ಕಚೇರಿಯಲ್ಲಿ ಸುಸ್ತಾಗುವಷ್ಟು ಕೆಲಸ ಮಾಡಿ ಬಂದು ಸೋಫಾದ ಮೇಲೆ ಅಡ್ಡಾದರೆ, ಕಣ್ಣು ಮುಚ್ಚುವ ಮೊದಲೇ ಕಣ್ಣೆದುರು ಗೋಡೆಯಲ್ಲೊಂದು ಹಲ್ಲಿ ನಿಮ್ಮನ್ನೇ ನೋಡುತ್ತಿದ್ದರೆ, ಒಮ್ಮೆಲೆ ನಿಮ್ಮ ನಿದ್ದೆಯೆಲ್ಲ ಹಾರಿ ಹೋಗುತ್ತದೆ. ಜಿರಳೆ, ಹಲ್ಲಿ, ಜೇಡ ಇತ್ಯಾದಿಗಳು ಮನೆಯ ಗೋಡೆಗಳಲ್ಲಿ (Lizards in home) ಹರಿದಾಡುತ್ತಿದ್ದರೆ, ಖಂಡಿತವಾಗಿಯೂ ಅದು ಸಹ್ಯವಾಗಿ ಅನಿಸುವುದು ಕಷ್ಟ. ಹಲ್ಲಿಯಿಂದ ಹಾಗೆ ನೋಡಿದರೆ ಯಾವ ತೊಂದರೆಯೂ ಮೇಲ್ನೋಟಕ್ಕೆ ಕಾಣದಿದ್ದರೂ, ಹಲ್ಲಿ ನಡೆದಾಡುವ ರೀತಿಯೇ ಕೆಲವರಲ್ಲಿ ವಿಚಿತ್ರ ಭಯ ಹುಟ್ಟಿಸುತ್ತದೆ. ಇನ್ನೂ ಕೆಲವರಂತೂ ಹಲ್ಲಿ ಕಂಡಾಗ ಹುಲಿ ಕಂಡಂತೆ ಕಿರುಚಾಡಿ ಆಕಾಶ ಭೂಮಿ ಒಂದು ಮಾಡಿಬಿಡುತ್ತಾರೆ. ಆದರೆ, ಈ ನಿರುಪದ್ರವಿ ಹಲ್ಲಿಗಳಿಗೆ ಹೆದರುವ ಅವಶ್ಯಕತೆಯಿಲ್ಲ. ಕೆಲವು ಸರಳ ವಿಧಾನಗಳಿಂದ ಮನೆಗೆ ಬರದಂತೆ ತಡೆಯಬಹುದು, ಅಥವಾ ಇರುವ ಹಲ್ಲಿಗಳನ್ನು ಓಡಿಸಿಬಿಡಬಹುದು. ಹಾಗಾದರೆ ಬನ್ನಿ, ಈ ಸರಳ ಟಿಪ್ಸ್‌ಗಳು ಯಾವುವು (lifestyle tips) ಎಂದು ನೋಡೋಣ.
1. ಮೊಟ್ಟೆಯ ಹೊರಕವಚ ಹಲ್ಲಿಗಳನ್ನು ಓಡಿಸಲು ಸುಲಭ ಉಪಾಯ. ಮೊಟ್ಟೆಯ ವಾಸನೆ ಹಲ್ಲಿಗಳಿಗೆ ಆಗಿ ಬರುವುದಿಲ್ಲ. ಹೀಗಾಗಿ, ಮುಂದಿನ ಬಾರಿ ಮನೆಯಲ್ಲಿ ಮೊಟ್ಟೆಯನ್ನು ಬಳಸಿದಾಗ ಅದರ ಹೊರಕವಚವನ್ನು ಕಸದ ತೊಟ್ಟಿಗೆ ಎಸೆಯಬೇಡಿ. ಅದನ್ನು ಹಾಗೆಯೇ ತೆಗೆದಿಟ್ಟು ಮನೆಯಲ್ಲಿ ಬಾಗಿಲ ಬಳಿ, ಕಿಟಕಿಯ ಬಳಿ ಹೀಗೆ ಕೆಲವು ಜಾಗಗಳಲ್ಲಿ ಇಟ್ಟುಬಿಡಿ. ಆದರೆ ಹೀಗೆ ಒಮ್ಮೆ ಇಟ್ಟ ಮೊಟ್ಟೆಯ ಕವಚವನ್ನು ಬಹಳ ದಿನ ಹಾಗೆಯೇ ಇಡಲಾಗುವುದಿಲ್ಲವಾದ್ದರಿಂದ ಪದೇಪದೇ ಈ ಕೆಲಸವನ್ನು ಮಾಡುತ್ತಲೇ ಇರಬೇಕಾಗುತ್ತದೆ.
2. ಹಲ್ಲಿಗಳು ಚಳಿಯಲ್ಲಿ ಇರಬಯಸುವುದಿಲ್ಲ. ಹೀಗಾಗಿ ನಿಮ್ಮ ಕೋಣೆಯ ಉಷ್ಣಾಂಶವನ್ನು ೨೨ ಡಿಗ್ರಿಗಿಂತ ಕಡಿಮೆ ಇಡಿ. ಹಲ್ಲಿಗಳೂ ಅಲ್ಲಿದ ಕಾಲು ಕೀಳುತ್ತವೆ.
