ಬೆಂಗಳೂರು : ಋತು ಬದಲಾಗುತ್ತದೆ. ಆದರೆ, ನಮ್ಮ ಚರ್ಮದ ಕಾಳಜಿಯಲ್ಲಿ ಎಳ್ಳಿನಷ್ಟೂ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಆದರೆ, ಬದಲಾದ ಹವಾಮಾನ ನಮ್ಮ ಚರ್ಮವನ್ನೂ ಬದಲಾಯಿಸುತ್ತದೆ. ಹಾಗಾಗಿ ಆಯಾ ಹವಾಮಾನಕ್ಕೆ ತಕ್ಕಂತೆ ಕಾಳಜಿ ದೊರೆಯದೆ ಚರ್ಮ ಹಾಳಾಗುತ್ತದೆ. ಹಾಗಾಗಿ ಎಲ್ಲ ಋತುಮಾನದಲ್ಲಿ ಒಂದೇ ಬಗೆಯ ಕಾಳಜಿಗೆ ಅಂಟಿಕೊಂಡಿರುವುದು ಸಾಧ್ಯವಿಲ್ಲ.
ನಿಮ್ಮ ಚರ್ಮ ಒಣವಿರಲಿ, ತೈಲಯುಕ್ತವಾಗಿರಲಿ, ಸೂಕ್ಷ್ಮ ಅಥವಾ ಸಾಮಾನ್ಯ ಚರ್ಮವೇ ಆಗಿರಲಿ ಕೆಲವು ಸಾಮಾನ್ಯ ಕಾಳಜಿಯನ್ನಂತೂ ಮಾಡಿಕೊಳ್ಳಲೇ ಬೇಕು. ಕಾಳಜಿಗಿಂತಲೂ ದಿನನಿತ್ಯದ ಆಹಾರಕ್ರಮ ಹಾಗೂ ಜೀವನಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಗೊತ್ತೇ ಇಲ್ಲದಂತೆ ಆಗಿ ಹೋಗುವ ಕೆಲವು ಸಣ್ಣ ಸಣ್ಣ ತಪ್ಪೂ ಕೂಡಾ ಕೆಲವೊಮ್ಮೆ ನಮ್ಮ ಚರ್ಮವನ್ನು ಹಾಳು ಮಾಡುತ್ತದೆ. ಹಾಗಾದರೆ, ಈಗಿರುವ ಋತುವಿಗೆ ತಕ್ಕಂತೆ ಈ ಮಳೆಗಾಲದಲ್ಲಿ ನಾವು ಮಾಡುವ ತಪ್ಪುಗಳೇನು ನೋಡೋಣ.
ಇದನ್ನೂ ಓದಿ | ಅನಾನಸು ಆರೋಗ್ಯ: ಬರೀ ಹೊಟ್ಟೆಗಲ್ಲ, ಚರ್ಮಕ್ಕೂ ಕೂದಲಿಗೂ ಬೆಸ್ಟ್
ತಪ್ಪು 1: ಹೆಚ್ಚು ತೊಳೆಯುವುದು
ಮಳೆಗಾಲದಲ್ಲಿ ಚರ್ಮ ಹೆಚ್ಚು ಜಿಡ್ಡು ಜಿಡ್ಡಾಗಿ ಅಥವಾ ತೈಲಯುಕ್ತದಂತೆ ಅನುಭವವಾಗುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರ ಪರಿಣಾಮ ಇದು. ಇದಕ್ಕಾಗಿ ನಾವು ಮತ್ತೆ ಮತ್ತೆ ಮುಖ ತೊಳೆದುಕೊಳ್ಳುತ್ತೇವೆ. ಆದರೆ ಪದೇ ಪದೇ ಮುಖ ತೊಳೆಯುವುದರಿಂದ ಮುಖಕ್ಕೆ ನಿಜವಾಗಿಯೂ ಅಗತ್ಯ ಎಣ್ಣೆಯ ಅಂಶವನ್ನೂ ಕಳೆದುಕೊಳ್ಳುವುದರಿಂದ ಚರ್ಮ ಈ ಕೊರತೆಯನ್ನು ನೀಗಿಸಲು ಮತ್ತಷ್ಟು ಎಣ್ಣೆಯನ್ನು ಉತ್ಪಾದಿಸುತ್ತದೆ. ಇದರಿಂದ ಚರ್ಮ ತನ್ನ ಎಣ್ಣೆಯ ಸತ್ವವನ್ನು ಕಳೆದುಕೊಳ್ಳುತ್ತಾ ಸಾಗಿ ಒಣಗುತ್ತದೆ. ನಿಸ್ತೇಜವಾಗುತ್ತದೆ. ಅದಕ್ಕಾಗಿ ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಮುಖ ತೊಳೆಯಬೇಡಿ. ನಿಮ್ಮ ಚರ್ಮಕ್ಕೆ ಸೂಕ್ತವಾದ ಜೆಲ್ ಬೇಸ್ ಫೇಸ್ ವಾಷನ್ನು ತೊಳೆಯಲು ಬಳಸಿಕೊಳ್ಳಿ.
