Site icon Vistara News

Cholesterol: ಕೊಲೆಸ್ಟೆರಾಲ್‌ ನಿಜಕ್ಕೂ ಕೆಟ್ಟದ್ದೇ? ಇದಕ್ಕೂ ಹೃದಯಾಘಾತಕ್ಕೂ ನೇರಾನೇರ ಸಂಬಂಧ ಇದೆಯೇ?

CHOLESTEROL CONCEPT

ಕೊಲೆಸ್ಟೆರಾಲ್‌ (cholesterol) ಎಂಬ ಪದ ಕೇಳಿದಾಕ್ಷಣ ನಮ್ಮಲ್ಲಿ ಭಯ ಮನೆ ಮಾಡುತ್ತದೆ. ಇತ್ತೀಚೆಗೆ ಹೆಚ್ಚಿರುವ ಹೃದಯಾಘಾತ (Heart Attack) ಮತ್ತಿತರ ಸಾವಿನ ವರದಿಗಳೂ, ಹೃದ್ರೋಗಕ್ಕೂ (Heart disease) ಕೊಲೆಸ್ಟೆರಾಲ್‌ಗೂ ನೇರಾನೇರ ಸಂಬಂಧ ಇರುವುದರಿಂದಲೂ ಕೊಲೆಸ್ಟೆರಾಲ್‌ ಇತ್ತೀಚಿಗಿನ ದಿನಗಳಲ್ಲಿ ಜನರಲ್ಲಿ ಭೀತಿ ಹುಟ್ಟಿಸಿರುವ ಪದವಾಗಿದೆ. ಆದರೆ, ಈ ಕೊಲೆಸ್ಟೆರಾಲ್‌ ಬಹಳ ವರ್ಷಗಳಿಂದ ತಪ್ಪಾಗಿಯೇ ಅರ್ಥೈಸಲಾಗುತ್ತಿದೆ ಎಂಬುದೂ ಅಷ್ಟೇ ಸತ್ಯ. ಕೊಲೆಸ್ಟೆರಾಲ್‌ ನಮ್ಮ ದೇಹದ ಪ್ರತಿಯೊಂದು ಜೀವಕೋಶಗಳಿಗೂ ಅತ್ಯಂತ ಅಗತ್ಯದ ಭಾಗವೂ ಆಗಿದೆ. ನಾವು ಸೇವಿಸುವ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಅಗತ್ಯವಾದ ಲೈಂಗಿಕ ಹಾರ್ಮೋನುಗಳು, ವಿಟಮಿನ್‌ ಡಿಯಂತಹ ಕೆಲವು ಜೀವಸತ್ವಗಳು ಮತ್ತು ಪಿತ್ತರಸ ಆಮ್ಲಗಳನ್ನು ಒಳಗೊಂಡಂತೆ ಸ್ಟೀರಾಯ್ಡ್‌ ಹಾರ್ಮೋನುಗಳನ್ನು ಉತ್ಪಾದಿಸಲು ಇವು ಬೇಕೇ ಬೇಕು. ಹಾಗಾಗಿ ಕೊಲೆಸ್ಟೆರಾಲ್‌ ಇಲ್ಲದೆ, ಯಾರೂ ಬದುಕಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಾವು ಮೊದಲು ಅರ್ಥೈಸಿಕೊಳ್ಳಬೇಕಿದೆ. ಆದರೆ, ಕೊಲೆಸ್ಟೆರಾಲ್‌, ಎಲ್ಲಿ ನಮಗೆ ಹಾನಿಯನ್ನುಂಟು ಮಾಡುತ್ತದೆ ಎಂಬ ಅರಿವೂ ನಮಗೆ ಬೇಕು.

