Site icon Vistara News

Celebrity Fashion corner | ಮಾಜಿ ಸಚಿವೆ ರಾಣಿ ಸತೀಶ್‌ ಡಿಸೈನಿಂಗ್‌ ಪ್ರಪಂಚ!

Celebrity Fashion corner

ಸಂದರ್ಶನ: ಶೀಲಾ ಸಿ. ಶೆಟ್ಟಿ

ಹಿರಿಯ ರಾಜಕಾರಣಿ ರಾಣಿ ಸತೀಶ್‌ ಡಿಸೈನರ್‌ ಎಂಬುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ! ಹಾಗೆಂದು ಇವರು ಯಾವುದೇ ಫ್ಯಾಷನ್‌ ಡಿಗ್ರಿ ಪಡೆದಿಲ್ಲ. ಆದರೆ, ಅವರಿಗೆ ಮೊದಲಿನಿಂದಲೂ ಇದ್ದ ಫ್ಯಾಷನ್‌ ಒಲವು ಇಂದು ಸೆಲ್ಫ್‌ ಡಿಕ್ಲೇರ್ಡ್‌ ಡಿಸೈನರ್‌ ಆಗುವಂತೆ ಮಾಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ಅವರು ಸಾಕಷ್ಟು ಡಿಸೈನ್‌ ಹಾಗೂ ಫ್ಯಾಷನ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಆಗಾಗ ಭಾಗವಹಿಸುತ್ತಾರೆ. ಇನ್ನು ಇಂದಿಗೂ ರಾಜಕೀಯ ಹಾಗೂ ಸಾಮಾಜಿಕ ಕಾರ್ಯದಲ್ಲಿಎಷ್ಟೇ ಬ್ಯುಸಿಯಾಗಿದ್ದರೂ ಸಿಗುವ ಒಂದಿಷ್ಟು ಸಮಯವನ್ನು ವ್ಯರ್ಥ ಮಾಡದೇ ತಮ್ಮನ್ನು ಹ್ಯಾಂಡ್‌ಮೇಡ್‌ ಡಿಸೈನಿಂಗ್‌ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಮಿಕ್ಸ್‌ ಆ್ಯಂಡ್‌ ಮ್ಯಾಚ್‌ ಸೀರೆಗಳು ಇವತ್ತಿನ ಟ್ರೆಂಡ್‌. ಆದರೆ, ರಾಣಿ ಸತೀಶ್‌ ಅವರು ದಶಕಗಳ ಮೊದಲೇ ಈ ಟ್ರೆಂಡನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇವರು ಪ್ರೊಫೆಷನಲ್‌ ಆಗಿ ಹಿರಿಯ ರಾಜಕೀಯ ಧುರೀಣೆಯಾಗಿರಬಹುದು. ಮಾಜಿ ಸಚಿವೆ ಸ್ಥಾನ ಅಲಂಕರಿಸಿ ನಿರ್ಗಮಿಸಿರಬಹುದು. ಒಟ್ಟಾರೆ ಇವರ ಮನೆಯೊಳಗಿನ ಪ್ರಪಂಚವೇ ಬೇರೆ. ಇವರ ಜೀವನಶೈಲಿಯೇ ಬೇರೆ. ಈ ಬಗ್ಗೆ ವಿಸ್ತಾರದೊಂದಿಗೆ ನೀಡಿರುವ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ವಿಸ್ತಾರ: ಸಿಕ್ಕ ಸಮಯವನ್ನು ವ್ಯರ್ಥ ಮಾಡದೇ ಡಿಸೈನಿಂಗ್‌ ಮಾಡುತ್ತೀರಂತೆ?

ರಾಣಿ ಸತೀಶ್‌: ಹೌದು. ನನಗೆ ಚಿಕ್ಕವಳಾಗಿರುವಾಗಿನಿಂದಲೂ ಫ್ಯಾಷನ್‌ ಡಿಸೈನಿಂಗ್‌ ಬಗ್ಗೆ ಅತೀವ ಆಸಕ್ತಿ. ಈ ಕುರಿತಂತೆ ವ್ಯಾಸಂಗ ಮಾಡಲಾಗಲಿಲ್ಲ. ಆದರೆ, ನನ್ನದೇ ಆದ ಸಾಕಷ್ಟು ಹ್ಯಾಂಡ್‌ವರ್ಕ್ ಡಿಸೈನ್‌ಗಳನ್ನು ರೂಪಿಸಿ ಸೀರೆ ಬ್ಲೌಸ್‌ಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇನೆ. ಮೆಷಿನ್‌ ವರ್ಕ್ ಮಾಡುವುದಿಲ್ಲ. ಇಂದಿಗೂ ಇದಕ್ಕಾಗಿ ಸೂಜಿ- ಕಲರ್‌ಫುಲ್‌ ದಾರ ಬಳಸಿ ಥ್ರೆಡ್‌ ವರ್ಕ್ ಮಾಡುತ್ತೇನೆ.