ತಪ್ಪು 2: ಸನ್‌ಸ್ಕ್ರೀನ್ ತ್ಯಜಿಸುವುದು
ಬಿಸಿಲು ಅಷ್ಟಾಗಿ ಇಲ್ಲ ಎಂದು ಸನ್‌ಸ್ಕ್ರೀನ್ ಲೋಷನ್ ಹಚ್ಚದೇ ಹೊರಗೆ ಹೋಗುವುದು ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು. ಆದರೆ, ನಿಜವಾಗಿಯೂ ಮಳೆಯಿರಲಿ, ಬಿಸಿಲಿರಲಿ, ಮೋಡ ಕವಿದ ವಾತಾವರಣವಿರಲಿ, ಹೊರನಡೆಯುವ ೧೫ ನಿಮಿಷ ಮುಂಚೆಯೇ ಸನ್‌ಸ್ಕ್ರೀನ್ ಹಚ್ಚಿ. ಎಸ್‌ಪಿಎಫ್ ೫೦+ ಅಂಶವಿರುವ ಸನ್‌ಸ್ಕ್ರೀನ್ ಉತ್ತಮ. ಇದು ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಿತ್ತದೆ.
ತಪ್ಪು 3: ಹೆಚ್ಚು ನೀರು ಕುಡಿಯದಿರುವುದು
ಬೇಸಗೆಯಲ್ಲಿ ಸಹಜವಾಗೇ ಬಾಯಾರಿದಂತಾಗಿ ಬೇಕಾದಷ್ಟು ನೀರು ಕುಡಿಯುತ್ತೇವೆ. ಆದರೆ, ಮಳೆಗಾಲ, ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆಯಿರುತ್ತದೆ. ಹಾಗಾಗಿ ಸಹಜವಾಗಿಯೇ ನೀರು ಕುಡಿಯಬೇಕೆಂದೆನಿಸುವುದಿಲ್ಲ. ಆದರೆ, ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ನೀರಿನ ಪೂರೈಕೆ ನಾವು ಮಾಡಲೇಬೇಕು. ನೀರು ಕಡಿಮೆಯಾದದ್ದು ಚರ್ಮದ ಆರೋಗ್ಯದ ಮೂಲಕ ತಿಳಿಯುತ್ತದೆ. ಹಾಗಾಗಿ ನೀರು ಕುಡಿಯುತ್ತಲೇ ಇರಿ. ದೇಹಕ್ಕೆ, ಮುಖ್ಯವಾಗಿ ನಿಮ್ಮ ಚರ್ಮಕ್ಕೆ ನೀರು ಅತ್ಯಗತ್ಯ.
ತಪ್ಪು 4: ಸ್ಕ್ರಬ್ ಮಾಡದಿರುವುದು
ಒಂದೊಳ್ಳೆ ಸ್ಕ್ರಬರ್ ಮೂಲಕ ವಾರದಲ್ಲಿ ಎರಡು ಬಾರಿ ಸ್ಕ್ರಬ್ ಮಾಡಬೇಕು. ಅಥವಾ ನೈಸರ್ಗಿಕ ವಸ್ತುಗಳ ಮೂಲಕವಾದರೂ ಸ್ಕ್ರಬ್ ಮಾಡುವುದು ಉತ್ತಮ. ಡೆಡ್ ಸ್ಕಿನ್, ಬ್ಲ್ಯಾಕ್‌ಹೆಡ್, ವೈಟ್‌ಹೆಡ್‌ನಂತಹ ಸಮಸ್ಯೆಗಳೆಲ್ಲವೂ ಇದರಿಂದ ದೂರ ಉಳಿಯುತ್ತದೆ. ಚರ್ಮ ಹೊಳಪನ್ನು ಉಳಿಸಿಕೊಳ್ಳುತ್ತದೆ.
ತಪ್ಪು 5: ಮಾಯ್‌ಶ್ಚರೈಸ್ ಮಾಡಿಕೊಳ್ಳದಿರುವುದು
ಮುಖ ತೊಳೆದ ಮೇಲೆ ಹಾಗೆಯೇ ಬಿಡುವುದು ಕೂಡಾ ತಪ್ಪೇ. ಮುಖಕ್ಕೆ ಸರಿಯಾದ ಪ್ರಮಾಣದ ತೇವಾಂಶದ ಅಗತ್ಯವಿರುವುದರಿಂದ ದಿನವೂ ಮುಖ ತೊಳೆದುಕೊಂಡಾದ ಮೇಲೆ ಮಾಯಿಶ್ಚರೈಸ್ ಮಾಡಿಕೊಳ್ಳಬೇಕು. ವಿಟಮಿನ್ ಇ, ಗ್ಲಿಸರಿನ್‌ಯುಕ್ತ ಮಾಯಿಶ್ಚರೈಸ್ ಉತ್ತಮ. ಸಾಧ್ಯವಾದಷ್ಟೂ ಪ್ಯಾರಾಬೆನ್‌ನಂತಹ ರಾಸಾಯನಿಕ ಮುಕ್ತವಾದ ಕ್ರೀಂ ಬಳಸಿ. ಮಳೆಗಾಲದಲ್ಲಿ ಮಾಯಿಶ್ಚರೈಸಿಂಗ್ ಮಾಡಿಕೊಳ್ಳುವುದು ಅಗತ್ಯ ಪ್ರಕ್ರಿಯೆಯಾದ್ದರಿಂದ ಇದನ್ನು ಚರ್ಮದ ದಿನನಿತ್ಯದ ಆರೈಕೆಯ ಭಾಗವಾಗಿ ಪರಿಗಣಿಸಬೇಕು.
ಇದನ್ನೂ ಓದಿ | Skin care: ಪುರುಷರೇ ನಿಮ್ಮ ಚರ್ಮ ನಿರ್ಲಕ್ಷಿಸಬೇಡಿ!