Site icon Vistara News

Delhi Tour: ದೆಹಲಿಗೆ ಪ್ರವಾಸಕ್ಕೆ ಹೋದಾಗ ಮಿಸ್ ಮಾಡದೇ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ!

Delhi Tour

ದೆಹಲಿ: ಪ್ರವಾಸವೆಂದರೆ ಯಾರಿಗೆ ಇಷ್ಟವಿರಲ್ಲ! ಕೆಲಸದ ಒತ್ತಡ, ಮನಸ್ಸಿಗೆ ಕಿರಿಕಿರಿ ಆದಾಗ ಒಂದೊಳ್ಳೇ ಪ್ರವಾಸ (Tour) ಮಾಡಿದರೆ ಅದರಿಂದ ಸಿಗುವ ಖುಷಿನೇ ಬೇರೆ. ಪ್ರವಾಸವೆಂದಾಕ್ಷಣ ವಿದೇಶಕ್ಕೆ ಹೋಗಬೇಕೆಂದೇನಿಲ್ಲ. ನಮ್ಮ ದೇಶದ ರಾಜಧಾನಿಯಾದ (Captial) ದೆಹಲಿಗೆ ಪ್ರವಾಸ (Delhi Tour) ನೀಡಿದರೆ ಅದ್ಭುತವಾದ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಕಿಕ್ಕಿರಿದ ಜನಸಂದಣಿ, ಜನರ ಜಂಜಾಟದ ಜೀವನವನ್ನು ನೋಡಿದರೆ ದೆಹಲಿಗೆ ಹೋಗುವುದೇ ಬೇಡ ಎಂದೆನಿಸುತ್ತದೆ. ಆದರೆ  ದೆಹಲಿ ಕೇವಲ ಗದ್ದಲದ ನಗರ ಮಾತ್ರವಲ್ಲ ಇಲ್ಲಿ ನೋಡಲು ಪ್ರಮುಖ ಐತಿಹಾಸಿಕ ಸ್ಥಳಗಳು, ಶಾಂತಿಯುತವಾದ ಗಿರಿಧಾಮಗಳಿವೆ.

ದೆಹಲಿಯ ಸುತ್ತಮುತ್ತ ನೀವು ನೋಡಬಹುದಾದಂತಹ ಬಹಳ ಅದ್ಭುತವಾದ ಸ್ಥಳಗಳಿವೆ. ಹಾಗಾಗಿ ಪ್ರವಾಸಕ್ಕೆ ಪ್ಲ್ಯಾನ್ ಮಾಡುತ್ತಿರುವವರು ಒಮ್ಮೆ ದೆಹಲಿಯ ಈ ಸ್ಥಳಗಳಿವೆ ಭೇಟಿ ನೀಡಿ. ಇದರಿಂದ  ನಿಮ್ಮ ಪ್ರವಾಸ ಅವಿಸ್ಮರಣೀಯವಾಗಿರುತ್ತದೆ.

ಆಗ್ರಾ

ದೆಹಲಿಯಿಂದ ಸ್ವಲ್ಪ ದೂರದಲ್ಲಿರುವ ಆಗ್ರಾದಲ್ಲಿ ಪ್ರೀತಿಯ ಸಾರಾವನ್ನೇ ಎತ್ತಿ ಹಿಡಿದಿರುವ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಇದೆ. ಈ ನಗರ ಮೊಘಲರ ವೈಭವಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಇದರ ಹೊರತಾಗಿ ಇಲ್ಲಿ ಆಗ್ರಾ ಕೋಟೆ, ಫತೇಪುರ್ ಸಿಕ್ರಿ ಮತ್ತು ಇತ್ಮಾದ್-ಉದ್-ದೌಲಾ ಸಮಾಧಿ ಮುಂತಾದ ನೀವು ಭೇಟಿ ನೀಡಬಹುದಾದ ಸ್ಥಳಗಳಿವೆ.

ಜೈಪುರ

ರಾಜಸ್ಥಾನ ರಾಜ್ಯದ ರಾಜಧಾನಿಯಾಗಿರುವ ಜೈಪುರವನ್ನು  ಪಿಂಕ್ ಸಿಟಿ ಎಂದು ಕರೆಯುತ್ತಾರೆ. ದೆಹಲಿಯಿಂದ ಇಲ್ಲಿಗೆ ಐದೂವರೆ ಗಂಟೆಗಳ ಪ್ರಯಾಣ. ರಾಜಮನೆತನಗಳು ಆಡಳಿತ ನಡೆಸಿರುವ ಈ ಸ್ಥಳದಲ್ಲಿ ಭವ್ಯವಾದ ಕೋಟೆಗಳು, ಅರಮನೆಗಳು ಮತ್ತು ವರ್ಣರಂಜಿತವಾದ ಮಾರುಕಟ್ಟೆಗಳಿವೆ. ಅಲ್ಲದೇ ಇಲ್ಲಿರುವ ಅಮೇರ್ ಕೋಟೆ, ಸಿಟಿ ಪ್ಯಾಲೇಸ್, ಹವಾ ಮಹಲ್, ಜಂತರ್  ಮಂತರ್ ಇತ್ಯಾದಿಗಳು ಈ ಸ್ಥಳಕ್ಕೆ ಸಂಬಂಧಿಸಿದ ಸುವರ್ಣ ಗತಕಾಲದ ಕಥೆಗಳನ್ನು ತಿಳಿಸುತ್ತದೆ.