ವಿಸ್ತಾರ: ನಿಮ್ಮ ಡಿಸೈನಿಂಗ್‌ ಪ್ಯಾಷನ್‌ ಬಗ್ಗೆ ವಿವರಿಸಿ.

ರಾಣಿ ಸತೀಶ್‌: ರಾಜಕೀಯದಲ್ಲಿ ಸಕ್ರಿಯವಾಗಿದ್ದಾಗಲೂ ನನಗೆ ಡಿಸೈನಿಂಗ್‌ ಮಾಡುವ ಪ್ಯಾಷನ್‌ ಇತ್ತು. ಈಗಲೂ ಡಿಸೈನಿಂಗ್‌ಗೆ ಬೇಕಾದ ಎಲ್ಲಾ ಬಗೆಯ ಡಿಸೈನರ್‌ ಬಾಕ್ಸ್‌ ನನ್ನ ಬಳಿ ಇದೆ. ಅವಶ್ಯವಿರುವ ಕಲರ್‌ಫುಲ್‌ ದಾರಗಳ ಡಬ್ಬಿ, ಬಗೆಬಗೆಯ ಹ್ಯಾಂಡ್‌ ಎಂಬ್ರಾಯ್ಡರಿ ಮಾಡುವಂತಹ ಸೂಜಿಗಳಿವೆ. ಎಂಬ್ರಾಯ್ಡರಿಗೆ ಬೇಕಾಗುವ ಎಲ್ಲಾ ಬಗೆಯ ಪರಿಕರಗಳಿವೆ. ಕೆಲಸಗಳಿಂದ ಪುರಸೊತ್ತು ಸಿಕ್ಕಾಗ ಸಿಂಪಲ್‌ ಸೀರೆಗಳಿಗೆ ದಾರದಲ್ಲೆ ಚಿತ್ತಾರ ಬಿಡಿಸುತ್ತಾ ಟೈಮ್‌ ಪಾಸ್‌ ಮಾಡುವುದು ನನಗೆ ರೂಢಿಯಾಗಿದೆ. ನಿಮಗೆ ಗೊತ್ತೇ! ಒಮ್ಮೆ ಒಂದು ಸೀರೆಯನ್ನು 6 ತಿಂಗಳವರೆಗೂ ಡಿಸೈನ್‌ ಮಾಡಿದ್ದೆ ಎಂದರೇ ನಂಬುತ್ತೀರಾ!

ವಿಸ್ತಾರ: ಸೀರೆಗಳನ್ನು ಡಿಸೈನ್‌ ಮಾಡುವವರಿಗೆ ಏನಾದರೂ ಟಿಪ್ಸ್‌ ನೀಡುವಿರಾ?

ರಾಣಿ ಸತೀಶ್‌: ಹ್ಹಹ್ಹಹ್ಹ……ಬೇಕಾದಷ್ಟು ನೀಡಬಲ್ಲೆ. ಯಾವುದೇ ಸಾದಾ ಸೀರೆಯನ್ನು ನಾವು ಡಿಸೈನರ್‌ ಸೀರೆಯಾಗಿಸಬಹುದು. ಅದಕ್ಕೆ ನಿಮ್ಮ ಮನಸ್ಸು ಕ್ರಿಯಾತ್ಮಕವಾಗಿರಬೇಕು. ಇದಕ್ಕಾಗಿ ಮೆಷಿನ್‌ಗಳು ಬೇಕಾಗಿಲ್ಲ. ನಿಮ್ಮ ಸೀರೆಗಳನ್ನು ನೀವೇ ಖುದ್ದು ಸೂಜಿ-ದಾರದಿಂದಲೇ ಡಿಸೈನ್‌ ಮಾಡಬಹುದು.

