“ಆ ರಾತ್ರಿ ನಾನು ನೆಮ್ಮದಿಯಿಂದ ನಿದ್ದೆ ಮಾಡಿದ್ದೆ. ಬೆಳಗ್ಗೆ ಎದ್ದ ಮೇಲೆ ನನಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿತು. ರಾತ್ರಿ ಬೆಳಗಾಗುವುದರೊಳಗೆ ಬದುಕಿನಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?”
ಶ್, ಫಿರ್ ಕೋಯಿ ಹೆ, ಟ್ವಿಂಕಲ್ ಬ್ಯೂಟಿ ಪಾರ್ಲರ್ ಮತ್ತಿತರ ಟಿವಿ ಶೋಗಳಿಂದ ಪ್ರಸಿದ್ಧಿ ಪಡೆದಿದ್ದ ನಟಿ ಛವಿ ಮಿತ್ತಲ್ ತನ್ನ ಸ್ತನ ಕ್ಯಾನ್ಸರ್ ಕುರಿತಾದ ಅನುಭವಗಳನ್ನು ಬಿಚ್ಚಿಟ್ಟಿದ್ದು ಹೀಗೆ. ತನ್ನ ಅನುಭವಗಳನ್ನು ಹೀಗೆ ಬಹಿರಂಗವಾಗಿ ಹಂಚಿಕೊಳ್ಳುವ ಮೂಲಕ ಮಹಿಳೆಯರಲ್ಲಿ ಈ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
“ಸ್ತನ ಕ್ಯಾನ್ಸರ್ ನನಗೆ ತಿಳಿದುದು ಒಂದು ಆಕಸ್ಮಿಕ ಘಟನೆ. ನಾನು ಆ ದಿನ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಮಯ ನನ್ನ ಎದೆಯ ಭಾಗಕ್ಕೆ ಪೆಟ್ಟಾಗಿತ್ತು. ಹಾಗಾಗಿ ಡಾಕ್ಟರ್ ಬಳಿ ಹೋಗಿದ್ದೆ. ಅವರು ಎಂಆರ್‌ಐ ಮಾಡಿದ ಸಂದರ್ಭ ಇನ್ನೊಂದು ಭಾಗದಲ್ಲಿ ಗಡ್ಡೆಯಿರುವುದನ್ನು ಪತ್ತೆ ಹಚ್ಚಿದರು. ಅವರು ಕೂಡಲೇ ಬಯಾಪ್ಸಿ ಹಾಗೂ ಸೋನೋಗ್ರಫಿ ಮಾಡುವಂತೆ ಹೇಳಿದ್ದರಿಂದ ನನಗೆ ಸ್ತನ ಕ್ಯಾನ್ಸರ್ ಇರುವುದು ತಿಳಿಯಿತು” ಎಂದಿದ್ದಾರೆ.
“ವಿಷಯ ತಿಳಿದಾಗ ನಾನು ಶಾಂತವಾಗಿಯೇ ಪ್ರತಿಕ್ರಿಯಿಸಿದೆ. ಅಳಲಿಲ್ಲ. ನಾನು ಯಾವಾಗಲೂ ಸಣ್ಣ ಸಣ್ಣ ವಿಚಾರಕ್ಕೆ ಹೆಚ್ಚು ಕಳವಳಗೊಳ್ಳುತ್ತೇನೆ. ಆದರೆ, ದೊಡ್ಡ ತೊಂದರೆ ಎದುರಾದಾಗ ಶಾಂತವಾಗಿಯೇ ನಿಭಾಯಿಸುತ್ತೇನೆ. ಈ ಬಾರಿಯೂ ಹಾಗೇ ಆಯಿತು. ನಾನು ಶಾಂತವಾಗಿದ್ದರೂ, ನನಗೀ ಸುದ್ದಿಯನ್ನು ಅರಗಿಸಿಕೊಳ್ಳಲು ಹೆಚ್ಚು ಹೊತ್ತೇ ಬೇಕಾಯಿತು. ಈ ಸತ್ಯವನ್ನು ಒಪ್ಪಿಕೊಳ್ಳಲು ಕೆಲ ದಿನಗಳೇ ಬೇಕಾಯಿತು” ಎಂದಿದ್ದಾರೆ.
