ಸೆಲೆಬ್ರಿಟಿ ಡಿಸೈನರ್

ವಿಸ್ತಾರ: ಕಸೂತಿ-ಪ್ರೈಡ್ ಆಫ್ ಕರ್ನಾಟಕ ಹುಟ್ಟಿದ್ದು ಹೇಗೆ?
ಆರತಿ ಹೀರೆಮಠ್ : 1989ರಲ್ಲಿ ಧಾರವಾಡ-ಬೆಂಗಳೂರು-ಬೆಳಗಾವಿ-ಬೆಂಗಳೂರು ಎಂದೆಲ್ಲಾ ಓಡಾಡುತ್ತಿದ್ದ ಕಾಲ. ಹುಟ್ಟಿದ್ದು, ಬೆಳೆದದ್ದು ಒಂದು ಕಡೆಯಾದರೇ ಕೊನೆಗೆ ನೆಲೆ ನಿಂತದ್ದು ಒಂದೆಡೆ. ಇಂತಹ ಸಂದರ್ಭದಲ್ಲಿ ಧಾರವಾಡದ ಕಸೂತಿ ಕಲಾವಿದೆಯರನ್ನು ಒಗ್ಗೂಡಿಸಿ ಪುಟ್ಟದಾಗಿ ಆರಂಭಿಸಿದ ಆರತಿ (arati hiremath dharwad) ಕ್ರಾಫ್ಟ್ಸ್ ನಿಧಾನಗತಿಯಲ್ಲಿ ನೆಲೆಗೊಂಡಿತು. ಮಾರಾಟ ಹಾಗೂ ಪ್ರದರ್ಶನದೊಂದಿಗೆ ಜನರಿಗೆ ಪರಿಚಿತಗೊಂಡಿತು. ನಂತರ ಎಸ್ಈಎಮ್ಎ (ಸೊಸೈಟಿ ಫಾರ್ ಎಮ್ಪವರ್ಮೆಂಟ್ ಮತ್ತು ಮೊಬಿಲಿಟಿ ಆಫ್ ಆರ್ಟಿಸಾನ್ಸ್) ಸಹಯೋಗದೊಂದಿಗೆ ಕಸೂತಿ ಮಾಡುವ ಕಲಾವಿದರನ್ನು ಗುರುತಿಸಿ ನಾನಾ ಸೌಲಭ್ಯಗಳನ್ನು ಕಲ್ಪಿಸಿ, ಮತ್ತಷ್ಟು ತರಬೇತಿ ನೀಡಿ ಪ್ರೋತ್ಸಾಹ ನೀಡುವ ಕೆಲಸಗಳು ನಡೆದವು. ಆದರೆ, 2010ರ ಸುಮಾರಿಗೆ ಕಾರಣಾಂತರಗಳಿಂದಾಗಿ ಬೇಡಿಕೆ ಕುಗ್ಗಿತ್ತು. ಆದರೆ, 2012ರಲ್ಲಿ ನಿಫ್ಟ್ ಇಂಟರ್ನ್‌ಶಿಪ್ ವಿದ್ಯಾರ್ಥಿಗಳ ಸಹಕಾರದಿಂದ ಆನ್ ಲೈನ್ ಮಾರ್ಕೆಟಿಂಗ್ ಕಾನ್ಸೆಪ್ಟ್‌ನಿಂದಾಗಿ ಮತ್ತೊಮ್ಮೆ ಪ್ರಪಂಚಾದಾದ್ಯಂತ ಕಸೂತಿ ಸೀರೆ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾದೆವು.

ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲಾಗಿದ್ದ ವಿಶೇಷ ಶಾಲು.

