ಬೆಂಗಳೂರು: ಬಾಲಿವುಡ್ ನಟರ ಪೈಕಿ ೬೦ (Sunil Shetty) ದಾಟಿದರೂ ಇಂದಿಗೂ ಫಿಟ್ ಆ್ಯಂಡ್ ಫೈನ್ ಆಗಿ ಕಂಗೊಳಿಸುತ್ತಿರುವವರ ಪೈಕಿ ಸುನಿಲ್ ಶೆಟ್ಟಿ ಕೂಡ ಒಬ್ಬರು. ೧೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ, ೩೦ ವರ್ಷಗಳ ಸಿನಿಮಾ ಜೀವನ ಕಂಡಿರುವ, ಬ್ಯುಸಿನೆಸ್‌ನಲ್ಲೂ ಸಾಕಷ್ಟು ಯಶಸ್ಸು ನೋಡಿರುವ ಸುನಿಲ್ ಶೆಟ್ಟಿ ತಮ್ಮ ಫಿಟ್ ದೇಹಸಿರಿಯಿಂದ ಯಾವಾಗಲೂ ಸುದ್ದಿಯಲ್ಲಿರುವವರು. ಅನಿಲ್ ಕಪೂರ್ ಸೇರಿದಂತೆ ಅರುವತ್ತು ದಾಟಿದ ಕೆಲವೇ ಕೆಲವು ಬಾಲಿವುಡ್ ನಟರ ಪೈಕಿ ಆಗಾಗ ಯುವಕ ಯುವತಿಯರಿಗೆ ಫಿಟ್‌ನೆಸ್ ವಿಷಯದಲ್ಲಿ ಸ್ಫೂರ್ತಿಯ ಚಿಲುಮೆಯಾಗಿ ಕಾಣಿಸುವ ಮಂದಿಯ ಸಾಲಿಗೆ ಸುನಿಲ್ ಶೆಟ್ಟಿಯೂ ಸೇರುತ್ತಾರೆ.
ಇಂಥ ಸುನಿಲ್ ಶೆಟ್ಟಿ ತಮ್ಮ ಎಲ್ಲ ಯಶಸ್ಸಿನ ಹಿಂದಿರುವ ಸೀಕ್ರೆಟ್ ಎಂದರೆ ಅದು ಫಿಟ್‌ನೆಸ್ ಎಂದು ಹೇಳುವ ಮೂಲಕ, ಆರೋಗ್ಯಕರ ದೇಹ ಹೊಂದಿರುವುದು ಅದರ ಬಗ್ಗೆ ಹೆಚ್ಚು ಗಮನ ನೀಡುವುದು ಯಾಕೆ ಮುಖ್ಯ ಎಂಬುದನ್ನು ವಿವರಿಸಿದ್ದಾರೆ.
ಇದನ್ನೂ ಓದಿ | ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸಿದ್ಧ ಎಂದಿದ್ದ ಸೇನಾ ಜನರಲ್ರನ್ನು ಅಪಹಾಸ್ಯ ಮಾಡಿದ ಬಾಲಿವುಡ್ ನಟಿ ರಿಚಾ ಚಡ್ಡಾ
ತನ್ನ ಲಿಂಕ್ಡ್ ಇನ್ ಪ್ರೊಫೈಲ್‌ನಲ್ಲಿ ಈ ಬಗ್ಗೆ ಸವಿಸ್ತಾರವಾಗಿ ಹೇಳಿಕೊಂಡಿರುವ ಅವರು, ಜೀವನದಲ್ಲಿ ತಮಗೆ ಬಂದಿರುವ ಅವಕಾಶಗಳನ್ನು ಅತ್ಯದ್ಭುತವಾಗಿ ಬಳಸಿಕೊಳ್ಳಲು ಮುಖ್ಯವಾಗಿ ನೆರವಾಗಿದ್ದು ಆರೋಗ್ಯ ಹಾಗೂ ಫಿಟ್ ದೇಹ ಎಂದು ಹೇಳುವ ಮೂಲಕ ದೇಹಾರೋಗ್ಯ ಕಾಪಾಡಲು, ತೂಕ ಸಮತೋಲನದಲ್ಲಿಡಲು ವ್ಯಾಯಾಮ ಮಾಡುವುದು ಎಷ್ಟು ಮುಖ್ಯ ಎಂದು ವಿವರಿಸಿದ್ದಾರೆ.
