Site icon Vistara News

Face Care | ನೆನಪಿಡಿ: ಈ ಐದು ಸೌಂದರ್ಯ ಚಿಕಿತ್ಸೆಗಳು ಅತಿಯಾದರೆ ಒಳ್ಳೆಯದಲ್ಲ!

Face Care using ayurvedic hacks

ಅತಿಯಾದರೆ ಅಮೃತವೂ ವಿಷ ಎಂದು ನೀವು ಕೇಳಿರಬೇಕಲ್ಲವೇ? ಇದೂ ಅಂಥದ್ದೇ ಒಂದು ಅತಿಗಳ ಲಿಸ್ಟು. ಯಾವುದೇ ಅಭ್ಯಾಸವಿರಲಿ, ಅದು ಎಷ್ಟೇ ಒಳ್ಳೆಯದೂ ಇರಬಹುದು. ಅತಿಯಾದ ಅಭ್ಯಾಸ ಚಟವಾಗಿ ಪರಿಣಮಿಸುತ್ತದೆ. ಚಟವೆಂಬುದು ಕಾಯಿಲೆಯೂ ಹೌದು ನೆನಪಿರಲಿ.

ಹಾಗಾದರೆ ಇಲ್ಲಿ ಹೇಳಹೊರಟಿರುವ ಚಟ ಸೌಂದರ್ಯದ ಕುರಿತಾದುದು. ಸೌಂದರ್ಯದ ಹಿಂದೆ ಬಿದ್ದು ಆಗಾಗ ಅತಿಯಾಗಿ ಬ್ಯೂಟಿ ಪಾರ್ಲರಿಗೆ ಹೋಗುವುದು, ಏನಾದರೊಂದು ಸೌಂದರ್ಯ ಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವುದೂ ಒಂದು ಚಟವೇ. ನಮ್ಮ ಚರ್ಮಕ್ಕೂ ಅದರದ್ದೇ ಆದ ಸಮಯ ಕೊಡಬೇಕು. ಆಗಾಗ ಒಂದಿಲ್ಲೊಂದು ಪ್ರಯೋಗಗಳನ್ನು ಅದರ ಮೇಲೆ ಮಾಡುತ್ತಲೇ ಇದ್ದರೆ ಚರ್ಮದ ಆರೋಗ್ಯ ಕೆಡುತ್ತದೆ. ಹಾಗಿದ್ದರೆ, ಯಾವೆಲ್ಲ ಸೌಂದರ್ಯ ಚಿಕಿತ್ಸೆಗಳನ್ನು ಆಗಾಗ ಮಾಡಬಾರದು ಎಂಬುದನ್ನು ನೋಡೋಣ.

೧. ಕೆರಾಟಿನ್‌ ಹೇರ್‌ ಟ್ರೀಟ್‌ಮೆಂಟ್:‌ ಕೂದಲು ರೇಷ್ಮೆಯ ಹಾಗೆ ನುಣುಪಾಗಿ ಲಕಲಕ ಹೊಳೆಯುತ್ತಿರಬೇಕೆಂದು ಯಾರು ತಾನೇ ಬಯಸುವುದಿಲ್ಲ ಹೇಳಿ. ಹಾಗಾಗಿ ಇಂದು ಕೂದಲಿನ ಚಿಕಿತ್ಸೆಗಳನ್ನು ಮಾಡಿಕೊಳ್ಳುವವರ ಸಂಕ್ಯೆ ಹೆಚ್ಚಾಗಿದೆ. ಆದರೆ ಒಮ್ಮೆ ಇದನ್ನು ಮಾಡಿಸಿಕೊಂಡರೆ, ಕೂದಲಿಗೆ ಮಾಡಬೇಕಾದ ಕಾಳಜಿಯೂ ಹೆಚ್ಚಾಗುತ್ತದೆ. ಪದೇ ಪದೇ ಮಾಡಿಸಿಕೊಳ್ಳುತ್ತಲೇ ಇದ್ದರೆ, ಕೂದಲು ನಿಸ್ತೇಜವಾಗುತ್ತದೆ. ಇದರಲ್ಲಿರುವ ಹಾನಿಕಾರಕ ರಾಸಾಯನಿಕಗಳು ಸಾಕಷ್ಟು ದುಷ್ಪರಿಣಾಮಗಳನ್ನೂ ಬೀರುತ್ತದೆ. ಕೂದಲು ಬೇಗ ನೆರೆಯುವುದು, ಉದುರುವುದು ಇತ್ಯಾದಿಗಳೂ ಸೇರಿದಂತೆ, ಕಣ್ಣು, ಮಿದುಳಿಗೆ, ಉಸಿರಾಟದ ಅಂಗಾಗಗಳಿಗೆ ಇದರಿಂದ ಹಾನಿಯಿದೆ.

