Site icon Vistara News

Dream meaning: ಈ ಹದಿನಾರು ಕನಸುಗಳು ಆಗಾಗ ಬೀಳುತ್ತಿದ್ದರೆ ಇದೇ ಅರ್ಥ

dream

ಬಹಳಷ್ಟು ಸಾರಿ ಚಿತ್ರ ವಿಚಿತ್ರ ಕನಸುಗಳು ಬಿದ್ದು ಎದ್ದ ಮೇಲೆ ನಾವು ಕಂಗಾಲಾಗಿ ಬಿಡುತ್ತೇವೆ. ಈ ಕನಸಿನ ಅರ್ಥವೇನು ಎಂದು ತಿಳಿಯದೆ ಗೊಂದಲಕ್ಕೆ ಬೀಳುತ್ತೇವೆ. ಇದೆಂಥ ಕನಸು ಅರ್ಥವಿಲ್ಲದ್ದು ಎಂದು ನಮ್ಮನ್ನೇ ನಾವು ಬೈದುಕೊಂಡು, ಆ ಕನಸನ್ನು ಮರೆಯುತ್ತೇವೆ. ಇನ್ನೂ ಕೆಲವು ಸಾರಿ ಕನಸಿನ ಆಘಾತದಿಂದ ಚೇತರಿಸಿಕೊಳ್ಳಲು ಸಮಯ ಹಿಡಿಯುತ್ತದೆ. ಆದರೆ ಇಂಥ ಒಂದೊಂದು ಕನಸೂ ಕೂಡಾ ನಮ್ಮ ಬಗ್ಗೆ ನಮಗೇ ಗೊತ್ತಿಲ್ಲದ ಸತ್ಯಗಳನ್ನು, ಸುಪ್ತ ಮನಸ್ಸಿನಲ್ಲಿ ಉಳಿದ ವಿಚಾರಗಳನ್ನು ನಮ್ಮ ಮುಂದೆ ತೆರೆದಿಡುವ ಬಗೆಯೂ ಹೌದು ಎಂಬುದು ನಿಮಗೆ ತಿಳಿದಿರಲಿ. ಹಾಗಾದರೆ ಈ ಕನಸೆಂಬ ಮಾಯಾಲೋಕದೊಳಗೊಮ್ಮೆ ಇಣುಕಿ ಬರೋಣ.

೧. ಬಾತ್‌ರೂಂ ಸಿಗದೇ ಇರುವ ಹಾಗೆ: ಹೆಚ್ಚು ಮಹಿಳೆಯರಿಗೆ ಬೀಳುವ ಕನಸಿದು. ಎಷ್ಟು ಹುಡುಕಿದರೂ ಬಾತ್‌ರೂಂ ಸಿಗದ ಪಡಿಪಾಟಲು ಅನುಭವಿಸಿದ ಹಾಗೆ ಕನಸು ಬೀಳುತ್ತದೆ. ನಿಮಗೆ ಯಾವುದೋ ಒಂದು ವಿಚಾರವನ್ನು ಅಷ್ಟು ಸುಲಭವಾಗಿ ತೆಗೆದು ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದೇ ಇದರ ಅರ್ಥ.

೨. ಹಲ್ಲೆಲ್ಲ ಉದುರಿಹೋದಂತೆ ಕನಸು: ಹಲ್ಲೆಲ್ಲ ಇದ್ದಕ್ಕಿದ್ದಂತೆ ಉದುರಿ ಹೋದಂತೆ ಕನಸು ಬಿತ್ತೆಂದರೆ ನಿಮಗೆ ಯಾವುದೋ ಒಂದು ಸತ್ಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂಬುದಾಗಿದೆ.

೩. ಯಾವುದೋ ಮನೆಯಲ್ಲಿ, ಕೋಣೆಯೊಂದರಲ್ಲಿ ಇದ್ದೀರಿ, ಅಲ್ಲಿಂದ ಹೇಗೆ ಹೊರಗೆ ಹೋಗಬೇಕೆಂದು ದಾರಿ ತಿಳಿಯದೆ ಪರದಾಡುವಂಥ ಕನಸು ಬಿದ್ದಿದೆಯಾ? ಹಾಗಿದ್ದಲ್ಲಿ ನಿಮಗೆ ಜೀವನದಲ್ಲಿ ಎತ್ತ ಹೋಗಬೇಕೆಂದು ತಿಳಿಯದೆ ಗೊಂದಲವಾಗಿದೆ ಎಂದು ಅರ್ಥ.