3. ಕೆಟ್ಟ ವಾಸನೆಯನ್ನು ಯಾವತ್ತಿಗೂ ಹಲ್ಲಿಗಳು ಸಹಿಸಲಾರವು. ಹೀಗಾಗಿ ಬೆಳ್ಳುಳ್ಳಿ ಹಾಗೂ ಈರುಳ್ಳಿಯಂತಹ ವಸ್ತುಗಳು ನಿಮ್ಮ ಸಹಾಯಕ್ಕೆ ಬರುತ್ತವೆ. ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಕತ್ತರಿಸಿ ಮನೆಯಲ್ಲಿ ಅಲ್ಲಲ್ಲಿ ಇಟ್ಟುಬಿಡಿ. ಹಲ್ಲಿಗಳು ಆ ವಾಸನೆಗೆ ಓಡಿ ಹೋಗುತ್ತವೆ. ನಿಮಗೆ ಮನೆಯಲ್ಲಿ ಅಲ್ಲಲ್ಲಿ ಹೀಗೆ ಬೆಳ್ಳುಳ್ಳಿ, ಈರುಳ್ಳಿ ಇಡುವುದು ಇಷ್ಟವಾಗದಿದ್ದರೆ, ಇದರ ರಸ ತೆಗೆದು ಆ ರಸವನ್ನು ಮನೆಯಲ್ಲಿ ಗೋಡೆಗಳ ಮೇಲೆ ಸ್ಪ್ರೇ ಮಾಡಿದರೂ ಸಾಕು.
4. ಹಲ್ಲಿಗಳು ಸದಾ ಬೆಚ್ಚಗಿನ ವಾತಾವರಣದಲ್ಲಿರಲು ಇಷ್ಟಪಡುತ್ತವೆ. ಹಾಗಾಗಿ ಹಲ್ಲಿಗಳನ್ನು ಕಂಡಾಗ ಅವುಗಳ ಮೇಲೆ ಫ್ರಿಡ್ಜ್‌ನ ತಣ್ಣೀರು ಚಿಮುಕಿಸಿಬಿಡಿ. ಹಲ್ಲಿಗಳು ಓಡಿಹೋಗುತ್ತವೆ.
5. ಕರಿಮೆಣಸು ಹಾಗೂ ಕೆಂಪು ಮೆಣಸು ಎರಡರನ್ನೂ ಕಂಡರೆ ಹಲ್ಲಿಗಳಿಗೆ ಆಗುವುದಿಲ್ಲ. ಹಾಗಾಗಿ ಕರಿಮೆಣಸಿನ ಪುಡಿ ಹಾಗೂ ಮೆಣಸಿನ ಪುಡಿಯನ್ನು ನೀರಿನ ಜೊತೆ ಮಿಕ್ಸ್ ಮಾಡಿ ಹಲ್ಲಿಗಳು ಹೆಚ್ಚಾಗಿ ಕಂಡುಬರುವಲ್ಲಿ ಸ್ಪ್ರೇ ಮಾಡಬಹುದು. ಇದಾಗದಿದ್ದರೆ, ಒಣಗಿಸಿದ ಮೆಣಸನ್ನು ಅಲ್ಲಲ್ಲಿ ತೂಗುಹಾಕಬಹುದು.
6. ಕಾಫಿಯ ಪರಿಮಳವೂ ಹಲ್ಲಿಗಳಿಗೆ ಆಗದು. ಹೀಗಾಗಿ ಕಾಫಿಯ ನೀರನ್ನೂ ಹಲ್ಲಿಗಳು ಬರುವ ಜಾಗದಲ್ಲಿ ಸ್ಪ್ರೇ ಮಾಡಬಹುದು. ಅಥವಾ ಕೆಲವೆಡೆ ಕಾಫಿ ಪುಡಿಯನ್ನು ಚೆಲ್ಲಬಹುದು.
7. ಇದ್ಯಾವ ಉಪಾಯವೂ ನಿಮಗೆ ಸರಿ ಬರದಿದ್ದರೆ ನ್ಯಾಪ್ತಲಿನ್ ಗುಳಿಯನ್ನೂ ಬಳಸಬಹುದು. ಅಂಗಡಿಗಳಲ್ಲಿ ಸಿಗುವ ನ್ಯಾಪ್ತಲೀನ್ ಗುಳಿಗೆಯಲ್ಲಿ ಅಲ್ಲಲ್ಲಿ ಇಡುವ ಮೂಲಕ ಹಲ್ಲಿಗಳು ಬರದಂತೆ ತಡೆಯಬಹುದು. ಆದರೆ ಇದನ್ನು ಬಳಸುವಾಗ ಮನೆಯಲ್ಲಿ ಮಕ್ಕಳು, ಸಾಕುಪ್ರಾಣಿಗಳು ಇರದಂತೆ ಜಾಗ್ರತೆ ವಹಿಸಿ.
8. ಸೊಳ್ಳೆಗಳಿಗಾಗಿ ಬಳಸುವ ಸ್ಪ್ರೇಗಳು ಕೂಡಾ ಹಲ್ಲಿಗಳಿಂದ ನಿಮ್ಮನ್ನು ಕಾಪಾಡುತ್ತವೆ. ಅವುಗಳನ್ನು ಗೋಡೆಯಮೇಲೆ ಸಿಂಪಡಿಸುವುದರಿಂದ ಸೊಳ್ಲೆಯಷ್ಟೇ ಅಲ್ಲ, ಹಲ್ಲಿಗಳೂ ಬರುವುದಿಲ್ಲ.
ಇದನ್ನೂ ಓದಿ: Lifestyle Tips: ನಿಮಗೆ 30 ಆಗುವ ಮೊದಲು ಅರಿಯಲೇಬೇಕಾದ 6 ಸತ್ಯಗಳು!