ಇಂದು ವಿಶ್ವ ಅಲ್‌ಜೈಮರ್ಸ್ ದಿನ (World Alzheimer’s Day 2023). ಜಗತ್ತಿನಲ್ಲಿ ಕೋಟಿಗಟ್ಟಲೆ ಜನರನ್ನು ಬಲಿ ತೆಗೆದುಕೊಂಡು, ವರ್ಷಂಪ್ರತಿ ಇನ್ನೂ ಹೆಚ್ಚಿನ ಜನರನ್ನು ತನ್ನ ತೆಕ್ಕೆಗೆ ಬೀಳಿಸಿಕೊಳ್ಳುತ್ತಿರುವ ಈ ರೋಗದ ಕುರಿತಾದ ಅರಿವು ಮಾತ್ರವೇ ನಮ್ಮನ್ನು ಕಾಪಾಡಬಲ್ಲದು. ಅದರಲ್ಲೂ ಕೋವಿಡ್ ಮಹಾಮಾರಿಯ ಕೃಪೆಯಿಂದಾಗಿ, ಒಂಟಿತನ, ಖಿನ್ನತೆಗಳು ಕಳೆದ ಮೂರು ವರ್ಷಗಳಲ್ಲಿ ಇನ್ನೂ ಹೆಚ್ಚಿನ ಜನರನ್ನು, ಮತ್ತಷ್ಟು ವೇಗವಾಗಿ ಈ ರೋಗದತ್ತ ತಳ್ಳುತ್ತಿವೆ. ನಮ್ಮ ಆಪ್ತರಿಗೇ ಈ ಸಮಸ್ಯೆ ಇದ್ದರೂ ಗುರುತಿಸುವುದು ತಡವಾದರೆ, ರೋಗ ಉಲ್ಬಣಿಸುವುದನ್ನು ತಡೆಯಲು ದಾರಿ ಕಾಣದಾಗುತ್ತದೆ. ಹೌದು, ಚಿಕಿತ್ಸೆ ಇಲ್ಲದ ಈ ಮರೆವಿನ ರೋಗ ಮುಂದುವರಿಯುವುದನ್ನು ನಿಧಾನ ಮಾಡುವಷ್ಟು ಅನುಕೂಲ ನಮ್ಮ ವೈದ್ಯ ವಿಜ್ಞಾನಕ್ಕಿದೆ. ಹಾಗಾಗಿ ಈ ರೋಗದ ಸುತ್ತ ಹರಿಡಿರುವ ಹಲವು ಮಿಥ್ಯೆಗಳನ್ನು ಒಡೆಯಬೇಕಿದೆ.
ವಯಸ್ಸಾದವರಿಗಷ್ಟೇ ಈ ರೋಗ ಬರುತ್ತದೆ
ವಯಸ್ಸಾದವರಲ್ಲಿ ಮರೆವು ಹೊಸದಲ್ಲ, ನಿಜ. ಹಾಗೆಂದು ಭವವನ್ನೇ ಮರೆಯುವಂಥ ಸ್ಥಿತಿ ಬರಬಾರದಲ್ಲ. ವಯಸ್ಸಾದ ಮೇಲೆ ಈ ರೋಗದ ಚಿಹ್ನೆಗಳು ಹೆಚ್ಚಾಗಿ ಗೋಚರಿಸಬಹುದು. ಆದರೆ ಪ್ರಾರಂಭ 60 ವರ್ಷದೊಳಗೇ ಆಗಿರುವ ಸಾಧ್ಯತೆ ಇರುತ್ತದೆ. ಡೌನ್ಸ್ ಸಿಂಡ್ರೋಮ್ ಇರುವವರಲ್ಲಿ ೪೦ ವರ್ಷಕ್ಕೆ ಅಲ್‌ಜೈಮರ್ಸ್ ಪ್ರಾರಂಭವಾದ ಉದಾಹರಣೆಗಳಿವೆ.
ಅಲ್‌ಜೈಮರ್ಸ್, ಡಿಮೆನ್ಶಿಯಾ- ಎರಡೂ ಒಂದೇ ಅಲ್ಲ!:
ಹಲವು ರೀತಿಯ ಡಿಮೆನ್ಶಿಯಾಗಳಲ್ಲಿ ಅಲ್‌ಜೈಮರ್ಸ್ ಸಹ ಒಂದು. ಆದರೆ ಡಿಮೆನ್ಶಿಯಾ ಪ್ರಕರಣಗಳಲ್ಲಿ ಮುಕ್ಕಾಲುಪಾಲು ಪ್ರಕರಣಗಳು ಅಲ್‌ಜೈಮರ್ಸ್ ಆಗಿದ್ದು, ಮೊದಲಿಗೆ ಅಷ್ಟಾಗಿ ಕೇಳದ ಭಾರತದಲ್ಲಿಯೂ ಈ ರೋಗ ಸಿಕ್ಕಾಪಟ್ಟೆ ಹೆಚ್ಚುತ್ತಿದೆ.
ಈ ರೋಗ ಹೆತ್ತವರಿಗಿದ್ದರೆ ಮಕ್ಕಳಿಗೂ ಬರತ್ತದೆಯೆ?
