ಬಹಳಷ್ಟು ಮಂದಿಗೆ ಒಂದು ತಪ್ಪು ತಿಳಿವಳಿಕೆಯಿದೆ. ದೇಹಕ್ಕೆ ಆಯಿಲ್ ಮಸಾಜ್ ಮಾಡಿಸಿಕೊಂಡರೂ ಮುಖಕ್ಕೆ ಮಾತ್ರ ಎಣ್ಣೆಯನ್ನು (Face Massage) ಹಚ್ಚಿಕೊಳ್ಳುವುದು ಒಳ್ಳೆಯದಲ್ಲ ಎಂಬುದು. ಮುಖಕ್ಕೆ ಎಣ್ಣೆ ಹಚ್ಚುವುದರಿಂದ ಮೊಡವೆ, ಜಿಡ್ಡು ಮತ್ತಿತರ ಚರ್ಮದ ಸಮಸ್ಯೆ ಹೆಚ್ಚಾಗುತ್ತದೆ ಎಂಬುದು ಬಹುತೇಕರ ಅನಿಸಿಕೆ. ಆದರೆ ನಿಜ ಹೇಳಬೇಕೆಂದರೆ, ಇದು ತಪ್ಪು ನಂಬಿಕೆ.
ಪ್ರತಿಯೊಂದು ಬಗೆಯ ಚರ್ಮಕ್ಕೂ ಎಣ್ಣೆ ಹೊಂದುತ್ತದೆ. ಕೇವಲ ಒಣ ಚರ್ಮದವರು ಮಾತ್ರ ಚರ್ಮಕ್ಕೆ ಎಣ್ಣೆಯನ್ನು ಬಳಸಬಹುದು ಎಂಬುದಾಗಿ ಅಂದುಕೊಳ್ಳಬೇಕಿಲ್ಲ. ಚರ್ಮ ಸುಕ್ಕುಗಳಾಗದಂತೆ ತಡೆಯಲು, ಕಲೆಗಳನ್ನು ಹೋಗಲಾಡಿಸಲು, ಚರ್ಮವನ್ನು ಕಾಂತಿಯುಕ್ತವಾಗಿ, ಆರೋಗ್ಯಯುಕ್ತವನ್ನಾಗಿ ಮಾಡಲು, ನೈಸರ್ಗಿಕವಾಗಿರುವ ಇಂತಹ ಎಣ್ಣೆಗಳಿಂದ ಮುಖ ಹಾಗೂ ಕುತ್ತಿಗೆ ಚರ್ಮವನ್ನು ಮಸಾಜ್ ಮಾಡಬಹುದು. ಇದರಿಂದ ಮೊಡವೆ, ಕಪ್ಪು ಕಲೆ ಹಾಗೂ ಚರ್ಮದ ಇತರ ಸಮಸ್ಯೆಗಳಿಂದಲೂ ಮುಕ್ತಿ ಕಾಣಬಹುದು.
ಇದನ್ನೂ ಓದಿ | ಬಿಸಿಲಲ್ಲಿ ಮೇಕಪ್ ಕಾಪಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್
ಪುರಾತನ ಆಚರಣೆಗಳಿಂದ ಕಂಡುಕೊಂಡ ಸತ್ಯ
ಕ್ರಿಪೂ ೪,೫೦೦ರಿಂದಲೇ ಈಜಿಪ್ಟಿನ ಮಂದಿ ಬಾದಾಮಿ ಎಣ್ಣೆ, ತೆಂಗಿನೆಣ್ಣೆ, ಗುಲಾಬಿ ಎಣ್ಣೆ ಹಾಗೂ ಒರಿಗಾನೋ ಎಣ್ಣೆಗಳನ್ನು ಚರ್ಮ, ಕೂದಲು ಹಾಗೂ ದೇಹದ ಸೌಂದರ್ಯಕ್ಕೆ ಬಳಸುತ್ತಿದ್ದರಂತೆ! ಕೇವಲ ಪುರಾತನ ಆಚರಣೆಗಳಿಂದ ಕಂಡುಕೊಂಡ ಸತ್ಯ ಇದೆಂದು ಬಿಡುವಂತಿಲ್ಲ. ನುರಿತ ಚರ್ಮದ ತಜ್ಞರೂ ಕೂಡಾ, ಚರ್ಮಕ್ಕೆ ಆಗಾಗ ಎಣ್ಣೆಯಿಂದ ಮಸಾಜ್‌ನ ಅವಶ್ಯಕತೆಯನ್ನು ತಳ್ಳಿ ಹಾಕುವುದಿಲ್ಲ. ನೈಸರ್ಗಿಕ, ಸಸ್ಯಜನ್ಯ ತೈಲಗಳು ಹಾಗೂ ಇತರ ನೈಸರ್ಗಿಕ ಔಷಧಿಯುಕ್ತ ಪದಾರ್ಥಗಳನ್ನು ಈ ತೈಲಗಳಿಗೆ ಸೇರಿಸುವುದರಿಂದ ಹಲವು ಚರ್ಮದ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ.