೪. ತಾನೇ ಬೆತ್ತಲಾದಂತೆ ಕನಸು ಬಿದ್ದಿದೆ ಎಂದಾದಲ್ಲಿ, ಯಾವುದೋ ಒಂದು ಕೆಲಸಕ್ಕೆ ನೀವು ಪೂರ್ಣ ತಯಾರಾಗಿಲ್ಲ ಎಂದೂ ಅಥವಾ ನಿಮಗೊಂದು ಹೊಸ ಜೀವನದ ಆರಂಭ ಹಾಗೂ ಸಿಗಲಿರುವ ಸ್ವಾತಂತ್ರ್ಯದ ಸೂಚನೆ. ಕನಸಿನಲ್ಲಿ ಬೆತ್ತಲಾದ ಮೇಲೆ ಏನು ಮಾಡುತ್ತೀರಿ ಎಂಬುದಕ್ಕೆ ಅನುಗುಣವಾಗಿ ಅರ್ಥ ಬದಲಾಗುತ್ತದೆ.

೫. ಯಾರೋ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತಿರುವ ಹಾಗೂ ನೀವು ಏದುಸಿರು ಬಿಡುತ್ತಾ ಓಡುತ್ತಿದ್ದೀರಿ ಎಂಬಂತೆ ಕನಸು ಬಿದ್ದರೆ, ಸವಾಲೊಂದು ನಿಮ್ಮ ಮುಂದಿದೆ ಎಂಬುದರ ಸೂಚನೆ.

೬. ತಡವಾಗಿ ಹೊರಟು ಯಾವುದೋ ಮೀಟಿಂಗು, ವಿಮಾನ, ಬಸ್ಸು ಮಿಸ್‌ ಆದಂತೆ ಕನಸೂ ಕೆಲವೊಮ್ಮೆ ಬೀಳುತ್ತದೆ. ಯಾವುದೋ ಮುಖ್ಯವಾದ ಕೆಲಸಕ್ಕೆ ನೀವು ಹೊರಡುವ ಮೊದಲಿನ ದಿನ ಹೀಗೆ ಬೀಳುವುದು ಹೆಚ್ಚು. ಯಾಕೆಂದರೆ, ಬೇಗ ಹೊರಡಬೇಕು ಎಂಬುದನ್ನು ಹೆಚ್ಚು ಯೋಚನೆ ಮಾಡಿ ಮಲಗಿರುವುದರಿಂದ, ಎಚ್ಚರವಾಗದೆ ತಡವಾಗಿ ಎದ್ದರೆ ಎಂಬ ಭಯ ನಿಮ್ಮನ್ನು ಕಾಡುತ್ತಿರುತ್ತದೆ.

೭. ಎಲ್ಲಿಂದಲೋ ಎತ್ತರದಿಂದ ಬಿದ್ದ ಹಾಗೆ ಕನಸು ಬಿತ್ತೆಂದರೆ ನಿಮಗೆ ಅಭದ್ರತೆಯ ಭಾವ ಕಾಡುತ್ತಿದೆ ಎಂದು ಅರ್ಥ.

೮. ಕೆಲವೊಮ್ಮೆ ಇದ್ದಕ್ಕಿದ್ದಂತೆ ನಾವು ಸಣ್ಣ ಮಕ್ಕಳೇ ಆಗಿದ್ದಂತೆ, ಅಥವಾ ಕಾಲೇಜಿಗೆ ಹೋಗುತ್ತಿರುವ ಹಾಗೆ, ಸರಿಯಾಗಿ ಏನೂ ಓದಿಕೊಂಡೇ ಹೋಗಿಲ್ಲದೆ ಪರೀಕ್ಷೆ ಬರೆಯುತ್ತಿರುವ ಹಾಗೆ ಕನಸು ಬೀಳುತ್ತದೆ. ಇದೂ ಕೂಡಾ ನೀವು ಯಾವುದೋ ಮಾಡಬೇಕಾದ ಕೆಲಸಕ್ಕೆ ತಲೆಕೆಡಿಸಿಕೊಂಡಿದ್ದಾಗ, ಚಿಂತೆ ಮಾಡುತ್ತಿದ್ದರೆ ಬೀಳುವಂಥ ಕನಸು.

೯. ಇನ್ನೂ ಕೆಲವೊಮ್ಮೆ ನಾವೇ ಸತ್ತಂತೆ ಕನಸು ಬೀಳುವುದೂ ಉಂಟು. ಇದು ವಿಚಿತ್ರವೆನಿಸಿದರೂ, ತೀರಾ ನೆಗೆಟಿವ್‌ ಫೀಲಿಂಗ್‌ ಬಂದರೂ ಇದರರ್ಥ ಹೊಸತೊಂದರ ಆರಂಭ ಎಂದಾಗಿದೆ.