ವಿಸ್ತಾರ: ಸೆಲೆಬ್ರಿಟಿಗಳ ವಾರ್ಡ್ ರೊಬ್ ಗೆ ಸೇರಿದ ಕಸೂತಿ ವಿನ್ಯಾಸಗಳ್ಯಾವುವು?
ಆರತಿ ಹೀರೆಮಠ್: ಕಳೆದ ಬಾರಿ ಮೋದಿಜೀ ಹುಬ್ಬಳ್ಳಿಗೆ ಬಂದಾಗ ಮುಖ್ಯಮಂತ್ರಿಗಳು ಅವರಿಗೆ ಹಾಕಿದ ವಿಶೇಷ ವಿನ್ಯಾಸ ಮಾಡಿದ್ದ ಶಾಲು ನಮ್ಮ ಆರತಿ ಕ್ರಾಫ್ಟ್ ನದ್ದಾಗಿದೆ. ಹೀಗೆ ನಾನಾ ರಾಜಕೀಯ ಧುರಿಣರು ಹಾಗೂ ಸಾಕಷ್ಟು ಸೆಲೆಬ್ರೆಟಿಗಳು ಕಸೂತಿ ವಿನ್ಯಾಸದ ಶಾಲು, ಡಿಸೈನರ್ ಸೀರೆ ಹಾಗೂ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದಾರೆ.

Celebrity Designer Interview

ವಿಸ್ತಾರ: ಕಸೂತಿ ಕಲೆಗೆ ಜಾಗತಿಕ ಮಟ್ಟದಲ್ಲಿ ಹೆಸರು ಕಲ್ಪಿಸಿದ ನಿಮ್ಮ ಪ್ರಯೋಗಾತ್ಮಕ ಕ್ರಿಯೇಷನ್ ಗಳಲ್ಲಿ ಇನ್ನೇನಿದೆ?
ಆರತಿ ಹೀರೆಮಠ್: ಕೇವಲ ಸೀರೆಗಳ ಮೇಲಷ್ಟೇ ಅಲ್ಲ! ದುಪಟ್ಟಾ, ಮೆನ್ದ್ ವೇರ್ ಗಳಲ್ಲೂ ಕಸೂತಿ ವಿನ್ಯಾಸ ಮೂಡಿಸಿದ್ದೇವೆ. ಅಷ್ಟೇ ಏಕೆ? ಈ ಜನರೇಷನ್ ನವರಿಗೆ ಪ್ರಿಯವಾಗುವಂತಹ ಡಿಸೈನರ್ ವೇರ್ ಗಳಲ್ಲೂ ಪರಿಚಯಿಸಿದ್ದೇವೆ. ಇನ್ನು ರಂಗೋಲಿ ಡಿಸೈನ್ ಗಳು ಸ್ಫೂರ್ತಿಯಾಗಿಟ್ಟುಕೊಂಡು ಕಲಾತ್ಮಕ ವಿನ್ಯಾಸಗಳನ್ನು ಹೊರತಂದಿದ್ದೇವೆ. ಟೆಂಪಲ್, ಲೋಟಸ್, ರಥ ಹೀಗೆ ನಾನಾ ಟ್ರೆಡಿಷನಲ್ ಡಿಸೈನ್‌ಗಳನ್ನು ನೇಗಿ, ಮೆಂತಿ, ಮುರ್ಗಿ ಹಾಗೂ ಗವಾಂತಿ ಹೆಸರಿನ ನಾನಾ ಬಗೆಯ ಸ್ಟಿಚ್ಚಿಂಗ್ ಥ್ರೆಡ್ ಸ್ಟೈಲ್‌ನಲ್ಲಿ ಮೂಡಿಸಿದ್ದೇವೆ. ಇದಕ್ಕಾಗಿ ತಿಂಗಳಾನುಗಟ್ಟಲೇ ಕಲಾವಿದರು ಕಲಾತ್ಮಕ ಕೆಲಸ ಮಾಡುತ್ತಾರೆ.