ಹಾಗಾದರೆ, ನಾವು ಬಳಸುವ ಅತ್ಯಂತ ಸಾಮಾನ್ಯ ಪದವಾದ ಕೆಟ್ಟ ಕೊಲೆಸ್ಟೆರಾಲ್‌ ಎಂದರೇನು? ಕೊಲೆಸ್ಟೆರಾಲ್‌ನಲ್ಲಿ ಕೆಟ್ಟದ್ದು ಎಂಬುದೇ ಇಲ್ಲ. ಕೊಲೆಸ್ಟೆರಾಲ್‌ ಶೇಖರಣೆಯಿಂದ ವ್ಯಕ್ತಿ ದಪ್ಪಗಾಗುತ್ತಾರೆ ಎಂಬ ಅಭಿಪ್ರಾಯವೂ ತಪ್ಪು ಎಂಬ ವಾದವೂ ಇತ್ತೀಚೆಗಿನ ದಿನಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಕೊಲೆಸ್ಟೆರಾಲ್‌ ಹಾಗೂ ಟ್ರೈಗ್ಲಿಸರೈಡ್‌ ನೀರಿನಲ್ಲಿ ಕರಗುವುದಿಲ್ಲ. ಆದ್ದರಿಂದ ದೇಹದ ವಿವಿಧ ಅಂಗಾಂಶಗಳಿಗೆ ರಕ್ತದ ಮೂಲಕ ಅವುಗಳನ್ನು ಸಾಗಿಸಲು ಲಿಪೋ ಪ್ರೊಟೀನ್‌ಗಳು ಎಂದು ಕರೆಯಲ್ಪಡುವ ವಿಶೇಷ ಪ್ರೊಟೀನ್‌ಗಳ ಮೂಲಕ ಅವು ಸಾಗುತ್ತವೆ. ಇವುಗಳಲ್ಲಿ ಕಡಿಮೆ ಸಾಂದ್ರತೆಯ ಲಿಪೋಪ್ರೊಟೀನ್‌ (ಎಲ್‌ಡಿಎಲ್‌) ಹೃದಯ ಹಾಗೂ ಮೆದುಳಿಗೆ ರಕ್ತ ಪೂರೈಸುವ ನಾಳಗಳ ಬದಿಗಳಲ್ಲಿ ಅಂಟಿಕೊಂಡು ಅವುಗಳನ್ನು ಕಿರಿದಾಗಿಸುತ್ತದೆ. ಹೀಗಾಗಿ ಸರಾಗವಾದ ರಕ್ತ ಪೂರಣದಲ್ಲಿ ಸಮಸ್ಯೆಯಾಗುತ್ತದೆ. ಅದಕ್ಕಾಗಿಯೇ ಅವುಗಳನ್ನು ಕೆಟ್ಟ ಕೊಲೆಸ್ಟೆರಾಲ್‌ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಆದರೆ, ಹೆಚ್ಚಿನ ಸಾಂದ್ರತೆಯ ಲಿಪೋಪ್ರೊಟೀನ್‌ನನ್ನು ಎಚ್‌ಡಿಎಲ್‌ ಎಂದೂ ಒಳ್ಳೆಯ ಕೊಲೆಸ್ಟೆರಾಲ್‌ ಎಂದೂ ಕರೆಯಲಾಗುತ್ತದೆ.

ಆದರೆ, ಕೊಲೆಸ್ಟೆರಾಲ್‌ ಇತ್ತೀಚಿಗಿನ ವರ್ಷಗಳಲ್ಲಿ ನಾವೆಲ್ಲ ಅಂದುಕೊಂಡಷ್ಟು ಹೃದಯಕ್ಕೆ ಮಾರಕವಲ್ಲ (heart health) ಎಂಬ ವಾದಗಳು ಹುಟ್ಟಿಕೊಳ್ಳುತ್ತಿವೆ. ಖ್ಯಾತ ಬ್ರಿಟೀಷ್ ಹೃದ್ರೋಗ ತಜ್ಞ ಹಾಗೂ ಸ್ಟ್ಯಾಟಿನ್‌ ಫ್ರೀ ಲೈಫ್‌ ಸೇರಿದಂತೆ ಹಲವು ಪುಸ್ತಕಗಳ ಲೇಖಕ ಡಾ ಅಸೀಮ್‌ ಮಲ್ಹೋತ್ರಾ ಅವರು ಹೇಳುವಂತೆ, ಕೊಲೆಸ್ಟೆರಾಲ್‌ ಹೃದಯಕ್ಕೆ ಯಾವ ಬಗೆಯಲ್ಲಿ ಹಾಳು ಎಂಬ ಬಗೆಗೆ ಇನ್ನೂ ಸರಿಯಾಗಿ ವೈದ್ಯ ಜಗತ್ತಿಗೇ ತಿಳಿದಿಲ್ಲ ಎನ್ನುತ್ತಾರೆ. ಕೆಲವು ಔಷಧ ಉದ್ಯಮ ಪ್ರಾಯೋಜಿತ ಸಂಸ್ಥೆಗಳು ಕೊಲೆಸ್ಟೆರಾಲ್‌ ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನೂ ಕಡಿಮೆ ಮಾಡುವಲ್ಲಿ ಸೋತಿವೆ. ಹಾಗಾಗಿ ಕೆಲವು ಲಿಪೋ ಪ್ರೊಟೀನ್‌ಗಳು ಹೃದ್ರೋಗದ ಬೆಳವಣಿಗೆಗೆ ಕಾರಣವಾಗಿರಬಹುದೇ ಹೊರತು ಅವುಗಳೇ ಹೃದಯಾಘಾತಕ್ಕೆ ಕಾರಣಗಳು ಎನ್ನಲು ಯಾವುದೇ ಆಧಾರಗಳಿಲ್ಲ. ಆ ಬಗ್ಗೆ ಇಂದಿಗೂ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ ಎನ್ನುತ್ತಾರೆ.

