ಅಡುಗೆ ಮನೆ ಇಂದು ಪ್ರತಿ ಮನೆಯ ಅತ್ಯಂತ ಮುಖ್ಯವಾದ ಕೋಣೆ. ಒಂದು ಕುಟುಂಬಕ್ಕೆ ಅನ್ನ ನೀಡುವ ಕುಟುಂಬ ಕಣ್ಣು ಇದು. ಅಡುಗೆ ಮನೆಯೆಂದರೆ, ಕಪ್ಪಾಗಿ ಮಸಿ ಹಿಡಿದ, ಎಣ್ಣೆಯುಕ್ತ ಕಿಟಕಿ ಬಾಗಿಲುಗಳೆಂಬ, ಬೆಳಕೇ ಇಲ್ಲದ ಕತ್ತಲ ಕೋಣೆಗಳಂತೆ ಕಾಣುವ, ಕೇವಲ ಮನೆಯೊಡತಿ ಮಾತ್ರ ಗಂಟೆಗಟ್ಟಲೆ ಇರುವ ಕೋಣೆಯಾಗಿ ಉಳಿದಿಲ್ಲ. ಸಕಲ ಸೌಲಭ್ಯಗಳಿಂದ, ಹೊಸ ಹೊಸ ತಂತ್ರಜ್ಞಾನಗಳಿಂದ ವಿನ್ಯಾಸಗಳಿಂದ ಮನ ಸೆಳೆಯುತ್ತದೆ. ಸಾಕಷ್ಟು ಗಾಳಿ ಬೆಳಕುಗಳಿರುವ, ಮನೆಯ ಎಲ್ಲರೂ ಸಂತೋಷವಾಗಿ ಜೊತೆಗೇ ಕಾಲ ಕಳೆಯಬಲ್ಲ ಕೋಣೆಯಾಗಿ ಬದಲಾಗುತ್ತಿದೆ. ಹೊಸ ಹೊಸ ಉತ್ಪನ್ನಗಳು ಬರುವ ಜೊತೆಗೇ, ತಲೆತಲಾಂತರದಿಂದ ಬಳಕೆಯಲ್ಲಿದ್ದ ವಸ್ತುಗಳೂ ಹೊಸ ರೂಪ ತಳೆದು ಮತ್ತೆ ಅಡುಗೆ ಮನೆಯಲ್ಲಿ ಸ್ಥಾನ ಪಡೆಯುತ್ತಿವೆ. ಅಂಥ ಹಳೆಯ ವಸ್ತುಗಳ ಪೈಕಿ ಈಗಲೂ ಬೇಡಿಕೆಯಿರುವ ಅಡುಗೆಮನೆಯ ವಸ್ತುಗಳ ಪೈಕಿ ಮಣ್ಣಿನ ಮಡಕೆಗೆ ಮಹತ್ವದ ಸ್ಥಾನವಿದೆ. ಮಣ್ಣಿನ ಮಡಕೆಗಳು, ಪಾತ್ರೆಗಳಲ್ಲಿ ಅಡುಗೆ ಮಾಡುವ ಪದ್ಧತಿ ಮತ್ತೆ ಜಾಲ್ತಿಯಲ್ಲಿ ಬರುತ್ತಿವೆ. ಟ್ರೆಂಡ್ ಆಗುತ್ತಿವೆ. ಬನ್ನಿ, ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಮಂದಿ, ಇಂಡಿಯಲ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಮಣ್ಣಿನ ಪಾತ್ರೆಗಳ ಬಗೆಗಿನ ಆರೋಗ್ಯ ಸೂಚಿಗಳನ್ನು (clay pot cooking) ಗಮನಿಸಿ.
- ಮಣ್ಣಿನ ಪಾತ್ರೆಗಳನ್ನು ಬೇರೆ ಪಾತ್ರೆಗಳ ಜತೆಗೆ ಇಡಬೇಡಿ. ಮಣ್ಣಿನ ಪಾತ್ರೆಗಳಿಗೇ ಪ್ರತ್ಯೇಕ ಜಾಗವನ್ನು ಮಾಡಿ. ಯಾಕೆಂದರೆ ಮಣ್ಣಿನ ಮಡಿಕೆಗಳು ಬೇರೆ ಪಾತ್ರೆಗಳಿಗೆ ತಾಕಿ ಒಡೆಯಲೂಬಹುದು. ಅವುಗಳನ್ನು ಮೇಲಿಂದ ಮೇಲೆಯೂ ಇಡಬೇಡಿ. ಬಹಳ ಜಾಗರೂಕತೆಯಿಂದ ಬಳಸಬೇಕಾದವು ಇವು. ಸಣ್ಣ ಬಿರುಕು ಬಂದರೂ ಪಾತ್ರೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದು.
- ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಸಂದರ್ಭ ಲೋಹದ ಸೌಟುಗಳನ್ನು ಬಳಸಬೇಡಿ. ಮರದ ಸೌಟನ್ನೇ ಬಳಸಿ. ಸ್ಟೀಲ್ ಅಥವಾ ಬೇರೆ ಲೋಹದ ಸೌಟು ಮಣ್ಣಿನ ಮಡಕೆಯನ್ನು ಹಾಳು ಮಾಡುವ ಅಪಾಯವಿದೆ. ಹೀಗಾಗಿ ಮರದ ಸೌಟನ್ನೇ ಬಳಸಿ.
- ಮಡಕೆಗಳನ್ನು ಸ್ವಚ್ಛಗೊಳಿಸಲು ನೀವು ಬೇರೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ನಿತ್ಯವೂ ಬಳಸುವ ರಾಸಾಯನಿಕಯುಕ್ತ ಡಿಟರ್ಜೆಂಟ್ ಅನ್ನು ಬಳಸಬೇಡಿ. ಲೋಹದ ಸ್ಕ್ರಬರ್ ಅನ್ನೂ ಬಳಸಬೇಡಿ. ತೆಂಗಿನಕಾಯಿಯ ಜುಟ್ಟಿನಿಂದ ಮಾಡಿದ ನೈಸರ್ಗಿಕ ಸ್ಕ್ರಬರ್ ಅನ್ನು ಬಳಸಬಹುದು. ಅಥವಾ ಬೇಕಿಂಗ್ ಸೋಡಾ ಹಾಗೂ ಉಪ್ಪನ್ನು ಹಾಕಿ ಪಾತ್ರೆಯನ್ನು ಕ್ಲೀನ್ ಮಾಡಬಹುದು.
- ಮಡಕೆಗಳನ್ನು ಸದಾ ತೊಳೆದ ಮೇಳೆ ಆರಲು ಬಿಟ್ಟು ಒಣಗಿದ ಮೇಲೆಯೇ ಒಳಗಿಡಿ. ಒದ್ದೆಯಾಗಿ ಬಿಡಬೇಡಿ. ಅಡುಗೆ ಮಾಡುವಾಗಲೂ ಒಣಗಿದ ಮಡಕೆಗಳನ್ನೇ ಬಳಸಿ. ಇದರಿಂದ ಮಡಕೆ ಹಾಳಾಗುವ ಅಪಾಯವಿದೆ.
- ಮಣ್ಣಿನ ಮಡಕೆಗಳಲ್ಲಿ ಸಿಟ್ರಿಕ್ ಆಸಿಡ್ ಇರುವ ವಸ್ತುಗಳನ್ನು, ಆಹಾರಗಳನ್ನು ಇಡಬೇಡಿ. ನಿಂಬೆಹಣ್ಣಿನ ಜ್ಯೂಸ್, ನಿಂಬೆಹಣ್ಣು ಹಾಕಿ ಮಾಡಿದ ಆಹಾರಗಳು, ಅಥವಾ ಸಿಟ್ರಸ್ ಹಣ್ಣುಗಳ ಜ್ಯೂಸ್ ಇತ್ಯಾದಿಗಳಿಗೆ ಮಣ್ಣಿನ ಮಡಕೆ ಬಳಸಬೇಡಿ. ಅಂಥವುಗಳಿಗೆ ಗಾಜು, ಅಥವಾ ಸ್ಟೀಲ್ ಪಾತ್ರೆಗಳು ಉತ್ತಮ. ಇವುಗಳಲ್ಲಿರು ಆಮ್ಲೀಯತೆ ಮಣ್ಣಿನ ಜೊತೆಗೆ ವರ್ತಿಸುವ ಅಪಾಯವಿರುವುದರಿಂದ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿ.
ಇದನ್ನೂ ಓದಿ: Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!