“ವಿಷಯ ತಿಳಿದ ಮೇಲೆ ನಾನು ತಕ್ಷಣ ಕಾರ್ಯಪ್ರವೃತ್ತಳಾದೆ. ಹಲವು ವೈದ್ಯರನ್ನು ಭೇಟಿಯಾದೆ. ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾದ ಹಲವರನ್ನು ಕಂಡು ಮಾತನಾಡಿದೆ. ಅವರು ಮಾನಸಿಕವಾಗಿ ದೈಹಿಕವಾಗಿ ಅದರಿಂದ ಹೊರಬಂದ ಬಗೆಯನ್ನು ಕೇಳಿದೆ. ಈ ಎಲ್ಲ ಭೇಟಿಗಳಿಂದಾಗಿ ಆರಂಭದ ಹಂತದಲ್ಲಿ ಪತ್ತೆಯಾದಷ್ಟೂ ಪೂರ್ತಿ ಗುಣಮುಖರಾಗುವ ಸಾಧ್ಯತೆ ಹೆಚ್ಚು ಎಂಬುದು ಮನವರಿಕೆಯಾಯಿತು” ಎಂದಿದ್ದಾರೆ.
ಇದಕ್ಕಾಗಿಯೇ ವೈದ್ಯರು ಆದಷ್ಟೂ ಮೊದಲೇ ಆರಂಭಿಕ ಹಂತದಲ್ಲೇ ಪತ್ತೆ ಮಾಡಲು, ಸ್ವಪರೀಕ್ಷೆ ಮಾಡಿಕೊಳ್ಳಲು ಹೆಚ್ಚು ಹೆಚ್ಚು ಒತ್ತು ನೀಡುತ್ತಾರೆ. ಈ ಬಗ್ಗೆ ಗ್ರಾಮೀಣ ಜನರಲ್ಲಿ ಹೆಚ್ಚು ತಿಳುವಳಿಕೆ ಮೂಡಬೇಕು. ಆದಷ್ಟೂ ಬೇಗ ಗೊತ್ತಾದರೆ ರೋಗಿಯನ್ನು ಪೂರ್ತಿಯಾಗಿ ಗುಣಪಡಿಸಲು ನೆರವಾಗುತ್ತದೆ. ಹಾಗಾಗಿ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಸ್ತನ ಪರೀಕ್ಷೆಯಂಥ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದೂ ತಿಳಿಸಿದ್ದಾರೆ.
“ನನ್ನ ಪರೀಕ್ಷೆಯ ಸಂದರ್ಭ ವೈದ್ಯರು, ಅದೇನೋ ಗಡ್ಡೆಯಂತೆ ಕಾಣುತ್ತಿದೆ ಎಂದಾಗ ನಾನು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಬಯಾಪ್ಸಿ ಮಾಡಿಸಿಕೊಳ್ಳಲೂ ನಾನು ಹಿಂದೇಟು ಹಾಕಿದ್ದೆ. ಆದರೆ ವರದಿ ಬರುವ ಮೊದಲೇ ನಾನು ಸಾಕಷ್ಟು ಹೆದರಿಬಿಟ್ಟಿದ್ದೆ. ನನಗೆ ಕ್ಯಾನ್ಸರ್ ಬೇಡವಾಗಿತ್ತು. ಬಹುಶಃ ಎಲ್ಲರೂ ನನ್ನಂತಯೇ ಅಂದುಕೊಳ್ಳುತ್ತಾರೆ” ಎಂದು ಛವಿ ಹೇಳಿದ್ದಾರೆ.
