Site icon Vistara News

Eye Care | ಕಣ್ಣುಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ಹೀಗಿರಲಿ

ಕಣ್ಣುಗಳ ಕಾಳಜಿ

ನಮ್ಮ ಪಂಚೇಂದ್ರಿಯಗಳಲ್ಲಿ ಪ್ರಧಾನ ಸ್ಥಾನ ಕಣ್ಣಿಗೆ. ಆದರೆ ಅದರ ಬಗ್ಗೆ ನಾವೆಷ್ಟು ಗಮನ ಹರಿಸುತ್ತಿದ್ದೇವೆ? ೨೦೨೧ರ ಸಾಲಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಮಾಹಿತಿಯಂತೆ, ವಿಶ್ವದಲ್ಲಿ ೨.೨ ಬಿಲಿಯನ್‌ ಮಂದಿ ದೂರ ಅಥವಾ ಸಮೀಪ ದೃಷ್ಟಿದೋಷದಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ. ೨೦ರಷ್ಟು ಮಂದಿ ಭಾರತದಲ್ಲಿದ್ದಾರೆ.

ದೃಷ್ಟಿ ದೋಷ ಉಂಟಾಗುವುದಕ್ಕೆ ಕಾರಣಗಳು ಹಲವಾರು ಇರಬಹುದು. ವಯಸ್ಸು, ಆನುವಂಶೀಯತೆ, ಪರಿಸರ- ಇಂಥವುಗಳ ಜೊತೆಗೆ ನಮ್ಮ ನಿತ್ಯದ ಬದುಕೂ ಕಾರಣವಾಗುತ್ತದೆ. ದೈನಂದಿನ ಅಭ್ಯಾಸಗಳ ಬಗ್ಗೆ ಗಮನ ನೀಡದೆ ಹೋದರೆ, ಸಣ್ಣದಾಗಿ ಕಾಣಿಸಿಕೊಂಡ ಕಣ್ಣಿನ ದೋಷ ಬೆಳೆದು ದೊಡ್ಡದಾಗಿ ದೃಷ್ಟಿಗೇ ಅಪಾಯ ತಂದೊಡ್ಡಬಹುದು. ಹಾಗಾಗಿ ಅಗತ್ಯವಿದ್ದಾಗಲೆಲ್ಲ ವೈದ್ಯರಲ್ಲಿ ಕಣ್ಣುಗಳ ತಪಾಸಣೆ ಮಾಡಿಸುವುದು ಅತಿ ಮುಖ್ಯ.

ಸ್ಕ್ರೀನ್‌ ಟೈಮ್:‌ ಕೋವಿಡ್‌ ನಂತರ ಮನೆಯಿಂದ ಕೆಲಸ ಮಾಡುವ ಹಿನ್ನೆಲೆಯಲ್ಲಿ ದೀರ್ಘಕಾಲದವರೆಗೆ ಕಂಪ್ಯೂಟರ್‌ ಮುಂದಿರುವುದು ಬಹಳಷ್ಟು ಮಂದಿಗೆ ಅನಿವಾರ್ಯ. ಹೀಗಿರುವಾಗ ದೃಷ್ಟಿ ಸಮಸ್ಯೆಗಳು ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಇದನ್ನು ʻಸ್ಕ್ರೀನ್‌ ಸೈಟೆಡ್‌ನೆಸ್‌ʼ ಎಂಬುದಾಗಿ ಗುರುತಿಸಲಾಗುತ್ತದೆ. ಇದಕ್ಕಾಗಿ ೨೦-೨೦-೨೦ ಸೂತ್ರವನ್ನು ತಜ್ಞರು ಶಿಫಾರಸು ಮಾಡುತ್ತಾರೆ. ಅಂದರೆ, ಪ್ರತಿ ೨೦ ನಿಮಿಷಗಳಿಗೊಮ್ಮೆ ಕನಿಷ್ಟ ೨೦ ಅಡಿ ದೂರವನ್ನು ೨೦ ಸೆಕೆಂಡ್‌ಗಳಷ್ಟಾದರೂ ದಿಟ್ಟಿಸಿ ನೋಡುವುದು. ಇದರಿಂದ ಕಣ್ಣುಗಳ ಮೇಲಿನ ಒತ್ತಡ ಕಡಿಮೆ ಮಾಡಬಹುದು.