ಹೃಷಿಕೇಶ

ಹಿಮಾಲಯದ ಹೆಬ್ಬಾಗಿಲು ಎಂದು ಕರೆಯುವ ಹೃಷಿಕೇಶ ಪ್ರಕೃತಿ ಪ್ರಿಯರಿಗೆ ಹಾಗೂ ಆಧ್ಯಾತ್ಮಕ ಚಿಂತಕರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಗಂಗಾ ನದಿ ಹರಿಯುವುದರಿಂದ ಈ ಸ್ಥಳ ಪೂಜ್ಯನೀಯ ಸ್ಥಳ ಎಂದೆನಿಸಿಕೊಂಡಿದೆ. ಇಲ್ಲಿ ಧ್ಯಾನಕ್ಕಾಗಿ ಬೀಟಲ್ಸ್ ಆಶ್ರಮಕ್ಕೆ ಭೇಟಿ ನೀಡಬಹುದು. ಹಾಗೇ ಅದ್ಭುತವಾದ ಅನುಭವವನ್ನು ಪಡೆಯಲು ಲಕ್ಷ್ಮಣ ಜುಲಾಗೆ ಭೇಟಿ ನೀಡಬಹುದು. ಹಾಗೇ ಸಂಜೆಯ ವೇಳೆ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಬಹುದು.

ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್

ಇದು ಒಂದು ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ಉತ್ತರಾಖಂಡ್ ರಾಜ್ಯದಲ್ಲಿದೆ. ದಿಲ್ಲಿಯಿಂದ ಇಲ್ಲಿಗೆ ಐದು ಗಂಟೆಗಳ ಪ್ರಯಾಣ. ಹಾಗಾಗಿ ವನ್ಯಜೀವಿ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಲೇಬಾರದು. ಇಲ್ಲಿ ಬಂಗಾಳ ಹುಲಿಗಳು ಸೇರಿದಂತೆ ವಿವಿಧ ಜಾತಿಯ ಪ್ರಾಣಿ ಹಾಗೂ ಪಕ್ಷಿಗಳನ್ನು ನೋಡಬಹುದು. ಇಲ್ಲಿ ರೋಮಾಂಚನಕಾರಿಯಾದ ಸಫಾರಿ ಮಾಡಬಹುದು.

ನೀಮ್ರಾನಾ ಕೋಟೆ

ನೀಮ್ರಾನಾ ಕೋಟೆ ಒಂದು ಆಕರ್ಷಕ ಸ್ಥಳವಾಗಿದೆ. ಇದು ದಿಲ್ಲಿ-ಜೈಪುರ ಹೆದ್ದಾರಿಯಲ್ಲಿದೆ. 15ನೇ ಶತಮಾನದ ಹಿಂದಿನ ಈ ಕೋಟೆಯನ್ನು ಪಾರಂಪರಿಕ  ಹೋಟೆಲ್ ಆಗಿ ಪುನರ್ ಸ್ಥಾಪಿಸಲಾಗಿದೆ. ಇದು ಪ್ರವಾಸಿಗರಿಗೆ ರಾಜಮನೆತನದವರ ಗತಕಾಲದ ಅನುಭವವನ್ನು ನೀಡುತ್ತದೆ. ಬಹಳ ವಿಸ್ತಾರವಾದ ಕೋಟೆಯ ಸಂಕೀರ್ಣ, ರಾಜನಿಗೆ ಭಕ್ಷ್ಯಗಳ ನೀಡುವಂತಹ ಡೈನಿಂಗ್ ಟೇಬಲ್ ಗಳನ್ನು ಇಲ್ಲಿ ನೋಡಬಹುದು.

ಮಥುರಾ ಮತ್ತು ವೃಂದಾವನ

ಭಗವಂತ ಕೃಷ್ಣನು ಇಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಇದನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಉತ್ತರ ಪ್ರದೇಶದಲ್ಲಿರುವ ಈ ಅವಳಿ ಸ್ಥಳಗಳು ಪುರಾಣ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಸಾರುತ್ತದೆ. ಮಥುರಾದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಬಹುದು ಮತ್ತು ವೃಂದಾವನದಲ್ಲಿ ರೋಮಾಂಚಕ ಸ್ಥಳಗಳು ಮತ್ತು ದೇವಾಲಯದ ಬೀದಿಗಳಲ್ಲಿ ಸುತ್ತಾಡಬಹುದು. ಹೋಳಿ ಸಮಯದಲ್ಲಿ ಇಲ್ಲಿ ಹೆಚ್ಚಿನ ಆಚರಣೆಗಳನ್ನು ನೋಡಬಹುದು.

ಇದನ್ನೂ ಓದಿ:Monsoon Tour: ಮಳೆಗಾಲದ ಪ್ರವಾಸಕ್ಕೆ ಸೂಕ್ತ ಬೆಂಗಳೂರು ಸಮೀಪದ ಈ 8 ಅದ್ಭುತ ಸ್ಥಳಗಳು

ಲ್ಯಾನ್ಸ್ ಡೌನ್

ಇದು ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿರುವ ಗಿರಿಧಾಮವಾಗಿದೆ. ಈ ಸ್ಥಳ ದಟ್ಟವಾದ ಓಕ್ ಕಾಡುಗಳಿಂದ ಸುತ್ತುವರಿದಿದೆ. ಇಲ್ಲಿ ಶಾಂತಿಯುತವಾದ ವಾತಾವರಣವನ್ನು ಕಾಣಬಹುದು. ಇಲ್ಲಿ ಐತಿಹಾಸಿಕ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಬಹುದು, ಹಿಮಾಲಯ ಶಿಖರಗಳ ವಿಹಂಗಮ ನೋಟವನ್ನು ಸವಿಯಬಹುದು. ಪ್ರಕೃತಿ ಪ್ರಿಯರು, ಸಾಹಸಮಯಿಗಳು ಹಾಗೂ ಏಕಾಂತವನ್ನು ಬಯಸುವವರು ಇಲ್ಲಿಗೆ ಭೇಟಿ ನೀಡಬಹುದು.

Exit mobile version