Site icon Vistara News

Dosa for breakfast | ದೋಸೆ ಎಂಬ ಆಪತ್ಬಾಂಧವ: ದೋಸೆ ತಿಂದರೆ ದೋಷವಿಲ್ಲ!

dosa for breakfast

ದಕ್ಷಿಣ ಭಾರತೀಯ ತಿನಿಸುಗಳ ಪೈಕಿ ಬಹುತೇಕ ಎಲ್ಲರನ್ನೂ ಆಕರ್ಷಿಸುವುದು ದೋಸೆ. ಬಗೆಬಗೆಯ ದೋಸೆಗಳು ಎಲ್ಲರ ಬಾಯಲ್ಲಿ ನೀರು ತರಿಸುವುದು ನಿಜವೂ ಹೌದು. ಯಾಕೆಂದರೆ ದೋಸೆಗೆ ಅದರದ್ದೇ ಆದ ಅಭಿಮಾನಿ ಬಳಗವಿದೆ. ಇದಕ್ಕೆ ಉತ್ತರ ಭಾರತ, ದಕ್ಷೀಣ ಭಾರತದ ಹಂಗಿಲ್ಲ, ಉತ್ತರದಿಂದ ದಕ್ಷಿಣಾದಿಯಾಗಿ, ವಿದೇಶಗಳಲ್ಲಿ ಕೂಡಾ ಬಹಳ ಮಂದಿಗೆ ದೋಸೆ ಎಂದರೆ ತುಸು ಹೆಚ್ಚೇ ಪ್ರೀತಿ. ಸುಲಭವಾಗಿ, ಸರಳವಾಗಿ ಮಾಡಬಹುದಾದ ದೋಸೆ ನಿಜವಾಗಿಯೂ ಬಹಳ ಆರೋಗ್ಯಕರ ತಿಂಡಿ. ದಕ್ಷಿಣ ಭಾರತೀಯರ ಮನೆಗಳಲ್ಲಿ ಬೆಳಗ್ಗೆ ನಿತ್ಯದ ತಿಂಡಿ. ಚಟ್ನಿ ಹಾಗೂ ಸಾಂಬಾರ್‌ ಇದ್ದರೆ ಸಾಕು, ದೋಸೆಯ ರುಚಿ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ!

ದೋಸೆಯಲ್ಲಿ ಹಲವು ವಿಧ. ದಕ್ಷಿಣ ಭಾರತೀಯರು ಕೈಗೆ ಸಿಕ್ಕ ಎಲ್ಲವುಗಳಿಂದಲೂ ದೋಸೆ ತಯಾರಿ ಪ್ರಯೋಗ ನಡೆಸಿದ್ದಾರೆ. ಹಾಗಾಗಿ ವರ್ಷಪೂರ್ತಿ ದಿನಕ್ಕೊಂದು ಬಗೆಯ ದೋಸೆ ಮಾಡಿದರೂ ಥರಹೇವಾರಿ ದೋಸೆ ಮಾಡುವಷ್ಟು ಬಗೆಯ ದೋಸೆ ವೆರೈಟಿಗಳು ನಮ್ಮಲ್ಲಿವೆ. ಅದಕ್ಕಾಗಿಯೇ ದೋಸೆ ಎಂಬ ತಿಂಡಿ ಬಹುತೇಕರ ಮನೆಯಲ್ಲಿ ಬೆಳಗಿನ ರೆಗ್ಯುಲರ್‌ ತಿಂಡಿ. ವಿವಿಧ ತರಕಾರಿಗಳ, ವಿವಿಧ ಧಾನ್ಯಗಳ, ಬೀಜಗಳ ದೋಸೆಗಳನ್ನೂ ಮಾಡಬಹುದಾದ್ದರಿಂದ, ನಿತ್ಯ ದೋಸೆಯೊಂದರಲ್ಲೇ ಬಗೆಬಗೆಯ ಪೋಷಕಾಂಶಗಳು ದೇಹಕ್ಕೆ ಸೇರುವಂತೆ ನೋಡಿಕೊಳ್ಳಬಹುದು.

