ನವ ದೆಹಲಿ: ಈಗೀಗ ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತದಿಂದ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೃದಯದ ಆರೋಗ್ಯ, ಹೃದ್ರೋಗ ಚಿಕಿತ್ಸೆ, ಹೃದಯಾಘಾತದ ಮುನ್ಸೂಚನೆಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವೈದ್ಯರು, ಆರೋಗ್ಯ ತಜ್ಞರು ಇತ್ತೀಚೆಗೆ ಹೆಚ್ಚೆಚ್ಚಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹೃದಯ ಜೋಪಾನ ಎಂದು ಪದೇಪದೆ ಎಚ್ಚರಿಸುತ್ತಿದ್ದಾರೆ. ಅದರಲ್ಲೂ ಈಗ ಚಳಿಗಾಲ ಶುರುವಾಗುತ್ತಿರುವ ಹೊತ್ತಲ್ಲಿ, ಹೃದಯದ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಲೇಬೇಕು ಎಂಬುದು ಆರೋಗ್ಯ ತಜ್ಞರ ಕಟ್ಟುನಿಟ್ಟಿನ ಸಲಹೆ.
ತಣ್ಣೀರ ಸ್ನಾನದಿಂದ ದೂರ ಇರಿ
ನಮ್ಮಲ್ಲಿ ಅನೇಕರಿಗೆ ಸ್ನಾನಕ್ಕೆ ಬಿಸಿ ನೀರು ಬಳಕೆ ಮಾಡಿ ಅಭ್ಯಾಸ ಇರುವುದಿಲ್ಲ. ಮಳೆ, ಚಳಿ ಏನೇ ಇರಲಿ ತಣ್ಣೀರಿನಲ್ಲಿ ಸ್ನಾನ ಮಾಡಿದರೇ ಅದೇನೋ ಹಿತ..ಸಮಾಧಾನ ಎನ್ನುವವರು ಇದ್ದಾರೆ. ತಣ್ಣೀರ ಸ್ನಾನ ಉರಿಯೂತ ಕಡಿಮೆ ಮಾಡುತ್ತದೆ, ಒತ್ತಡ, ಆಯಾಸ ನಿವಾರಣೆ ಮಾಡುತ್ತದೆ ಎಂಬಿತ್ಯಾದಿ ಆರೋಗ್ಯ ಸಂಬಂಧಿ ಕಾರಣಕ್ಕೆ ತಣ್ಣೀರ ಸ್ನಾನ ರೂಢಿಸಿಕೊಂಡವರೂ ಅನೇಕರು ಇದ್ದಾರೆ.
ಆದರೆ ಚಳಿಗಾಲದಲ್ಲಿ ಈ ತಣ್ಣೀರ ಸ್ನಾನ ಮಾರಣಾಂತಿಕವಾಗಬಹುದು. ಹೃದಯಕ್ಕೆ ಸಮಸ್ಯೆ ತರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಚಳಿಗಾಲದಲ್ಲಿ ನೀರು ಇನ್ನಷ್ಟು ತಂಪಾಗಿರುತ್ತದೆ. ವಾತಾವರಣದಲ್ಲೂ ಶೀತ ಇರುತ್ತದೆ. ಹೀಗಿರುವಾಗ ನಾವು ನೀರನ್ನು ಬಿಸಿ ಮಾಡದೆ, ತಣ್ಣನೆಯ ನೀರಲ್ಲಿ ಸ್ನಾನ ಮಾಡುವುದರಿಂದ ರಕ್ತ ನಾಳಗಳು ಸಂಕುಚನಗೊಂಡು, ಹೃದಯಾಘಾತಕ್ಕೆ ಕಾರಣವಾಗಬಹುದು. ಪಾರ್ಶ್ವವಾಯು ಅಟ್ಯಾಕ್ ಆಗುವ ಸಂಭವವೂ ಇರುತ್ತದೆ ಎನ್ನುತ್ತಾರೆ ವೈದ್ಯರು.
ತಣ್ಣೀರ ಸ್ನಾನದಿಂದ ಹೇಗೆ ಅಪಾಯ?
