ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾಡೆಲಿಂಗ್ ಕ್ಷೇತ್ರದ ಅನುಭವವಿದ್ದರೂ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲು ಹಾರ್ಡ್ ವರ್ಕ್ ಅವಶ್ಯ ಎನ್ನುತ್ತಾರೆ ದಿವಿತಾ ರೈ. ಈಗಾಗಲೇ ಮಿಸ್ ದಿವಾ ಯೂನಿವರ್ಸ್ ಇಂಡಿಯಾ ೨೦೨೨ ಪಟ್ಟವನ್ನಲಂಕರಿಸಿರುವ ದಿವಿತಾ, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಮುಂಬರುವ ಮಿಸ್ ಯೂನಿವರ್ಸ್ ಪೇಜೆಂಟ್‌ನಲ್ಲಿ ಭಾಗವಹಿಸಲು ಎಲ್ಲಾ ಬಗೆಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಆರಂಭಿಸಿದ್ದಾರೆ.
ಮಾಡೆಲಿಂಗ್‌ನಿಂದ ಪೇಜೆಂಟ್‌ವರೆಗೂ
ಫ್ಯಾಷನ್ ಕ್ಷೇತ್ರ ಎಂದಾಕ್ಷಣ ನೋಡಲು ಕಲರ್‌ಫುಲ್ ಆಗಿ ಕಾಣುತ್ತದೆ. ಆದರೆ, ಇಲ್ಲಿಯೂ ಗೆಲುವು ಸಾಧಿಸಲು ಅವಿರತ ಪ್ರಯತ್ನ ಮಾಡಲೇಬೇಕು ಎಂದು ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಅಂದ ಹಾಗೆ, ದಿವಿತಾ ರೈ ಮೂಲತಃ ಮಂಗಳೂರಿನವರು. ಆದರೆ, ಬೆಳೆದದ್ದು ಮುಂಬಯಿಯಲ್ಲಿ. ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರೂ, ಉಳಿದ ಸಮಯದಲ್ಲಿ ಮಾಡೆಲಿಂಗ್ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೊದಲಿನಿಂದಲೂ ಬಾಸ್ಕೆಟ್‌ಬಾಲ್ ಹಾಗೂ ಬ್ಯಾಡ್ಮಿಂಟನ್ ಅಂದ್ರೆ ಪ್ರೀತಿ. ಇನ್ನು ಹವ್ಯಾಸದ ವಿಷಯಕ್ಕೆ ಬಂದಲ್ಲಿ, ಪುಸ್ತಕ ಓದುವುದು ಹಾಗೂ ಮ್ಯೂಸಿಕ್ ಕೇಳುವುದು ಮೊದಲಿನಿಂದಲೂ ಅಭ್ಯಾಸವಾಗಿದೆ ಎನ್ನುತ್ತಾರವರು.
ಕೊನೆಗೂ ಗೆಲುವು
ಚಿಕ್ಕಂದಿನಿಂದಲೇ ಮಿಸ್ ಇಂಡಿಯಾ , ಮಿಸ್ ದಿವಾ ಯೂನಿವರ್ಸ್ ಕನಸು ಕಾಣುತ್ತಿದ್ದೆ. ಬಹಳಷ್ಟು ಬ್ಯೂಟಿ ಪೇಜೆಂಟ್‌ಗಳಲ್ಲಿ ಅಡಿಷನ್‌ನಲ್ಲಿ ಭಾಗವಹಿಸುತ್ತಿದ್ದೆ. ಸಾಕಷ್ಟು ಬಾರಿ ರಿಜೆಕ್ಟ್ ಕೂಡ ಆಗಿದ್ದೇನೆ. ಆದರೂ ನಾನು ನನ್ನ ಪ್ರಯತ್ನ ಬಿಡಲಿಲ್ಲ. ಕೊನೆಗೂ ಗೆಲುವು ಸಾಧಿಸಿದೆ. ಇಂದು ನನ್ನ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ ಎಂದು ದಿವಿತಾ ಹೇಳುತ್ತಾರೆ.
ಫ್ಯಾಷನ್ ಲವ್
ಸಾಕಷ್ಟು ಫ್ಯಾಷನ್ ಶೋಗಳಲ್ಲಿ ವಾಕ್ ಮಾಡಿರುವ ದಿವಿತಾಗೆ ಮಾಡೆಲಿಂಗ್‌ನಲ್ಲಿ ಮೊದಲಿನಿಂದಲೂ ಹೆಚ್ಚು ಆಸಕ್ತಿ ಇತ್ತಂತೆ. ಇದಕ್ಕೆ ಅಮ್ಮನ ಸಾಥ್ ಇದೆ ಎನ್ನುವ ಅವರಿಗೆ ಇಕೋ ಫ್ರೆಂಡ್ಲಿ ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ಇಷ್ಟವಂತೆ. ಈ ಕುರಿತಂತೆ ಒಂದು ಜಾಹೀರಾತು ಕೂಡ ಮಾಡಿದ್ದಾರಂತೆ. ಆದಷ್ಟೂ ರಿಸೈಕಲ್ ಹಾಗೂ ಇಕೋ ಫ್ರೆಂಡ್ಲಿ ಇರುವಂತಹ ಫ್ಯಾಬ್ರಿಕ್ ಬಳಸಬೇಕು ಎಂದು ಕರೆ ನೀಡುತ್ತಾರೆ ದಿವಿತಾ ರೈ.
ಟ್ರಾವೆಲ್ ಪ್ರಿಯೆ
ದಿವಿತಾ ರೈ ಟ್ರಾವೆಲ್ ಪ್ರಿಯೆ ಎಂಬುದು ಅವರ ಇನ್‌ಸ್ಟಾಗ್ರಾಮ್‌ನ ಟ್ರಾವೆಲ್ ಫೋಟೋಗಳಿಂದಲೇ ತಿಳಿದುಕೊಳ್ಳಬಹುದು. ಅದರಲ್ಲೂ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ದಿವಿತಾ, ಸಿಕ್ಕ ಸಮಯವನ್ನು ವ್ಯರ್ಥ ಮಾಡದೇ ಕಳೆಯುತ್ತಾರಂತೆ.
ಲೈಫ್ ಮಂತ್ರ
ಒಮ್ಮೆ ಸೋತರೆ ಏನಂತೆ! ಮರಳಿ ಪ್ರಯತ್ನವ ಮಾಡು ಎಂಬುದು ದಿವಿತಾ ರೈ ಲೈಫ್ ಮಂತ್ರ. ಪ್ರಯತ್ನಗಳು ಯಶಸ್ಸಿನ ಹತ್ತಿರ ಕೊಂಡೊಯ್ಯುತ್ತವೆ ಎನ್ನುತ್ತಾರೆ ಅವರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)