ಪೋಷಣೆಯ ಅಗತ್ಯ
ಒಣ, ಸಾಮಾನ್ಯ ಚರ್ಮದಿಂದ ತೈಲಯುಕ್ತ ಚರ್ಮದವರೆಗೆ ಎಲ್ಲ ಚರ್ಮಕ್ಕೂ ಕಾಲಕಾಲಕ್ಕೆ ಪೋಷಣೆಯ ಅಗತ್ಯವಿದೆ. ಈ ಪೋಷಣೆಯನ್ನು ಚರ್ಮಕ್ಕೆ ತೈಲ ನೀಡುತ್ತದೆ. ಮುಖದ ಚರ್ಮಕ್ಕೆ ಬೇಕಾದ ತೇವಾಂಶವನ್ನು ಇದು ನೀಡುವುದಲ್ಲದೆ, ಚರ್ಮಕ್ಕೆ ಅಗತ್ಯವಿರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲೂ ಇದು ನೆರವಾಗುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ಹಾಗೂ ಮಲಗುವ ಮೊದಲು ಮುಖಕ್ಕೆ ಉತ್ತಮ ಎಣ್ಣೆ ಹಚ್ಚಿಕೊಳ್ಳುವುದರಿಂದ ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು.
ಇದನ್ನೂ ಓದಿ | Skin care: ಪುರುಷರೇ ನಿಮ್ಮ ಚರ್ಮ ನಿರ್ಲಕ್ಷಿಸಬೇಡಿ!
ಸಮಯ ಉರುಳಿದಂತೆ, ವಯಸ್ಸಾದಂತೆ ಚರ್ಮ ತನ್ನ ತೇವಾಂಶವನ್ನು ಕಳೆದುಕೊಂಡು ನಿಸ್ತೇಜವಾಗಿ ಕಾಣತೊಡಗುತ್ತದೆ. ಇದಕ್ಕೆ ಆಗಾಗ ನೈಸರ್ಗಿಕ ತೈಲಗಳ ಮಸಾಜ್ ಉತ್ತಮ ಆರೈಕೆ ನೀಡುವುದಲ್ಲದೆ ಚರ್ಮವನ್ನು ನಯವಾಗಿಸುತ್ತದೆ. ಕಳೆದುಕೊಂಡ ಹೊಳಪನ್ನೂ ಮತ್ತೆ ಪಡೆಯಲು ಸಹಕಾರಿಯಾಗುತ್ತದೆ.
ಎಣ್ಣೆ, ಚರ್ಮವನ್ನು ರಕ್ಷಿಸುವ ಶೀಲ್ಡ್‌ನಂತೆಯೂ ಕೆಲಸ ಮಾಡುತ್ತದೆ. ಪ್ರತಿನಿತ್ಯದ ಚರ್ಮದ ಆರೈಕೆಯಲ್ಲಿ ಬೆಳಗ್ಗೆದ್ದು ನಿಮ್ಮ ಚರ್ಮಕ್ಕೆ ಹೊಂದುವ ಎಣ್ಣೆಯ ಲೇಪನ ಹಾಗು ಮಸಾಜ್ ಮಾಡಿದರೆ, ಇದು ನಿಮ್ಮ ಚರ್ಮಕ್ಕೆ ಕವಚದಂತೆ ರಕ್ಷಣೆ ನೀಡುತ್ತದೆ. ಇದು ಚರ್ಮವನ್ನು ಸಂರಕ್ಷಿಸಿ ನಯವಾಗಿರುವಂತೆ ಕೆಲಸ ಮಾಡುತ್ತದೆ.