ಆಹಾರ: ಹಸಿರು ಸೊಪ್ಪು ಮತ್ತು ತರಕಾರಿಗಳು, ಕಿತ್ತಳೆಯಂಥ ಹುಳಿ ಹಣ್ಣುಗಳು, ಒಣ ಹಣ್ಣುಗಳು, ಮೊಟ್ಟೆ, ಮೀನು- ಇಂಥವೆಲ್ಲ ನಮ್ಮ ದೃಷ್ಟಿಯನ್ನು ಕಾಪಾಡುವಂಥವು. ಅಂದರೆ ನಮ್ಮ ಆಹಾರದಲ್ಲಿ ಒಮೇಗಾ ೩ ಫ್ಯಾಟಿ ಆಮ್ಲ, ಜಿಂಕ್‌, ಸಿ ಮತ್ತು ಇ ಜೀವಸತ್ವಗಳು ಇರಲೇಬೇಕು. ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಕಣ್ಣಿಗೆ ಮಾತ್ರವೇ ಅಲ್ಲ, ಒಟ್ಟಾರೆಯಾಗಿ ಸಂಪೂರ್ಣ ಆರೋಗ್ಯಕ್ಕೇ ಕ್ಷೇಮಕರ.

ವಿಶ್ರಾಂತಿ: ಕಣ್ತುಂಬಾ ನಿದ್ದೆ ಮಾಡುವುದು ಅಗತ್ಯ ದಿನಚರಿಗಳಲ್ಲೊಂದು. ನಿದ್ದೆಯಿಂದ ವಂಚಿತರಾದರೆ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು, ತೂಕ ಹೆಚ್ಚುವುದು, ಹೃದ್ರೋಗ, ರಕ್ತದೊತ್ತಡ, ನೆನಪಿನ ಶಕ್ತಿ ದುರ್ಬಲಗೊಳ್ಳುವುದು, ಮೂಡ್‌ ಏರುಪೇರು- ಇಂಥ ಹಲವೆಂಟು ಸಮಸ್ಯೆಗಳು ತಲೆದೋರುತ್ತವೆ. ಇನ್ನು ನಮ್ಮ ಕಣ್ಣಿನ ಆರೋಗ್ಯದ ಬಗ್ಗೆ ಹೇಳಬೇಕೆಂದರೆ ದೃಷ್ಟಿ ಮಂದವಾಗುವುದು, ಕಣ್ಣು ಒಣಗಿದಂತೆ ಅನುಭವಕ್ಕೆ ಬರುವುದು, ಕೆಂಪಾಗುವುದು, ಕಣ್ಣಿನ ಸುತ್ತ ಕಪ್ಪು ವರ್ತುಲಗಳಂಥ ಸಮಸ್ಯೆಗಳು ತಲೆದೋರುತ್ತವೆ. ನಮ್ಮ ಕಣ್ಣು ಆರೋಗ್ಯವಾಗಿರಲು ದಿನಕ್ಕೆ ೭-೯ ತಾಸುಗಳಷ್ಟು ವಿಶ್ರಾಂತಿ ನಮ್ಮ ನಯನಗಳಿಗೆ ಬೇಕೇಬೇಕು.