೨. ಫಿಶ್‌ ಸ್ಪಾ: ಮೀನುಗಳಿರುವ ತೊಟ್ಟಿಯೊಳಗೆ ಕಾಲು ಇಳಿಬಿಟ್ಟು ಕೂತು ಮಾಡುವ ಸ್ಪಾ ಬಹಳ ರಿಲ್ಯಾಕ್ಸಿಂಗ್‌ ಅನಿಸಬಹುದು. ಆದರೆ, ಮೀನಿರುವ ತೊಟ್ಟಿ ಹೇಗಿದೆ, ಶುಚಿತ್ವ ಇಲಿ ಹೇಗೆ ಕಾಪಾಡಿಕೊಳ್ಳಲಾಗುತ್ತದೆ ಇತ್ಯಾದಿ ಇತ್ಯಾದಿಯೂ ಇಲ್ಲಿ ಬಹಳ ಮುಖ್ಯವಾಗುತ್ತದೆ. ಆಗಾಗ ಇದನ್ನು ಮಾಡಿಸುವ ಚಟವಿದ್ದರೆ, ಬಹಳ ಜನರು ಮಾಡಿಸಿಕೊಳ್ಳುವ ಇಂಥ ಜಾಗಗಳಲ್ಲಿ ಚರ್ಮ ಸಂಬಂಧೀ ಸಮಸ್ಯೆಗಳೂ ಬರುವ ಸಂಭವ ಹೆಚ್ಚು. ಸಾಧಾರಣ ಪೆಡಿಕ್ಯೂರ್‌ ಹಾಗೂ ಮೆನಿಕ್ಯೂರ್‌ ಮಾಡಿಸಿಕೊಳ್ಳುವ ಸಂದರ್ಭವೂ ಪಾರ್ಲರಿನ ಶುಚಿತ್ವವನ್ನು ಗಮನಿಸಿ. ಜೊತೆಗೆ ಇವುಗಳನ್ನು ಆಗಾಗ ಮಾಡಿಸಿಕೊಳ್ಳುವುದರಿಂದ ಉಗುರಿನ ಕ್ಯುಟಿಕಲ್ಸ್‌ಗೂ ಹಾನಿಯಾಗಬಹುದು.

೩. ಕೃತಕ ಕಣ್ರೆಪ್ಪೆಗಳು: ಹೆವಿ ಮೇಕಪ್‌ ಸಂದರ್ಭ ಮಾತ್ರ ಬಳಸಬಹುದಾದ ಕೃತಕ ಕಣ್ರೆಪ್ಪೆಗಳು ಎಲ್ಲ ಸಂದರ್ಭಗಳಲ್ಲೂ ಸಹಜವಾಗಿ ಕಾಣುವುದಿಲ್ಲ. ಅಗತ್ಯವಿಲ್ಲದ ಕಡೆ ಬಳಸುವುದನ್ನು ಬಿಡಿ. ಅತಿಯಾಗಿ ಬಳಸುತ್ತಿದ್ದೀರಿ ಎಂದಾದಲ್ಲಿ, ಕಣ್ರೆಪ್ಪೆಯ ಮೇಲೆ ಒಂದೇ ಜಾಗದಲ್ಲಿ ಅಂಟಿಸುವುದರಿಂದ ಕೊನೆಗೆ ಅದು ನಿಮ್ಮ ನಿಸರ್ಗದತ್ತ ರೆಪ್ಪೆಗೂದಲ ಉದುರುವಿಕೆಗೂ ಕಾರಣವಾಗುತ್ತದೆ.