ಕೇವಲ ಕೊಲೆಸ್ಟೆರಾಲ್‌ ಒಂದೇ ಒಂದು ಹೃದಯಾಘಾತಕ್ಕೆ ಕಾರಣವಾಗುವುದಿಲ್ಲ. ಬೇರೆ ಬೇರೆ ಅಂಶಗಳು ಪರಿಣಾಮ ಬೀರುತ್ತವೆ. ಮಧುಮೇಹ, ಧೂಮಪಾನ, ಅತಿಯಾದ ಕಾರ್ಬೋಹೈಡ್ರೇಟ್‌ ಸೇವನೆ, ಆಲ್ಕೋಹಾಲ್‌, ಜಡವಾದ ಜೀವನ ಶೈಲಿ, ನಿದ್ರೆಯ ಕೊರತೆ ಇತ್ಯಾದಿ ಇತ್ಯಾದಿಗಳೂ ಕಾರಣವಾಗುತ್ತವೆ ಎಂದಿದ್ದಾರೆ.

ಹಾಗಂತ ಕಡಿಮೆ ಕೊಲೆಸ್ಟೆರಾಲ್ ಇರುವ ಮಂದಿಯಲ್ಲಿ ಹಲವು ಅಪಾಯಗಳೂ ಇವೆ. ಕೊಲೆಸ್ಟೆರಾಲ್‌ ದೇಹದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರ ವಹಿಸಿ ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ. ಈ ಕಾರಣದಿಂದ ಕೊಲೆಸ್ಟೆರಾಲ್‌ ಕಡಿಮೆಯಾದರೆ, ದೇಹಕ್ಕೆ ಕ್ಯಾನ್ಸರ್‌ನಂತರ ಮಾರಣಾಂತಿಕ ರೋಗಗಳ ಪ್ರವೇಶವೂ ಆಗುವ ಸಾಧ್ಯತೆಗಳಿವೆ. ಮಹಿಳೆಯರಲ್ಲಿ ಕೊಲೆಸ್ಟೆರಾಲ್‌ ಕಡಿಮೆಯಾದರೆ, ಖಿನ್ನತೆ, ಮಾನಸಿಕ ಸಮಸ್ಯೆಗಳೂ ಬರಬಹುದು. ಆದರೂ ಈವರೆಗೆ ಇದನ್ನು ಸರಿಯಾಗಿ ನಿರೂಪಿಸಲಾಗಿಲ್ಲ ಎನ್ನುತ್ತಾರೆ ಅವರು.

ಹಾಗಾದರೆ, ನಮ್ಮ ಎಲ್‌ಡಿಎಲ್‌ ಮಟ್ಟವನ್ನು ಕಡಿಮೆ ಮಾಡಬೇಕೆಂದರೆ ಏನು ಮಾಡಬಹುದು ಎಂದರೆ, ಸಂಸ್ಕರಿಸಿದ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದಷ್ಟೇ ಆಗಿದೆ. ಆಹಾರದಲ್ಲಿ ನಾವು ಸಮತೋಲನ ಮಾಡಿಕೊಂಡರೆ, ಕೊಲೆಸ್ಟೆರಾಲ್‌ ಸಮಸ್ಯೆಗಳಿಂದ ಪಾರಾಗಬಹುದು ಎನ್ನುತ್ತಾರೆ. ಸಕ್ಕರೆಯ ಸೇವನೆ ಕಡಿಮೆಗೊಳಿಸುವ ಜೊತೆಗೆ, ನಾರಿನಂಶವಿರುವ, ಉತ್ತಮ ಪೋಷಕಾಂಶವುಳ್ಳ ಆಹಾರ ಸೇವನೆ, ಸರಿಯಾದ ನಿದ್ದೆ, ನಿಯಮಿತ ವ್ಯಾಯಾಮ, ಜಡತ್ವದಿಂದ ದೂರವಿದ್ದರೆ ಖಂಡಿತವಾಗಿಯೂ ಆರೋಗ್ಯಕರ ಹೃದಯ ಹೊಂದಬಹುದು ಎನ್ನುತ್ತಾರೆ ಅವರು.

ಇದನ್ನೂ ಓದಿ: Cholesterol reducing: ಕೆಲವರಿಗೆ ಕೊಲೆಸ್ಟೆರಾಲ್‌ ಏಕೆ ಕಡಿಮೆಯಾಗುವುದಿಲ್ಲ? ಇಲ್ಲಿವೆ 10 ಕಾರಣಗಳು!

Exit mobile version