ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯವನ್ನು ಬೆಳೆಸುವುದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತೀ ಅವಶ್ಯಕ. ಆತ್ಮವಿಶ್ವಾಸವಿಲ್ಲದ ಮಗು ಯಾವುದೇ ಗುರಿಯನ್ನು ತಲುಪುವಲ್ಲಿ ಎಡವುತ್ತದೆ. ಅಥವಾ ತಮಗೆ ಬಂದ ಅವಕಾಶಗಳನ್ನಷ್ಟೆ ತೆಗೆದುಕೊಂಡು ಹೆಚ್ಚಿನ ಕನಸು ಕಾಣುವಲ್ಲಿ, ಆ ಕಡೆಗೆ ಲಕ್ಷ್ಯ ಇಡುವಲ್ಲಿ ಮನಸ್ಸು ಮಾಡುವುದಿಲ್ಲ. ನಿರಾಶಾವಾದಿಗಳಂತೆ ಕಾಣುವ ಇವರನ್ನು ಎಳವೆಯಲ್ಲಿಯೇ ಆಶಾವಾದದತ್ತ, ಆತ್ಮವಿಶ್ವಾಸದತ್ತ ಮುನ್ನುಗ್ಗುವಂತೆ ಮಾಡುವುದು ಹೆತ್ತವರ ದೊಡ್ಡ ಚಾಲೆಂಜ್. ಆದರೂ ಹೆತ್ತವರು ಈ ಸವಾಲನ್ನು ತೆಗೆದುಕೊಂಡು ಕೆಲವು ಸರಳ, ಸುಲಭ ನಡೆಗಳ ಮೂಲಕ ಗೆಲುವಿನ ಹಾದಿಯತ್ತ ಅವರನ್ನು ಕೊಂಡೊಯ್ಯಲು ಪ್ರೇರೇಪಿಸಬಹುದು.
೧. ಸಣ್ಣ ಸಣ್ಣ ಗುರಿಗಳನ್ನು ಅವರೆದುರಿಗಿಡಿ. ವಾರದಲ್ಲಿ ಕನಿಷ್ಟ ಒಂದು ಸಣ್ಣ ಗುರಿ ನಿಮ್ಮ ಮಕ್ಕಳಿಗೆ ಕೊಡಿ. ಇದು ತೀರಾ ಸಣ್ಣ ಮಕ್ಕಳಿಗಲ್ಲ ಎಂಬುದು ನೆನಪಿನಲ್ಲಿಡಿ. ಕೆಲವು ವಾರ ಸರಳ ಸುಲಭ ಗಣಿತ ಪರೀಕ್ಷೆಯೋ, ಅಥವಾ ಕಥೆ ಪುಸ್ತಕ ಓದುವಂತ ಚಾಲೆಂಜೋ, ಅಥವಾ ಅವರ ಇಷ್ಟದ ಆಟವನ್ನು ಇಂತಿಷ್ಟು ಸಮಯದೊಳಗೆ ಆಡಿ ಮುಗಿಸುವ ಅವರ ಕೈಯಲ್ಲಿ ಸಾಧ್ಯವಾಗುವಂಥ, ಅವರವರ ಮಟ್ಟಕ್ಕೆ ಅನುಸಾರವಾಗಿ ಕೊಡಿ. ಅವರು ಆ ಗುರಿಯನ್ನು ತಲುಪಿದಾಗ ಅದನ್ನು ಸಂಭ್ರಮಿಸಿ. ಅವರಲ್ಲಿ ತಾನದನ್ನು ಪೂರ್ಣಗೊಳಿಸಿದೆ ಎಂಬ ಭಾವ ಬರಲಿ.
೨. ಅವರ ವಯಸ್ಸಿಗೆ ಅನುಗುಣವಾಗಿ, ಪಠ್ಯೇತರವಾದ ಕೆಲವು ಕೆಲಸಗಳನ್ನು ಆಗಾಗ ಕೊಡಿ. ಉದಾಹರಣೆಗೆ, ನಿಮ್ಮ ಮಗು ೧೦ ವರ್ಷವನ್ನಾದರೂ ತಲುಪಿದ್ದರೆ, ಕೆಲವೊಮ್ಮೆ ಅವರನ್ನು ಅಂಗಡಿಗೆ ಕಳಿಸಿ, ಇಂಥ ಸಾಮಾನು ತೆಗೆದುಕೊಂಡು ಬಾ ಎಂದು ಒಬ್ಬರೇ ಕಳಿಸಬಹುದು. ವ್ಯವಹಾರ ಮಾಡುವುದು, ಜನರೊಂದಿಗೆ ಬೆರೆಯುವುದು ಅವರನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ.