ನಂಬಿ, ಇದು ಮೇಕಪ್ ಬೇಸ್ ಆಗಿಯೂ ಕೆಲಸ ಮಾಡುತ್ತದೆ. ನಿಮಗೆ ಚೆಂದನೆಯ ಸಿಲ್ಕೀ, ಶೈನೀ ಫಿನಿಶ್ ಕೊಡುವ ಮೇಕಪ್ ಮಾಡಬೇಕೆನಿಸಿದರೆ, ಅದಕ್ಕೆ ಇಂತಹ ನೈಸರ್ಗಿಕ ತೈಲವಲ್ಲದೆ ಬೇರೆ ಉತ್ತಮ ಆಯ್ಕೆ ಇನ್ನೊಂದಿಲ್ಲ. ನಯವಾದ ಮೇಕಪ್ ಲುಕ್ ಬೇಕೆಂದರೆ, ಮುಖ ಚೆನ್ನಾಗಿ ತೊಳೆದುಕೊಂಡ ನಂತರ ನಿಮ್ಮ ಚರ್ಮಕ್ಕೆ ಹೊಂದುವ ತೈಲವನ್ನೊಮ್ಮೆ ಹಚ್ಚಿಕೊಳ್ಳಿ. ಈ ತೈಲ ಲಿಕ್ವಿಡ್ ಫೌಂಡೇಶನ್ ಹಾಗೂ ಕನ್ಸೀಲರ್ ಹಚ್ಚಿಕೊಳ್ಳುವ ಮೊದಲು ಹಚ್ಚಿದರೆ ತನ್ನ ಮ್ಯಾಜಿಕ್ ಕೈಚಳಕವನ್ನು ತೋರಿಸುತ್ತದೆ. ಚರ್ಮ ಒಣಗಿಕೊಂಡು ಪಕಳೆಗಳಂತೆ ಎದ್ದು ಬರುತ್ತಿದ್ದರೆ, ಮೊಡವೆ ಕಲೆಗಳು, ಸಣ್ಣ ಕಜ್ಜಿಗಳಿದ್ದರೆ ಈ ಎಣ್ಣೆ ಬೇಸ್ ಒಂದು ಉತ್ತಮ ಐಡಿಯಾ. ಮೇಕಪ್ ರಸಾಯನಿಕಗಳಿಂದ ಚರ್ಮಕ್ಕೆ ನೇರ ಹಾನಿಯಾಗುವುದನ್ನು ಇದು ತಪ್ಪಿಸುತ್ತದೆ.
ಹಾಗಾದರೆ, ಯಾವ ಚರ್ಮಕ್ಕೆ ಯಾವ ಎಣ್ಣೆ ಸೂಕ್ತ ಎಂಬ ಸಂಶಯ, ಗೊಂದಲ ಉಂಟಾಗದೆ ಇರದು. ನಿಮ್ಮದು ಒಣ ಚರ್ಮವಾಗಿದ್ದಲ್ಲಿ, ಜೊಜೋಬಾ ಎಣ್ಣೆಯನ್ನು ಬಳಸುವುದು ಉತ್ತಮ. ನಿಮ್ಮದು ತೈಲಯುಕ್ತ ಚರ್ಮವಾಗಿದ್ದಲ್ಲಿ ಗ್ರೀನ್ ಟೀ ಎಣ್ಣೆ ಬಳಸಿ. ಇವೆರಡರ ಮಿಶ್ರ ಚರ್ಮ ನಿಮ್ಮದಾಗಿದ್ದಲ್ಲಿ ರೋಸ್‌ಹಿಪ್ ಆಯಿಲ್ ನಿಮಗೆ ಸೂಕ್ತ.
ಇದನ್ನೂ ಓದಿ | ಆಕರ್ಷಕ ತ್ವಚೆಗಾಗಿ ಸೀಸನ್ ಮ್ಯಾಂಗೋ ಫೇಸ್‌ಪ್ಯಾಕ್