ಉಜ್ಜಬೇಡಿ: ಸದಾ ಕಣ್ಣುಜ್ಜುತ್ತಿರುವುದು ಖಂಡಿತ ಸಮಸ್ಯೆಗೆ ಮೂಲವಾಗುತ್ತದೆ. ಕೆಲವೊಮ್ಮೆ ಅಲರ್ಜಿಯಿಂದಾಗಿ ಕಣ್ಣಿನಲ್ಲಿ ತುರಿಕೆ ಉಂಟಾಗಬಹುದು. ಇದಕ್ಕೆ ವೈದ್ಯರಲ್ಲಿ ಸಮಾಧಾನವಿರುತ್ತದೆ. ಬದಲಿಗೆ ಉಜ್ಜಿದರೆ, ಕಣ್ಣೊಳಗಿನ ಸೂಕ್ಷ್ಮ ರಕ್ತನಾಳಗಳಿಗೆ ಘಾಸಿಯಾಗಿ ಸಮಸ್ಯೆ ಹೆಚ್ಚಬಹುದು. ಬದಲಿಗೆ ಸ್ವಚ್ಛ ತಣ್ಣೀರಿನಿಂದ ಕಣ್ಣು ತೊಳೆಯುವುದು ಸೂಕ್ತ.

ತಂಪು ಕನ್ನಡಕ: ಅತಿಯಾದ ಬೆಳಕು ಅಥವಾ ಬಿಸಿಲಿಗೆ ಕಣ್ಣೊಡ್ಡುವುದು ಸಹ ದೃಷ್ಟಿಗೆ ಹಾನಿ ಮಾಡಬಲ್ಲದು. ಅತಿನೇರಳೆ ಕಿರಣಗಳು ಕಣ್ಣಿಗೆ ಅಪಾಯ ತರುತ್ತವೆ. ಇಂಥ ಸಮಯದಲ್ಲಿ ತಂಪು ಕನ್ನಡಕ ಬಳಸುವುದು ಒಳ್ಳೆಯದು. ಅದಲ್ಲದೆ, ಉತ್ತಮ ಗುಣಮಟ್ಟದ ತಂಪು ಕನ್ನಡಕಗಳು ಕಣ್ಣುಗಳಲ್ಲಿ ಕ್ಯಾಟರಾಕ್ಟ್‌ ಬೆಳವಣಿಗೆಯನ್ನು ನಿಧಾನಗೊಳಿಸುತ್ತವೆ.

ನೀರು ಬೇಕು: ದಿನಕ್ಕೆ ಮೂರು ಲೀ.ನಷ್ಟು ನೀರು ನಮ್ಮ ದೇಹಕ್ಕೆ ಬೇಕೇಬೇಕು. ಕಣ್ಣುಗಳ ಆರೋಗ್ಯ ಸಾಧನೆಗೂ ಇದು ಅಗತ್ಯ. ಕಣ್ಣಿಗೆ ಬೀಳುವ ಯಾವುದೇ ಧೂಳು, ಕಸ ಮತ್ತಿತರ ಕಣಗಳನ್ನು ಸ್ವಚ್ಛಗೊಳಿಸಲು ಕಣ್ಣುಗಳಿಗೆ ನೀರಿನ ಅಗತ್ಯವಿದೆ. ರೆಪ್ಪೆ ಮುಚ್ಚುವುದರೊಂದಿಗೆ ಕಣ್ಣು ತನ್ನನ್ನು ತಾನು ಶುದ್ಧಗೊಳಿಸಿಕೊಳ್ಳುತ್ತಲೇ ಇರುತ್ತದೆ. ದೇಹದಲ್ಲಿ ಸಾಕಷ್ಟು ನೀರಿಲ್ಲದಿದ್ದರೆ ಕಣ್ಣುಗಳಲ್ಲಿ ಶುಷ್ಕತೆ, ಕೆಂಪಾಗುವುದು, ಊದಿಕೊಂಡು ತುರಿಕೆಯಾಗುವುದು- ಹೀಗೆ ನಾನಾ ಸಮಸ್ಯೆಗಳು ಉಂಟಾಗುತ್ತವೆ.

ಇದ್ನನೂ ಓದಿ| ಮಧುಮೇಹ, ಬೊಜ್ಜು ಸೈಲೆಂಟ್‌ ಕಿಲ್ಲರ್ಸ್‌: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Exit mobile version