೩. ನಿಮಗೆ ಆತ್ಮಸ್ಥೈರ್ಯ ಇಲ್ಲದೆ, ನೀವು ನಿಮ್ಮ ಮಗುವಿಗೆ ಅದನ್ನು ಹೇಳಿ ಕೊಡಲಾರಿರಿ. ಮೊದಲು ನಿಮ್ಮ ವೀಕ್‌ನೆಸ್‌ಗಳನ್ನು ಪತ್ತೆ ಹಚ್ಚಿ ಸರಿಮಾಡಿಕೊಳ್ಳಿ. ಆಗ ಅವರೂ ನಿಮ್ಮೊಂದಿಗೆ ಹೆಜ್ಜೆಯಿಡುತ್ತಾರೆ.
೪. ಎಡವಲು ಬಿಡಿ. ಸೋಲುಗಳು ಖಂಡಿತ ಮುಂದೆ ಹೋಗಲು ಪ್ರೇರೇಪಿಸುತ್ತದೆ. ಆತ್ಮಸ್ಥೈರ್ಯ ಬರಲಿ ಎಂದು ಟಾಸ್ಕ್‌ಗಳನ್ನು ಕೊಟ್ಟು ಅವರು ಗೆಲ್ಲಲಿ ಎಂದು ಸುಲಭವಾಗಿ ಗೆಲ್ಲಲು ಬೇಕೆಂದೇ ಅನುವು ಮಾಡಬಾರದು. ಇದರಿಂದ ಅದೇ ಅಭ್ಯಾಸವಾಗಿ ಮಗು ಸೋಲನ್ನು ಸ್ವೀಕರಿಸದ ಮನಸ್ಥಿತಿ ಬೆಳೆಸಿಕೊಳ್ಳುತ್ತದೆ. ಹಾಗಾಗಿ ಆಗಾಗ ಆಟದಲ್ಲಿ ನೀವು ಮಗುವನ್ನು ಸೋಲಿಸಿ. ಪ್ರತೀ ಸಲ ಅವರೇ ಗೆಲ್ಲಬಾರದು.
೫. ತಪ್ಪುಗಳನ್ನು ಹುಡುಕಿ ಹುಡುಕಿ ಪದೇ ಪದೆ ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಬೇಡಿ. ಮಕ್ಕಳು ತಪ್ಪುಗಳನ್ನು ಮಾಡಲಿ. ಮಾಡಿದ್ದನ್ನು ಅವರಿಗೆ ಮನದಟ್ಟು ಮಾಡಿ. ಎಲ್ಲಿ ತಪ್ಪಾಯಿತು, ಯಾಕೆ ಆಯಿತು ಎಂಬುದನ್ನು ವಿವರಿಸಿ. ಆಮೇಲೆ ಆ ವಿಷಯ ಬಿಟ್ಟುಬಿಡಿ. ಅಷ್ಟೇ.
೬. ಅವರನ್ನು ಕಂಫರ್ಟ್ ಝೋನ್‌ನಿಂದ ಹೊರಗೆ ತಳ್ಳಿ. ಹಾಗಂತ ಬಲವಂತವಾಗಿ ಒಮ್ಮೆಲೇ ಅಲ್ಲ. ನಿಧಾನವಾಗಿ ಕೆಲವೊಮ್ಮೆ ಅವರು ಕಂಫರ್ಟ್ ಝೋನಿನಿಂದ ಹೊರಗಿರುವುದನ್ನು ಅಭ್ಯಾಸ ಮಾಡಿಕೊಳ್ಳಲಿ. ಆಗಷ್ಟೇ ಬೆಳವಣಿಗೆ ಸಾಧ್ಯ.