ದೋಸೆ ತಿಂದರೆ ದೋಷವಿಲ್ಲ ಎಂದಾದರೆ, ದೋಸೆಯನ್ನು ಯಾಕೆ ತಿನ್ನಬೇಕು ಎಂಬುದನ್ನು ನೋಡೋಣ.

೧. ದೋಸೆ ಹೊಟ್ಟೆಗೆ ಸರಳವಾದ ತಿಂಡಿ. ದೋಸೆ ಎಂಬುದೊಂದು ಅತ್ಯುತ್ತಮ ಬೆಳಗಿನ ತಿಂಡಿಯ ಆಯ್ಕೆ. ಸುಲಭವಾಗಿ ಹೊಟ್ಟೆಯಲ್ಲಿ ಕರಗುವುದಲ್ಲದೆ, ಇದು ತೂಕ ಇಳಿಸಬೇಕೆಂದುಕೊಳ್ಳುವ ಮಂದಿಗೂ, ಹೆಚ್ಚು ಬದಲಾವಣೆ ಮಾಡದ ಆಹಾರದಲ್ಲಿ ದೋಸೆಯನ್ನು ಸುಲಭವಾಗಿ ಸೇರಿಸಿಕೊಳ್ಳಬಹುದಾದ ಆಯ್ಕೆ. ಮನೆಯಲ್ಲಿ ಹಿಟ್ಟು ಮಾಡಿಟ್ಟುಕೊಂಡರೆ ಬೆಳಗ್ಗೆ ಎದ್ದ ತಕ್ಷಣ ಸುಲಭವಾಗಿ ಫಟಾಫಟ್‌ ಮಾಡಬಹುದಾದ ಮಹಿಳೆಯರ ಆಪತ್ಪಾಂಧವ ಈ ದೋಸೆ!

೨. ದೋಸೆ ಹೆಚ್ಚು ಹೊತ್ತಿನ ಕಾಲ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ದೋಸೆಯ ಈ ಗುಣದಿಂದ ನಡುಹೊತ್ತಿನಲ್ಲಿ ಬೇರೇನಾದರೂ ತಿನ್ನಬೇಕೆಂದು ಅನಿಸುವುದಿಲ್ಲ, ಹೀಗಾಗಿ ಹೆಚ್ಚು ಕ್ಯಾಲರಿ ಹೊಟ್ಟೆ ಸೇರುವುದಿಲ್ಲ. ತೂಕ ಇಳಿಸುವವರಿಗೆ ನಮ್ಮದೇ ನಿತ್ಯದ ತಿನಿಸಿನಲ್ಲಿ ಪ್ರಯೋಗಗಳನ್ನು ಮಾಡಬಹುದಾಗಿದ್ದರೆ ಆ ಪಟ್ಟಿಗೆ ಸುಲಭವಾಗಿ ಸೇರಿಸಬಹುದಾದ ತಿಂಡಿ ದೋಸೆ.

ಇದನ್ನೂ ಓದಿ | Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್‌!

೩. ನಿತ್ಯ ದೇಹಕ್ಕೆ ಬೇಕಾದ ಪ್ರೊಟೀನ್‌ ದೋಸೆಯಿಂದ ಸಿಗುತ್ತದೆ. ದೋಸೆಯಲ್ಲಿ ವಿವಿಧ ಧಾನ್ಯ, ಬೇಳೆ ಕಾಳುಗಳನ್ನು ಬಳಸುವುದರಿಂದ ದೇಹಕ್ಕೆ ಬೇಕಾದ ಪ್ರೊಟೀನ್‌ ಸುಲಭವಾಗಿ ಪೂರೈಕೆ ಮಾಡುವ ಉತ್ತಮ ಆಯ್ಕೆ ದೋಸೆ. ಇದರಿಂದ ಬೆಳಗು ಪ್ರೊಟೀನ್‌ಯುಕ್ತ ಪೋಷಕಾಂಶಗಳಿಂದ ಸಮೃದ್ಧವಾಗಿ ಆರಂಭವಾಗುತ್ತದೆ.