೪. ಆಂಟಿ ಏಜಿಂಗ್‌ ಕ್ರೀಮುಗಳು: ವಯಸ್ಸಾಗುತ್ತಿದೆ, ಚರ್ಮ ಸುಕ್ಕಾಗಿ ಕಾಣಲು ಆರಂಭವಾಗಿದೆ ಎಂದು ಅತಿಯಾಗಿ ಆಂಟಿ ಏಜಿಂಗ್‌ ಕ್ರೀಮು ಸೀರಂಗಳನ್ನು ಬಳಸುತ್ತಿದ್ದೀರಾ? ಹಾಗಾದರೆ ಹೀಗೆ ಬಳಸುವ ಮುನ್ನ ಒಮ್ಮೆ ಯೋಚಿಸಬೇಕು. ಸಾಮಾನ್ಯವಾಗಿ ಇಂತಹ ಕ್ರೀಮುಗಳನ್ನು ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಿ ಎಂದು ಅದರಲ್ಲಿ ಸಲಹೆ ನೀಡಲಾಗಿರುತ್ತದೆ. ಅದು ಯಾಕೆಂಬುದನ್ನೂ ಅರ್ಥ ಮಾಡಿಕೊಳ್ಳಬೇಕು. ಆಂಟಿ ಏಜಿಂಗ್‌ ಕ್ರೀಮುಗಳಲ್ಲಿ ಸಾಮಾನ್ಯವಾಗಿ ಬಳಸುವ ರೆಟಿನಾಲ್‌ ಎಂಬ ರಾಸಾಯನಿಕ ಕೊಲಾಜನ್‌ ಉತ್ಪತ್ತಿಗೆ ಸಹಾಯ ಮಾಡುತ್ತದೆ ಹಾಗೂ ಇದು ಕಪ್ಪು ಕಲೆ, ಸುಕ್ಕನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ ಎಂಬುದು ನಿಜವಾದರೂ ಇದನ್ನು ಬೆಳಗಿನ ಸಮಯದಲ್ಲಿ ಬಳಸಿದರೆ, ಸೂರ್ಯನ ಬಿಸಿಲಿಗೆ ಚರ್ಮ ಸುಡುವ ಸಂಭವವಿದ್ದು, ಹಾನಿಯನ್ನೂ ಮಾಡುತ್ತದೆ. ಹಾಗಾಗಿ ಇವುಗಳ ಬಳಕೆಯ ಸಂದರ್ಭ ಎಚ್ಚರ ಬೇಕು. ಹಿತಮಿತವಾಗಿ ಬಳಸಬೇಕು.

೫. ಸ್ಕ್ರಬ್ಬಿಂಗ್‌ ಹಾಗೂ ಮಾಯ್‌ಶ್ಚರೈಸಿಂಗ್:‌ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಸ್ಕ್ರಬ್ಬಿಂಗ್‌ ಮತ್ತು ಮಾಯ್‌ಶ್ಚರೈಸಿಂಗ್‌ ಬಹಳ ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಸ್ಕ್ರಬ್ಬಿಂಗ್‌ ಸತ್ತ ಚರ್ಮವನ್ನು ಕಿತ್ತೆಸೆದು, ನುಣುಪು ನೀಡಿದರೆ, ಮಾಯ್‌ಶ್ಚರೈಸಿಂಗ್‌ ಚರ್ಮವನ್ನು ತಾಜಾ ಆಗಿಡಲು ಸಹಾಯ ಮಾಡುತ್ತದೆ. ಆದರೆ, ಇದನ್ನೇ ಅತಿಯಾಗಿ ಮಾಡಬಾರದು. ದಿನಕ್ಕೊಮ್ಮೆ ಮಾಯ್‌ಶ್ಚರೈಸಿಂಗ್‌, ವಾರಕ್ಕೊಮ್ಮೆ ಸ್ಕ್ರಬ್ಬಿಂಗ್‌ ಸಾಕು. ಹೆಚ್ಚಾದರೆ, ಚರ್ಮಕ್ಕೆ ಹಾನಿಯಾಗುತ್ತದೆ.

ಇದನ್ನೂ ಓದಿ| Face Care |ಮೊಡವೆಗಳೇ? ಕೀಳಬೇಡಿ!

Exit mobile version