೭. ಅವರ ಅಭಿಪ್ರಾವನ್ನು ಗೌರವಿಸಿ. ʻನೀನು ಸಣ್ಣವಳು/ನು, ಬಾಯ್ಮುಚ್ಚು, ದೊಡ್ಡವರು ಮಾತಾಡುವಾಗ ನಿನ್ನದೇನು?ʼ ಎಂದು ಪ್ರತಿ ಬಾರಿಯೂ ಗದರಬೇಡಿ. ಕೆಲವು ವಿಷಯಗಳಿಗೆ ಅವರು ಜೊತೆಗಿದ್ದಾಗ ಅವರ ಮಾತುಗಳನ್ನು ಕೇಳಿ. ಅವರ ಬಳಿಯೂ ಅಭಿಪ್ರಾಯಗಳಿರುತ್ತವೆ!
ಇದನ್ನೂ ಓದಿ: ಮಕ್ಕಳು ಸ್ಮಾರ್ಟ್ ಆಗಬೇಕೇ? ಅವರನ್ನು ಹೆಚ್ಚು ಅಪ್ಪಿಕೊಳ್ಳಿ!
೮. ಪಠ್ಯ, ಓದಿನ ಹೊರತಾಗಿಯೂ ಕುಟುಂಬದ ಕೆಲವು ಜವಾಬ್ದಾರಿಯುತ ಕೆಲಸಗಳನ್ನು ಅವರಿಗೆ ಕೊಡಿ. ಅವರದನ್ನು ನಿರ್ವಹಿಸಲಿ. ಕೇವಲ ಪಠ್ಯ ವಿಷಯಗಳು ಬದುಕಿನಲ್ಲಿ ಕೈ ಹಿಡಿಯುವುದಿಲ್ಲ.
೯. ಅವರ ಪ್ರಯತ್ನಗಳನ್ನು ಗೌರವಿಸಿ. ಅವರ ಪ್ರತಿಭೆ, ಯಾವುದೇ ಕೆಲಸಕ್ಕೆ ಅವರು ಮಾಡಿದ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ. ಉದಾಹರಣೆಗೆ, ಯಾವುದಾದರೊಂದು ಪರೀಕ್ಷೆಯಲ್ಲೋ, ಸ್ಪರ್ಧೆಯಲ್ಲೋ, ಉತ್ತಮ ಅಂಕ ಪಡೆದೋ, ಬಹುಮಾನವನ್ನೋ ಗಳಿಸಿದರೆ ʻನಿನ್ನ ಅದೃಷ್ಟʼ ಎನ್ನಬೇಡಿ. ʻನಿನ್ನ ಪ್ರಯತ್ನಕ್ಕೆ ತಕ್ಕ ಫಲ ಎನ್ನಿ. ನಿನ್ನ ಪ್ರಯತ್ನದ ಫಲ ನನಗೆ ಹೆಮ್ಮೆ ತಂದಿದೆʼ ಎನ್ನಿ.
೧೦. ತಮ್ಮ ಬಗ್ಗೆ ನೆಗೆಟಿವ್ ಭಾವನೆಗಳನ್ನು ಅವರು ಹೊಂದಿದ್ದರೆ ಅದರಿಂದ ಹೊರ ತರಲು ಪ್ರಯತ್ನಿಸಿ. ಉದಾಹರಣೆಗೆ, “ನಾನು ಸ್ಮಾರ್ಟ್ ಇಲ್ಲ, ನನಗದು ತಿಳಿದಿಲ್ಲ, ನಾನು ಮಾಡಲಾರೆ” ಥರದ ಮಾತುಗಳನ್ನಾಡುತ್ತಿದ್ದರೆ, ಬದಲಿಸಿಕೊಳ್ಳಿ. ʻನೀನು ಪ್ರಯತ್ನ ಪಡು, ಯಾಕೆ ಸಾಧ್ಯವಿಲ್ಲʼ ಎಂಬಂಥ ಉತ್ತೇಜಕ ಮಾತುಗಳನ್ನಾಡಿ. ಬದಲಾಗಿ “ಹೌದು, ನೀನು ಏನೇನೂ ಸಾಲದು” ಎಂದು ಮತ್ತಷ್ಟು ಕುಗ್ಗಿಸಬೇಡಿ.
ಇದನ್ನೂ ಓದಿ: ನನ್ನ ಅಮ್ಮ ಎಷ್ಟು ಅಸಾಧಾರಣಳೋ, ಅಷ್ಟೇ ಸರಳ… ತಾಯಿಯ ನೂರನೇ ಜನ್ಮದಿನ ನೂರೆಂಟು ನೆನಪು ಹರವಿಟ್ಟ ಪ್ರಧಾನಿ ಮೋದಿ