ಸಾಮಾನ್ಯವಾಗಿ ಯಾವುದೇ ಕಾಲದಲ್ಲಿ ತಣ್ಣೀರು ಸ್ನಾನ ಮಾಡುವ ಹೊತ್ತಲ್ಲಿ, ಒಂದು ಸಲ ನೀರನ್ನು ಮೈಮೇಲೆ ಸುರಿದುಕೊಂಡಾಗ ದೇಹ ಒಮ್ಮೆಲೇ ಅದಕ್ಕೆ ಸ್ಪಂದಿಸುವಾಗ, ಇಡೀ ದೇಹ ಝುಂ ಅನ್ನುತ್ತದೆ. ಅಂದರೆ ಒಂದು ಹಂತದ ಉಷ್ಣತೆಯಲ್ಲಿದ್ದ ದೇಹಕ್ಕೆ ತಣ್ಣೀರು ಸಣ್ಣ ಶಾಕ್ ನೀಡುತ್ತದೆ. ರಕ್ತನಾಳಗಳು ಸಂಕುಚಿತಗೊಂಡಂತಾಗುತ್ತದೆ. ಅದಾಗಲೇ ಹಾರ್ಟ್ ಸಮಸ್ಯೆ ಇರುವವರಿಗೆ ಇದು ನಿಜಕ್ಕೂ ಅಪಾಯಕಾರಿ. ಆರೋಗ್ಯವಂತರೂ ಈ ಬಗ್ಗೆ ತುಸು ಎಚ್ಚರ ವಹಿಸುವುದು ಒಳಿತು. ಚಳಿಗಾಲದಲ್ಲಿ ನಿರಂತರವಾಗಿ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯವಂತ ಮನುಷ್ಯನೂ ಕಾಯಿಲೆ ಬೀಳಬಹುದು. ಶೀತ, ಕೆಮ್ಮು, ಜ್ವರದ ಆಚೆಯೂ ರಕ್ತನಾಳಗಳ ಸಂಕುಚನದಿಂದ ಹೃದಯ ಸಂಬಂಧಿ ಕಾಯಿಲೆಗಳು, ಸ್ಟ್ರೋಕ್ಗಳಿಗೆ ತುತ್ತಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು ಬಿಪಿ ಇರುವವರಂತೂ ಹೆಚ್ಚುವರಿಯಾಗಿ ಗಮನಹರಿಸಬೇಕು ಎನ್ನುತ್ತಾರೆ ಖ್ಯಾತ ನರರೋಗ ತಜ್ಞ ಡಾ. ಸುಧೀರ್ ಕುಮಾರ್.
ಈ ಬಗ್ಗೆ ಒಂದು ಘಟನೆಯ ಬಗ್ಗೆ ಹೇಳಿರುವ ಡಾ. ಸುಧೀರ್ ಕುಮಾರ್, ‘68 ವರ್ಷದ ವ್ಯಕ್ತಿಯೊಬ್ಬರಿಗೆ ಅದಾಗಲೇ ಹೈಬಿಪಿ ಇತ್ತು. ಅವರು ತಣ್ಣೀರು ಸ್ನಾನ ಮಾಡುವಾಗಲೇ ಮಿದುಳು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಈಗಾಗಲೇ ಚಳಿಗಾಲ ಶುರುವಾಗಿದೆ. ಆದರೂ ಅನೇಕರು, ವಿವಿಧ ಕಾರಣಗಳಿಗೋಸ್ಕರ ತಣ್ಣೀರು ಸ್ನಾನ ಮಾಡುತ್ತಲೇ ಇರಬಹುದು. ಭಾರತದಲ್ಲಿ ಕೆಲವು ಪೂಜೆ, ಸಂಪ್ರದಾಯದ ಭಾಗವಾಗಿಯೂ ಅನೇಕರು ನಿರಂತರವಾಗಿ ತಣ್ಣೀರಲ್ಲಿ ಸ್ನಾನ ಮಾಡುತ್ತಾರೆ. ಇದು ನಿಜಕ್ಕೂ ಸುರಕ್ಷಿತವಲ್ಲ. ಕೆಲವೊಮ್ಮೆ ಗಂಭೀರ ಕಾಯಿಲೆಯನ್ನು ತಂದೊಡ್ಡಬಲ್ಲದು, ಪ್ರಾಣಕ್ಕೂ ಅಪಾಯ ಆಗಬಲ್ಲದು ಎಂದು ಹೇಳಿದ್ದಾರೆ. ಹಾಗೇ, ಚಳಿಗಾಲದಲ್ಲಿ ಎಲ್ಲರೂ ಬೆಚ್ಚಗಿನ (ಮೈಸುಡುವಷ್ಟು ಅಲ್ಲ) ಅಥವಾ ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ ಎಂದು ಸಲಹೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: Winter care | ಚಳಿಗಾಲದ ಶಿಸ್ತುಬದ್ಧ ಜೀವನಕ್ಕಿಲ್ಲಿದೆ ಏಳು ಸೂತ್ರಗಳು!