ವಿಸ್ತಾರ: ಕಾರ್ಯಾಗಾರಗಳ ಮೂಲಕ ಕಸೂತಿ ಕಲೆಯನ್ನು ಹೇಗೆ ಪ್ರೋತ್ಸಾಹಿಸುತ್ತೀದ್ದೀರಾ?
ಆರತಿ ಹೀರೆಮಠ್:
ಸುಮಾರು 850ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದು, ಸುಮಾರು 200 ಮಂದಿ ಕಾರ್ಯನಿರತರಾಗಿದ್ದಾರೆ. ಈ ಕಸೂತಿ ಕಲಿಯಲು ಆಸಕ್ತಿ ಇದ್ದವರಿಗೆ 5 ದಿನಗಳ ತರಬೇತಿ ಹಾಗೂ ಅಗತ್ಯ ಪರಿಕರಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದೇವೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Union Budget 2023: ಧಾರವಾಡದ ವಿಶಿಷ್ಟ ಕಸೂತಿ ಸೀರೆ ಧರಿಸಿ, ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

FAQʼs

1. ಕಸೂತಿಗೆ ಪ್ರಸಿದ್ಧವಾದ ನಗರ ಯಾವುದು?

Ans: ವಿಶೇಷವಾಗಿ ವಿಜಯಪುರ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ ಮತ್ತು ಜಮಖಂಡಿಗಳಲ್ಲಿ ಪ್ರಸಿದ್ಧ.

2. ಕಸೂತಿ ಸೀರೆ ಎಂದರೇನು?

Ans: ಕಸೂತಿ ಎಂಬುದೊಂದು ಪ್ರಾಚೀನ ಕಲೆ. ಸೀರೆಯ ಮೇಲೆ ಸೂಜಿ ದಾರ ಬಳಸಿ ಮಾಡುವ ಆಕರ್ಷಕ ವಿನ್ಯಾಸ.

3. ಯಾರಿದು ಆರತಿ ಹೀರೆಮಠ್?

Ans: ಆರತಿ ಹೀರೆಮಠ್ ಅದ್ಭುತ ವಿನ್ಯಾಸಕಿ. ಕಸೂತಿಯ ಅನೇಕ ಸುಂದರ ವಿನ್ಯಾಸಗಳನ್ನು ರಚಿಸಿದ್ದಾರೆ. ಕುಶಲಕರ್ಮಿಗಳಿಗೆ ಮಾರ್ಗದರ್ಶನವನ್ನೂ ಮಾಡಿದ್ದಾರೆ. ಕಸೂತಿ ಕಲೆಗೆ ಹೊಸ ಆಯಾಮ ನೀಡಿದ್ದಾರೆ.

4. ಕಸೂತಿ-ಪ್ರೈಡ್ ಆಫ್ ಕರ್ನಾಟಕ ಎಂದರೇನು?

Ans: ಆರತಿ ಹಿರೇಮಠ್ ಅವರು ಕಳೆದ 28+ ವರ್ಷಗಳಿಂದ ಕಸೂತಿಯ ಹಿರಿಮೆ ಹೆಚ್ಚಿಸಲು ಶ್ರಮಿಸಿದ್ದಾರೆ. ಅವರು ಪ್ರಾಚೀನ ಕಸೂತಿ ಕಲೆಯನ್ನು ಪ್ರಪಂಚದಾದ್ಯಂತ ಕಸೂತಿ-ಪ್ರೈಡ್ ಆಫ್ ಕರ್ನಾಟಕ ಮೂಲಕ, ಆರತಿ ಕ್ರಾಪ್ಟ್‌ ಮೂಲಕ ಪಸರಿಸುತ್ತಿದ್ದಾರೆ.

5. ನಿರ್ಮಲಾ ಸೀತಾರಾಮನ್ ಸೀರೆ ವಿನ್ಯಾಸ ಮಾಡಿದವರು ಯಾರು?

Ans: ಆರತಿ ಕ್ರಾಪ್ಟ್‌ನ ಆರತಿ ಹಿರೇಮಠ್.

Exit mobile version