ಅಷ್ಟೇ ಏಕೆ? ನಿಮ್ಮ ಸೀರೆ ಹಳತಾಯಿತಾ! ಇಲ್ಲವೇ ಸುಟ್ಟು ಹೋಯಿತಾ! ಖಂಡಿತಾ ಅದನ್ನು ಎಸೆಯಬೇಡಿ. ಅದನ್ನು ಜೋಪಾನವಾಗಿರಿಸಿ. ಒಂದಲ್ಲ ಒಂದು ದಿನ ಅದು ನಿಮ್ಮ ಡಿಸೈನರ್‌ ಸೀರೆಯಾಗಬಹುದು.

ಇನ್ನು ಹಳೆ ಬಾರ್ಡರ್‌ ರೇಷ್ಮೆ ಸೀರೆಯನ್ನು ಪಾತ್ರೆಯವನಿಗೆ ಕೊಡುತ್ತಿದ್ದೀರಾ! ದಯವಿಟ್ಟು ಅದನ್ನು ನೀಡಬೇಡಿ. ಯಾಕಂದ್ರೆ, ಅದು ಮುಂದೊಮ್ಮೆ ನಿಮ್ಮ ಮಿಕ್ಸ್‌-ಮ್ಯಾಚ್‌ ಡಿಸೈನರ್‌ ಸೀರೆಯಾಗಬಹುದು.

ವಿಸ್ತಾರ: ನಿವೃತ್ತ ಜೀವನದಲ್ಲೂ ಸಮಯ ವ್ಯರ್ಥ ಮಾಡದೇ ಡಿಸೈನ್‌ ಮಾಡುತ್ತೀರಲ್ಲ, ಯಾಕೆ?

ರಾಣಿ ಸತೀಶ್‌: ನಮಗಿಷ್ಟವಾದ ಕೆಲಸ ಮಾಡುವಾಗ ನಮಗೆ ನೆಮ್ಮದಿ ಹಾಗೂ ಆತ್ಮತೃಪ್ತಿ ಸಿಗುತ್ತದೆ. ಅದು ಯಾವುದೇ ಕ್ಷೇತ್ರವಾಗಬಹುದು. ಇದು ನನ್ನ ಹವ್ಯಾಸ. ಇದರಿಂದ ಸಂತೋಷ ದೊರಕುತ್ತದೆ. ಹೊಸ ಡಿಸೈನ್‌ ಕಂಡು ಹಿಡಿದಾಗ ಸಿಗುವ ಸಂತೋಷವೇ ಬೇರೆ. ಅದನ್ನು ವರ್ಣಿಸಲಾಗದು.

ಮಾಜಿ ಸಚಿವೆ ರಾಣಿ ಸತೀಶ್‌ ಅವರ ಲೈಫ್‌ಸ್ಟೈಲ್‌

· ಸೀರೆ-ಬ್ಲೌಸ್‌ಗಳಿಗೆ ಖುದ್ದು ಡಿಸೈನ್‌ ಮಾಡಿ ಧರಿಸುವುದು ಸಂತೋಷ ನೀಡುತ್ತದಂತೆ.

· ಅಮ್ಮನ ಕಾಲದ ಹೊಲಿಗೆ ಮೆಷಿನ್‌ ಇಂದಿಗೂ ಮನೆಯಲ್ಲಿದೆಯಂತೆ.

· ಸುಮಾರು ಇನ್ನೂರಕ್ಕೂ ಹೆಚ್ಚು ಸೀರೆ ಹಾಗೂ ಬ್ಲೌಸ್‌ಗಳಿಗೆ ಖುದ್ದು ಎಂಬ್ರಾಯ್ಡರಿ ಮಾಡಿದ್ದಾರಂತೆ.

· ಹಳೇ ಕಾಲದ ಹಂಡೆ, ಕೊಳಗ ಎಲ್ಲವೂ ಇವರ ಕೈಗಳಲ್ಲಿ ಮನೆಯ ಅಲಂಕಾರಿಕ ವಸ್ತುಗಳಾಗಿ ಮಾರ್ಪಟ್ಟಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Celebrity Fashion Corner | ಆತ್ಮವಿಶ್ವಾಸವೇ ಸೌಂದರ್ಯದ ಪ್ರತಿಬಿಂಬ: ಪ್ರತಿಭಾ ಸೌಂಶಿಮಠ್‌

Exit mobile version