೧೦. ಬೇರೆಯವರು ಸತ್ತಂತೆ ಕನಸು ಬಿದ್ದರೆ ಇದು ಅಶುಭ ಎಂದು ಭಾವಿಸಬೇಕಾಗಿಲ್ಲ. ಇದರಿಂದ ಆ ವ್ಯಕ್ತಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: Kids food: ಮಕ್ಕಳು ಲಂಬೂಜಿ ಆಗಬೇಕಾದರೆ ಅವರ ಆಹಾರದಲ್ಲಿ ಇವು ಇರಲಿ

೧೧. ಗರ್ಭಿಣಿಯಾದಂತೆ ಕನಸು ಬೀಳುವುದುದಂಟು. ಇದು ನಿಮ್ಮ ಸಂಬಂಧದ ಬಗ್ಗೆ ತಿಳಿಸುತ್ತದೆ. ನೀವು ಮದುವೆಯಾಗದೆ ನೀವು ಗರ್ಭಿಣಿ ಎಂಬ ಕನಸು ಬಿತ್ತೆಂದರೆ ನಿಮ್ಮ ಸುಪ್ತ ಬಯಕೆಯದು ಎಂದರ್ಥ. ಮದುವೆಯಾದ ಮೇಲೆ ಬಿದ್ದರೆ, ಇದು ನಿಮ್ಮೊಳಗಿನ ಭಯವೂ ಹೌದು.

೧೨. ಪ್ರವಾಸ ಮಾಡಿದಂತೆ ಕನಸು ಬಿದ್ದರೆ ಅದು ನಿಮ್ಮ ಚಲನಶೀಲತ್ವವನ್ನು ತೋರಿಸುತ್ತದೆ. ಬದುಕಿನಲ್ಲಿ ಬದಲಾವಣೆ ಬೇಕೆಂದುಬಯಸುವವರಿಗೆ ಬೀಳುವ ಕನಸಿದು.

೧೩. ಸೆಲೆಬ್ರಿಟಿಯನ್ನು ಭೇಟಿಯಾದಂತೆ ಕನಸು ಬಿದ್ದರೆ ಬಹುಶಃ ಆ ಸೆಲೆಬ್ರಿಟಿಯ ಸಿನಿಮಾ, ಹಾಡು ಅಥವಾ ಯಾವುದಾದರೊಂದು ವಿಚಾರ ನಿಮ್ಮ ಮೇಲೆ ಗಾಢವಾಗಿ ಪರಿಣಾಮ ಬೀರಿದ್ದಿರಬಹುದು. ಆ ಸಿನೆಮಾದ ಒಂದು ಕ್ಯಾರೆಕ್ಟರ್‌ ʻನಿಮ್ಮೊಳಗಿನ ನೀವುʼಗೆ ಹೆಚ್ಚು ಕನೆಕ್ಟ್‌ ಆಗಿದ್ದಿರಬಹುದು.

೧೪. ಸೆಕ್ಸ್‌ ಮಾಡಿದಂತೆ ಕನಸೂ ಬೀಳುತ್ತದೆ. ಹೀಗೊಂದು ಕನಸು ಬಿದ್ದರೆ ನೀವು ಏಕಾಂಗಿತನ ಅನುಭವಿಸುತ್ತಿದ್ದೀರಿ ಎಂದರ್ಥ. ಬಹುಶಃ ದೈಹಿಕ ಸಾಂಗತ್ಯಕ್ಕಿಂತಲೂ ನಿಮಗೀಗ ಭಾವನಾತ್ಮಕ ಸಾಂಗತ್ಯದ ಅವಶ್ಯಕತೆ ಇದೆ ಎಂದು ಅರ್ಥ.

೧೫. ಸಂಗಾತಿ ಮೋಸ ಮಾಡಿದಂತೆ ಕನಸು ಬಿದ್ದರೆ ನಿಮ್ಮ ಸಂಬಂಧದಲ್ಲೇನೋ ಸಮಸ್ಯೆಯಿದೆ. ಅದರ ಕಡೆಗೆ ನೀವು ಗಮನ ಕೊಡುವುದು ಅಗತ್ಯವಿದೆ ಎಂದರ್ಥ.

೧೬. ಮಕ್ಕಳನ್ನು ಕಳೆದುಕೊಂಡಂತೆ ಕನಸು ಬಿದ್ದರೆ ಅದೊಂದು ಎಚ್ಚರಿಕೆಯ ಗಂಟೆಯ ಹಾಗೆ. ನಮ್ಮ ದಿನನಿತ್ಯದ ಜಂಜಡಗಳಲ್ಲಿ ಮಕ್ಕಳ ಬಗ್ಗೆ ಸಾಕಷ್ಟು ಗಮನ ಕೊಡಲು ಸಾಧ್ಯವಾಗದಿದ್ದರೆ ಸುಪ್ತ ಮನಸ್ಸು ನಮ್ಮನ್ನು ಎಚ್ಚರಿಸುವ ಬಗೆ ಅಷ್ಟೇ.

ಇದನ್ನೂ ಓದಿ: ಮಕ್ಕಳ ಹೆತ್ತವರಿಗೆ ದಕ್ಕುವ ಉಚಿತ ಸಲಹೆಗಳು ಮತ್ತು ಕಟು ಸತ್ಯಗಳು!

Exit mobile version