“ನನ್ನ ಕುಟುಂಬ ನನ್ನ ದೊಡ್ಡ ಶಕ್ತಿ. ನನ್ನ ಗಂಡ ನನ್ನ ಬೆನ್ನೆಲುಬಾಗಿ ನಿಂತರು. ಅವರು ಆಸ್ಪತ್ರೆಯಲ್ಲಿ, ಮನೆಯಲ್ಲಿ ಎಲ್ಲವನ್ನೂ ನಿಭಾಯಿಸಿದರು. ನನ್ನ ಮಕ್ಕಳೂ ನನ್ನನ್ನು ಅರ್ಥಮಾಡಿಕೊಂಡರು. ನನ್ನ ಒಂಬತ್ತು ವರ್ಷದ ಮಗಳು ವಿಷಯ ಕೇಳಿ ಅತ್ತುಬಿಟ್ಟಳು. ನೋಡು, ಇದೂ ಎಲ್ಲ ರೋಗಗಳಂತೆ, ನಾನು ಇದರ ವಿರುದ್ಧವೂ ಹೋರಾಡಿ ಗೆದ್ದು ಬರುವೆ ಎಂದೆ. ನನ್ನ ಮಗನಿಗೆ ಇನ್ನೂ ಮೂರು ವರ್ಷ. ಆತನಿನ್ನೂ ಪರಿಸ್ಥಿತಿ ಅರಿಯುವಷ್ಟು ದೊಡ್ಡವನಲ್ಲ. ಆದರೂ, ಅಮ್ಮನಿಗೇನೋ ತೊಂದರೆಯಾಗಿದೆ ಎಂದು ಅರ್ಥ ಮಾಡಿಕೊಂಡಿದ್ದಾನೆ. ಅಮ್ಮ ತನ್ನನ್ನು ಎಂದಿನಂತೆ ಮುದ್ದು ಮಾಡುವ ಸ್ಥಿತಿಯಲ್ಲಿಲ್ಲ ಎಂಬುದನ್ನು ಸರಿಯಾಗಿಯೇ ಗ್ರಹಿಸಿಕೊಂಡು, ಪ್ರೌಢವಾಗಿ ನಡೆದುಕೊಂಡಿದ್ದಾನೆ, ಆಸ್ಪತ್ರೆಯಲ್ಲೂ ನನಗೆ ಸಹಕಾರ ನೀಡಿದ” ಎಂದು ಹೇಳಿ ಭಾವುಕರಾಗಿದ್ದಾರೆ.
ಇದನ್ನೂ ಓದಿ: Dostarlimab ಕ್ಯಾನ್ಸರ್‌ಗೆ ಮಾಯಾಮದ್ದು ಆಗಬಹುದಾ? ಎಲ್ಲರ ಕೈಗೆ ಸಿಗುತ್ತಾ? ಸ್ವಲ್ಪ ತಾಳಿ!
“ಹೊಟ್ಟೆಯಲ್ಲಿ ಮಗು ಇದ್ದಾಗ ಮಗು ಹೊರಬರಲೇಬೇಕು. ಸರ್ಜರಿ ಮಾಡುತ್ತಾರೆಂದು ಗಾಬರಿಯಾಗುವ ಅವಶ್ಯಕತೆಯಿಲ್ಲ. ಇಲ್ಲೂ ಹಾಗೆಯೇ. ಶಸ್ತ್ರಚಿಕಿತ್ಸೆಗೆ ನಾನು ಅದೇ ರೀತಿ ಸ್ಪಂದಿಸಿದೆ. ಎರಡು ತಿಂಗಳಿಂದ ಚಿಕಿತ್ಸೆಯಲ್ಲಿದ್ದೇನೆ. ಈಗಷ್ಟೇ ೧೫ ದಿನಗಳ ಹಿಂದೆ ರೇಡಿಯೇಶನ್ ಮುಗಿಸಿದೆ. ಇನ್ನೂ ನೋವು ಹೋಗಿಲ್ಲ. ಖುಷಿಯ ದಿನಗಳಂತೆ ದುಃಖದ ದಿನಗಳೂ ಇರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು” ಎಂದೂ ಹೇಳಿದ್ದಾರೆ.