೪. ಕೇವಲ ಪ್ರೊಟೀನ್‌ ದೇಹಕ್ಕೆ ಸಿಕ್ಕರೆ ಸಾಲದು. ಕಾರ್ಬೋಹೈಡ್ರೇಟ್‌ ಕೂಡಾ ಬೇಕು. ಮಾಡುವ ಕೆಲಸಕ್ಕೆ ಶಕ್ತಿಯ ಪೂರೈಕೆ ಮಾಡುವ ಕಾರ್ಬೋಹೈಡ್ರೇಟ್‌ ನಿತ್ಯ ಸಮ ಪ್ರಮಾಣದಲ್ಲಿ ಸಿಗದಿದ್ದರೆ ನಾವು ಚುರುಕಾಗಿರುವುದಿಲ್ಲ.

masala dosa

೫. ಕಡಿಮೆ ಕೊಬ್ಬಿರುವ ಉತ್ತಮ ಬ್ರೇಕ್‌ಫಾಸ್ಟ್‌ ಆಯ್ಕೆ ದೋಸೆ. ಹೀಗಾಗಿ ಮಧುಮೇಹ, ಹೃದಯದ ತೊಂದರೆಗಳಿರುವ ಮಂದಿಗೆ ದೋಸೆಯಿಂದ ಹೆಚ್ಚು ಹಾನಿಯಿಲ್ಲ. ಕಡಿಮೆ ಕೊಬ್ಬುನ ಡಯಟ್‌ ಪಾಲಿಸುವ ಮಂದಿಯೂ ದೋಸೆಯನ್ನು ಆಯ್ಕೆ ಮಾಡಬಹುದು.

೬. ಮಕ್ಕಳಿಗೆ, ಹಿರಿಯರಿಗೆ ಎಲ್ಲರಿಗೂ ದೋಸೆ ಒಂದು ರುಚಿಯಾದ ತಿಂಡಿ. ಉದ್ದು, ರಾಗಿ, ಗೋಧಿ, ಜೋಳ ಹೀಗೆ ಎಲ್ಲ ಬಗೆಯ ಧಾನ್ಯಗಳು, ಸೋರೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಕಲ್ಲಂಗಡಿ, ಬಾಳೆಹಣ್ಣು, ಹಲಸಿನಹಣ್ಣು ಹೀಗೆ ವಿವಿಧ ತರಕಾರಿಗಳನ್ನೂ ಬಳಸಿ ಮಾಡಬಹುದಾದ ಕಾರಣ ದೋಸೆ ಸುಲಭವಾಗಿ ಮಾಡಬಹುದಾದ ಸರಳವಾದ ರುಚಿಕಟ್ಟಾದ ತಿಂಡಿ. ಇಲ್ಲಿ ಚಪಾತಿಯ ಹಾಗೆ ಗ್ಲುಟೆನ್‌ ಭಯವಿಲ್ಲ. ಸದಾ ನಿರಾಂತಂಕವಾಗಿ ಮಕ್ಕಳು ಹಿರಿಯಾದಿಯಾಗಿ ಎಲ್ಲರೂ ಕೊಂಚ ಬದಲಾವಣೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಮಾಡಬಹುದಾದ ತಿಂಡಿ.

ಇದನ್ನೂ ಓದಿ | Bread recipes | ಬ್ರೆಡ್‌ನಲ್ಲೂ ಸಾಧ್ಯ ಬಗೆಬಗೆಯ ಫಟಾಫಟ್‌ ಸವಿರುಚಿಗಳು!

Exit mobile version