ಹಾಗೇನಿಲ್ಲ. ತಂದೆ-ತಾಯಿಯರಲ್ಲಿ ಯಾರಿಗಾದರೂ ಇದ್ದರೆ ಮಕ್ಕಳಿಗೆ ಬಂದೇ ಬರುತ್ತದೆ ಎನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲ. ಹಾಗಂತ ಬರುವುದಿಲ್ಲ ಎನ್ನಲೂ ಸಾಧ್ಯವಿಲ್ಲ. ವಂಶವಾಹಿಗಳಿಗಿಂತ ಮುಖ್ಯವಾಗಿ ಜೀವನಶೈಲಿ ಮತ್ತು ಪಾರಿಸಾರಿಕ ವಿಷಯಗಳು ರೋಗಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದು ಸಾಬೀತಾಗಿದೆ. ಹಾಗಾಗಿ ಉತ್ತಮ ಆಹಾರ, ಜೀವನಶೈಲಿ, ಒಳ್ಳೆಯ ಸಾಮಾಜಿಕ ಸಂಬಂಧಗಳು ವ್ಯಕ್ತಿಗಳ ಮಾನಸಿಕ ಆರೋಗ್ಯವನ್ನು ಗಾಢವಾಗಿ ಪ್ರಭಾವಿಸುತ್ತವೆ
ಈ ರೋಗಕ್ಕೆ ಚಿಕಿತ್ಸೆಯೇ ಇಲ್ಲ
ಒಮ್ಮೆ ಪ್ರಾರಂಭವಾದ ಮೇಲೆ ಈ ರೋಗ ಗುಣವಾಗುವುದಿಲ್ಲ ಎನ್ನುವುದು ನಿಜ. ಆದರೆ ಮೊದಲಿಗಿಂತ ಬಹಳ ಮುಂದುವರಿದ ಪ್ರಮಾಣದಲ್ಲಿ ಚಿಕಿತ್ಸೆಗಳು ಲಭ್ಯವಿವೆ. ರೋಗ ಮುಂದುವರಿಯುವುದನ್ನು ನಿಧಾನ ಮಾಡುವ ಚಿಕಿತ್ಸೆಗಳು ಪ್ರಚಲಿತದಲ್ಲಿವೆ. ಉಳಿದಂತೆ, ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗಿಗಳ ಮತ್ತು ಅವರ ಆಪ್ತರ ಬದುಕುಗಳನ್ನು ಸಹನೀಯವಾಗಿಸಲು ಖಂಡಿತಾ ಸಾಧ್ಯವಿದೆ.
ಇತ್ತೀಚೆಗೆ ತುಂಬಾ ಮರೆವು, ನನಗೂ…?
ಮರೆಯುವವರಿಗೆಲ್ಲಾ ಈ ರೋಗವಿದೆ ಎನ್ನಲು ಸಾಧ್ಯವಿಲ್ಲ. ಮರೆವು ಸಾಮಾನ್ಯ ಸಂಗತಿ. ವಯಸ್ಸಾದವರಲ್ಲಿ ಇದು ಇನ್ನೂ ಮಾಮೂಲು. ಆದರೆ ಈ ಮರೆವಿನಿಂದ ಬದುಕು ಲಯ ತಪ್ಪುತ್ತಿದೆ ಎಂಬ ಭಾವ ಒಂದೆಳೆಯಷ್ಟು ಬಂದರೂ ವೈದ್ಯರನ್ನು ಭೇಟಿ ಮಾಡಿ. ಪ್ರಾರಂಭದಲ್ಲೇ ಈ ರೋಗವನ್ನು ಪತ್ತೆ ಹಚ್ಚುವುದು ಅಗತ್ಯ
ಅಲ್‌ಜೈಮರ್ಸ್ ಬಾರದಂತೆ ತಡೆಯಬಹುದು
ಇದನ್ನೂ ಓದಿ : Health Care | ತಾವರೆ ಬೀಜ ಅಥವಾ ಮಖನಾ ತಿನ್ನಲು ರುಚಿ ಮಾತ್ರವೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು
ಇದಕ್ಕೆ ಖಚಿತ ಪುರಾವೆಗಳಿಲ್ಲ. ಆದರೆ ಬದುಕಿನಲ್ಲಿನ ಕೆಲವು ಧನಾತ್ಮಕ ಬದಲಾವಣೆಗಳಿಂದ ನರಗಳು ಕ್ಷಯಿಸುತ್ತಾ ಹೋಗುವ ಈ ರೋಗ ಬರುವ ಸಾಧ್ಯತೆಗಳನ್ನು ಖಂಡಿತಾ ಕಡಿಮೆ ಮಾಡಬಹುದು. ಆರೋಗ್ಯಪೂರ್ಣ ಆಹಾರಕ್ರಮ ಮತ್ತು ಕ್ರಿಯಾಶೀಲವಾದ ಬದುಕನ್ನು ಅಪ್ಪಿಕೊಳ್ಳುವತ್ತ ಮುಖಮಾಡಿ. ಚಟಗಳನ್ನು ದೂರ ಮಾಡಿ, ಮಧುಮೇಹ, ಬಿಪಿ, ಕೊಲೆಸ್ಟ್ರಾಲ್ ಸಮಸ್ಯೆಗಳಿದ್ದರೆ ನಿಯಂತ್ರಣದಲ್ಲಿ ಇರಿಸಿ. ತೂಕ ಮಿತಿಯಲ್ಲಿರಲಿ. ಸಾಮಾಜಿಕ ಸಂಪರ್ಕಗಳನ್ನು ವೃದ್ಧಿಸಿಕೊಳ್ಳಿ. ಮೆದುಳಿಗೆ ರಚನಾತ್ಮಕ ಕೆಲಸ ಕೊಡಿ. ವಯಸ್ಸು ಎಷ್ಟಾದರೂ ಹೊಸದನ್ನು ಕಲಿಯಲು ಬೇಸರಿಸಬೇಡಿ. ಮನಸ್ಸು ಭಾರ ಮಾಡಿಕೊಳ್ಳದೆ ಮುಕ್ತವಾಗಿರಿ.