ʻʻ೬೦ ದಾಟಿದರೂ ಹೀಗಿದ್ದೇನೆ ಎಂಬ ಕಾರಣಕ್ಕೆ ಅನೇಕರು ನನ್ನಲ್ಲಿ ನನ್ನ ಫಿಟ್‌ನೆಸ್ ಗುಟ್ಟನ್ನು ಕೇಳುತ್ತಾರೆ. ಇದರ ಹಿಂದಿನ ಮ್ಯಾಜಿಕ್ ಏನು ಎಂದು ಕೇಳುತ್ತಾರೆ. ಆದರೆ, ದುರದೃಷ್ಟವಶಾತ್ ಎಂಥ ಮ್ಯಾಜಿಕ್ಕೂ ಇಲ್ಲ. ಆದರೆ, ಫಿಟ್‌ನೆಸ್ ಕಾಯ್ದುಕೊಳ್ಳುವುದು ಬಹಳ ಸಿಂಪಲ್ ವಿಷಯ. ಇಂದು ನಮಗೆ ಲಭ್ಯವಿರುವ ಬೇಕಾಬಿಟ್ಟಿ ಓವರ್‌ಲೋಡಿಂಗ್ ಮಾಹಿತಿಗಳಿಂದ ಇಂಥ ಸಿಂಪಲ್ ವಿಷಯವನ್ನು ನಾವು ಹೆಚ್ಚು ಸಂಕೀರ್ಣಗೊಳಿಸುತ್ತಾ ಹೋಗುತ್ತೇವೆ. ಇಲ್ಲೇ ಎಡವಟ್ಟು ಆಗುತ್ತದೆʼʼ ಎಂದಿದ್ದಾರೆ.
ಮಾನಸಿಕ ಹಾಗೂ ದೈಹಿಕ ಆರೋಗ್ಯ ಮುಖ್ಯ
ʻʻಈಗಲೂ ನಾನು ದಿನಕ್ಕೆ ೨೦ ಗಂಟೆಗಳಷ್ಟು ಕೆಲಸ ಮಾಡಿದರೂ ನನಗೆ ಸುಸ್ತೆನಿಸುವುದಿಲ್ಲ. ಆಮೇಲೂ ಏನಾದರೂ ಮಾಡುವ ಅಂತಲೇ ಅನಿಸುತ್ತದೆ. ನಾನು ಜೀವನದಲ್ಲಿ ಹಲವಾರು ವಿಷಯಗಳಲ್ಲಿ ಸೋತಿರಬಹುದು. ಆದರೆ, ಹಲವು ವಿಷಯಗಳಲ್ಲಿ ಗೆದ್ದಿದ್ದೇನೆ ಕೂಡಾ. ಹೀಗೆ ಗೆದ್ದಿರುವುದಕ್ಕೆ ಕಾರಣ ನನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಿರುವುದು ಹಾಗೂ ಅವೆರಡೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವುದುʼʼ ಎನ್ನುತ್ತಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಫಿಟ್‌ನೆಸ್ ನನಗೆ ಬದುಕಿನಲ್ಲಿ ಒಂದು ಶಿಸ್ತನ್ನು ಕಲಿಸಿಕೊಟ್ಟಿದೆ ಎಂದಿರುವ ಅವರು, ಫಿಟ್‌ನೆಸ್ ಎಂದರೆ ಏನು ಎಂಬುದನ್ನು ವಿವರವಾಗಿ ಹೇಳುತ್ತಾರೆ. ದಿನನಿತ್ಯದ ಕೆಲಸಗಳನ್ನು ಯಾವುದೇ ಮಾನಸಿಕ ಹಾಗೂ ದೈಹಿಕ ಒತ್ತಡಗಳಿಲ್ಲದೆ, ಆರೋಗ್ಯ ಸಮಸ್ಯೆಗಳಿಲ್ಲದೆ ಸರಾಗವಾಗಿ ಮಾಡಲು ಸಾಧ್ಯವಾಗುತ್ತದೋ ಅದು ನನ್ನ ಪಾಲಿಗೆ ಫಿಟ್‌ನೆಸ್ ಎಂಬುದು ಅವರ ವ್ಯಾಖ್ಯಾನ. ಇಂದು ಫಿಟ್‌ನೆಸ್ ಎಂಬುದರ ಅರ್ಥ ವ್ಯಾಪ್ತಿ ವಿಸ್ತರಿಸಿದೆ. ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವುದು, ತೂಕ ನಿಯಂತ್ರಿಸುವುದು, ಸಮತಟ್ಟಾದ ಹೊಟ್ಟೆ ಕಾಪಾಡಿಕೊಳ್ಳುವುದು ಅಷ್ಟೇ ಫಿಟ್‌ನೆಸ್ ಅಲ್ಲ. ಅದನ್ನೂ ಮೀರಿದ್ದು ಇದು. ಇದು ಅದ್ಭುತವಾದ ಮಾನಸಿಕತೆಯನ್ನೂ ಹೊಂದುವುದೂ ಆಗಿದೆ ಎಂದು ವಿವರಿಸುತ್ತಾರೆ ಸುನಿಲ್ ಶೆಟ್ಟಿ.
ವೃತ್ತಿಗೆ ಫಿಟ್‌ನೆಸ್ ಬೋನಸ್‌ನಂತೆ
ʻʻಫಿಟ್ ಆಗಿದ್ದುಕೊಂಡು ಆರೋಗ್ಯವಾಗಿರುವುದು ಜೀವನಕ್ಕೆ ಸಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. ಬಹುಮುಖ್ಯವಾಗಿ ವೃತ್ತಿಯಲ್ಲಿ ಇದು ಬೀರುವ ಪರಿಣಾಮ ದೊಡ್ಡದು, ಅಂದರೆ ಇದು ವೃತ್ತಿಗೆ ಬೋನಸ್‌ನಂತೆ. ಕೋವಿಡ್‌ನ ನಂತರ ಪ್ರಪಂಚದಲ್ಲೇ ಸಾಕಷ್ಟು ಬದಲಾವಣೆಗಳಾಗಿವೆ. ನಮಗೆಲ್ಲರಿಗೂ ಕುಟುಂಬ, ಹಾಗೂ ನಮ್ಮ ಆರೋಗ್ಯ ಎಷ್ಟು ಮುಖ್ಯ ಎಂಬ ಅರಿವಾಗಿದೆʼʼ ಎಂದಿದ್ದಾರವರು.
ಸುನಿಲ್ ಶೆಟ್ಟಿ ಫಿಟ್‌ನೆಸ್ ಮಂತ್ರವನ್ನು ಸಾವಿರಾರು ಮಂದಿ ಇಷ್ಟಪಟ್ಟಿದ್ದು, ಸ್ಫೂರ್ತಿದಾಯಕ ಮಾತುಗಳು ಎಂದು ಕೊಂಡಾಡಿದ್ದಾರೆ. ಕಣ್ತೆರೆಸುವ ಮಾತುಗಳಿವು. ನೀವು ಹೇಳಿದ ಒಂದೊಂದು ಮಾತೂ ಸತ್ಯ. ನಾವು ೬೦ರಲ್ಲಿ ನಿಮ್ಮಂತೆ ಇರಲು ಇಷ್ಟಪಡುತ್ತೇವೆ ಎಂದೂ ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | Salman Khan ಗೂ ಇದ್ದವು ಕಷ್ಟದ ದಿನಗಳು, ದುಡ್ಡಿಲ್ಲದಾಗ ಶರ್ಟ್ ಕೊಡಿಸಿದ್ದ ಸುನಿಲ್ ಶೆಟ್ಟಿ!