ನಾನು ಮೊದಲು ಅತ್ಯಂತ ಬ್ಯುಸಿ ಆಗಿದ್ದೆ. ನನ್ನ ಮಕ್ಕಳು, ಕೆಲಸ ಎಂದು ಓಡಾಡಿಕೊಂಡಿದ್ದೆ. ಹೆಚ್ಚು ಒತ್ತಡ ಅನುಭವಿಸುತ್ತಿದ್ದೆ. ಎಲ್ಲ ಕೆಲಸಗಳೂ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತಿದ್ದೆ. ಈ ನಡುವೆ ನನಗಾಗಿ ಎಂದೂ ಸಮಯ ಸಿಕ್ಕಿರಲಿಲ್ಲ. ಮುಖ್ಯವಾಗಿ ನನಗಾಗಿ ಸಮಯ ಮಾಡಿಕೊಳ್ಳಲಿಲ್ಲ ಎನ್ನಬೇಕು. ನಮ್ಮ ದೇಶದ ಹೆಣ್ಣುಮಕ್ಕಳ ಹಣೆಬರಹವೇ ಇಷ್ಟು. ಅವರು ಅವರಿಗಾಗಿ ಎಂದಿಗೂ ಸಮಯ ಮಾಡಿಕೊಳ್ಳುವುದಿಲ್ಲ. ಇದನ್ನು ನಾವು ಮೊದಲು ಅರಿತುಕೊಳ್ಳಬೇಕು. ನಮಗಾಗಿ ಸಮಯ ಮೀಸಲಿಡಬೇಕು” ಎಂದಿದ್ದಾರೆ.
ಸ್ತನ ಕ್ಯಾನ್ಸರ್ ಬಗೆಗೆ ಕಿವಿಮಾತು:
೧. ಸ್ವಪರೀಕ್ಷೆ, ವೈದ್ಯಪರೀಕ್ಷೆ, ಮೆಮೋಗ್ರಾಂ ಇವು ಅತ್ಯಗತ್ಯ. ಪ್ರತಿ ತಿಂಗಳು ನಿಮ್ಮನ್ನು ನೀವು ಪರೀಕ್ಷೆ ಮಾಡಿಕೊಳ್ಳಿ. ಪ್ರತಿ ಸ್ತನದಲ್ಲೂ ಗಂಟು, ಗಡ್ಡೆ ಅಥವಾ ಬಣ್ಣದಲ್ಲಿ ವ್ಯತ್ಯಾಸ ಇತ್ಯಾದಿ ಏನೇ ಬದಲಾವಣೆ ಕಂಡರೂ ವೈದ್ಯರನ್ನು ಸಂಪರ್ಕಿಸಿ.
೨. ೪೦ ದಾಟಿದ ಪ್ರತಿ ಮಹಿಳೆಯೂ ವರ್ಷಕ್ಕೊಮ್ಮೆ ಮೆಮೋಗ್ರಾಂ ಮಾಡಿಸಿಕೊಳ್ಳಬೇಕು. ಇದು ನಿಮಗೆ ನೀವೇ ಕೊಡುವ ಉಡುಗೊರೆ ಎಂದು ಅಂದುಕೊಳ್ಳಬೇಕು.
೩. ಸ್ತನ ಕ್ಯಾನ್ಸರ್ ಅತೀ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದ್ದು, ಬ್ರೆಸ್ಟ್ ಕ್ಯಾನ್ಸರ್ ಇಂಡಿಯಾ ಪ್ರಕಾರ, ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಂದು ಪ್ರಕರಣದಂತೆ ದಾಖಲಾಗುತ್ತದೆ. ಪ್ರತಿ ೨೧ ಮಹಿಳೆಯರಲ್ಲಿ ಒಬ್ಬರು ಇಂದು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮೊದಲು ಪತ್ತೆಹಚ್ಚಿದ ಪ್ರಕರಣಗಳಲ್ಲಿ ಶೇ.೧೦೦ರಷ್ಟು ಗುಣಮುಖ ಹೊಂದುವ ಭರವಸೆ ಇದೆ.
ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗಾಗಿ ಕೇಶ ದಾನ ಮಾಡಿ ಮಾದರಿಯಾದಳು ಈ ಬಾಲೆ!